World Malaria Day 2022: ಭಾರತದಲ್ಲಿ ಇನ್ನೂ ಜೀವಂತವಾಗಿದೆಯಾ ಮಲೇರಿಯಾ!?
ನವದೆಹಲಿ, ಏಪ್ರಿಲ್ 25: ಇಡೀ ಮಾನವ ಸಂಕುಲಕ್ಕೆ ಒಂದು ಕಾಲದಲ್ಲಿ ಮಹಾಮಾರಿಯಂತೆ ಕಾಡಿದ ರೋಗದ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಏಪ್ರಿಲ್ 25ರಂದು ವಿಶ್ವ ಮಲೇರಿಯಾ ದಿನ ಎಂದು ಆಚರಿಸಲಾಗುತ್ತದೆ.
ಒಂದು ನಿರ್ದಿಷ್ಟ ಸೊಳ್ಳೆಯ ಕಟ್ಟುವಿಕೆಯಿಂದ ಈ ಮಲೇರಿಯಾ ರೋಗ ಅಂಟಿಕೊಳ್ಳುತ್ತದೆ. ಮಲೇರಿಯಾ ಸೋಂಕಿತ ಅನಾಫಿಲಿಸ್ ಸೊಳ್ಳೆಯು ಮನುಷ್ಯನನ್ನು ಕಚ್ಚಿದಾಗ ವ್ಯಕ್ತಿಯ ದೇಹದ ರಕ್ತದಲ್ಲಿ ಪ್ಲಾಸ್ಮೋಡಿಯಂ ಎಂಬ ರೋಗಾಣು ಸೇರಿಕೊಳ್ಳುತ್ತದೆ. ಇದರಿಂದ ಮಲೇರಿಯಾ ರೋಗದ ಸೋಂಕು ತಗಲುತ್ತದೆ.
ಜಾಗತಿಕ ಮಟ್ಟದಲ್ಲಿ ಈಗ ಮಲೇರಿಯಾ ರೋಗವನ್ನು ತಡೆಗಟ್ಟಬಹುದು ಹಾಗೂ ಗುಣಪಡಿಸಲೂ ಸಾಧ್ಯವಿದೆ. ಅದಾಗ್ಯೂ, ಸೋಂಕಿತರ ಸಂಖ್ಯೆಯಲ್ಲಿ ಮಾತ್ರ ಯಾವುದೇ ಇಳಿಕೆ ಕಂಡು ಬಂದಿಲ್ಲ ಎನ್ನುವುದು ಅಂಕಿ-ಅಂಶಗಳ ಸಹಿತ ಸಾಬೀತಾಗುತ್ತಿದೆ. ಹಾಗಿದ್ದರೆ ಇತ್ತೀಚಿಗೆ ಮಲೇರಿಯಾ ರೋಗಿಗಳ ಸಂಖ್ಯೆ ಎಷ್ಟು?, ಅತಿಹೆಚ್ಚು ಸೋಂಕಿತ ಪ್ರಕರಣಗಳನ್ನು ವರದಿ ಮಾಡಿರುವ ರಾಷ್ಟ್ರಗಳು ಯಾವುವು?, ಮಲೇರಿಯಾ ಕುರಿತು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳನ್ನು ಮುಂದೆ ಓದಿ.

ಕಳೆದ ವರ್ಷ 6.27 ಲಕ್ಷ ಜನರು ಮಲೇರಿಯಾಗೆ ಬಲಿ
ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಕಳೆದ 2020ರಲ್ಲಿ ಜಗತ್ತಿನಾದ್ಯಂತ ಸುಮಾರು 241 ದಶಲಕ್ಷ ಮಂದಿಗೆ ಮಲೇರಿಯಾ ರೋಗ ಅಂಟಿಕೊಂಡಿರುವುದು ವರದಿಯಾಗಿದೆ. ಇದೇ ಮಾರಣಾಂತಿಕ ಕಾಯಿಲೆಯಿಂದ 2020ರಲ್ಲಿ ವಿಶ್ವದಾದ್ಯಂತ 6.27 ಲಕ್ಷ ಜನರು ಪ್ರಾಣ ಬಿಟ್ಟಿದ್ದಾರೆ.

ಜಗತ್ತಿನಲ್ಲಿ ಮಲೇರಿಯಾ ಮುಕ್ತ ರಾಷ್ಟ್ರಗಳು ಯಾವುವು?
ವಿಶ್ವದ ಹಲವು ರಾಷ್ಟ್ರಗಳು ಮಲೇರಿಯಾವನ್ನು ಯಶಸ್ವಿಯಾಗಿ ನಿರ್ಮೂಲನೆ ಮಾಡುವಲ್ಲಿ ಸಮರ್ಥವಾಗಿವೆ. ಈ ಹಿನ್ನೆಲೆ ವಿಶ್ವ ಆರೋಗ್ಯ ಸಂಸ್ಥೆಯು 40 ದೇಶಗಳು ಮತ್ತು ಪ್ರಾಂತ್ಯಗಳಿಗೆ ಮಲೇರಿಯಾ ಮುಕ್ತ ಪ್ರಮಾಣಪತ್ರವನ್ನು ನೀಡಿದೆ. WHO ಮಲೇರಿಯಾ ಮುಕ್ತ ಎಂದು ಘೋಷಿಸಿದ ಇತ್ತೀಚಿನ ದೇಶ ಚೀನಾ ಆಗಿದೆ. ಮಲೇರಿಯಾ ಮುಕ್ತ ರಾಷ್ಟ್ರಗಳು ಎಂಬ ಪಟ್ಟಿಗೆ ಸೇರಿದ ದೇಶಗಳೆಂದರೆ ಎಲ್ ಸಾಲ್ವಡಾರ್ (2021), ಅರ್ಜೆಂಟೀನಾ (2019), ಪರಾಗ್ವೆ (2018), ಮತ್ತು ಉಜ್ಬೇಕಿಸ್ತಾನ್ (2018) ಆಗಿವೆ.

ದೇಶದ ಯಾವುದೇ ರಾಜ್ಯವೂ ಮಲೇರಿಯಾ ಮುಕ್ತವಾಗಿಲ್ಲ
ಭಾರತದಲ್ಲಿ ಇದುವರೆಗೆ ಯಾವುದೇ ರಾಜ್ಯವು ಮಲೇರಿಯಾ ಮುಕ್ತವಾಗಲು ಸಾಧ್ಯವಾಗಿಲ್ಲ. ಕಳೆದ 2019ರಲ್ಲಿ ಆಗ್ನೇಯ ಏಷ್ಯಾ ಪ್ರದೇಶದಲ್ಲಿ ಪತ್ತೆಯಾಗಿರುವ ಒಟ್ಟು ಸೋಂಕಿತ ಪ್ರಕಣಗಳಲ್ಲಿ ಭಾರತವು ಶೇ.88ರಷ್ಟು ಮಲೇರಿಯಾ ಪ್ರಕರಣಗಳಿದ್ದರೆ, ಶೇ.86ರಷ್ಟು ಸಾವಿನ ಪ್ರಕರಣಗಳು ವರದಿಯಾಗಿವೆ. ಮಲೇರಿಯಾದಿಂದ ತತ್ತರಿಸಿದ 11 ರಾಷ್ಟ್ರಗಳ ಪಟ್ಟಿಯಲ್ಲಿ ಆಫ್ರಿಕಾ ಅಗ್ರಸ್ಥಾನದಲ್ಲಿದ್ದರೆ, ಭಾರತವು ನಂತರದ ಸ್ಥಾನದಲ್ಲಿದೆ.

2030ರ ವೇಳೆಗೆ ಮಲೇರಿಯಾ ಮುಕ್ತವಾಗಲಿದೆ ಭಾರತ
ಭಾರತವನ್ನು ಮಲೇರಿಯಾ ಮುಕ್ತಗೊಳಿಸುವುದಕ್ಕೆ 2030ರ ಗುರಿ ಹಾಕಿಕೊಳ್ಳಲಾಗಿದೆ. ಮಲೇರಿಯಾ ನಿರ್ಮೂಲನೆಗಾಗಿ ರಾಷ್ಟ್ರೀಯ ಚೌಕಟ್ಟು (NFME) ಸಹಿ ಮಾಡಿದ್ದು, ಈ ಗುರಿಯನ್ನು ಸಾಧಿಸಲು ಪ್ರಯತ್ನ ಮಾಡುತ್ತಿದೆ. ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ, ಭಾರತವು 2017ಕ್ಕೆ ಹೋಲಿಸಿದರೆ ಮಲೇರಿಯಾ ಪ್ರಕರಣಗಳ ಸಂಖ್ಯೆಯನ್ನು ಶೇಕಡಾ 60ರಷ್ಟು ಕಡಿಮೆಯಾಗಿದೆ. ಅದೇ ರೀತಿ 2018ಕ್ಕೆ ಹೋಲಿಸಿದರೆ ಶೇ.46ರಷ್ಟು ಕಡಿಮೆಯಾಗಿದೆ.
ಮಲೇರಿಯಾ ಮುಕ್ತ ಗುರಿಯನ್ನು ಸಾಧಿಸುವತ್ತ ಸಾಗುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಒಡಿಶಾ ಅಗ್ರಸ್ಥಾನದಲ್ಲಿದೆ. ಕಳೆದ ಮೂರು ವರ್ಷಗಳ ಮಲೇರಿಯಾ ಪ್ರಕರಣಗಳಲ್ಲಿ ಶೇ 90ರಷ್ಟು ಇಳಿಕೆಯಾಗಿದೆ ಎಂದು ರಾಜ್ಯ ಸರ್ಕಾರ ಕಳೆದ ವರ್ಷವಷ್ಟೇ ಪ್ರಕಟಿಸಿದೆ.












Click it and Unblock the Notifications