OYO Rooms: ಓಯೋ ರೂಂ ಚೆಕ್‌ಇನ್ ಆದ ಮಹಿಳೆಗೆ ಶಾಕಿಂಗ್ ಅನುಭವ
ಪ್ರೇಮಿಗಳ ಹಾಟ್‌ಸ್ಟಾಟ್ ಎಂದೇ ಕರೆಸಿಕೊಂಡಿರುವ ಓಯೋ (OYO) ಸೇವೆಗೆ ಭಾರತದಲ್ಲಿ ಮೆಚ್ಚುಗೆಗಳ ಮಹಾಪೂರವೇ ಹರಿದಿದೆ. ಓಯೋ ತನ್ನ ಸೇವೆಯಿಂದಾಗಿ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವಲ್ಲಿಯೂ ಯಶಸ್ವಿಯಾಗಿದೆ. ಆದರೆ, ಇದೀಗ ಓಯೋ ವಿರುದ್ಧ ಅಪಸ್ವರವೊಂದು ಕೇಳಿಬಂದಿದೆ. ಗ್ರಾಹಕರೊಬ್ಬರು ಓಯೋ ಮಾಡಿರುವ ಕೆಲಸಕ್ಕೆ ಹಿಡಿಶಾಪವೂ ಹಾಕಿದ್ದಾರೆ.
ದೇಶದ ಪ್ರಮುಖ ನಗರಗಳು, ಪ್ರವಾಸಿ ತಾಣಗಳು ಸೇರಿದಂತೆ ಸಣ್ಣ ನಗರಗಳಲ್ಲೂ ಸೇವೆ ನೀಡುತ್ತಿರುವ ಓಯೋ ತನ್ನ ಚೆಕ್ ಇನ್-ಚೆಕ್‌ಔಟ್‌ನ ಸರಳ ಪ್ರಕ್ರಿಯೆಯಿಂದಾಗಿ ಕೆಲ ಸಮಯದಲ್ಲೇ ಜನಪ್ರಿಯತೆ ಪಡೆದುಕೊಂಡಿದೆ. ಈ ಜಾಲ ದೇಶದೆಲ್ಲೆಡೆ ವ್ಯಾಪಿಸಿದ್ದು, ಓಯೋ ಆಪ್ ಮುಖಾಂತರ ಚಿಟಿಕೆ ಹೊಡೆಯುವಷ್ಟರಲ್ಲಿ ಬೇಕಾದಲ್ಲಿ ರೂಂ ಬುಕಿಂಗ್ ಮಾಡಿಕೊಳ್ಳಬಹುದಾಗಿದೆ.

ಆದರೆ ಓಯೋ ನಂಬಿ ರೂಂ ಬುಕ್ ಮಾಡಿದ್ದ ಮಹಿಳಾ ಗ್ರಾಹಕರೊಬ್ಬರು ತಾವು ಅನುಭವಿಸಿದ ಕಹಿ ಘಟನೆಯೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಆಕ್ರೋಶ ಹೊರಹಾಕಿದ್ದಾರೆ. "OYO ನಿಮ್ಮನ್ನು ಪ್ಲಾಟ್‌ಫಾರ್ಮ್‌ನಲ್ಲಿಯೂ ಮಲಗುವಂತೆ ಮಾಡುತ್ತದೆ" ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರು ರೈಲ್ವೇ ನಿಲ್ದಾಣದಿಂದ ವೀಡಿಯೊ ಹಂಚಿಕೊಂಡಿದ್ದಾರೆ.
ಮಹಿಳೆ ಓಯೋದಲ್ಲಿ ಆನ್‌ಲೈನ್ ಮೂಲಕ ಮೊದಲೇ ರೂಂ ಬುಕಿಂಗ್ ಮಾಡಿಕೊಂಡಿದ್ದರು. ಇದು ಕನ್ಫರ್ಮ್ ಕೂಡ ಆಗಿ ಚೆಕ್-ಇನ್ ಆಗಿದ್ದರು. ಆದರೆ, ಚೆಕ್-ಇನ್ ಮಾಡಿದ ಕೇವಲ ಒಂದು ಗಂಟೆಯ ನಂತರ ರೂಂ ಖಾಲಿ ಮಾಡುವಂತೆ ಹೋಟೆಲ್ ಮ್ಯಾನೇಜರ್ ಹೇಳಿದರು. ಇಷ್ಟು ಕಡಿಮೆ ದರಕ್ಕೆ ರೂಂ ಕೊಡಲು ಸಾಧ್ಯವಿಲ್ಲ ಎಂದರು. ಅಲ್ಲದೆ ಈ ರೂಂಗೆ ಕೋಣೆಗೆ ಹೆಚ್ಚುವರಿ ಹಣ ಪಾವತಿಸಿ ಇಲ್ಲವೇ ಖಾಲಿ ಮಾಡಿ ಎಂದು ದಬಾಯಿಸಿದರು ಎಂದು ಘಟನೆ ಬಿಚ್ಚಿಟ್ಟಿದ್ದಾರೆ. ಆದರೆ ಆನ್‌ಲೈನ್‌ನಲ್ಲಿ ತೋರಿಸಿದ ದರಕ್ಕೆ ನಾನು ರೂಂ ಬುಕ್ ಮಾಡಿದ್ದೆ ಎಂದಿದ್ದಾರೆ.

ಬಳಿಕ ಈ ವಿಚಾರದ ಬಗ್ಗೆ ಕಸ್ಟಮರ್ ಕೇರ್‌ಗೆ ಕರೆ ಮಾಡಿ ತಿಳಿಸಿದಾಗ ಅಲ್ಲಿಂದ ಮತ್ತೊಂದು ಹೋಟೆಲ್‌ಗೆ ಸ್ಥಳಾಂತರಗೊಳ್ಳುವಂತೆ ತಿಳಿಸಿದರು. ಆದರೆ, ಅಲ್ಲಿ ರಿಸೆಪ್ಷನ್‌ನಲ್ಲಿ ಯಾರೂ ಇರಲಿಲ್ಲ. ಕೊನೆಗೆ ಒಳ್ಳೆಯ ರೂಂಗಾಗಿ ಎಷ್ಟು ಪ್ರಯತ್ನಪಟ್ಟರೂ ವಾಸ್ತವ್ಯಕ್ಕೆ ರೂಂ ಸಿಗಲೇ ಇಲ್ಲ. ಕೊನೆಗೆ ವಿಧಿಯಿಲ್ಲದೆ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲೇ ರಾತ್ರಿ ಕಳೆದೆ ಎಂದು ಹೇಳಿದ್ದಾರೆ.
ರೂಂ ಸಿಗದಕ್ಕೆ ಕೊನೆಗೆ ನನ್ನ ಹಣ ಹಿಂತಿರುಗಿಸಲು ಕೇಳಿದರೂ ಉತ್ತರ ಸಿಗಲಿಲ್ಲ. ಯಾವುದೇ ಆಯ್ಕೆ ಉಳಿದಿಲ್ಲದ ಕಾರಣ ನಾನು ರೈಲ್ವೆ ನಿಲ್ದಾಣದಲ್ಲಿ ಉಳಿಯಲು ನಿರ್ಧರಿಸಿದೆ. ಕೊನೆಗೆ ಅಲ್ಲಿಯೇ ಮಲಗಬೇಕಾಯಿತು ಎಂದು ವಿವರಿಸಿದ್ದಾರೆ. ಈ ವಿಡಿಯೋ ಸುಮಾರು 17.2 ಮಿಲಿಯನ್ ವೀಕ್ಷಣೆ ಪಡೆದಿದೆ.
ಈ ವಿಡಿಯೋಗೆ ಅನೇಕರು ಕೂಡ ಪ್ರತಿಕ್ರಿಯಿಸಿ ಇದೇ ರೀತಿಯ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಕೆಲವರು ಓಯೋ ವೇದಿಕೆಯನ್ನ ಸ್ಕ್ಯಾಮ್ ಎಂದೂ ಕರೆದಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಅನೇಕರು ಇದಕ್ಕೆ ಕಾಮೆಂಟ್ ಮಾಡಿದ್ದಾರೆ. ತಮಗೂ ಓಯೋದಿಂದ ಆದ ಇಂತಹ ಕಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಓಯೋ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.












Click it and Unblock the Notifications