• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಡಿನ ತುಂಬ ನವರಾತ್ರಿ ಸಂಭ್ರಮ!

By Staff
|

ಜೀವನದಲ್ಲಿ ನವತ್ವವನ್ನು ಉಂಟು ಮಾಡುವುದು ನವರಾತ್ರಿ... ಈ ಸಂದರ್ಭದಲ್ಲಿ ಎಲ್ಲೆಲ್ಲಿ ಏನೇನು ವಿಶೇಷ ಎಂಬ ಮಾಹಿತಿಯಾಂದಿಗೆ, ಹಬ್ಬದ ವಿವಿಧ ಮುಖಗಳು ಇಲ್ಲಿವೆ.

ತಳಕು ಶ್ರೀನಿವಾಸ, ಮುಂಬಯಿ

ನವರಾತ್ರಿ ಅಥವಾ ದಸರಾ(ದಶ ಹರ) ಎಂದರೆ ಒಂಬತ್ತು ರಾತ್ರಿ ಹತ್ತು ದಿನಗಳು ಎಂದರ್ಥ. ಜೀವನದಲ್ಲಿ ನವತ್ವವನ್ನು ಉಂಟು ಮಾಡುವುದು ನವರಾತ್ರಿ. ಇದೊಂದು ನಾಡಹಬ್ಬ, ದೇಶದ ಉತ್ಸವ. ಚೈತ್ರಮಾಸದಲ್ಲಿ ವಸಂತ ನವರಾತ್ರಿ ಎಂದು ಆಚರಿಸಿದರೆ, ಆಶ್ವಯುಜ ಮಾಸದಲ್ಲಿ ಶರನ್ನವರಾತ್ರಿ ಎಂದು ಆಚರಿಸುವರು.

ನವರಾತ್ರಿ ಬಗ್ಗೆ ಭವಿಷ್ಯೋತ್ತರಪುರಾಣದಲ್ಲಿ ಹೀಗೆ ಹೇಳಿದೆ -

ಸ್ನಾತೈಃ ಪ್ರಮುದಿತೈರ್ಹೃಷ್ಟೈಃ ಬ್ರಾಹ್ಮಣೈಃ ಕ್ಷತ್ರಿಯೈರ್ನೃಪೈಃ

ವೈಶ್ಯೈಃ ಶೂದ್ರೈರ್ಭಕ್ತಿಯುಕ್ತೈಃ ಮ್ಲೇಚ್ಛೈರನ್ಯೈಶ್ಚ ಮಾನವೈಃ

ಏವಂ ನಾನಾಮ್ಲೇಚ್ಛಗಣೈಃ ಪೂಜ್ಯತೇ ಸರ್ವದಸ್ಯುಭಿಃ

ಅಂಗವಂಗಕಲಿಂಗೈಶ್ಚ ಕಿನ್ನರೈಃ ಬರ್ಬರೈಃ ಶಕೈಃ

ಅರ್ಥ -

ಶೈವ, ವೈಷ್ಣವ, ಶಾಕ್ತ, ಸೌರ, ಗಾಣಪತ್ಯ ಮತ್ತು ಕೌಮಾರ ಎಂದು ಭಕ್ತದರ್ಶನಕ್ಕೆ ಸಂಬಂಧಪಟ್ಟಂತೆ ಆರು ಬೇರೆ ಬೇರೆ ದರ್ಶನಗಳಿವೆ. ಆದರೆ ಆ ಎಲ್ಲ ಪಂಥದವರೂ ಕೂಡಾ ಆಚರಣೆ ಮಾಡಲು ಬರುವ ಹಬ್ಬ ನವರಾತ್ರಿ. ಏಕೆಂದರೆ ಈ ಪರ್ವದಲ್ಲಿ ವಿಶೇಷವಾಗಿ ಶಕ್ತಿ ದೇವತೆ ಪೂಜಿಸಲ್ಪಡುವಳು. ಹೀಗಾಗಿ ಈ ಸಂದರ್ಭದಲ್ಲಿ ಶ್ರೀದೇವಿಗೆ ನಮಿಸೋಣ -

ಓಂ ಸರ್ವ ಮಂಗಲ ಮಾಂಗಲ್ಯೇ

ಶಿವೇ ಸರ್ವಾರ್ಥಸಾಧಿಕೇ

ಶರಣ್ಯೇ ತ್ರ್ಯಂಬಕೇ ಗೌರಿ

ನಾರಾಯಣಿ ನಮೋಸ್ತು ತೇ

ಸೃಷ್ಟಿ ಸ್ಥಿತಿ ವಿನಾಶಾನಾಂ

ಶಕ್ತಿಭೂತೇ ಸನಾತನಿ

ಗುಣಾಶ್ರಯೇ ಗುಣಮಯೇ

ನಾರಾಯಣಿ ನಮೋಸ್ತು ತೇ

ಶರಣಾಗತ ದೀನಾರ್ತ

ಪರಿತ್ರಾಣ ಪರಾಯಣೀ

ಸರ್ವಸ್ಯಾರ್ತಿಹರೇ ದೇವಿ

ನಾರಾಯಣಿ ನಮೋಸ್ತು ತೇ

ಶುಕ್ಲ ಪಕ್ಷದಲ್ಲಿ ಪ್ರಥಮಾ ತಿಥಿಯಿಂದ ದಶಮಿಯವರೆವಿಗೆ ದಿನ ನಿತ್ಯ ಪೂಜೆ ಪುನಸ್ಕಾರ, ಸಂತರ್ಪಣೆ, ಹಬ್ಬದ ವಾತಾವರಣವನ್ನು ಕಾಣಬಹುದು. ಈ ಕಾಲವು ಎಲ್ಲ ದೇವತೆಗಳ ಉಪಾಸನೆಗಳಿಗೆ ಶ್ರೇಷ್ಠವಾಗಿದ್ದರೂ ಶಕ್ತಿದೇವತೆಯನ್ನು ಪ್ರಸನ್ನಗೊಳಿಸುವ ಕಾಲವಾಗಿದೆ. ಈ ಸಮಯದಲ್ಲಿ ವಿವಾಹ, ಉಪನಯನ ಇತ್ಯಾದಿ ಶುಭಕರ್ಮಗಳಿಗೆ ತಿಥಿ, ವಾರ, ನಕ್ಷತ್ರ, ಯೋಗ, ಕರಣ ಗ್ರಹಮೈತ್ರಿ ಇತ್ಯಾದಿ ಯಾವು ಕೂಟಗಳನ್ನೂ ಗಮನಿಸದಿರುವುದು ಪರಿಪಾಠ.

ಇದಲ್ಲದೇ ವರ್ಷದಲ್ಲಿ ಆಚರಿಸಲಾಗದ ಯಾವುದೇ ವ್ರತ, ಹಬ್ಬಗಳನ್ನೂ ಈ ಸಮಯದಲ್ಲಿ ಆಚರಿಸುವರು. ಮನೆ ಕಟ್ಟಲು ಅಡಿಪಾಯವನ್ನೂ ಇದೇ ಸಮಯದಲ್ಲಿ ಹಾಕುವರು. ಈ ದಿನಗಳಲ್ಲಿ ಶುದ್ಧ ಪ್ರಕೃತಿಮಾತೆಯನ್ನು ಮೊದಲ ಮೂರು ದಿನಗಳು ಲಕ್ಷ್ಮಿಯೆಂದೂ, ನಂತರದ ಮೂರುದಿನಗಳಲ್ಲಿ ಸರಸ್ವತಿಯೆಂದೂ ಮತ್ತು ಕಡೆಯ ಮೂರುದಿನಗಳಲ್ಲಿ ಗೌರೀ ಅಥವಾ ದುರ್ಗಿಯೆಂದೂ ಆರಾಧಿಸುವರು.

ಪ್ರಥಮಾ ತಿಥಿಯಂದು ಪ್ರಾತಃಕಾಲದಲ್ಲ್ಲಿ ಅಭ್ಯಂಜನ ಸ್ನಾನ ಮಾಡಿ ಕಲಶ ಸ್ಥಾಪನೆ ಮಾಡಿ, ಷೋಡಶಾಂಗ ಪೂಜೆಯನ್ನು ದೇವಿಗೆ ಅರ್ಪಿಸುವರು. ಬಲಿ ಕೊಡುವುದರ ಸಂಕೇತವಾಗಿ ಉದ್ದಿನ ಅನ್ನ ಅಥವಾ ಬೂದುಗುಂಬಳಕಾಯಿಯನ್ನು ಮೊದಲನೆಯ ದಿನ ಅಥವಾ ಕೊನೆಯ ದಿನದಂದು ಅರ್ಪಿಸುವರು. ಈ ಸಮಯದಲ್ಲಿ ಚಂಡೀ ಸಪ್ತಶತಿ, ನಾರಾಯಣಹೃದಯ ಪಾಠ, ಲಕ್ಷ್ಮೀ ಹೃದಯ ಪಾಠ, ಲಲಿತಾ ಸಹಸ್ರನಾಮಯುಕ್ತ ಕುಂಕುಮಾರ್ಚನೆಯನ್ನೂ ಮಾಡುವ ಪದ್ಧತಿ ಇದೆ.

ಎರಡು ವರ್ಷದಿಂದ ಹತ್ತು ವರ್ಷ ವಯಸ್ಸಿನ ಹೆಣ್ಣುಮಕ್ಕಳನ್ನು ಕೌಮಾರಿಯೆಂದು ಪೂಜಿಸುವ ಸಂಪ್ರದಾಯವೂ ಇದೆ. ಕುಮಾರಿ, ತ್ರಿಮೂರ್ತಿ, ಕಲ್ಯಾಣೀ, ರೋಹಿಣೀ, ಕಾಲೀ, ಚಂಡಿಕಾ, ಶಾಂಭವೀ, ದುರ್ಗಾ ಮತ್ತು ಭದ್ರಾ ಎಂದ ಹೆಸರುಗಳಿಂದ ಆವಾಹಿಸಿ ಭವಾನೀ ಸಹಸ್ರನಾಮವನ್ನು ಪಾರಾಯಣ ಮಾಡುವರು. ಪಂಚಮೀ ತಿಥಿಯಂದು ಉಪಾಂಗ ಲಲಿತಾ ದೇವಿಯನ್ನು ಪೂಜಿಸಿದರೆ, ಮೂಲಾನಕ್ಷ್ತ್ರದಂದು ಸರಸ್ವತೀ ದೇವಿಯನ್ನು ಪೂಜಿಸಿ, ಅಷ್ಟಮಿಯಂದು ದುರ್ಗಾದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸುವರು.

ಮಹಾನವಮಿಯಂದು ಶತಚಂಡೀ ಹೋಮವನ್ನೂ ಮಾಡುವರು. ವಿಜಯದಶಮಿಯಂದು ಯುದ್ಧಕ್ಕಾಗಿ ಬಳಸುವ ಎಲ್ಲ ಆಯುಧ, ಪರಿಕರಗಳನ್ನು ಪೂಜಿಸಿ ಮೆರವಣಿಗೆಯ ಮೂಲಕ ಅರಮನೆಯಿಂದ ಬನ್ನಿ ಮಂಟಪಕ್ಕೆ ಒಯ್ಯುವುದು ಮೈಸೂರಿನ ವಿಶೇಷತೆ. ಸಿಂಹದ ಮೇಲೆ ಕುಳಿತು ಮಹಿಷಾಸುರನೆಂಬ ರಕ್ಕಸನನ್ನು ಕೊಂದು ಬಡಪಾಯಿಗಳನ್ನು ಕಾಪಾಡಿದ ಚಾಮುಂಡಿ ದೇವತೆಯನ್ನು ಪೂಜಿಸುವುದು ಮೈಸೂರಿನ ವಿಶೇಷತೆ.

ಶ್ರೀ ರಾಮನು ರಾವಣನ ಮೇಲೆ ಯುದ್ಧ ಮಾಡುವ ಮುನ್ನ ದುರ್ಗೆಯನ್ನು ಪೂಜಿಸಿ ವರ ಪಡೆದಿದ್ದನೆಂಬ ಕಥೆ ಇದೆ. ದುಷ್ಟ ಶಕ್ತಿ ರಾವಣನ ಮೇಲೆ ಶ್ರೀ ರಾಮನ ಜಯದ ಸಂಕೇತವಾಗಿ ನವರಾತ್ರಿಯನ್ನು ಆಚರಿಸುವರು. ಕರ್ನಾಟಕದಲ್ಲಿ ವಿಜಯನಗರ ಸಂಸ್ಥಾನದಲ್ಲಿ ದಸರಾ ಉತ್ಸವಕ್ಕೆ ಚಾಲನೆ ಸಿಕ್ಕಿದರೆ, ಮೈಸೂರು ಸಂಸ್ಥಾನದ ಒಡೆಯರ ಕಾಲದಲ್ಲಿ ಮನೆ ಮನೆಗಳಲ್ಲೂ ಪ್ರಚಲಿತವಾಯಿತು. ಮೈಸೂರಿನ ಅರಮನೆಯಲ್ಲಿ ಆಳೆತ್ತರದ ಗೊಂಬೆಗಳನ್ನೂ, ಅರಸರ ವಿವಿಧ ಬಗೆಯ ಸಂಗ್ರಹಗಳನ್ನೂ ಒಂದು ದೊಡ್ಡ ತೊಟ್ಟಿಯಲ್ಲಿ ಇರಿಸುತ್ತಿದ್ದರು.

ದಕ್ಷಿಣ ಕರ್ನಾಟಕ (ಹಳೆಯ ಮೈಸೂರು ಪ್ರಾಂತ್ಯ) ಮನೆಗಳಲ್ಲಿ ಗೊಂಬೆ ಕೂರಿಸುವರು. ಹಂತ ಹಂತವಾಗಿ ಮೆಟ್ಟಿಲುಗಳನ್ನು ನಿರ್ಮಿಸಿ, ಅದರ ಮೇಲೆ ಪಟ್ಟದ ಗೊಂಬೆ, ಕಲಶ, ಶೆಟ್ಟಿ ಶೆಟ್ಟಮ್ಮ ದಂಪತಿಗಳು, ಡೊಳ್ಳುಹೊಟ್ಟೆ ಮಾನವ, ಮಣಿ ಸಾಮಾನು, ಪ್ಲಾಸ್ಟಿಕ್‌ ವೈರಿನ ಸಾಮಾನು ಮತ್ತು ಇತರೆ ಗೊಂಬೆಗಳನ್ನು ಕೂರಿಸುವರು. ಇದಕ್ಕೆಂದೇ ಮದುವೆಗಳಲ್ಲಿ ನೂತನ ದಂಪತಿಗಳಿಗೆ ಪಟ್ಟದ ಗೊಂಬೆಗಳನ್ನು (ತೇಗ ಅಥವಾ ಚಂದನದ ಮರದಿಂದ ಮಾಡಿದ) ನೀಡುವರು. ಪ್ರತಿದಿನ ಸಂಜೆಯ ವೇಳೆಯಲ್ಲಿ ಅಕ್ಕ ಪಕ್ಕದ ಮನೆಯ ಮಕ್ಕಳನ್ನು ಕರೆದು ಗೊಂಬೆ ಬಾಗಿನ ಎಂದು ತಿಂಡಿಗಳನ್ನು ಕೊಡುವರು. ಇಲ್ಲಿ ವಿಶೇಷವೇನೆಂದರೆ, ಈ ಎಲ್ಲ ತಿಂಡಿಗಳ ಸಣ್ಣ ಸಣ್ಣ ಸ್ವರೂಪದಲ್ಲಿರುವುವು. ವಿಜಯದಶಮಿಯಂದು ಪಟ್ಟದ ಗೊಂಬೆಗಳನ್ನು ಮಲಗಿಸಿ ಇಟ್ಟು ಮಾರನೆಯ ದಿನ ಬೆಳಗ್ಗೆ ಕಲಶವನ್ನು ವಿಸರ್ಜಿಸುವರು. ವಿಜಯದಶಮಿಯಂದು ಶಮೀ ಅಥವಾ ಬನ್ನಿ ಪತ್ರವನ್ನು ಹಿರಿಯರಿಗೆ ಕೊಟ್ಟು ಕಾಲು ಮುಟ್ಟಿ ನಮಸ್ಕರಿಸುವುದು ಪದ್ಧತಿ.

ಬಂಗಾಳದಲ್ಲಿ ದುರ್ಗೆಯ ಪೂಜೆ ಬಹಳ ವಿಜೃಂಭಣೆಯಿಂದ ನಡೆಯುವುದು. ಆ ಸಮಯದಲ್ಲಿ ಕೊಲ್ಕತ್ತಾದಲ್ಲಿ ವಿಪರೀತವಾದ ಜನಸಂದಣಿ ಸೇರುವುದು. ಸಾರ್ವಜನಿಕವಾಗಿ ದೇವಿ ಪೂಜೆಯನ್ನು ನಡೆಸುವ ಪರಿಪಾಠವೂ ಇದೆ. ಸಿಂಹದ ಮೇಲೆ ಕುಳಿತು ವಿವಿಧ ಬಗೆಯ ಆಯುಧಗಳನ್ನು ಹಿಡಿದಿರುವ ದೇವಿಯ ದೊಡ್ಡ ಮೂರ್ತಿಯನ್ನು ಇರಿಸಿ ಬೆಳಗ್ಗೆ ಸಂಜೆಗಳಲ್ಲಿ ಪೂಜೆ ಭಜನೆಗಳನ್ನು ಅರ್ಪಿಸುವರು.

ಒಂಭತ್ತೂ ದಿನಗಳು ಒಂಭತ್ತು ರೂಪದಲ್ಲಿ ದೇವಿಯನ್ನು ಆರಾಧಿಸುವರು. ಅವು ಯಾವುವೆಂದರೆ, ದುರ್ಗಾ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂತ (ಚಂದ್ರಕಾಂತ), ಕೂಷ್ಮಾಂಡ, ಸ್ಕಂದ ಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿಧಾತ್ರಿ. ದೇವೀಪುರಾಣದ ಪ್ರಕಾರ ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಕಾಮ್ಯ, ಇಷಿತ್ವಾ ಮತ್ತು ವಷಿತ್ವಾ ಎಂಬ ಎಂಟು ಸಿದ್ಧಿಗಳನ್ನು ದೇವಿಯ ಆರಾಧನೆಯಿಂದ ಪ್ರಾಪ್ರಗೊಳಿಸಿಕೊಳ್ಳಬಹುದು.

ಮುಂಬಯಿಯ ಶಿವಾಜಿ ಪಾರ್ಕಿನಲ್ಲಿ ಬೆಂಗಾಳೀ ಕ್ಲಬ್ಬಿನವರು ಬಹಳ ವಿಜೃಂಭಣೆಯಿಂದ ದುರ್ಗಾ ಪೂಜೆ ಮಹೋತ್ಸವವನ್ನು ಆಚರಿಸುವರು. ಆ ಸಮಯದಲ್ಲಿ ಬಂಗಾಳದ ತಿನಿಸುಗಳು, ದಿರಿಸುಗಳು, ಇತ್ಯಾದಿ ವಿಶೇಷ ಸಾಮಗ್ರಿಗಳನ್ನು ಮಾರಾಟ ಮಾಡುವ ಮಳಿಗೆಗಳು ಅಲ್ಲಿ ಕಂಡುಬಂದರೆ, ನಗರದಲ್ಲಿರುವ ಬಂಗಾಳಿಗಳು ಒಂದುಗೂಡಿ ತಮ್ಮ ತಮ್ಮ ಕುಟುಂಬದೊಂದಿಗೆ ಸಂತೋಷದಿಂದ ಕಾಲ ಕಳೆಯುವರು. ಅಲ್ಲಿ ದೊರೆಯುವ ತಿನಿಸುಗಳನ್ನು (ಮುಖ್ಯವಾಗಿ ರೊಶಗುಲ್ಲ, ಸಂದೇಶ) ಮತ್ತು ದಿರಿಸುಗಳನ್ನು ಕೊಳ್ಳಲೆಂದೇ ಇತರರು ಹೋಗುವರು. ಇಲ್ಲಿಯ ಗುಜರಾತಿಗಳು ಗರ್ಬಾ ನೃತ್ಯವನ್ನು ಆಡುವರು. ಈ ಸಂದರ್ಭದಲ್ಲಿ ಮೈದಾನಗಳಲ್ಲಿ ಕೋಲಾಟವನ್ನು ಆಡುವರು. ಇದಕ್ಕೆ ದಾಂಡಿಯಾ ಎಂದು ಹೆಸರಿಸುತ್ತಾರೆ.

ಮೈದಾನಗಳಲ್ಲಿ ಒಂದೆಡೆ ಹಾಡುಗಾರರು ಹಾಡುತ್ತಿದ್ದರೆ ಇನ್ನೊಂದೆಡೆ ಗಂಡಸರು, ಹೆಂಗಸರು ಮಕ್ಕಳಾದಿಯಾಗಿ ಎಲ್ಲರೂ ಬಣ್ಣ ಬಣ್ಣದ ದಿರಿಸುಗಳನ್ನು ಧರಿಸಿ, ಬಣ್ಣ ಬಣ್ಣದ ಕೋಲುಗಳಲ್ಲಿ ಇತರರ ಕೋಲುಗಳಿಗೆ ತಾಗಿಸುತ್ತಾ ಸುತ್ತುತ್ತಿರುತ್ತಾರೆ. ಈ ಮೋಜಿನ ಕಾರ್ಯಕ್ರಮಕ್ಕೆ ಕೆಲವೆಡೆ ಪ್ರವೇಶ ಶುಲ್ಕವೂ ಇರುತ್ತದೆ. ಇಂತಹ ಸಂದರ್ಭಕ್ಕೇ ಹಾಡುವ ಫಲ್ಗುಣೀ ಫಾಟಕ್‌ ಅವರ ಗಾಯನ ಕಿವಿಗಿಂಪಾಗಿರುತ್ತದೆ. ಈ ನೃತ್ಯ ಗುಜರಾತಿನ ಮೂಲದ್ದಾಗಿದ್ದು, ಮುಂಬಯಿಯ ಮಲಾಡ ಪ್ರದೇಶದ ಒಂದು ಚೌಕಕ್ಕೆ 'ನವರಾತ್ರಿ ಕಾಠಿಯಾವಾಡ ಚೌಕ" ಎಂದೇ ಹೆಸರಿಸಿದ್ದಾರೆ.

ನಾನು ನೋಡಿರುವ ಶೃಂಗೇರಿ ಮತ್ತು ಬೆಂಗಳೂರಿನ ಶಂಕರಮಠಗಳಲ್ಲಿ ಶಾರದಾ ಮಾತೆಗೆ ವಿಶೇಷ ಅಲಂಕಾರದಿಂದೊಡಗೂಡಿದ ಪೂಜೆ ನಡೆಯುವುದು. ದೇವಿಗೆ ದಿನಕ್ಕೊಂದು ತರಹದ ಅಲಂಕಾರವನ್ನು ಮಾಡುವರು. ಆ ಅಲಂಕಾರವನ್ನು ನೋಡಲು ಎರಡು ಕಣ್ಣುಗಳು ಸಾಲದು. ಶಾಕಾಂಬರೀ ಅಲಂಕಾರದಂದು ತೋರಣವಾಗಿ ಹುರುಳಿಕಾಯಿಗಳ ಹಾರ ಮಾಡಿ ಹಾಕಿದ್ದರೆ, ಹಣ್ಣುಗಳಿಂದ ಒಂದು ದಿನದ ಅಲಂಕಾರ ಮತ್ತು ಹೂವುಗಳಿಂದಲೇ ಪೂರ್ಣ ಅಲಂಕಾರವನ್ನು ಮತ್ತೊಂದು ದಿನ ಶಾರದಾ ಮಾತೆಗೆ ಮಾಡುವರು. ಈ ಉತ್ಸವದಲ್ಲಿ ಸಂಜೆಯ ವೇಳೆಯಲ್ಲಿ ಸಂಗೀತ ಕಾರ್ಯಕ್ರಮವೂ ಇರುವುದು. ಒಟ್ಟಿನಲ್ಲಿ ಹತ್ತು ದಿನಗಳು ತನು ಮನಗಳನ್ನು ತಣಿಸುವ ಈ ನಾಡ ಹಬ್ಬವನ್ನು ಆಬಾಲವೃದ್ಧರಾದಿಯಾಗಿ ಎಲ್ಲರೂ ಆನಂದಿಸುವರು.

ಈ ಸಂದರ್ಭದಲ್ಲಿ ದೇವಿಯ ಬಗ್ಗೆ ದುರ್ಗಿಯ ಆರತಿಯ ಸಮಯದಲ್ಲಿ ಹಾಡುವ ಒಂದು ಮರಾಠೀ ಭಜನೆ ಹೀಗಿದೆ.

ದುರ್ಗೇ ದುರ್ಘಟ ಭಾರೀ ತುಜವೀಣ ಸಂಸಾರೀ

ಅನಾಥನಾಥೇ ಅಂಬೇ ಕರುಣಾ ವಿಸ್ತಾರೀ

ವಾರೀ ವಾರೀ ಜನ್ಮಮರಣಾತೇ ವಾರೀ

ಹಾರೀ ಪಡಲೋ ಆತಾ ಸಂಕಟ ನೀವಾರೀ

ಜಯ ದೇವಿ ಜಯ ದೇವಿ

ಜಯ ದೇವಿ ಜಯ ದೇವಿ ಮಹಿಷಾಸುರ ಮರ್ದಿನೀ

ಸುರುವರ ಈಶ್ವರ ವರದೇ ತಾರಕ ಸಂಜೀವನೀ

ಜಯ ದೇವಿ ಜಯ ದೇವಿ

ತ್ರಿಭುವನ ಭುವನೀ ಪಹತಾಂ ತುಜಾಐಸೀ ನಾಂಹೀ

ಚಾರೀ ಶ್ರಮಲೇ ಪರಂತು ನ ಬೋಲವೇ ಕಾಂಹೀ

ಸಾಹೀ ವಿವಾದ ಕರಿತಾ ಪಡಲೋ ಪ್ರವಾಹೀ

ತೆ ತೂಂ ಭಕ್ತಾಲಾಗೀ ಪಾವಸೀ ಲವಲಾಹೀ

ಜಯ ದೇವಿ ಜಯ ದೇವಿ

ಜಯ ದೇವಿ ಜಯ ದೇವಿ ಮಹಿಷಾಸುರ ಮರ್ದಿನೀ

ಸುರುವರ ಈಶ್ವರ ವರದೇ ತಾರಕ ಸಂಜೀವನೀ

ಜಯ ದೇವಿ ಜಯ ದೇವಿ

ಪ್ರಸನ್ನವದನೇ ಪ್ರಸನ್ನ ಹೋಸೀ ನಿಜದಾಸಾ

ಕ್ಲೇಶಾಪಾಸುನೀ ಸೋಡವೀ ತೋಡೀ ಭವಪಾಶೀ

ಅಂಬೇ ತುಜವಾಚೂನ್‌ ಕೋಣ್‌ ಪುರವಿಲ ಆಶಾ

ನರಹರಿ ತಲ್ಲಿನ ಝಾಲಾ ಪದಪಂಕಜ ಲೇಶಾ

ಜಯ ದೇವಿ ಜಯ ದೇವಿ

ಜಯ ದೇವಿ ಜಯ ದೇವಿ ಮಹಿಷಾಸುರ ಮರ್ದಿನೀ

ಸುರುವರ ಈಶ್ವರ ವರದೇ ತಾರಕ ಸಂಜೀವನೀ

ಜಯ ದೇವಿ ಜಯ ದೇವಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X