'ಸರ್ಜಿಕಲ್ ಸ್ಟ್ರೈಕ್' ಅರ್ಥ ಮರೆತ ಕಾಲದಲ್ಲಿ ಪ್ರತೀಕಾರ ಹೇಳುವ ದಾರಿಗಳಿವು...
ಪುಲ್ವಾಮಾ ಭಯೋತ್ಪಾದನಾ ದಾಳಿಯ ನಂತರ 'ಸರ್ಜಿಕಲ್ ಸ್ಟ್ರೈಕ್' ಮಾಡಬೇಕು ಎಂಬ ಮಾತು ಜನ ಸಾಮಾನ್ಯರಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿದೆ. ಎರಡು ವರ್ಷಗಳ ಹಿಂದೆ ಭಾರತೀಯ ಸೇನೆ ನಡೆಸಿದ ಒಂದು ದಾಳಿಯಿಂದ ಪರಿಚಯವಾದ ಆ ಪದದ ಬಳಕೆ ಅದೆಷ್ಟು ವ್ಯಾಪಕವಾಗಿದೆ ಅಂದರೆ, ಆ ದಾಳಿ ಸಂದರ್ಭದಲ್ಲಿ ವಿವರಿಸಿದ ಅರ್ಥವೇ ಮರೆತುಹೋದಂತಾಗಿದೆ.
ಆದ್ದರಿಂದ ಇನ್ನೊಂದು ಸಲ ನೆನಪಿಸಿಕೊಳ್ಳಬೇಕಿದೆ. ಸರ್ಜಿಕಲ್ ಆಪರೇಷನ್-ಇದು ಹೆಸರೇ ಹೇಳುವ ಹಾಗೆ ಶಸ್ತ್ರ ಚಿಕಿತ್ಸೆಯಂಥ ನಾಜೂಕಾದ ಸೇನೆ ದಾಳಿ. ನಿರ್ದಿಷ್ಟ ಮತ್ತು ನಿಖರವಾದ ಮಿಲಿಟರಿ ಕಾರ್ಯಾಚರಣೆಯನ್ನು ಸರ್ಜಿಕಲ್ ಸ್ಟ್ರೈಕ್ ಎನ್ನುತ್ತಾರೆ. ಇದನ್ನು ಪ್ರಿಸಿಷನ್ ಆಪರೇಷನ್ ಅಂತಲೂ ಕರೆಯಲಾಗುತ್ತದೆ.
ಇಂಥ ಕಾರ್ಯಾಚರಣೆಗಳು ಸಾಮಾನ್ಯವಾಗಿ ಎರಡು ಕಾರಣಕ್ಕೆ ನಡೆಯುತ್ತವೆ. ನಮ್ಮದೇ ದೇಶದ ಮೇಲೆ ಭಯೋತ್ಪಾದಕರು ದಾಳಿ ನಡೆಸಿ, ಸಾಮಾನ್ಯ ಜನರನ್ನು ಒತ್ತೆಯಾಗಿ ಇರಿಸಿಕೊಂಡಾಗ ಅವರ ಬಿಡುಗಡೆಗಾಗಿ ಮತ್ತು ವೈರಿ ದೇಶದಲ್ಲಿ ನಮ್ಮ ದೇಶದ ಸರಕಾರ ಸಾಧಿಸಬೇಕಾಗಿರುವ ಮಹತ್ತರ ಗುರಿಯ ಈಡೇರಿಕೆಗಾಗಿ.
ಇಂಥ ಕಾರ್ಯಾಚರಣೆ ನಡೆಸುವ ಮುನ್ನ ಗುಪ್ತಚರ ಮಾಹಿತಿಯನ್ನು ವ್ಯಾಪಕವಾಗಿ ಕಲೆ ಹಾಕಲಾಗುತ್ತದೆ. ವೈರಿ ದೇಶದಲ್ಲಿ ನಡೆಸಬೇಕಾದ ಕಾರ್ಯಾಚರಣೆಯಾದರೆ ಅದು ಅಲ್ಪ ಕಾಲಾವಧಿಯಲ್ಲಿ ಮುಗಿದುಹೋಗುವಂತೆ, ಆದರೆ ಅದರ ಪರಿಣಾಮ ದೀರ್ಘಾವಧಿಯಲ್ಲಿ ಉಳಿದುಕೊಳ್ಳುವಂತೆ ಯೋಜನೆ ರೂಪಿಸಲಾಗುತ್ತದೆ.
ಇಂಥ ಕಾರ್ಯಾಚರಣೆಗೆ ಇಸ್ರೇಲ್ ಸೇನೆ ಹೆಸರುವಾಸಿ. ಉಗಾಂಡಾಗೆ ನುಗ್ಗಿದ ಇಸ್ರೇಲ್ ಸೇನೆ ತನ್ನ ಒತ್ತೆ ನಾಗರಿಕರನ್ನು ವಾಪಸ್ ಕರೆತಂದಿದ್ದು, ಭಾರತ ಸೇನೆ ಈಚೆಗೆ ಬರ್ಮಾ ಗಡಿಗೆ ನುಗ್ಗಿ ಭಯೋತ್ಪಾದಕರನ್ನು ಕೊಂದಿದ್ದು ಸರ್ಜಿಕಲ್ ಸ್ಟ್ರೈಕ್ ಗೆ ಉತ್ತಮ ಉದಾಹರಣೆ.

ಹೊಸ ಬಗೆಯಲ್ಲಿ ಪ್ರತೀಕಾರ ಹೇಳಬೇಕು
ಈಗಿನ ಪರಿಸ್ಥಿತಿಯನ್ನು ಪರಾಂಬರಿಸೋಣ. ಭಾರತದ ಮೇಲೆ ಇಂಥ ದೊಡ್ಡ ದಾಳಿ ನಡೆಸಿದ ನಂತರ ಉಗ್ರಗಾಮಿಗಳು ಗಡಿಯಲ್ಲಿ ಟೆಂಟ್ ಹಾಕಿಕೊಂಡು ಕುಳಿತಿರುತ್ತಾರಾ? ಇದರ ಜತೆಗೆ ಈ ಬಾರಿ ಬಳಸಿದ ತಂತ್ರ ವಿಭಿನ್ನವಾಗಿದೆ. ಕಾಶ್ಮೀರದ ಸ್ಥಳೀಯನನ್ನೇ ಬಳಸಿ ದಾಳಿ ಸಂಘಟಿಸಲಾಗಿದೆ. ಇದರರ್ಥ ಎಲ್ಲೋ ಕುಳಿತು, ಇಲ್ಲಿ ಕೆಲಸ ಮುಗಿಸಲಾಗಿದೆ. ಇದಕ್ಕೆ ಪ್ರತೀಕಾರ ಹೇಳುವ ಬಗೆ ಕೂಡ ಹೊಸ ವಿಧಾನವನ್ನು ಕೇಳುತ್ತದೆ. ಉರಿ ದಾಳಿಯ ನಂತರ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಗೆ ಒಂದಿಷ್ಟು ಸಮಯ (ಹತ್ತು ಹನ್ನೆರಡು ದಿವಸ) ತೆಗೆದುಕೊಂಡು, ಮಾಹಿತಿಯನ್ನು ಖಾತ್ರಿ ಪಡಿಸಿಕೊಂಡು, ಭಾರತೀಯ ಸೈನಿಕರಿಗೆ ಯಾವುದೇ ಅನಾಹುತ ಆಗದಂತೆ ತುಂಬ ನೀಟಾಗಿ ಮಾಡಿ ಮುಗಿಸಿದ ಆಪರೇಷನ್ ಅದು. ಉರಿ ದಾಳಿಯನ್ನು ಸಂಘಟಿಸಿದ್ದು, ಯೋಜನೆ ರೂಪಿಸಿದ್ದು ಪಾಕ್ ನ ಉಗ್ರಗಾಮಿಗಳು, ಉಗ್ರ ಸಂಘಟನೆ ಎಂಬುದು ಖಚಿತ ಮಾಡಿಕೊಂಡೇ ತೆಗೆದುಕೊಂಡ ರಿಸ್ಕ್ ಅದು.

ಈಗ ಸರ್ಜಿಕಲ್ ಸ್ಟ್ರೈಕ್ ಏಕೆ ಮತ್ತು ಹೇಗೆ?
ಈಗ ಕೂಡ ದೇಶದ ಗಡಿ ದಾಟಿ ಉಗ್ರಗಾಮಿಗಳನ್ನು ಹೊಡೆದು ಹಾಕಲಿ ಅನ್ನೋದು ಒತ್ತಾಯ. ಆದರೆ ಅದು ಅಷ್ಟು ಸಲೀಸಲ್ಲ. ನಮ್ಮ ದೇಶದ ಗಡಿಯನ್ನು ದಾಟಿ ಹೋಗಿ, ಒಂದು ವೇಳೆ ನಾಗರಿಕರ ಹತ್ಯೆ ಆಗಿಬಿಟ್ಟರೆ ಅದರ ಪರಿಣಾಮ ಭೀಕರವಾಗಿರುತ್ತದೆ. ಉದಾಹರಣೆಗೆ ಭಾರತೀಯ ಸೈನಿಕರು ಪಾಕ್ ನೆಲದಲ್ಲಿ ಜನ ಸಾಮಾನ್ಯರನ್ನು ಕೊಂದು ಬಂದರು ಅಂತಾಗಿ ಬಿಟ್ಟರೆ, ಅದು ಮತ್ತೊಂದು ಯುದ್ಧಕ್ಕೆ ನಾಂದಿ ಹಾಡಿದಂತೆ. ಈ ಹಿಂದೆ ಭಾರತವು ಕಾರ್ಗಿಲ್ ಯುದ್ಧ ಮಾಡಿತ್ತಲ್ಲಾ ಅಂಥ ಸನ್ನಿವೇಶ ಈಗ ಇಲ್ಲ. ಅಂಥದ್ದೊಂದು ಯುದ್ಧಕ್ಕೆ ಕೈ ಹಾಕಿದರೆ ಸೈನಿಕರ ಸಾವು- ನೋವಿನ ಪ್ರಮಾಣ ಹೆಚ್ಚಾಗುತ್ತದೆ. ಜತೆಗೆ ಚುನಾವಣೆ ಎದುರಿಗೆ ಇದ್ದು, ತೀರ್ಮಾನ ಮಾಡುವುದು ಕಷ್ಟಸಾಧ್ಯ. ಅಷ್ಟರ ಮಟ್ಟಿಗೆ, ಇಂಥ ಸಮಯದಲ್ಲಿ ಸೇನೆ ಏನು ತೀರ್ಮಾನ ತೆಗೆದುಕೊಳ್ಳುತ್ತದೋ ಅದಕ್ಕೆ ನಮ್ಮ ಬೆಂಬಲ ಇರುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಾತು ಸರಿಯಾಗಿದೆ.

'ಸ್ವಚ್ಛ ಜಮ್ಮು-ಕಾಶ್ಮೀರ' ಆಗಬೇಕಿದೆ
ಈಚಿನ ವರ್ಷಗಳಲ್ಲಿ ಉಗ್ರಗಾಮಿಗಳ ಚಟುವಟಿಕೆಗಳು ಜಮ್ಮು-ಕಾಶ್ಮೀರವನ್ನು ದಾಟದಂತೆ ಸೈನ್ಯವು ಅದ್ಭುತವಾದ ಕೆಲಸ ಮಾಡಿದೆ. ಜಮ್ಮು-ಕಾಶ್ಮೀರದ ಒಂದೊಂದೇ ಜಿಲ್ಲೆಗಳಲ್ಲಿ ಉಗ್ರಗಾಮಿಗಳನ್ನು ಹೊಡೆದುರುಳಿಸಲಾಗಿದೆ. ಹೇಗೆ ಪಂಜಾಬ್ ನಲ್ಲಿ ಖಲಿಸ್ತಾನ್ ಚಳವಳಿಯನ್ನು ತುಂಬ ತಾಳ್ಮೆ ಹಾಗೂ ಯೋಜಿತವಾಗಿ ಮುಗಿಸಲಾಯಿತೋ ಖಲಿಸ್ತಾನ್ ಉಗ್ರಗಾಮಿಗಳನ್ನು ಖಾಲಿ ಮಾಡಲಾಯಿತೋ ಅದೇ ರೀತಿಯ ತಂತ್ರವನ್ನು ಕಣಿವೆ ರಾಜ್ಯದಲ್ಲೂ ಬಳಸಲಾಗಿದೆ. ಆದರೆ ಪುಲ್ವಾಮದಲ್ಲಿ ನಡೆದ ದಾಳಿ ಹಿಂದೆ ಬೇರೆಯದೇ ರೀತಿಯ ಉಗ್ರಗಾಮಿಗಳ ಕಾರ್ಯತಂತ್ರ ಕೆಲಸ ಮಾಡಿದಂತೆ ಕಾಣುತ್ತಿದೆ. ಜತೆಗೆ ಸೈನ್ಯದಿಂದ ಕೂಡ ಕೆಲವು ತಪ್ಪು ನಿರ್ಧಾರ, ಭದ್ರತಾ ಲೋಪ ಹಾಗೂ ಗುಪ್ತಚರ ಇಲಾಖೆ ವೈಫಲ್ಯ ಎದ್ದು ಕಾಣುತ್ತಿದೆ. ಸದ್ಯದ ಸನ್ನಿವೇಶದಲ್ಲಿ ಸ್ಥಳೀಯವಾಗಿ ಜೈಶ್ ಇ ಮೊಹ್ಮದ್ ಗೆ ಕೆಲಸ ಮಾಡುತ್ತಿರುವ ಇನ್ಯಾರಾದರೂ ಉಗ್ರಗಾಮಿಗಳು ಇದ್ದಾರಾ ಅಥವಾ ಬೇರೆ ಉಗ್ರ ಸಂಘಟನೆಗಳು ಇವೆಯಾ ಎಂಬುದನ್ನು ಪತ್ತೆ ಮಾಡಿ, ಪೂರ್ಣ ಪ್ರಮಾಣದಲ್ಲಿ 'ಸ್ವಚ್ಛ ಜಮ್ಮು-ಕಾಶ್ಮೀರ' ಆಗಬೇಕಿದೆ.

ಭಯೋತ್ಪಾದನೆ ಎಂಬ ವಿಷ ವೃಕ್ಷದ ಮರಕ್ಕೇ ಕೊಡಲಿ ಹಾಕಬೇಕು
ಸಿಆರ್ ಪಿಎಫ್ ಸಿಬ್ಬಂದಿ ಮೇಲೆ ನಡೆದ ದಾಳಿಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಅದರ ಹಿಂದಿರುವ ಕೈ ಇಂಥದ್ದೇ ಸಂಘಟನೆ, ಸಂಸ್ಥೆಯದು ಹಾಗೂ ದೇಶದ್ದು ಎಂಬುದನ್ನು ಸಾಬೀತು ಮಾಡಬೇಕು. ಆ ನಂತರ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಆ ದೇಶದ ಮಾನ-ಮರ್ಯಾದೆ ಕಳೆಯಬೇಕು. ಭಾರತದ ಪಾಲಿಗೆ ಸವಾಲು ಒಡ್ಡುತ್ತಿರುವ ಎಲ್ಲ ಉಗ್ರ ಸಂಘಟನೆಗಳ ಹಣಕಾಸು ಮೂಲವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬತ್ತಿ ಹೋಗುವಂತೆ ಮಾಡಬೇಕು. ಅಷ್ಟೇ ಅಲ್ಲ, ಭಯೋತ್ಪಾದನಾ ಕೃತ್ಯಗಳಿಗೆ ಪ್ರೋತ್ಸಾಹ ನೀಡುತ್ತಿರುವ ಪಾಕಿಸ್ತಾನದ ಜತೆಗೆ ಎಲ್ಲ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳಬೇಕು. ಇವೆಲ್ಲದರ ಜತೆಗೆ ಅ ದೇಶಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಣಕಾಸು ನೆರವು ದೊರೆಯದಂತೆ ನೋಡಿಕೊಳ್ಳಬೇಕು. ಇಷ್ಟೆಲ್ಲ ಆಗುವ ಮಧ್ಯೆ ಭಾರತೀಯ ಸೇನೆಯು ಜೈಶ್ ಇ ಮೊಹ್ಮದ್ ಸೇರಿ ಎಲ್ಲ ಪ್ರಮುಖ ಉಗ್ರ ಸಂಘಟನೆಗೆ ಅದ್ಯಾವ ರೀತಿ ಉತ್ತರ ಹೇಳಲು ನಿರ್ಧರಿಸುತ್ತದೋ ಅದನ್ನು ಬೆಂಬಲಿಸಬೇಕು.












Click it and Unblock the Notifications