• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿದ್ದರಾಮಯ್ಯ ವಿರುದ್ಧ ದೇವೇಗೌಡರ ಈ ಕಾರ್ಯತಂತ್ರ ಕೈಗೂಡುವುದೆ?

By ಆರ್ ಟಿ ವಿಠ್ಠಲಮೂರ್ತಿ
|
   ಸಿದ್ದರಾಮಯ್ಯನವರ ವಿರುದ್ಧ ಎಚ್ ಡಿ ದೇವೇಗೌಡ್ರು ಮಾಡಿರುವ ತಂತ್ರ ಕೈಗೂಡುತ್ತಾ? | Oneindia Kannada

   ಪದ್ಮನಾಭ ನಗರದ ರಾಜಕೀಯ ಮಾಂತ್ರಿಕನ ತಲೆಯಲ್ಲೀಗ ಒಂದು ವಿಷಯ ಪದೇ ಪದೇ ಗಿರಕಿಯಾಡುತ್ತಿದೆ.

   ಅದೆಂದರೆ, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ದುರ್ಬಲಗೊಳಿಸುವುದು ಹೇಗೆ? ಅನ್ನುವುದು.

   ಅಂದ ಹಾಗೆ, ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮೇಲೆತ್ತುವುದರಲ್ಲಿ ಲಾಭವಿದೆ ಎಂದು ಒಂದು ಕಾಲದಲ್ಲಿ ಅಂದುಕೊಂಡಿದ್ದ ದೇವೇಗೌಡರಿಗೆ ಈಗ ಅದೇ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಬೇಕು ಎಂಬುದೇ ಮುಖ್ಯ ಗುರಿಯಾಗಿ ಹೋಗಿದೆ.

   ದೇವೇಗೌಡರು ಯಾಕೆ ಹೀಗೆಲ್ಲ ಮಾಡುತ್ತಾರೆ? ಇಂದಿಗೂ ನಿಗೂಢ!

   ಹಿಂದೆ ಜನತಾ ಪರಿವಾರವಿದ್ದಾಗ ಹಿಂದುಳಿದ ಸಮುದಾಯಗಳ ಹಿರಿಯಣ್ಣ ಅನ್ನಿಸಿಕೊಂಡ ಕುರುಬ ಜಾತಿಯನ್ನು ಓಲೈಸಿಕೊಳ್ಳುವುದು ದೇವೇಗೌಡರಿಗೆ ತುಂಬ ಮುಖ್ಯವಾಗಿ ಕಂಡಿತ್ತು. ಇದಕ್ಕೆ ಕಾರಣ, ಸ್ವಪಕ್ಷದಲ್ಲಿದ್ದ ಪರಿಸ್ಥಿತಿ. ಅವತ್ತಿನ ಸಂದರ್ಭದಲ್ಲಿ ದೇವೇಗೌಡರ ವಿರುದ್ಧ ಹೆಗಡೆ ಅವರಿಂದ ಹಿಡಿದು ಹಲ ನಾಯಕರು ತಿರುಗಿ ಬಿದ್ದಿದ್ದರು. ಹೀಗಾಗಿ ದೇವೇಗೌಡರಿಗೆ ಸಹಜವಾಗಿಯೇ ಸಿದ್ದರಾಮಯ್ಯ ಅವರ ಮೇಲೆ ಕಣ್ಣು ಬಿತ್ತು. ದೇವೇಗೌಡರೇಕೆ ತಮ್ಮನ್ನು ಇದ್ದಕ್ಕಿದ್ದಂತೆ ಈ ಪರಿ ಇಷ್ಟಪಡುತ್ತಿದ್ದಾರೆ ಅಂತ ಸಿದ್ದರಾಮಯ್ಯ ಅವರಿಗೇ ಅಚ್ಚರಿಯಾಗಿದ್ದಿದೆ.

   ಆಗ ಒಂದು ಸಂದರ್ಭದಲ್ಲಿ ದೇವೇಗೌಡರು; ಅಯ್ಯೋ, ನಿನಗಿರುವ ಶಕ್ತಿ ಏನು ಅಂತ ನಿನಗೆ ಗೊತ್ತಿಲ್ಲ ಸಿದ್ದರಾಮಯ್ಯ. ನೋಡುತ್ತಿರು, ಏನೇನಾಗುತ್ತದೆ ಅಂತ ನಕ್ಕಿದ್ದರಂತೆ. ಮುಂದೆ ನೋಡ ನೋಡುತ್ತಿದ್ದಂತೆಯೇ ಜನತಾ ಪರಿವಾರದಲ್ಲಿ ಸಿದ್ದರಾಮಯ್ಯ ಅವರ ಶಕ್ತಿ ಬೆಳೆಯಿತು. ಅರ್ಥಾತ್, ಅವರನ್ನು ಕುರುಬ ಸಮುದಾಯ ನಾಯಕ ಎಂದು ತೀರ್ಮಾನಿಸಿ ಅವರ ಬೆನ್ನ ಹಿಂದೆ ನಿಂತುಕೊಂಡಿತು. ಇದರ ಪರಿಣಾಮವಾಗಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಹುದ್ದೆಗೇರಿದರು.

   ಕಡೆಗೆ ಸಿದ್ದುವೇ ದೇವೇಗೌಡರಿಗೆ ಬೇಡವಾದರು

   ಕಡೆಗೆ ಸಿದ್ದುವೇ ದೇವೇಗೌಡರಿಗೆ ಬೇಡವಾದರು

   ಈ ರೀತಿ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗುವ ಕ್ರಿಯೆಯಲ್ಲಿ ದೇವೇಗೌಡರು ಹೇಗೆ ಪಾತ್ರ ವಹಿಸಿದರೋ? ಅದೇ ರೀತಿ ಪ್ರಬಲ ಕುರುಬ ಸಮುದಾಯದ ಮತಗಳು ಪಕ್ಷಕ್ಕೆ ದಕ್ಕುವಂತೆ ಮಾಡುವ ಮೂಲಕ ಸಿದ್ದರಾಮಯ್ಯ ಕೂಡಾ ಜನತಾ ಪರಿವಾರಕ್ಕೆ ಶಕ್ತಿ ತುಂಬಿದರು. ಮುಂದೆ ಜನತಾ ಪರಿವಾರ ಹೋಳಾಗಿ ಜೆಡಿಎಸ್ ಹಾಗೂ ಸಂಯುಕ್ತ ಜನತಾ ದಳದ ರೂಪ ಪಡೆದಾಗಲೂ ಅಷ್ಟೇ. ದೇವೇಗೌಡರ ಬತ್ತಳಿಕೆಯಲ್ಲಿದ್ದ ಪ್ರಬಲ ಅಸ್ತ್ರ ಎಂದರೆ ಸಿದ್ದರಾಮಯ್ಯ.

   ಒಕ್ಕಲಿಗ ಪ್ಲಸ್ ಕುರುಬ ಸಮುದಾಯಗಳ ಜತೆ ಅಲ್ಪಸಂಖ್ಯಾತರ ನಿರ್ದಿಷ್ಟ ಪ್ರಮಾಣದ ವೋಟುಗಳು ಬಂದರೆ ಪಕ್ಷದ ಶಕ್ತಿ ಉಳಿಯುತ್ತದೆ ಎಂದು ದೇವೇಗೌಡ ಲೆಕ್ಕ ಹಾಕಿದರು.

   ಅದೂ ಸುಳ್ಳಾಗಲಿಲ್ಲ. 2004ರಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾದಾಗ ಕಾಂಗ್ರೆಸ್-ಜೆಡಿಎಸ್ ಪರಸ್ಪರ ಕೈಗೂಡಿಸಿದುವಲ್ಲ? ಆಗಲೂ ಜೆಡಿಎಸ್ ಗೆ ಸಿದ್ದರಾಮಯ್ಯ ವರವಾದರು. ಅವತ್ತು ಜೆಡಿಎಸ್ ಐವತ್ತೆಂಟು ಸೀಟುಗಳನ್ನು ಗೆದ್ದಿದ್ದು ಇದಕ್ಕೆ ಉದಾಹರಣೆ.

   ಆ ಸಂದರ್ಭದಲ್ಲಿ ದೇವೇಗೌಡರು ಹಠ ಹಿಡಿದು ಕುಳಿತಿದ್ದರೆ ಕಾಂಗ್ರೆಸ್ ಹೈಕಮಾಂಡ್ ತಮಗೆ ಮುಖ್ಯಮಂತ್ರಿ ಸ್ಥಾನ ನೀಡುತ್ತಿತ್ತು ಎಂಬುದು ಸಿದ್ದರಾಮಯ್ಯ ಅವರ ಸಿಟ್ಟು. ಮುಂದೆ ಇದೇ ಕಾರಣಕ್ಕಾಗಿ ದೇವೇಗೌಡ ಹಾಗೂ ಸಿದ್ದರಾಮಯ್ಯ ಅವರ ಸಂಬಂಧ ಮುಗ್ಗರಿಸಿತು. ಮುಗ್ಗರಿಸಿ ಮುಗ್ಗಲಾಗಿ ಹೋಯಿತು.

   ಮುಂದೆ ಏನೇನು ನಡೆಯಿತು? ಅನ್ನುವುದು ಇತಿಹಾಸ.

   ಭವಿಷ್ಯ ಬಲವಾಗಬೇಕಿದ್ದರೆ ಸಿದ್ದು ಶಕ್ತಿ ಕುಸಿಯಬೇಕು

   ಭವಿಷ್ಯ ಬಲವಾಗಬೇಕಿದ್ದರೆ ಸಿದ್ದು ಶಕ್ತಿ ಕುಸಿಯಬೇಕು

   ಈಗ ಪರಿಸ್ಥಿತಿ ಬದಲಾಗಿದೆ. ಒಂದು ಕಾಲದಲ್ಲಿ ಸಿದ್ದರಾಮಯ್ಯ ಅವರ ರಾಜಕೀಯ ಏಳಿಗೆಯನ್ನು ಬಯಸಿದ್ದ ದೇವೇಗೌಡ ಈಗ ಉಲ್ಟಾ ಹೊಡೆದಿದ್ದಾರೆ. ಅವರ ಕಣ್ಣ ಮುಂದೀಗ, ಜೆಡಿಎಸ್ ಪಕ್ಷಕ್ಕೆ ಒಳ್ಳೆಯ ಭವಿಷ್ಯ ಸಿಗಬೇಕು ಎಂದರೆ ಸಿದ್ದರಾಮಯ್ಯ ಅವರ ಶಕ್ತಿ ಕುಸಿದು ಹೋಗಬೇಕು.ಯಾಕೆಂದರೆ, ರಾಜ್ಯ ಕಾಂಗ್ರೆಸ್ ನಲ್ಲಿರುವ ಏಕೈಕ ಜನನಾಯಕ ಎಂದರೆ ಸಿದ್ದರಾಮಯ್ಯ. ಅವರನ್ನು ಹೊರತುಪಡಿಸಿದರೆ ಬೇರೆ ಯಾವ ನಾಯಕರೂ ತಮ್ಮ ಸಮುದಾಯದ ಮತಗಳನ್ನು ತಮಗಿಷ್ಟ ಬಂದವರಿಗೆ ಹಾಕಿಸುವ ಶಕ್ತಿ ಹೊಂದಿಲ್ಲ.

   ಮುಸ್ಲಿಮರಿಗೆ ತಮ್ಮ ನಾಯಕರು ಅಂತ ಯಾರೂ ಕಣ್ಣಿಗೆ ಗೋಚರವಾಗದಿದ್ದರೂ ಸರಿ, ಅವರು ಬಿಜೆಪಿಯ ವಿರುದ್ದ ಕಾಂಗ್ರೆಸ್ ಗೆ ಮತ ಹಾಕುತ್ತಾರೆ.ಉಳಿದಂತೆ ಹಿಂದ ಸಮುದಾಯದ ಮತಗಳನ್ನು ಈಗ ಧರ್ಮದ ಆಧಾರದ ಮೇಲೆ ಗಣನೀಯ ಪ್ರಮಾಣದಲ್ಲಿ ತಮ್ಮ ತೆಕ್ಕೆಗೆ ಎಳೆದುಕೊಳ್ಳಲು ಬಿಜೆಪಿಗೆ ಸಾಧ್ಯವಿದೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಬಲ ಅಸ್ತ್ರವಾಗಿ ಉಳಿದಿರುವುದು ಸಿದ್ದರಾಮಯ್ಯ ಮಾತ್ರ. ಹೀಗಾಗಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ದುರ್ಬಲಗೊಳಿಸುವುದೇ ದೇವೇಗೌಡರ ಉದ್ದೇಶ.

   ಅಭದ್ರ ಸರಕಾರದಲ್ಲಿ ಸಿದ್ದು ಎಂಬ ಬಲಶಾಲಿ

   ಅಭದ್ರ ಸರಕಾರದಲ್ಲಿ ಸಿದ್ದು ಎಂಬ ಬಲಶಾಲಿ

   ಯಾಕೆಂದರೆ ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರು ಒಕ್ಕಲಿಗ ಪ್ಲಸ್ ಮುಸ್ಲಿಂ ಮತಗಳು ಸೇರಿ ಪಕ್ಷದ ಅರವತ್ತಕ್ಕೂ ಹೆಚ್ಚು ಮಂದಿ ಗೆಲ್ಲುವಂತೆ ಮಾಡುತ್ತದೆ ಎಂದು ನಂಬಿದ್ದರು. ಆದರೆ ಒಕ್ಕಲಿಗರು ಅವರ ಜತೆ ಗಟ್ಟಿಯಾಗಿ ನಿಂತರು. ಹಾಗೆಯೇ ತಾನು ದುರ್ಬಲವಾಗಿರುವ ಕಡೆ ಜೆಡಿಎಸ್ ಕ್ಯಾಂಡಿಡೇಟ್ ಗಳು ಗೆಲ್ಲಲು ಬಿಜೆಪಿ ನೆರವಾಯಿತು. ಯಾಕೆಂದರೆ ಚುನಾವಣೆಗೂ ಮುನ್ನಿನ ಒಪ್ಪಂದದಂತೆ ಮೈತ್ರಿ ಆಗಬೇಕಿದ್ದುದು ಜೆಡಿಎಸ್ ಹಾಗೂ ಬಿಜೆಪಿಯ ಮದ್ಯೆ. ಆದರೆ ಪರಿಸ್ಥಿತಿ ಬದಲಾಯಿತು. ಕಾಂಗ್ರೆಸ್ ಹಾಗೂ ಜೆಡಿಎಸ್ ಪರಸ್ಪರ ಕೈಗೂಡಿಸಿದವು. ಹಾಗಂತ ಸರ್ಕಾರ ಸುಭದ್ರವಾಗಿದೆ ಎಂಬ ಭಾವನೆ ದೇವೇಗೌಡರಲ್ಲೂ ಇಲ್ಲ, ಕಾಂಗ್ರೆಸ್ ಮುಖಂಡರಲ್ಲೂ ಇಲ್ಲ.

   ಆದರೆ ಈ ಮೈತ್ರಿಕೂಟ ಸರ್ಕಾರ ಇರುವುದರೊಳಗೆ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ದುರ್ಬಲಗೊಳಿಸಿಬಿಡಬೇಕು ಎಂದು ದೇವೇಗೌಡರು ಭಾವಿಸಿದ್ದಾರೆ. ಇದೇ ಕಾರಣಕ್ಕಾಗಿ ಸಿದ್ದರಾಮಯ್ಯ ಅವರ ವಿರೋಧದ ನಡುವೆಯೂ ಕುಮಾರಸ್ವಾಮಿ ತಮ್ಮದೇ ಬಜೆಟ್ ಅನ್ನು ಮಂಡಿಸಿದರು. ಹಾಗೆಯೇ ಮಂತ್ರಿ ಮಂಡಲದಲ್ಲಿ ಶಿವಾನಂದ ಪಾಟೀಲರಿಗೆ ಸ್ಥಾನ ಕೊಡಿಸಿದ ಸಿದ್ದರಾಮಯ್ಯ ಅವರ ವಿರುದ್ದ ಎಂ.ಬಿ.ಪಾಟೀಲ್ ತಿರುಗಿ ಬೀಳಲು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ದೂರು ನೀಡಲು ಕುಮಾರಸ್ವಾಮಿಯವರೇ ಅವಕಾಶ ಮಾಡಿಕೊಟ್ಟರು.

   ಕುರುಬರ ನಾಯಕ ವಿಶ್ವನಾಥ್ ಗೆ ಮಣೆ

   ಕುರುಬರ ನಾಯಕ ವಿಶ್ವನಾಥ್ ಗೆ ಮಣೆ

   ಈಗ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕುರುಬ ಸಮುದಾಯದ ನಾಯಕ ಎಚ್. ವಿಶ್ವನಾಥ್ ಅವರನ್ನು ತರಲು ಮುಂದಾಗಿದ್ದಾರೆ ದೇವೇಗೌಡರು. ಈ ಮದ್ಯೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಕೆಲ ಹೆಸರುಗಳು ಕಾಣಿಸಿಕೊಂಡಿವೆಯಾದರೂ ಆ ಹೆಸರುಗಳಿಂದ ಜೆಡಿಎಸ್ ಗೆ ಲಾಭವೇನಿಲ್ಲ. ಅಥವಾ ಅವರ್ಯಾರೂ ಸಿದ್ದರಾಮಯ್ಯ ಅವರ ಶಕ್ತಿಯನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿಲ್ಲ. ಈ ಶಕ್ತಿ ವಿಶ್ವನಾಥ್ ಅವರಿಗಿದೆ ಎಂಬುದು ದೇವೇಗೌಡರ ಲೆಕ್ಕಾಚಾರ.

   ಮೊದಲನೆಯದಾಗಿ ವಿಶ್ವನಾಥ್ ಅವರು ಕುರುಬ ಸಮುದಾಯದ ಪ್ರಮುಖ ನಾಯಕ. ಸಿದ್ದರಾಮಯ್ಯ ಅವರ ನಂತರ ಸಮುದಾಯದಲ್ಲಿ ದೊಡ್ಡ ಹೆಸರಿರುವುದು ವಿಶ್ವನಾಥ್ ಅವರಿಗೆ. ಆದರೆ ಅವರು ಕುರುಬ ನಾಯಕ ಅಂತ ಗುರುತಿಸಿಕೊಳ್ಳುವುದಕ್ಕಿಂತ ಮುಖ್ಯವಾಗಿ ಹಿಂದುಳಿದ ವರ್ಗಗಳ ನಾಯಕ ಅಂತ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೆ ಸಹಜವಾಗಿಯೇ ಕುರುಬ ಸಮುದಾಯದ ಜತೆ ಇತರ ಹಿಂದುಳಿದ ಸಮುದಾಯಗಳಿಗೂ ಪಾಸಿಟಿವ್ ಸಂದೇಶ ರವಾನೆಯಾಗುತ್ತದೆ.

   ಅದೇ ರೀತಿ ಕಾಂಗ್ರೆಸ್ ಪಕ್ಷದಲ್ಲಿದ್ದರೂ, ಸಿದ್ದರಾಮಯ್ಯ ಅಲ್ಲಿದ್ದು ತಮ್ಮ ಹಿತ ರಕ್ಷಿಸುತ್ತಾರೆ ಎಂಬ ನಂಬಿಕೆ ಕುರುಬ ಸಮುದಾಯದಲ್ಲಿ ಕ್ಷೀಣವಾಗುತ್ತಿದೆ. ಹಾಗೆ ನೋಡಿದರೆ ಸಚಿವ ಸಂಪುಟದಲ್ಲಿ ಕುರುಬ ಸಮುದಾಯದ ಬಂಡೆಪ್ಪ ಕಾಶೆಂಪೂರ್ ಅವರಿಗೆ ಸ್ಥಾನ ಕಲ್ಪಿಸಿರುವುದು ಜೆಡಿಎಸ್. ಅದೇ ರೀತಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನೂ ಅದೇ ಸಮುದಾಯದ ವಿಶ್ವನಾಥ್ ಅವರಿಗೆ ನೀಡಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅದು ಜೆಡಿಎಸ್ ಕಡೆ ಗಣನೀಯ ಪ್ರಮಾಣದಲ್ಲಿ ವಾಲುತ್ತದೆ.

   ನಾಯಕರ ಜಗಳದಲ್ಲಿ ಬಡವಾಗುತ್ತಿರುವ ಕುರುಬ ಸಮುದಾಯ

   ಬಹುಕೃಷಿ ಪದ್ಧತಿಯ ತಂತ್ರಗಾರಿಕೆ

   ಬಹುಕೃಷಿ ಪದ್ಧತಿಯ ತಂತ್ರಗಾರಿಕೆ

   ಈ ಮಧ್ಯೆ ಮೊನ್ನಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಾಲಿಡ್ಡು ಬೆಂಬಲ ನೀಡಿದರೂ ಮುಸ್ಲಿಮರಿಗೆ ಏಕಾಕಿತನದ ಭಾವನೆ ಕಾಡುತ್ತಿದೆ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ತಮ್ಮ ಹಿತ ಕಾಪಾಡಿಕೊಳ್ಳಲು ರೈತರ ಮಾರ್ಗವನ್ನು ತಾವು ಹಿಡಿಯಬೇಕೇನೋ ಎಂಬ ಭಾವನೆ ಅದರಲ್ಲಿ ಮೂಡುತ್ತಿದೆ.

   ರೈತರ ಮಾರ್ಗ ಎಂದರೆ, ಬಹುಕೃಷಿ ಪದ್ಧತಿಯ ಕಡೆಗಿನ ಒಲವು. ಇಂತಹದೇ ಬೆಳೆಯನ್ನು ಬೆಳೆಯಬೇಕು ಎಂದು ಹೊರಟು ಅದು ಕೈ ಕೊಟ್ಟರೆ ತಲೆಯ ಮೇಲೆ ಕೈ ಹೊರುವುದಕ್ಕಿಂತ, ನಾಲ್ಕೈದು ಬೆಳೆಗಳನ್ನು ಬೆಳೆಯುವುದು. ಒಂದೋ, ಎರಡೋ ಬೆಳೆ ಹಾಳಾದರೆ ಇನ್ನೂ ಎರಡು, ಮೂರು ಬೆಳೆಗಳು ಕೈ ಹಿಡಿಯಬಹುದು ಎಂಬುದು ಇವತ್ತಿನ ಕೃಷಿ ಪದ್ಧತಿಯ ಮುಖ್ಯ ನಂಬಿಕೆ. ಇದೇ ನಂಬಿಕೆ ಮುಸ್ಲಿಂ ಸಮುದಾಯದಲ್ಲೂ ಕಾಣುತ್ತಿದೆ.

   ಯಾವುದೋ ಒಂದು ಪಕ್ಷವನ್ನು ಬೆಂಬಲಿಸುವುದಕ್ಕಿಂತ ಅಗತ್ಯಕ್ಕನುಸಾರವಾಗಿ ಬೇರೆ, ಬೇರೆ ಪಕ್ಷಗಳ ಜತೆ ಗುರುತಿಸಿಕೊಳ್ಳುವುದು ಒಳ್ಳೆಯದು ಎಂಬುದು ಈ ನಂಬಿಕೆ. ಇವೆಲ್ಲ ಈಡೇರಬೇಕು ಎಂದರೆ ಸಿದ್ದರಾಮಯ್ಯ ಅವರು ರಾಜಕೀಯವಾಗಿ ದುರ್ಬಲರಾಗಬೇಕು ಎಂಬುದು ದೇವೇಗೌಡರ ನಂಬಿಕೆ.

   ಹೀಗಾಗಿಯೇ ಅವರೀಗ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಿ, ಸನ್ನಿವೇಶ ಜೆಡಿಎಸ್ ಗೆ ಪೂರಕವಾಗುವಂತೆ ಮಾಡಲು ಹೊರಟಿದ್ದಾರೆ. ಇದು ಎಷ್ಟರ ಮಟ್ಟಿಗೆ ಕಾರ್ಯಗತವಾಗುತ್ತದೆ ಎಂಬುದು ಬೇರೆ ವಿಷಯ. ಆದರೆ ಕೈಗೆತ್ತಿಕೊಂಡ ಕೆಲಸವನ್ನು ನಿರಂತರವಾಗಿ ಮಾಡುವ ಅವರ ಗುಣ ಎಲ್ಲರಿಗೂ ಗೊತ್ತಿರುವಂತದ್ದೇ. ಹೀಗಾಗಿಯೇ ರಾಜಕೀಯ ವಲಯಗಳಲ್ಲಿ ದೇವೇಗೌಡರ ನಡೆ ವಿಶೇಷ ಕುತೂಹಲ ಮೂಡಿಸಿದೆ. ದೇವೇಗೌಡರ ಈ ಕಾರ್ಯತಂತ್ರ ಕೈಗೂಡುವುದೆ?

   ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

   English summary
   Will Deve Gowda succeed in reducing power of Siddaramaiah? If JDS has to become strong in Karnataka Deve Gowda has to sideline Siddaramaiah in Congress. Will he succeed in it? Political Analysis in Kannada by R T Vittal Murthy.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X