Ice Cream Dosa: ಬಿಸಿ ಬಿಸಿ ದೋಸೆಯಲ್ಲಿ ಸಿಹಿ ಸಿಹಿ ಐಸ್‌ಕ್ರೀಮ್, ಈ ಸ್ಪೆಷಲ್ ದೋಸೆ ಮಾಡುವುದು ತುಂಬಾ ಸುಲಭ
ದೋಸೆಯಲ್ಲಿ ನೀವು ನೂರಾರು ರೀತಿಯ ವಿಧಗಳನ್ನು ಕಾಣಬಹುದು. ಮಸಾಲೆ ದೋಸೆ, ಬೆಣ್ಣೆ ದೋಸೆ, ಸೆಟ್ ದೋಸೆ, ಪ್ಲೇನ್ ದೋಸೆ, ರಾಗಿ ದೋಸೆ, ಈರುಳ್ಳಿ ದೋಸೆ, ತರಕಾರಿ ದೋಸೆ, ಪಾಲಕ್ ದೋಸೆ, ಗೋದಿ ದೋಸೆ, ಅವರೆ ಕಾಳಿನ ದೋಸೆ, ತುಪ್ಪದ ದೋಸೆ ಹೀಗೆ ನೂರಾರು ರೀತಿಯ ದೋಸೆಗಳನ್ನು ನೀವು ನೋಡಿರುತ್ತೀರಿ, ಆದರೆ ಇತ್ತೀಚಿಗೆ ಮಾರುಕಟ್ಟೆಯಲ್ಲಿ ಜನರಿಗೆ ವಿಚಿತ್ರ ಎನಿಸುವ ದೋಸೆಗಳು ಕಂಡು ಬರುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಆಹಾರದ ವಿಡಿಯೋಗಳು ಟ್ರೆಂಡ್‌ನಲ್ಲಿವೆ. ಹೀಗಾಗಿ ಜನ ನಾನಾ ರೀತಿಯ ದೋಸೆಯ ವಿಡಿಯೋಗಳನ್ನು ಸಹ ಶೇರ್ ಮಾಡುತ್ತಿದ್ದು, ಇತ್ತೀಚಿಗೆ ಗುಲಾಬ್ ಜಾಮೂನ್ ದೋಸೆ ಸಖತ್ ಸದ್ದು ಮಾಡಿತ್ತು. ಈಗ ಇದರ ಸಾಲಿಗೆ ಐಸ್ ಕ್ರೀಮ್ ದೋಸೆ ಕೂಡ ಸೇರಿದ್ದು, ಬಿಸಿಬಿಸಿ ದೋಸೆಗೂ ಕೋಲ್ಡ್ ಐಸ್ ಕ್ರೀಮ್‌ಗೂ ಎಲ್ಲಿಯ ಸಂಬಂಧ ಎಂದು ನೋಡುಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಐಸ್ ಕ್ರೀಮ್ ದೋಸೆ ಹೆಸರು ಕೇಳಿದ ತಕ್ಷಣ ಈ ದೋಸೆಯನ್ನು ಹೇಗೆ ತಯಾರಿಸುತ್ತಾರೆ ಎನ್ನುವ ಕುತೂಹಲ ಎಲ್ಲರನ್ನು ಕಾಡಬಹುದು. ದೋಸೆ ಹಿಟ್ಟಿಗೆ ಐಸ್ ಕ್ರೀಮ್ ಸೇರಿಸಿ ಮಾಡುತ್ತಾರಾ..ಇಲ್ಲ ಐಸ್ ಕ್ರೀಮ್ ಅನ್ನು ಚಟ್ನಿ ಬದಲಿಗೆ ದೋಸೆಯೊಂದಿಗೆ ನೀಡುತ್ತಾರಾ..? ದೋಸೆಯ ಬಿಸಿಗೆ ಐಸ್ ಕ್ರೀಮ್ ಕರಗುವುದಿಲ್ಲವೇ ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮನ್ನು ಕಾಡಬಹುದು. ಹೀಗಾಗಿ ಐಸ್ ಕ್ರೀಮ್ ದೋಸೆಯನ್ನು ಹೇಗೆ ತಯಾರಿಸುತ್ತಾರೆ? ವಿಶೇಷತೆ ಏನು ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.
ಐಸ್ ಕ್ರೀಮ್ ದೋಸೆಯ ವಿಡಿಯೋವನ್ನು @foodb_unk ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ರಸ್ತೆ ಬದಿಯ ದೋಸೆ ವ್ಯಾಪಾರಿಯೊಬ್ಬರು ಐಸ್ ಕ್ರೀಮ್ ದೋಸೆ ಮಾಡುವ ವಿಧಾನವನ್ನು ನೋಡಬಹುದು. ಮೊದಲು ಕಾದ ಹೆಂಚಿನಲ್ಲಿ ದೋಸೆ ಹಿಟ್ಟನ್ನು ಸುರಿದು, ನಂತರ ಅದರ ಮೇಲೆ ಬೆಣ್ಣೆಯನ್ನು ಸವರಿ ಬಳಿಕ ಅದಕ್ಕೆ ಟುಟ್ಟಿ ಫ್ರೂಟಿ, ಡ್ರೈ ಫ್ರೂಟ್ಸ್ ಹಾಕಿ, ದೋಸೆಯನ್ನು ಚೆನ್ನಾಗಿ ಬೇಯಿಸಿಕೊಳ್ಳುತ್ತಾರೆ. ಬಳಿಕ ದೋಸೆ ಬೆಂದ ಮೇಲೆ ಅದನ್ನು ಬಟ್ಟಲಿಗೆ ಹಾಕಿ ಆ ದೋಸೆಯ ಮೇಲೆ ಒಂದು ಕಪ್ ಐಸ್ ಕ್ರೀಮ್ ಹಾಕಿ, ಚೆರಿ ಹಣ್ಣಿಟ್ಟು, ಚಾಕೋಲೆಟ್ ಸಿರಪ್ ಸುರಿದು ಗ್ರಾಹಕರಿಗೆ ನೀಡುತ್ತಾರೆ. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.
ದೋಸೆಯ ಉಳಿವಿಗಾಗಿ ಹೋರಾಟ
ದೋಸೆ ಪ್ರಿಯರೆ ನೀವಿಗಲೇ ಎಚ್ಚೆತ್ತುಕೊಳ್ಳಬೇಕು. ಇಂದಿನಿಂದಲೇ ದೋಸೆಗಾಗಿ ಹೋರಾಟ ಮಾಡಬೇಕು. ನಮ್ಮ ಸಾಂಪ್ರದಾಯಿಕ ಆಹಾರ ದೋಸೆಯ ಘನತೆ ಉಳಿಸಲು ನಾವು ಹೋರಾಡಲೇ ಬೇಕು.. ಎನ್ನುವ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳನ್ನು ನೀವು ಇತ್ತೀಚಿಗೆ ಹೆಚ್ಚಾಗಿ ಕಾಣುತ್ತಿರಬಹುದು. ದೋಸೆ ಹೆಸರಿನಲ್ಲಿ ಆಗುತ್ತಿರುವ ಆಹಾರದ ಮೇಲಿನ ಪ್ರಯೋಗದ ಬಗ್ಗೆ ಒಂದಿಷ್ಟು ಜನರು ಸೋಶಿಯಲ್ ಮೀಡಿಯಾದಲ್ಲಿ ಧ್ವನಿ ಎತ್ತಿದ್ದಾರೆ. ಇದಕ್ಕೆ ಕಾರಣ ಕೂಡ ಇದೆ. ದೋಸೆಯ ಸಾಂಪ್ರದಾಯಿಕ ಶೈಲಿ ಬಿಟ್ಟು ಸಿಕ್ಕ ಸಿಕ್ಕ ವಸ್ತುಗಳನ್ನು ಸೇರಿದಿ ವಿವಿಧ ರೀತಿಯಲ್ಲಿ ತಯಾರಿಸಲಾಗುತ್ತದೆ ಎನ್ನುವುದು ಅಪ್ಪಟ ದೋಸೆ ಪ್ರಿಯರ ಆರೋಪವಾಗಿದೆ.












Click it and Unblock the Notifications