Womens Day 2025: ಮಹಿಳಾ ದಿನಾಚರಣೆ ಇತಿಹಾಸ, ದಿನಾಂಕ, ಉದ್ದೇಶ- ಸಮಾಜ ಸುಧಾರಣೆಯಲ್ಲಿ ಮಹಿಳೆಯರ ಪಾತ್ರ
ಹೆಣ್ಣಿಲ್ಲದೆ ಜೀವವಿಲ್ಲ, ಹೆಣ್ಣಿಲ್ಲದೆ ಜೀವನವಿಲ್ಲ. ಹೆಣ್ಣಿನಿಂದಲೇ ಬಾಳು ಬಂಗಾರ, ಹೆಣ್ಣಿಲ್ಲದ ಬದುಕು ನಿಸ್ವರ, ಹೆಣ್ಣನ್ನು ಗೌರವಿಸಿ ಹೆಣ್ಣು ಮಕ್ಕಳನ್ನು ರಕ್ಷಿಸಿ. ಪ್ರತೀ ವರ್ಷ ಮಾರ್ಚ್ 8ರಂದು ವಿಶ್ವದಾದ್ಯಂತ ಹೆಚ್ಚು ರಾಷ್ಟ್ರಗಳಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ಈ ಆಚರಣೆ ಮಾಡುವ ದೇಶದಲ್ಲಿ ಆ ದೇಶಕ್ಕೆ ಕೊಡುಗೆ ನೀಡಿದ, ಸಮಾಜಕ್ಕೆ ಮಾದರಿಯಾದ ಮಹಿಳೆಯರ ಸಾಧನೆಯನ್ನು ನೆನೆದು ಗೌರವಿಸಲಾಗುತ್ತದೆ. ಎಷ್ಟೋ ರಾಷ್ಟ್ರಗಳು ತಮ್ಮ ದೇಶಕ್ಕೆ ಕೊಡುಗೆ ನೀಡಿದ ಮಹಿಳೆಯರ ಸಾಧನೆಯನ್ನು ಸಾರುವ ಪಠ್ಯಕ್ರಮವನ್ನು ಅಳವಡಿಸಿವೆ. ಉದಾಹರಣೆಗೆ ಕರ್ನಾಟಕದಲ್ಲಿ ವೀರ ವನಿತೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ವಚನ ಸಾಹಿತ್ಯ ಕ್ಷೇತ್ರಕ್ಕೆ ಅದ್ಭುತ ಕೊಡುಗೆ ನೀಡಿದ ಅಕ್ಕಮಹಾದೇವಿ ಹೀಗೆ ಹಲವರ ಕುರಿತಂತೆ ಪಾಠಗಳಿದ್ದು ಅವರ ಕೊಡುಗೆ ಹಾಗೂ ಸಾಧನೆಯ ಸ್ಮರಣಾರ್ಥವಾಗಿದೆ.

ಇಂತಹ ವೀರ ವನಿತೆಯರ ಕೊಡುಗೆ ಮತ್ತು ಸಾಧನೆಯನ್ನು ಮುಂದಿನ ಪೀಳಿಗೆಯವರಿಗೆ ಮಾರ್ಗದರ್ಶನವಾಗಬೇಕು ಹಾಗೂ ಮುಂದಿನ ಪೀಳಿಗೆಯವರಲ್ಲಿಯೂ ಕೂಡ ಉತ್ತಮ ನಾಯಕತ್ವ ಬೆಳೆಯಲಿ ಎನ್ನುವುದೇ ಈ ಒಂದು ಪಠ್ಯಕ್ರಮ ಅಳವಡಿಕೆಯ ಮುಖ್ಯ ಉದ್ದೇಶವಾಗಿದೆ. ಈ ಉದ್ದೇಶಗಳು ಪರಣಾಮಕಾರಿಯಾಗಿ ಈಡೇರಲು ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸುವ ಮಹಿಳಾ ದಿನಾಚರಣೆಯೂ ಉನ್ನತ ಮಟ್ಟದಲ್ಲಿ ಸಹಕಾರಿಯಾಗುತ್ತದೆ.
ಮಹಿಳೆ ನಾಲ್ಕು ಗೋಡೆಗೆ ಮಾತ್ರ ಸೀಮಿತವಲ್ಲ
ಮಹಿಳೆ ನಾಲ್ಕು ಗೋಡೆಗೆ ಮಾತ್ರ ಸೀಮಿತವಾಗಿರದೆ ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಇನ್ನಿತರ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಗೌರವಿಸಲು ಹಾಗೂ ಇತರರಿಗೆ ಮಾದರಿಯಾಗಲು ಈ ಮಹಿಳಾ ದಿನಾಚರಣೆ ಸಹಕಾರಿಯಾಗಿದೆ.

ಮಹಿಳೆಯರ ಸಾಧನೆ ಹಾಗೂ ಕೊಡುಗೆಗಳನ್ನು ಸ್ಮರಿಸಲು ಈ ಒಂದು ಮಹಿಳಾ ದಿನಾಚರಣೆ ಮೀಸಲಿರಿಸಲಾಗಿದೆ. ಹಾಗಾದರೆ ಈಗ ನಾವು ಈ ಮಹಿಳಾ ದಿನಾಚರಣೆ ಯಾರಿಂದ ಆಚರಣೆಗೆ ಬಂತು ಯಾಕೆ ಆಚರಿಸಲಾಗುತ್ತದೆ ಎಂದು ಸಂಕ್ಷಿಪ್ತವಾಗಿ ತಿಳಿಯೋಣ.
ಮಹಿಳಾ ದಿನಾಚರಣೆ ಇತಿಹಾಸ
ಮಹಿಳಾ ದಿನಾಚಣೆಯನ್ನು ಒಂದು ಶತಮಾನದಿಂದ ಆಚರಿಸುತ್ತಾ ಬಂದಿದ್ದೇವೆ. 1911ರಲ್ಲಿ ಡೆನ್ಮಾರ್ಕ್, ಆಸ್ಟ್ರೀಯಾ, ಸ್ವಿಡ್ಜರ್‌ಲ್ಯಾಂಡ್ ದೇಶಗಳಲ್ಲಿ ದಶಲಕ್ಷಗಟ್ಟಲೆ ಜನರು ಸೇರುವ ಮೂಲಕ ಈ ಒಂದು ಮಹಿಳಾ ದಿನಾಚರಣೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಣೆ ಮಾಡಲು ಶುರು ಮಾಡಿದರು.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮೊದಲ ಬಾರಿಗೆ ಕೂಲಿ ಚಳುವಳಿಯ ಮೂಲಕ ಉತ್ತರ ಅಮೇರಿಕಾ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಆಚರಣೆ ಮಾಡಲು ಪ್ರಾರಂಭಿಸಲಾಯಿತು. ಲಿಂಗ ಸಮಾನತೆಯನ್ನು ರೂಪಿಸುವಲ್ಲಿ ಪ್ರತಿಯೊಬ್ಬರದ್ದೂ ಪಾತ್ರವಿದೆ ಎಂಬ ಅಂಶವನ್ನು ಬಲವಾಗಿ ಹೇಳಲು ಇದು ಒಂದು ದೊಡ್ಡ ವೇದಿಕೆಯಾಗಿ ರೂಪಗೊಳ್ಳುತ್ತದೆ. ಅಲ್ಲದೆ ದೇಶಕ್ಕೆ, ಪ್ರಪಂಚಕ್ಕೆ, ಸಮಾಜಕ್ಕೆ ಮಹಿಳಾ ಸಾಧಿಕಿಯರ ಕೊಡುಗೆಗಳನ್ನು ನೆನೆದು ಸಾರುವ ದಿನ ಸಹ ಇದಾಗಿದೆ.
ಹೀಗಾಗಿ ಇಂತಹ ಅದ್ಭುತ ಉದ್ದೇಶವನ್ನು ಇಟ್ಟುಕೊಂಡು 1975ರ ಮಾರ್ಚ್ 8ರಂದು ಸಂಯುಕ್ತ ರಾಷ್ಟ್ರಗಳು ನಿರ್ಧಾರವನ್ನು ಮಾಡಿ ಅಂತಾರಾಷ್ಟ್ರಿಯ ಮಟ್ಟದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಣೆ ಮಾಡಲು ಪ್ರಾರಂಭಿಸುತ್ತವೆ. 19ನೇ ಶತಮಾನದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ಮಹಿಳೆಯರು ಲಿಂಗ ಸಮಾನತೆಗಾಗಿ ಹೋರಾಟವನ್ನು ಪ್ರಾರಂಭಿಸುತ್ತಾರೆ. ಮತದಾನ ಹಕ್ಕನ್ನು ಕಲ್ಪಿಸಲು ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಅಂಶಗಳ ಮೇಲೆ ಹೋರಾಟವನ್ನು ಪ್ರಾರಂಭಿಸುತ್ತಾರೆ. ಸರ್ಕಾರಿ ವಲಯದಲ್ಲಿಯೂ ಈ ಬಗ್ಗೆ ಧ್ವನಿ ಎತ್ತಲಾಗುತ್ತದೆ.

ಸಮಾನತೆಗಾಗಿ ಹಲವು ಮಹಿಳಾ ವಾದಿಗಳು 1970-80ರ ದಶಕದಲ್ಲಿ ಹೆಚ್ಚಿನ ಹೋರಾಟವನ್ನು ಪ್ರಾರಂಭಿಸುತ್ತಾರೆ. ಮಹಿಳೆಯರು ಒಂದು ಕುಟುಂಬದ ಆಧಾರ ಸ್ತಂಭವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಬೆಳೆಯಲು ಪ್ರತಿಯೊಬ್ಬರೂ ಅವಕಾಶವನ್ನು ಕಲ್ಪಿಸಬೇಕು ಮತ್ತು ಪ್ರತಿಯೊಬ್ಬರೂ ಕೂಡ ಪ್ರೋತ್ಸಾಹಿಸಬೇಕು ಎನ್ನುವ ಧೇಯವನ್ನಿಟ್ಟುಕೊಂಡು ಹೋರಾಟವನ್ನು ಪ್ರಾರಂಭಿಸಿದ್ದರ ಫಲವಾಗಿ ಡೆನ್ಮಾರ್ಕ್, ಸ್ವಿಡ್ಕರ್‌ಲ್ಯಾಂಡ್ ನಲ್ಲಿ ಮೊದಲ ಬಾರಿಗೆ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ತದನಂತರ ಅಮೆರಿಕಾ ಹಾಗೂ ಬ್ರಿಟನ್‌ಗಳು ಸೇರಿದಂತೆ ಹಲವು ದೇಶಗಳಲ್ಲಿನ ಸಮಾಜವಾದಿ ಪಕ್ಷಗಳು ಈ ಒಂದು ಅಂಶವನ್ನು ಇಟ್ಟುಕೊಂಡು ಹೆಚ್ಚು ಹೆಚ್ಚು ಪ್ರಚಾರ ಮಾಡಿದ್ದರಿಂದ ಇಂದು ವಿಶ್ವದಾದ್ಯಂತ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಆದರೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಗೂ ಮುನ್ನವೇ ನಮ್ಮ ಭಾರತ ದೇಶದಲ್ಲಿ ಫೆಬ್ರವರಿ 13ರಂದು ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನಾಗಿ ನಾವು ಆಚರಿಸುತ್ತಾ ಬಂದಿದ್ದೇವೆ. ಭಾರತದ ಪ್ರಥಮ ರಾಜ್ಯಪಾಲರಾದ ಸರೋಜಿನಿ ನಾಯ್ಡು ಅವರ ಜನ್ಮ ದಿನದ ಸವಿನೆನಪಿಗಾಗಿ ಫೆಬ್ರವರಿ 13ರಂದು ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ದೇಶದ ಅಭಿವೃದ್ಧಿಗಾಗಿ ಮಹಿಳೆ
ದೇಶದ ಅಭಿವೃತ್ತಿಗೆ ಮಹಿಳೆಯರು ನೀಡಿದ ಕೊಡುಗೆಗಳನ್ನು ಪರಿಗಣಿಸಿ ಪ್ರತೀ ವರ್ಷ ಫೆಬ್ರವರಿ 13ರಂದು ನಾವು ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿಕೊಂಡು ಬಂದಿದ್ದೇವೆ. ಈ ಒಂದು ಅರ್ಥಗರ್ಭಿತ ದಿನದ ಅಂಗವಾಗಿ ಮಹಿಳೆಯರನ್ನು ಕೀಳಾಗಿ ನೋಡುವ ಪ್ರೌವೃತ್ತಿ ಕಡಿಮೆಯಾಗುತ್ತಿದೆ. ಮಹಿಳೆಯರು ಕೂಡ ಪುರುಷರಂತೆ ರಾಜಕೀಯ, ಉದ್ಯೋಗ ಇನ್ನಿತರ ಯಾವುದೇ ಕ್ಷೇತ್ರದಲ್ಲಿಯೂ ಸೇರಿದಂತೆ ಸಮಾನ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಹಾಗೂ ಅವರಿಗೂ ಘನತೆ, ಗೌರವಯುತ, ಸ್ವಾಭಿಮಾನದ ಮತ್ತು ಸ್ವಾತಂತ್ರ್ಯದ ಬದುಕನ್ನು ಕಲ್ಪಿಸಿಕೊಡುವ ಮಹೋನ್ನತ ಇದಾಗಿ ರೂಪಕೊಂಡಿದೆ.
ಮಹಿಳೆಯದ್ದು ಆಪೇಕ್ಷೆ ಇಲ್ಲದ ಜೀವನ
ಹಾಗೆಯೇ ಎಲ್ಲರ ಮನೆಯಲ್ಲಿ ಏನನ್ನೂ ಆಪೇಕ್ಷೆ ಪಡದೆ ಕೆಲಸ ಮಾಡುವ ಅಮ್ಮಂದಿರಿಗೆ ಈ ದಿನ ವಿಶೇಷವಾಗಿ ಅಂಕಿತವಾಗಬೇಕು. ಯಾಕೆಂದರೆ ಎಲ್ಲರಿಗೂ ವಾರಕ್ಕೆ ಒಂದು ದಿನವಾದರೂ ರಜೆ ಇರುತ್ತದೆ. ಆದರೆ ನಮ್ಮ ಸಲುವಾಗಿ ದುಡಿಯುವ ನಮ್ಮ ತಾಯಿಗೆ ಯಾವುದೇ ರಜೆ ಇರುವುದಿಲ್ಲ. ಇಂತಹ ನಿಸ್ವಾರ್ಥ ಮಹಿಳೆಗೆ ನನ್ನದೊಂದು ದೊಡ್ಡ ಸಲಾಮ್.
ಹೆಣ್ಣು ಮೃದು ಸ್ವಭಾವದವಳು
ಇನ್ನೂ ಹೆಣ್ಣು ಮೃದು ಸ್ವಭಾವ ಹೊಂದಿರಬೇಕು, ಕೋಪ ಮಾಡಿಕೊಳ್ಳಬಾರದು, ಹಠ ಮಾರಬಾರದು, ಯಾವುದಕ್ಕೂ ಕೂಡ ಎದುರು ಮಾತನಾಡಬಾರದು, ಹೇಳಿದಂತೆ ಕೇಳಬೇಕು, ತಲೆ ಬಗ್ಗಿಸಿ ನಡೆಯಬೇಕು ಅನ್ನೋ ಕಟ್ಟುಪಾಡುಗಳನ್ನೆಲ್ಲಾ ನಾವು ಇಂದು ಮುರಿಯಬೇಕಿದೆ. ಅವಳು ಕೂಡ ಮನುಷ್ಯಳೇ ಅವಳಿಗೂ ಕೂಡ ಆಸೆ ಕನಸುಗಳು ಇರುತ್ತವೆ ಎಂದು ಪ್ರತಿಯೊಬ್ಬರೂ ಕೂಡ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ಬೇರೆಯವರ ಮೇಲೆ ಅವಲಂಭಿತವಾಗಿರದೇ ತನ್ನ ಆತ್ಮಗೌರವವನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬ ಮಹಿಳೆ ಇಂದು ಸಾಹಸವನ್ನು ಪಡುತ್ತಿದ್ದಾಳೆ. ಹೀಗಾಗಿ ಇಂತಹ ಮಹಿಳೆಯರಿಗೆ ಬೆಂಬಲವಾಗಿ ನಿಲ್ಲುವ ಸಮಾಜ ನಮ್ಮದಾಗಬೇಕು. ಹೆಣ್ಣಾಗಿ ಹುಟ್ಟಿರುವುದೇ ಒಂದು ಮಹಾಸೌಭಾಗ್ಯ ಮತ್ತು ಮಹಾಶಕ್ತಿ. ಹೀಗಾಗಿ ಅದನ್ನು ನಾವು ಸಂತಸದಿಂದ ನಾವು ಸಂಭ್ರಮಿಸೋಣ. ಎಲ್ಲರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು.












Click it and Unblock the Notifications