ಕೂರ್ಗ್ ಶೈಲಿಯ ಪೋರ್ಕ್ ಕರಿಗೇಕೆ ಅಷ್ಟೊಂದು ಡಿಮ್ಯಾಂಡ್..? ತಯಾರಿಸುವುದು ಹೇಗೆ..?
ಕೊಡಗಿನಲ್ಲಿ ನಡೆಯುವ ಸಮಾರಂಭಗಳಲ್ಲಿ ಪೋರ್ಕ್ ಕರಿ (ಹಂದಿಮಾಂಸದ ಸಾರು) ಇಲ್ಲದೆ ಹೋದರೆ ಊಟವೇ ರುಚಿಸಲ್ಲ. ಹೀಗಾಗಿ ಇಲ್ಲಿ ಯಾವುದೇ ಕಾರ್ಯಕ್ರಮಗಳಾದರೂ ಅದರಲ್ಲಿ ಪೋರ್ಕ್ ಕರಿ ಇರಲೇ ಬೇಕು. ಏಕೆಂದರೆ ಕೊಡಗಿನ ಜನ ಹಿಂದಿನಿಂದಲೂ ಹಂದಿ ಮಾಂಸದ ಪ್ರಿಯರಾಗಿದ್ದು, ಹಬ್ಬ ಹರಿದಿನಗಳಲ್ಲಿ, ಮದುವೆ, ಇತರೆ ಸಮಾರಂಭಗಳಲ್ಲಿ ಊಟಕ್ಕೆ ಪೋರ್ಕ್ ಕರಿಯನ್ನು ಬಳಕೆ ಮಾಡುತ್ತಾ ಬಂದಿದ್ದಾರೆ.
ಇಲ್ಲಿನ ಊಟೋಪಚಾರಗಳಲ್ಲಿ ಪೋರ್ಕ್ ಕರಿಗೆ ಆದ್ಯತೆ ನೀಡಲಾಗುತ್ತಿದೆ. ಅದರಲ್ಲೂ ಪೋರ್ಕ್ ಕರಿಗೆ ಕೊಡಗಿನಲ್ಲಿ ತಯಾರಿಸುವ ಕಡಂಬಿಟ್ಟು ಕಾಂಬಿನೇಷನ್ ಆಗಿದೆ. ಇಲ್ಲಿ ತಯಾರಿಸುವಂತೆ ಪೋರ್ಕ್ ಕರಿಯನ್ನು ಬೇರೆಲ್ಲೂ ತಯಾರಿಸುವುದಿಲ್ಲ. ಹೀಗಾಗಿಯೇ ಕೊಡಗಿನ ಪೋರ್ಕ್ ಕರಿಯನ್ನು ಹೆಚ್ಚಿನವರು ಇಷ್ಟಪಟ್ಟು ಸೇವಿಸುತ್ತಾರೆ. ಪೋರ್ಕ್ ಕರಿ ಕಪ್ಪಗಿದ್ದರೆ ಮಾತ್ರ ಅದಕ್ಕೊಂದು ವಿಶೇಷ ರುಚಿ ಬರುವುದು. ಇಂತಹ ಪೋರ್ಕ್ ಕರಿಯನ್ನು ಬೇರೆ, ಬೇರೆ ರೀತಿಯಲ್ಲಿ ತಯಾರು ಮಾಡಲಾಗುತ್ತದೆ. ಅದರಲ್ಲೊಂದು ವಿಧಾನ ಇಲ್ಲಿದೆ.

ಕೊಡಗಿನ ಶೈಲಿಯ ಪೋರ್ಕ್ ಕರಿ ತಯಾರಿಸಲು ಏನೆಲ್ಲ ಬೇಕೆಂಬುದನ್ನು ನೋಡುವುದಾದರೆ, ಹಂದಿ ಮಾಂಸ- 1ಕೆ.ಜಿ, ಮೆಣಸು ಪುಡಿ- 2ಚಮಚ, ಅರಿಶಿಣ ಪುಡಿ- 2 ಚಮಚ, ಉಪ್ಪು- 2 ಚಮಚ.(ರುಚಿಗೆ ತಕ್ಕಷ್ಟು), ಕಾಚಂಪುಳಿ 2ಚಮಚ ಬೇಕಾಗುತ್ತದೆ. ಇದರ ಜೊತೆಗೆ ಕರಿ ಮಾಡುವ ಮುನ್ನ ಅದಕ್ಕೆ ಬೇಕಾದ ಬ್ಲಾಕ್ ಮಸಾಲೆ ತಯಾರು ಮಾಡುವುದು ಬಹುಮುಖ್ಯವಾಗಿದ್ದು, ಅದನ್ನು ತಯಾರಿಸುವತ್ತ ಗಮನಹರಿಸಬೇಕು.
ಬ್ಲಾಕ್ ಮಸಾಲೆ ತಯಾರಿಸಲು ಸಾಸಿವೆ- 2 ಚಮಚ, ಜೀರಿಗೆ- 2 ಚಮಚ, ದನಿಯಾ ಪುಡಿ- 2 ಚಮಚ, ಕರಿಮೆಣಸುಪುಡಿ- 2 ಚಮಚ, ಲವಂಗ- 2, ಬೇಕಾಗುತ್ತದೆ. ಇವುಗಳನ್ನೆಲ್ಲ ಹಾಕಿ ಬಾಣಲೆಯಲ್ಲಿ ಹುರಿದು ಬಳಿಕ ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ಹಾಕಿ ಪುಡಿಮಾಡಿಕೊಳ್ಳಬೇಕು.

ಇದರ ಜತೆಗೆ ಹಸಿ ಮಸಾಲೆ ತಯಾರಿಸ ಬೇಕಾಗುವುದರಿಂದ ಅದಕ್ಕೆ ಬೇಕಾಗುವ ಪದಾರ್ಥಗಳಾದ ಈರುಳ್ಳಿ- 6ರಿಂದ8, ಹಸಿ ಮೆಣಸು- 6ರಿಂದ8, ಬೆಳ್ಳುಳ್ಳಿ- 8ರಿಂದ10 ಎಸಳು, ಶುಂಠಿ- 150ಗ್ರಾಂ, ಜೀರಿಗೆ- 1ಚಮಚ, ಕರಿಬೇವು- 1 ಕಟ್ಟು, ಕೊತ್ತಂಬರಿ ಸೊಪ್ಪು- 1ಕಟ್ಟು ಹೀಗೆ ಇದೆಲ್ಲವನ್ನು ತೆಗೆದು ಶುಚಿಮಾಡಿಟ್ಟಕೊಳ್ಳಬೇಕು. ಇಷ್ಟೆಲ್ಲ ಸಿದ್ದವಾಗಿಟ್ಟುಕೊಂಡ ಬಳಿಕ ಪೋರ್ಕ್ ಕರಿ ತಯಾರು ಮಾಡಲು ಆರಂಭಿಸಬೇಕು.
ಮೊದಲಿಗೆ ಮಾಂಸವನ್ನು ಸ್ವಚ್ಛ ಮಾಡಿ ಸಣ್ಣ ಸಣ್ಣ ತುಂಡುಗಳಾಗಿ ಮಾಡಿಕೊಂಡು ಮಾಂಸವನ್ನು ಶುದ್ಧ ನೀರಿನಿಂದ ಚೆನ್ನಾಗಿ ತೊಳೆದು ನೀರು ಬಸಿದು ಮಾಂಸವನ್ನಿಟ್ಟುಕೊಳ್ಳಬೇಕು. ಆ ಮಾಂಸಕ್ಕೆ ಉಪ್ಪು, ಅರಿಶಿಣ, ಮೆಣಸಿನ ಪುಡಿ ಹಾಕಿ ಚೆನ್ನಾಗಿ ಬೆರೆಸಿ ಅರ್ಧಗಂಟೆಗಳ ಕಾಲ ಇಡಬೇಕು.

ಇನ್ನೊಂದು ಕಡೆ ಸಾರು ಮಾಡಲು ಬೇಕಾದ ಮೊದಲೇ ತಯಾರಿಸಿಟ್ಟು ಕೊಂಡ ಬ್ಲಾಕ್ ಮಸಾಲೆಯನ್ನು ತೆಗೆದಿಟ್ಟುಕೊಳ್ಳಬೇಕು. ಆ ನಂತರ ಹಸಿ ಮಸಾಲೆಗೆ ಬೇಕಾದ ಮೇಲೆ ಹೇಳಿದ ಪದಾರ್ಥಗಳನ್ನು ತೆಗೆದುಕೊಂಡು ಹಚ್ಚಿಟ್ಟುಕೊಳ್ಳಬೇಕು. ಶುಂಠಿ ಹಾಗೂ ಬೆಳ್ಳುಳ್ಳಿಯನ್ನು ಚೆನ್ನಾಗಿ ಜಜ್ಜಿ ಮಿಕ್ಸಿಯಲ್ಲಿ ಹೆಚ್ಚು ನುಣುಪಾಗದಂತೆ ತರಿತರಿಯಾಗಿ ರುಬ್ಬಿಟ್ಟುಕೊಳ್ಳಬೇಕು.
ಇಷ್ಟು ಮಾಡಿದ ಬಳಿಕ ಪಾತ್ರೆಯನ್ನು ಒಲೆಯ ಮೇಲಿಟ್ಟು ಚೂರು ಎಣ್ಣೆ ಹಾಕಿ ಕಾಯಿಸಿ. ಕಾದ ಎಣ್ಣೆಗೆ ಹಸಿ ಮಸಾಲೆ ಹಾಕಿ ಸ್ವಲ್ಪ ನೀರು ಬೆರೆಸಿ ಕುದಿಸಬೇಕು. ನಂತರ ಮಾಂಸದ ತುಂಡುಗಳನ್ನು ಹಾಕಿ ಇಪ್ಪತ್ತರಿಂದ ಮೂವತ್ತು ನಿಮಿಷ ಬೇಯಿಸಬೇಕು. ಜತೆಗೆ ತಳ ಹಿಡಿಯದಂತೆ ಆಗಾಗ ಸೌಟು ಹಾಕಿ ತಿರುಗಿಸಬೇಕು. ಆ ನಂತರ ಕಪ್ಪು ಮಸಾಲೆ ಹಾಕಿ ಚೆನ್ನಾಗಿ ಬೆರೆಸಬೇಕು. ಬೆಂದ ನಂತರ ಕಾಚಂಪುಳಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ತಿರುವಿ ಒಲೆಯಿಂದ ಇಳಿಸಿ. ಅದರ ಮೇಲೆ ಹಚ್ಚಿಟ್ಟುಕೊಂಡ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಪೋರ್ಕ್ ಕರಿ ತಯಾರಾದಂತೆಯೇ.
ಪೋರ್ಕ್ ಕರಿಯನ್ನು ಕೊಡಗಿನಲ್ಲಿ ಅಕ್ಕಿರೊಟ್ಟಿ, ಅಕ್ಕಿ ಕಡುಬು, ಊಟಕ್ಕೆ ಸೈಡ್ಸ್ ಆಗಿ ಬಳಸುತ್ತಾರೆ. ಅದರಲ್ಲೂ ವರ್ಷಕ್ಕೊಮ್ಮೆ ನಡೆಯುವ ಕೈಲ್ ಮುಹೂರ್ತ ಹಬ್ಬದಲ್ಲಿ ಇಡೀ ಕೊಡಗು ಪೋರ್ಕ್ ಕರಿಯ ಘಮಲಿನಲ್ಲಿ ತೇಲುತ್ತದೆ. ಸಂಸ್ಕೃತಿ, ಉಡುಗೆ, ತೊಡುಗೆ ಹೀಗೆ ಎಲ್ಲದರಲ್ಲೂ ಭಿನ್ನತೆ ಕಾಣುವ ಕೊಡಗಿನಲ್ಲಿ ಊಟ ತಿಂಡಿಯಲ್ಲಿಯೂ ಭಿನ್ನತೆ ಇರುವುದನ್ನು ಕಾಣಬಹುದಾಗಿದೆ. ಬೇರೆ ಕಡೆ ಪೋರ್ಕ್ ಎಂದಾಕ್ಷಣ ಮಾರುದ್ದ ಓಡಿದರೆ ಇಲ್ಲಿನವರಿಗೆ ಅದುವೇ ಪ್ರಮುಖ ಖಾದ್ಯವಾಗಿದೆ.












Click it and Unblock the Notifications