Year Ender 2024: 2024ರಲ್ಲಿ ಸ್ವಿಗ್ಗಿಯಲ್ಲಿ ಅತೀ ಹೆಚ್ಚು ಆರ್ಡರ್ ಮಾಡಿದ ಖಾದ್ಯಗಳು
ಮೊನ್ನೆ ಮೊನ್ನೆಯಷ್ಟೇ 2024ನ್ನು ಸ್ವಾಗತಿಸಿದ್ದ ನಾವು ಆಗಲೇ 12 ತಿಂಗಳನ್ನು ಸಂಪೂರ್ಣವಾಗಿ ಮುಗಿಸಿ 2025ನ್ನು ಸ್ವಾಗತಿಸಲು ಸಜ್ಜಾಗುತ್ತಿದ್ದೇವೆ. ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ಒಂದು ವರ್ಷವೇ ಕಳೆದು ಹೋಗಿದ್ದು, ಹೊಸ ವರ್ಷಾರಂಭಕ್ಕೆ ಇನ್ನೇನು ಒಂದೇ ದಿನ ಬಾಕಿ ಇದೆ. 2025 ಎಲ್ಲರ ಜೀವನದಲ್ಲಿ ಹೊಸತನ ತರಲಿ ಎನ್ನುವ ಆಶಯದೊಂದಿಗೆ 2024ರ ಕೆಲವು ಕುತೂಹಲಕರವಾದ ಮಾಹಿತಿಗಳು ಇಲ್ಲಿದೆ.
ಇತ್ತೀಚಿಗೆ ಎಲ್ಲವೂ ಆನ್‌ಲೈನ್ ಆರ್ಡರ್ ಮಯ. ಅದರಲ್ಲೂ ಹೆಚ್ಚಾಗಿ ಆಹಾರಗಳು. ಕೊರೊನಾ ನಂತರ ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಆನ್‌ಲೈನ್ ಆರ್ಡರ್‌ಗಳಿಂದ ಝೋಮೇಟೋ, ಸ್ವಿಗ್ಗಿ ಸೇರಿದಂತೆ ಇತರ ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆಗಳು ಯಶಸ್ವಿಯಾಗಿ ಸಾಗುತ್ತಿದೆ. ಈ ವರ್ಷ ಅಂದರೆ 2024ರಲ್ಲಿ ತಮ್ಮ ಆ್ಯಪ್ ಮೂಲಕ ಜನರು ಅತಿ ಹೆಚ್ಚು ಆರ್ಡರ್ ಮಾಡಿದ ಆಹಾರ ಪದಾರ್ಥಗಳ ವರದಿಯನ್ನು ಸ್ವಿಗ್ಗಿ ಬಿಡುಗಡೆ ಮಾಡಿದೆ.

2024ರ ಸ್ವಿಗ್ಗಿ ವರದಿಯ ಪ್ರಕಾರ, ಬಿರಿಯಾನಿ ಹಾಗೂ ದೋಸೆ ಜನರು ಅತಿ ಹೆಚ್ಚು ಆರ್ಡರ್ ಮಾಡಿದ ಖಾದ್ಯ ಎಂದು ತಿಳಿದು ಬಂದಿದೆ. ಬಿರಿಯಾನಿ ಸತತ ಒಂಬತ್ತು ವರ್ಷಗಳಿಂದ ಮೊದಲ ಸ್ಥಾನದಲ್ಲಿದ್ದು, ಈ ವರ್ಷ 83 ಮಿಲಿಯನ್ ಆರ್ಡರ್‌ಗಳೊಂದಿಗೆ ಬಿರಿಯಾನಿ ತನ್ನ ಅಗ್ರಸ್ಥಾನ ಉಳಿಸಿಕೊಂಡಿದೆ. ವರ್ಷಕ್ಕೆ 83 ಮಿಲಿಯನ್ ಆರ್ಡರ್ ಅಂದರೆ ಪ್ರತಿ ಸೆಕೆಂಡಿಗೆ ಸುಮಾರು ಎರಡು ಬಿರಿಯಾನಿ ಆರ್ಡರ್‌ಗಳನ್ನು ಸ್ವಿಗ್ಗಿ ಪಡೆದುಕೊಂಡಿದೆ.
ದಕ್ಷಿಣ ಭಾರತದ ಜನಪ್ರಿಯ ಖಾದ್ಯ ದೋಸೆ 2024ರ ಸ್ವಿಗ್ಗಿ ವರದಿಯ ಎರಡನೇ ಸ್ಥಾನದಲ್ಲಿದೆ. ಈ ವರ್ಷ 23 ಮಿಲಿಯನ್ ದೋಸೆ ಆರ್ಡರ್‌ಗಳನ್ನು ಸ್ವಿಗ್ಗಿ ಪಡೆದುಕೊಂಡಿದೆ ಎಂದು ವರದಿಯಾಗಿದೆ. ಬೆಂಗಳೂರಿನಲ್ಲಿ ಮಾತ್ರವೇ 2.5 ಮಿಲಿಯನ್ ಮಸಾಲೆ ದೋಸೆ ಆರ್ಡರ್ ಆಗಿರುವುದು ವರದಿಯಲ್ಲಿ ತಿಳಿದು ಬಂದಿದೆ. ಇಡ್ಲಿ ಕೂಡ ಅಗ್ರಸ್ಥಾನದಲ್ಲೇ ಇದ್ದು, ದೇಶಾದ್ಯಂತ 7.8 ಮಿಲಿಯನ್ ಆರ್ಡರ್‌ಗಳನ್ನು ಹೊಂದಿದೆ.

ಇನ್ನು ಈ ವರ್ಷ ಚಿಕನ್ ರೋಲ್ 2.48 ಮಿಲಿಯನ್, ಚಿಕನ್ ಮೊಮೊಸ್ 1.63 ಮಿಲಿಯನ್, ಚಿಕನ್ ಬರ್ಗರ್‌ಗಳು 1.84 ಮಿಲಿಯನ್ ಆರ್ಡರ್‌ಗಳನ್ನು ಸ್ವಿಗ್ಗಿ ಪಡೆದುಕೊಂಡಿದೆ. ದೆಹಲಿಯಲ್ಲಿ ಛೋಲೆ ಭಟೂರೆ, ಪಂಜಾಬ್‌ನಲ್ಲಿ ಪರೋಟ, ಕೋಲ್ಕತ್ತಾದಲ್ಲಿ ಕಚೋರಿಗಳನ್ನು ಸ್ವಿಗ್ಗಿ ಆ್ಯಪ್ ಮೂಲಕ ಹೆಚ್ಚು ಆರ್ಡರ್ ಮಾಡಲಾಗಿದೆ.












Click it and Unblock the Notifications