Year end 2022; ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯುವ ರಾಜ್ಯಗಳು
ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡು ಹೊಸ ಸರ್ಕಾರ ರಚನೆಯಾಗಿದೆ. ಈ ಮೂಲಕ 2022ರಲ್ಲಿ ನಡೆಯಬೇಕಿದ್ದ ಎಲ್ಲಾ ರಾಜ್ಯಗಳ ಚುನಾವಣೆ ಮುಕ್ತಾಯವಾಗಿದೆ. ಮುಂದಿನ ವರ್ಷದಲ್ಲಿ ಯಾವ-ಯಾವ ರಾಜ್ಯಗಳು ಚುನಾವಣೆ ಎದುರಿಸಲಿವೆ?.
2023ರಲ್ಲಿ ದೇಶದ 9 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ವಿವಿಧ ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳು ಬ್ಯುಸಿಯಾಗುವ ಕಾಲವಿದು. ಇದರಲ್ಲಿ ಕರ್ನಾಟಕವೂ ಸೇರಿದೆ. 2024ರಲ್ಲಿ ಲೋಕಸಭೆ ಚುನಾವಣೆ ನಡೆಯಬೇಕಿದೆ, ಇದಕ್ಕೂ ಮೊದಲು ನಡೆಯುವ ವಿಧಾನಸಭೆ ಚುನಾವಣೆಗಳ ಫಲಿತಾಂಶ ಕುತೂಹಲಕ್ಕೆ ಕಾರಣವಾಗಲಿದೆ.
ಅದರಲ್ಲೂ ಮುಂದಿನ ವರ್ಷ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಕೇಂದ್ರ ಸರ್ಕಾರದ ಜೊತೆ ಜಟಾಪಟಿ ನಡೆಸುತ್ತಿರುವ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್‌ಗೆ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಲು ಬಿಜೆಪಿ ತಂತ್ರ ರೂಪಿಸುತ್ತಿದೆ.

ಅಲ್ಲದೇ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ರಾಜಸ್ಥಾನದಲ್ಲಿಯೂ ಹೊಸ ವರ್ಷದ ಮೊದಲ ತಿಂಗಳಿನಲ್ಲಿಯೇ ಚುನಾವಣೆ ಎದುರಾಗುವ ನಿರೀಕ್ಷೆ ಇದೆ. 9 ರಾಜ್ಯಗಳ ಚುನಾವಣೆ ಇರುವುದರಿಂದ ರಾಷ್ಟ್ರೀಯ ಪಕ್ಷಗಳ ನಾಯಕರು ಮುಂದಿನ ವರ್ಷ ಬ್ಯುಸಿಯಾಗುವ ಸಾಧ್ಯತೆ ಹೆಚ್ಚಿದೆ.
ಯಾವ-ಯಾವ ರಾಜ್ಯಗಳು?: 2023ರಲ್ಲಿ ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ, ಕರ್ನಾಟಕ, ಛತ್ತೀಸ್‌ಗಢ, ಮಧ್ಯ ಪ್ರದೇಶ, ಮಿಜೋರಾಂ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಬೇಕಿದೆ.
ಮೇಘಾಲಯ (60) ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಮಾರ್ಚ್ ತಿಂಗಳಿನಲ್ಲಿ ರಾಜ್ಯದಲ್ಲಿ ಚುನಾವಣೆ ಎದುರಾಗುವ ಸಾಧ್ಯತೆ ಇದೆ. ನಾಗಾಲ್ಯಾಂಡ್‌ನ 60 ಸ್ಥಾನಗಳಿಗೆ ಸಹ ಮಾರ್ಚ್ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯಬೇಕು.
60 ಸದಸ್ಯ ಬಲದ ತ್ರಿಪುರ ವಿಧಾನಸಭೆಗೆ ಸಹ 2023ರ ಮಾರ್ಚ್‌ನಲ್ಲಿ ಚುನಾವಣೆ ನಡೆಯಬೇಕಿದೆ. ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೆ ಮೇ ತಿಂಗಳಿನಲ್ಲಿ ಚುನಾವಣೆ ಆಗಬೇಕು. ಈಗಾಗಲೇ ರಾಜಕೀಯ ಪಕ್ಷಗಳು ತಯಾರಿಯನ್ನು ಆರಂಭಿಸಿವೆ.
ಛತ್ತೀಸ್‌ಗಢ 90 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಈ ರಾಜ್ಯದಲ್ಲಿ 2023ರ ಅಂತ್ಯದಲ್ಲಿ ಚುನಾವಣೆ ನಡೆಯಬೇಕು. 230 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಮಧ್ಯ ಪ್ರದೇಶದಲ್ಲಿಯೂ ಜನವರಿ ತಿಂಗಳಿನಲ್ಲಿ ಚುನಾವಣೆ ನಡೆಯಬೇಕು.
40 ಸದಸ್ಯ ಬಲದ ಮಿಜೋರಾಂನಲ್ಲಿ ಸಹ ಡಿಸೆಂಬರ್ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ. 200 ಸದಸ್ಯ ಬಲದ ರಾಜಸ್ಥಾನದಲ್ಲಿಯೂ ಜನವರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಬೇಕು. 119 ಸ್ಥಾನಗಳನ್ನು ಹೊಂದಿರುವ ತೆಲಂಗಾಣದಲ್ಲಿಯೂ ಡಿಸೆಂಬರ್‌ನಲ್ಲಿ ಮತದಾನವಾಗಬೇಕು.
ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿಯೂ ಚುನಾವಣೆ ನಡೆಯಬೇಕಿದೆ. ಕೇಂದ್ರಾಡಳಿತ ಪ್ರದೇಶವಾಗಿ ವಿಭಜನೆಗೊಂಡ ಬಳಿಕ ಮೊದಲ ಬಾರಿಗೆ ರಾಜ್ಯದಲ್ಲಿ ಚುನಾವಣೆಗಳು ಆಗಬೇಕಿದೆ.
ಕಾಂಗ್ರೆಸ್ ಪಕ್ಷಕ್ಕೆ ಸವಾಲು; ಮುಂದಿನ ವರ್ಷ ನಡೆಯುವ ಚುನಾವಣೆಗಳು ಕಾಂಗ್ರೆಸ್ ಪಕ್ಷಕ್ಕೆ ಸವಾಲಾಗಿವೆ. ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಚುನಾವಣೆ ನಡೆದರೆ ಸರ್ಕಾರವನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಪಕ್ಷದ ಮುಂದಿದೆ. ಅಲ್ಲದೇ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾದ ಮೇಲೆ ಅವರ ತವರು ರಾಜ್ಯ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳ ಚುನಾವಣೆಯನ್ನು ಅವರು ಎದುರಿಸಬೇಕಿದೆ.
2024ರಲ್ಲಿ ಲೋಕಸಭೆ ಚುನಾವಣೆ ನಡೆಯುವ ಕಾರಣ ಬಿಜೆಪಿಗೆ ಈ ಚುನಾವಣೆ ಮಹತ್ವದ್ದಾಗಿದೆ. ದೇಶದಲ್ಲಿ ಮತ್ತೆ ಅಧಿಕಾರ ಹಿಡಿಯಬೇಕಾದರೆ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಗೆದ್ದು ಸರ್ಕಾರ ರಚನೆಯಾಗಬೇಕು. ಆಗ ಲೋಕಸಭೆ ಚುನಾವಣೆಯಲ್ಲಿಯೂ ಪಕ್ಷಕ್ಕೆ ಸಹಾಯಕವಾಗಲಿದೆ.
ಮುಂದಿನ ವರ್ಷ 9 ರಾಜ್ಯಗಳ ಚುನಾವಣೆ ನಡೆಯಲಿದ್ದು, ವಿವಿಧ ರಾಜಕೀಯ ಪಕ್ಷಗಳ ಭವಿಷ್ಯ ತೀರ್ಮಾನವಾಗಲಿದೆ. ಹಲವಾರು ರಾಜ್ಯಗಳ ರಾಜಕೀಯ ನಾಯಕರ ಮುಂದಿನ ಭವಿಷ್ಯವೂ ಚುನಾವಣೆ ಮೇಲೆ ನಿಂತಿದೆ.












Click it and Unblock the Notifications