ಮನೆಗೆ ಶ್ರೇಯಸ್ಸು ತರುವ, ಶಿವನಿಗೂ ಪ್ರಿಯವಾದ ಕೇಪಳ ಪುಷ್ಪದ ಬಗ್ಗೆ ನಿಮಗೆಷ್ಟು ಗೊತ್ತು?
ಮನೆಯ ಅಂಗಳದಲ್ಲಿ ಹಲವಾರು ಬಗೆಯ ಹೂವಿನ ಗಿಡಗಳನ್ನು ನೆಟ್ಟು ಬೆಳೆಸುವುದು ನಮ್ಮೆಲ್ಲರ ಹವ್ಯಾಸವಾಗಿದೆ. ಹಾಗೆಂದು ಕೈಗೆ ಸಿಕ್ಕ ಹೂಗಿಡಗಳನ್ನು ನೆಡದೆ ಹುಲುಸಾಗಿ ಬೆಳೆದು ವರ್ಷಪೂರ್ತಿ ಹೂ ಬಿಡುವ ಮತ್ತು ಮನೆ-ಮನಕ್ಕೆ ಶ್ರೇಯಸ್ಸು ತರುವಂತಹ ಗಿಡಗಳನ್ನು ನೆಡುವುದರತ್ತ ಗಮನಹರಿಸಿದರೆ ಚೆನ್ನಾಗಿರುತ್ತದೆ. ಹೀಗಾಗಿ ಅಂತಹ ಗಿಡಗಳಿಗೆ ಆದ್ಯತೆ ನೀಡುವುದು ಒಳ್ಳೆಯದು.
ನಾವು ನೆಟ್ಟು ಬೆಳೆಸುವ ಹೂಗಿಡಗಳ ಪೈಕಿ ಎಲ್ಲವೂ ತಮ್ಮದೇ ಆದ ವಿಶೇಷತೆಯನ್ನು ಹೊಂದಿರುತ್ತವೆ. ದೈವಿಕವಾಗಿಯೂ ಕೆಲವು ಹೂಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಇಂತಹ ಹೂಗಳ ಪೈಕಿ ಇಕ್ಸೋರಾ(ಕೇಪಳ ಪುಷ್ಪ) ಒಂದಾಗಿದೆ. ಈ ಗಿಡವನ್ನು ನೆಟ್ಟಿದ್ದೇ ಆದರೆ ವರ್ಷಪೂರ್ತಿ ಗಿಡದ ತುಂಬಾ ಕೆಂಪನೆಯ ಬಣ್ಣದಲ್ಲಿ ದೊಡ್ಡ ದೊಡ್ಡ ಗೊಂಚಲುಗಳಲ್ಲಿ ಒತ್ತೋತ್ತಾಗಿ ಹೂಬಿಟ್ಟು ಸುಂದರವಾಗಿಯೂ, ಆಕರ್ಷಕವಾಗಿಯೂ ಕಂಗೊಳಿಸುವುದಲ್ಲದೆ, ಮನೆಗೆ ಮೆರಗು ತಂದರೆ ಮನಸ್ಸಿಗೆ ಮುದ ನೀಡುತ್ತದೆ.

ಇತ್ತೀಚೆಗಿನ ದಿನಗಳಲ್ಲಿ ಮನೆಯ ಹೂ ಕುಂಡಗಳಲ್ಲಿ, ಕೈತೋಟದಲ್ಲಿ, ಉದ್ಯಾನಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಇದು ಕಾಣಸಿಗುತ್ತಿದ್ದು, ಎಲ್ಲರ ಮನಸೆಳೆಯುತ್ತಿದೆ. ಒಂದು ಕಾಲದಲ್ಲಿ ಕಾಡಿಗೆ ಮಾತ್ರ ಸೀಮಿತವಾಗಿತ್ತು. ಈಗ ಹಾಗಿಲ್ಲ. ಇದರ ಸುಧಾರಿತ ತಳಿಗಳು ವಿವಿಧ ಬಣ್ಣಗಳಲ್ಲಿ ಕಂಡು ಬರುತ್ತಿವೆ. ಅಷ್ಟೇ ಅಲ್ಲದೆ ಜನಪ್ರಿಯ ಪುಷ್ಪವಾಗಿ ಪುಷ್ಪಪ್ರೇಮಿಗಳ ಮನಕ್ಕೆ ಲಗ್ಗೆಯಿಡುತ್ತಿದೆ.
ಮೂಲತಃ ಸಿಂಗಾಪುರದ ಹೂವು
ಇಕ್ಸೋರಾದ ಬಗ್ಗೆ ಹೇಳುವುದಾದರೆ ಉಷ್ಣವಲಯದ ವಾತಾವರಣವು ಇದು ಹುಲುಸಾಗಿ ಬೆಳೆಯಲು ಯೋಗ್ಯವಾಗಿದ್ದು, ಸಾಮಾನ್ಯವಾಗಿ ಎಲ್ಲ ಮಣ್ಣಿನಲ್ಲಿಯೂ ಬೆಳೆಯುತ್ತದೆ. ಗಿಡದ ಬೆಳವಣಿಗೆಯು ಸುಮಾರು ಐದರಿಂದ ಏಳು ಅಡಿಗಳಷ್ಟು ಎತ್ತರವಿದ್ದು, ಗಿಡವು ನೆಟ್ಟ ಒಂದೆರಡು ವರ್ಷದಲ್ಲಿ ಹೂಬಿಡಲು ಪ್ರಾರಂಭಿಸುತ್ತದೆ. ಒಂದು ಮೂಲದ ಪ್ರಕಾರ ಇದು ಸಿಂಗಾಪುರ ದೇಶದ್ದು ಎನ್ನಲಾಗಿದೆ. ನಂತರ ಇತರೆಡೆಗೆ ಹರಡಿತು ಎಂದು ಹೇಳಲಾಗುತ್ತಿದೆ. ರೂಬಿಯೇಸಿ ಕುಟುಂಬದ 150 ಜಾತಿಗಳ ಪೈಕಿ ಇದು ಒಂದಾಗಿದೆ. ಸಸ್ಯ ಶಾಸ್ತ್ರೀಯದ ಹೆಸರಿನ ಪ್ರಕಾರ ಇಕ್ಸೋರ ಸಿಂಗಪೊರೆನ್ಸಿಸ್ ಎಂದು ಕರೆಯುತ್ತಾರೆ.

ಇದೊಂದು ಹೂ ಬಿಡುವ ಪೊದೆ ಸಸ್ಯ. ಅಗಲವಾದ ಮತ್ತು ಉದ್ದವಾದ ಎಲೆಗಳ ಮಧ್ಯೆ ಚೆಂಡಿನಂತೆ, ಪ್ರಭೇದಗಳಿಗೆ ಅನುಸಾರವಾಗಿ ವಿವಿಧ ಬಣ್ಣಗಳಲ್ಲಿ ಹೂಗೊಂಚಲುಗಳನ್ನು ಹೊಂದಿದೆ. ಪೊದೆಯಾಗಿಯೂ, ಚಿಕ್ಕಮರವಾಗಿಯೂ ಬೆಳೆಯುವ ಇಕ್ಸೋರಾ ಹಸಿರಾಗಿರುವ ಬಹುವಾರ್ಷಿಕ ಸಸ್ಯವಾಗಿದೆ. ಎಲೆ ಅಭಿಮುಖ ಅಥವಾ ವೃತ್ತ ಜೋಡಣೆಯುಳ್ಳದ್ದು. ಕೊರಿಂಬ್ ಮಾದರಿಯ ಹೂಗೊಂಚಲು ತುದಿ ಅಥವಾ ಕಂಕುಳಲ್ಲಿ ಕಾಣಿಸಿಕೊಳ್ಳುತ್ತದೆ.
ನಾನಾ ಬಣ್ಣಗಳಲ್ಲಿ ಕಂಗೊಳಿಸುವ ಇಕ್ಸೋರಾ
ಹೂಗಳ ಬಣ್ಣ ಪ್ರಭೇದಗಳಿಗೆ ಅನುಸಾರವಾಗಿ ಬಿಳುಪು, ಗುಲಾಬಿ, ಕೇಸರಿ, ಹೀಗೆ ನಾನಾ ಬಗೆ, ಹೂಗಳಿಗೆ ತೊಟ್ಟು, ಉಪದಳ, ಗಂಟಲಲ್ಲಿ ರೋಮಗಳು ಕೂಡು ದಳದ ಹೊರಭಾಗ 4ರಿಂದ5 ಭಾಗವಾಗಿ ಅಗಲವಾಗಿರುತ್ತದೆ. ಕೇಸರಗಳು ಹೂಗಂಟಲಿನ ಮೇಲೆ ಅಂಟಿಕೊಂಡಿರುತ್ತವೆ. ಕೆಳ ಅಂಡಾಶಯ ಮೇಲ್ಭಾಗವಾಗಿದೆ. ಹಣ್ಣು ಗಟ್ಟಿಯಾದ ಅಥವಾ ಮೆದುವಾದ ಬೆರ್ರಿ ಮಾದರಿಯಲ್ಲಿರುತ್ತದೆ.

ಕೆಲವರ ನಂಬಿಕೆಯ ಪ್ರಕಾರ ಈ ಹೂವು ಈಶ್ವರನಿಗೆ ಬಲು ಪ್ರಿಯವೆಂದೂ ಆದುದರಿಂದ ಇಕ್ಸೋರ ಎಂಬ ಹೆಸರು ಬಂದಿತೆಂದು ಹೇಳುತ್ತಾರೆ. ಕೇರಳದ ದೇವಾಲಯಗಳಲ್ಲಿ ಈ ಹೂವಿಗೆ ಹೆಚ್ಚಿನ ಪ್ರಾಧಾನ್ಯತೆಯಿದೆ. ದೇವಾಲಯಗಳ ಸುತ್ತಮುತ್ತ ಬೆಳೆಸುವುದನ್ನು ನಾವು ಕಾಣಬಹುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಕೋಲಗಳಲ್ಲಿ ಇದಕ್ಕೆ ವಿಶೇಷ ಸ್ಥಾನವಿದೆ. ಕಾಡುಗಳಲ್ಲಿ ಬೆಳೆಯುವ ಇಕ್ಸೋರ(ಕೇಪಳ) ಹೂಗಳನ್ನು ಕೋಲದ ಸಂದರ್ಭದಲ್ಲಿ ಬಳಸುತ್ತಾರೆ.
ಮನೆಗೆ ಶ್ರೇಯಸ್ಸು ತರುವ ಕುಸುಮ
ಇಕ್ಸೋರ ಗಿಡಗಳು ಯಾರ ಮನೆಮುಂದೆ ಹುಲುಸಾಗಿ ಬೆಳೆಯುತ್ತದೆಯೋ ಆ ಮನೆಯಲ್ಲಿ ದಿನನಿತ್ಯ ನೆಮ್ಮದಿ ಸುಖವಿರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಮಲೆನಾಡಿನ ಕಾಡುಗಳಿಗೊಂದು ಸುತ್ತು ಹೊಡೆದರೆ ಇದಕ್ಕೆ ಸಂಬಂಧಿಸಿದಂತೆ ಹಲವು ತಳಿಗಳು ಕಾಣಸಿಗುತ್ತವೆ. ಇವುಗಳು ಕಾಡು ಜಾತಿಯದ್ದಾಗಿವೆ. ಮೊದಲೆಲ್ಲ ಕೇವಲ ಕೆಂಪನೆಯ ಬಣ್ಣದ ಹೂಗಳು ಮಾತ್ರ ಅಲ್ಲಲ್ಲಿ ಕಾಣಸಿಗುತ್ತಿದ್ದವು. ಈಗ ವಿವಿಧ ಬಣ್ಣಗಳಿಂದ ಮನೆ ಮುಂದೆ ಶೋಭಿಸುತ್ತಿವೆ. ಈ ಗಿಡಗಳನ್ನು ಕೊಂಬೆಯಿಂದ ಹಾಗೂ ಕಸಿ ಕಟ್ಟುವುದರಿಂದ ವೃದ್ಧಿಸಬಹುದಾಗಿದೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ಇಕ್ಸೋರಾ ನೋಡಲಷ್ಟೆ ಸುಂದರವಲ್ಲದೆ, ಮನೆಗೆ ಶ್ರೇಯಸ್ಸು ನೀಡುವ ಕುಸುಮವೂ ಹೌದು. ಹೀಗಾಗಿಯೇ ಇದರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹೆಚ್ಚಿನ ಮನೆಗಳಲ್ಲಿ ಸ್ಥಾನ ಪಡೆಯುತ್ತಿದೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications