ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಿಕಾ ಪಡುಕೋಣೆಯಿಂದ ಯುವ ದಸರಾ ಉದ್ಘಾಟನೆ

By Staff
|
Google Oneindia Kannada News

ಮೈಸೂರು, ಸೆ. 14 : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಯುವ ದಸರಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ಪ್ರಕಾಶ್ ರೈ ಮತ್ತು ನಟಿ ಉಮಾಶ್ರೀ ಅವರು ಉಪಸ್ಥಿತರಿರುವರು ಎಂದರು.

ಖವ್ವಾಲಿ ಗೀತೆ ಗಾಯನ

ಸೆಪ್ಟೆಂಬರ್ 15 ರಂದು ಮೈಸೂರು ಸೇಂಟ್ ಫಿಲೊಮಿನಾಸ್ ಚರ್ಚ್ ಮುಂಭಾಗ ಸಂಜೆ 6 ಗಂಟೆಯಿಂದ ಸಾಮಾಜಿಕ ಧಾರ್ಮಿಕ ಸೌಹಾರ್ದತೆಗಾಗಿ ಕ್ರಿಶ್ಚಿಯನ್ ಸಹೋದರರಿಂದ ಕೆರೋಲ್ ಸಿಂಗಿಂಗ್ ಧಾರ್ಮಿಕ ಹಾಗೂ ದೇಶಭಕ್ತಿಗೀತೆಗಳ ಕಾರ್ಯಕ್ರಮ, ಬೋಗಾದಿ ಕೃಪಾಲಯದ ಅಂಧ ಮಕ್ಕಳಿಂದ ಹಾಗೂ ಗಿರಿಜನರಿಂದ ಗೀತ ಗಾಯನ ಹಾಗೂ ಸುಪ್ರಸಿದ್ಧ ಭಾರತ್ ಸರಗಮ್ ಕವ್ವಾಲಿ ತಂಡದಿಂದ 'ಖವ್ವಾಲಿ' ಗೀತ ಗಾಯನ ಏರ್ಪಡಿಸಲಾಗಿದೆ.

ಮೈಸೂರಿನ ಪೋಲೀಸ್ ಆಯುಕ್ತ ಸುನೀಲ್ ಅಗರವಾಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ದಸರಾ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ ಶಿವಕುಮಾರ್ ತಿಳಿಸಿದ್ದಾರೆ. ಸೆಪ್ಟೆಂಬರ್ 15 ರಂದೇ ಕುವೆಂಪು ನಗರದ ಸೌಗಂಧಿಕಾ ಉದ್ಯಾನವನದಲ್ಲಿ "ಮನೆಮನೆಗೆ ಜಾನಪದ ಸಂಗೀತ" ಕಾರ್ಯಕ್ರಮ ಸಂಜೆ 6 ಗಂಟೆಗೆ ನಡೆಯಲಿದೆ.

ಸೆಪ್ಟೆಂಬರ್ 17 ರಂದು ಮೈಸೂರು ನಗರದಾದ್ಯಂತ ಬೆಳಗಿನಿಂದ ಸಂಜೆಯವರೆಗೂ ಏಕಕಾಲಕ್ಕೆ 100 'ರಾಜನಗಾರಿ' ಕಲಾವಿದರು ನಗಾರಿ ಬಾರಿಸುತ್ತಾ ರಸ್ತೆಗಳಲ್ಲಿ ಸಾಗಿ ದಸರಾ ಆಗಮನ ಸಾರಿ ಹೇಳುವ ಮೂಲಕ ಜನಕ್ಕೆ ಮುದ ನೀಡಲಿದ್ದಾರೆ. ಇದನ್ನು ಮೈಸೂರು ಜಿಲ್ಲಾಧಿಕಾರಿ ಪಿ ಮಣಿವಣ್ಣನ್ ಉದ್ಘಾಟಿಸುವರು.

ಸೆಪ್ಟೆಂಬರ್ 18 ರಂದು ನಗರದ ಬೃಹತ್ ಮತ್ತು ಪ್ರಮುಖ ವೃತ್ತಗಳಲ್ಲಿ ಬೃಹತ್ ದಸರಾ ಗೊಂಬೆಗಳನ್ನು ರಾರಾಜಿಸುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಅದೇ ದಿನ ಅರಮನೆ ಬಳಿ ಏಕಕಾಲಕ್ಕೆ 500 ಜನಪದ ಕಲಾವಿದರು ರಂಗುರಂಗಿನ ಬಟ್ಟೆ ತೊಟ್ಟು ಕಲಾಪ್ರದರ್ಶನ ನೀಡುವರು ಎಂದು ಕೆ ಶಿವಕುಮಾರ್ ತಿಳಿಸಿದ್ದಾರೆ.

ಈಗಾಗಲೇ ಕಳೆದ ಆಗಸ್ಟ್ 30 ರಿಂದ ಪ್ರತೀ ಭಾನುವಾರ ರಾಜ್ಯ ಪ್ರಮುಖ ಪ್ರವಾಸಿ ತಾಣಗಳು, ಉಡುಪಿ ಕೃಷ್ಣ ದೇವಾಲಯ, ಮಲ್ಪೆ ಸಮುದ್ರ ತಡಿ, ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಶ್ರೀರಂಗಪಟ್ಟಣ, ಬಿಜಾಪುರ, ಹುಬ್ಬಳ್ಳಿಗಳಲ್ಲಿ ಕಲಾವಿದರು ತಮ್ಮ ಕಲಾಪ್ರದರ್ಶನದ ಮೂಲಕ ಪ್ರವಾಸಿಗರಿಗೆ ದಸರಾ ಪ್ರಚಾರ ಮಾಡುತ್ತಿದ್ದಾರೆ. ಕಳೆದ ಸೆಪ್ಟೆಂಬರ್ 6 ರಂದು ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಮುಂಭಾಗ, ಲಾಲ್ ಬಾಗ್ ಹಾಗೂ ಕಬ್ಬನ್ ಪಾರ್ಕ್‌ಗಳಲ್ಲಿ ಸಹ ಜನಪದ ಕಲಾವಿದರು ದಸರಾ ಪ್ರಚಾರ ನೀಡಿ ಜನರನ್ನು ಬಹುವಾಗಿ ಆಕರ್ಷಿಸುತ್ತಿರುವುದನ್ನು ಮಾಧ್ಯಮಗಳು ವರದಿ ಮಾಡುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X