ಜಗತ್ತಿಗೆ ಕೆಂಪು ಗುಲಾಬಿ ಪರಿಚಯವಾಗಿದ್ದೇಗೆ?: ಪ್ರಾಣ ಬಿಟ್ಟ ಪುಟ್ಟ ಹಕ್ಕಿಯ ಕಥೆ ನಿಮಗೆ ಗೊತ್ತೇ?
ಸಿನಿಮಾಗಳಲ್ಲಿ, ಕಾದಂಬರಿಗಳಲ್ಲಿ ಚೆಂಗುಲಾಬಿ ನೀಡಿ ಪ್ರೇಮ ನಿವೇದನೆಯ ದೃಶ್ಯಗಳು ಬರುತ್ತವೆ. ಇವತ್ತಿನ ಮೊಬೈಲ್ ಜಗತ್ತಿನಲ್ಲಿ ಗುಲಾಬಿ ಹೂ ನೀಡಿ ಪ್ರೇಮ ನಿವೇದನೆ ಮಾಡುವುದು ಎಷ್ಟರ ಮಟ್ಟಿಗೆ ನಡೆಯುತ್ತಿದೆಯೋ ಗೊತ್ತಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಮ ನಿವೇದನೆ ಮಾಡುವುದು ಬಹಳಷ್ಟು ಮಂದಿಗೆ ಕಷ್ಟವೇ ಅಲ್ಲ. ಅದರಿಂದ ಪ್ರೀತಿ, ಪ್ರೇಮ, ಸ್ನೇಹ ಹೀಗೆ ಬಗೆಬಗೆಯ ಸಂಬಂಧಗಳಂತು ಸುಲಭವಾಗಿಯೇ ಆಗುತ್ತಿದೆ ಎನ್ನುವುದನ್ನು ತಳ್ಳಿಹಾಕಲಾಗದು.
ಅವತ್ತಿನ ಕಾಲಕ್ಕೆ ಯಾವುದು ಸುಲಭವಾಗಿರುತ್ತದೆಯೋ ಅದನ್ನೇ ಸಾಧನೆಯಾಗಿ ಬಳಸಿಕೊಳ್ಳುತ್ತಾ ತಮ್ಮ ಸಂಬಂಧವನ್ನು ಆರಂಭಿಸುತ್ತಿರುವುದು ಇತಿಹಾಸದ ಮೆಲುಕು ಹಾಕಿದಾಗ ನಮ್ಮ ಗಮನಕ್ಕೆ ಬರುತ್ತಿದೆ. ಅದರಂತೆ ಈ ಹಿಂದೆ ಗುಲಾಬಿ, ಪತ್ರಗಳೆಲ್ಲವೂ ಸಂಬಂಧಗಳನ್ನು ಕುದುರಿಸುತ್ತಿದ್ದವು. ಅದರಲ್ಲೂ ಸಂಬಂಧದ ಬೆಸುಗೆಯಲ್ಲಿ ಗುಲಾಬಿ ಒಂದು ಹೆಜ್ಜೆ ಮುಂದೆಯೇ ಇದೆ. ಇಷ್ಟಕ್ಕೂ ಪ್ರೇಮ ನಿವೇದನೆಯಲ್ಲಿ ಗುಲಾಬಿ ಹೂವನ್ನು ಏಕೆ ಬಳಸುತ್ತಾರೆ ಎಂಬುವುದರ ಮೂಲ ಹುಡುಕಿದರೆ ಅದರ ಮಹತ್ವವೇನು ಎಂಬುದು ಅರಿವಿಗೆ ಬರುತ್ತದೆ.

ಗುಲಾಬಿ ಮುಳ್ಳಿನ ಗಿಡದಲ್ಲಿ ಅರಳುವ ಹೂವಾಗಿದ್ದರೂ ಇದು ಮೃದುವಾಗಿಯೂ ಸೊಗಸಾಗಿಯೂ ಇರುತ್ತದೆ. ಹಾಗೆಂದು ಮೈಮರೆತು ಕೈ ಹಾಕಿದರೆ ಗಿಡದ ಮೇಲಿರುವ ಮುಳ್ಳು ಚುಚ್ಚುತ್ತದೆ. ಅಂದರೆ ಪ್ರೇಮವೂ ಅಷ್ಟೆ ಅದು ಸುಖದ ಸುಪ್ಪತ್ತಿಗೆ ಅಲ್ಲ ಮುಳ್ಳಿನ ಹಾದಿಯೇ... ಇದನ್ನು ಅರಿತು ಮುಳ್ಳಿನ ಗಿಡದಲ್ಲಿ ಹೇಗೆ ಸುಂದರ ಹೂ ಅರಳುತ್ತದೆಯೋ ಹಾಗೆಯೇ ನಮ್ಮ ಪ್ರೀತಿಯೂ ಅರಳಬೇಕು ಎಂಬ ಉದ್ದೇಶದಿಂದಲೇ ಗುಲಾಬಿ ಹೂವನ್ನು ಬಳಸಲಾಗುತ್ತದೆಯಂತೆ. ಅದನ್ನು ಪ್ರೀತಿಯ ಸಂಕೇತವಾಗಿ ಬಳಸುತ್ತಾರಂತೆ.
ಗುಲಾಬಿಗಾಗಿ ಪ್ರಾಣ ಬಿಟ್ಟ ಹಕ್ಕಿ
ಈ ಗುಲಾಬಿ ಹೂವಿದೆಯಲ್ಲ ಇದು ಸ್ವಲ್ಪ ಅಹಂಕಾರಿಯಾಗಿತ್ತಂತೆ. ಇದನ್ನರಿಯದೆ ಪುಟ್ಟ ಹಕ್ಕಿಯೊಂದು ಬಿಳಿ ಗುಲಾಬಿಯನ್ನು ಗಾಢವಾಗಿ ಪ್ರೀತಿಸುತ್ತಿತ್ತಂತೆ. ಅದನ್ನು ಹೇಳಿಯೂ ಇತ್ತು. ಆದರೆ ಹಕ್ಕಿಯ ಪ್ರೀತಿಯನ್ನು ಅರಿಯದ ಗುಲಾಬಿ ಮಾತ್ರ ಉದ್ಧಟತನದಿಂದ ವರ್ತಿಸುತ್ತಿತ್ತು. ಒಂದು ದಿನ ಗೋಗರೆದು ಕೇಳಿದ್ದಕ್ಕೆ ಬಿಳಿ ಗುಲಾಬಿ ನನ್ನ ಬಣ್ಣ ಕೆಂಪಾಗಿ ಬದಲಾಗುವ ದಿನದಿಂದಲೇ ನಿನ್ನನ್ನು ಪ್ರೀತಿಸುತ್ತೇನೆಂದು ಭಾಷೆ ನೀಡಿತಂತೆ. ಹಕ್ಕಿ ಮಾತ್ರ ಗುಲಾಬಿ ಹೂ ಕೆಂಪಾಗುವುದನ್ನೇ ಕಾಯತೊಡಗಿತು. ಆದರೆ ದಿನ ಉರುಳಿ ವಾರವಾಯಿತು. ವಾರ, ತಿಂಗಳಾಗಿ ಕೊನೆಗೆ ವರ್ಷವಾದರೂ ಬಿಳಿ ಗುಲಾಬಿ ಮಾತ್ರ ಕೆಂಪಾಗಲಿಲ್ಲ.
ಹೀಗಿರಲು ನಿರಾಶೆಗೊಂಡ ಹಕ್ಕಿಯು ಹೂವಿನ ಮೇಲೆ ಕುಳಿತು ಗಿಡದಿಂದ ಮುಳ್ಳನ್ನು ಕಿತ್ತು ತನ್ನ ಎದೆಗೆ ಚುಚ್ಚಿಕೊಂಡಿತು. ಆಗ ಹಕ್ಕಿಯ ಎದೆಯಿಂದ ಹೊರಬಂದ ರಕ್ತ ಬಿಳಿ ಗುಲಾಬಿಯನ್ನೆಲ್ಲಾ ತೊಯ್ದು ಕೆಂಪಾಗಿಸಿತು. ಆದರೆ ಅಷ್ಟರಲ್ಲಿಯೇ ಹಕ್ಕಿಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಇಷ್ಟೆಲ್ಲಾ ನಡೆದ ಮೇಲೆ ಗುಲಾಬಿಗೆ ಜ್ಞಾನೋದಯವಾಗಿತ್ತು. ತನ್ನ ಅಹಂಕಾರದಿಂದ ಹಕ್ಕಿಯ ಪ್ರಾಣವೇ ಹೋಯಿತಲ್ಲ ಎಂದು ಮಮ್ಮಲ ಮರುಗತೊಡಗಿತ್ತು.

ಗುಲಾಬಿ ಮಾಡಿದ ಆ ಶಪಥವೇನು?
ತನಗೋಸ್ಕರ ಪ್ರಾಣವನ್ನೇ ತೆತ್ತ ಗೆಳೆಯನ ನೆನಪಿಗಾಗಿ ಇನ್ನು ಮುಂದೆ ಕೆಂಪು ಬಣ್ಣದಲ್ಲಿದ್ದುಕೊಂಡೇ ಪ್ರೇಮಿಗಳನ್ನು ಒಗ್ಗೂಡಿಸುವ ಕಾರ್ಯನಿರ್ವಹಿಸುವುದಾಗಿ ಶಪಥ ಮಾಡಿತಂತೆ. ಅಂದಿನಿಂದ ಇಂದಿನವರೆಗೂ ಪ್ರೇಮಿಗಳಿಗೆ ಪ್ರೇಮ ಸೇತುವೆಯಾಗಿ ಕೆಂಪು ಗುಲಾಬಿ ಕಾರ್ಯನಿರ್ವಹಿಸುತ್ತಾ ಬರುತ್ತಿದೆ ಎಂಬುದು ಜನವಲಯದಲ್ಲಿರುವ ಕಥೆಯಾಗಿದೆ. ಇನ್ನು ಗುಲಾಬಿಯಲ್ಲಿಯೂ ಹಲವು ಬಣ್ಣವಿದ್ದು, ಒಂದೊಂದು ಗುಲಾಬಿಯೂ ಒಂದೊಂದು ವಿಚಾರವನ್ನು ಹೊರಹಾಕುತ್ತದೆ.
ಅದರಂತೆ ಚೆಂಗುಲಾಬಿ ನೀಡಿದರೆ 'ನಾನು ನಿನ್ನನ್ನು ಪ್ರೀತಿಸುತ್ತೇನೆ' ಎಂದರ್ಥವಂತೆ. ಆದ್ದರಿಂದ ಚೆಂಗುಲಾಬಿ ಪ್ರೀತಿಯಾದರೆ, ಹಳದಿ ಬಣ್ಣದ ಗುಲಾಬಿ ಸ್ನೇಹದ ಬಯಕೆಯನ್ನು ಸೂಚಿಸುತ್ತದೆ. ಬಿಳಿ ಗುಲಾಬಿ ನಿರಂತರ ಸ್ನೇಹವನ್ನೂ, ತಿಳಿಗುಲಾಬಿ ಈಗಷ್ಟೇ ಮನಸ್ಸು ಅರಳುತ್ತಿದೆ ಎಂಬ ಅರ್ಥವನ್ನು ಹೇಳುತ್ತದೆಯಂತೆ. ಅದು ಏನೇ ಇರಲಿ ಗುಲಾಬಿ ಹೂ ಹಲವು ರೀತಿಯಲ್ಲಿ ಉಪಯೋಗುವುದರ ಜತೆಗೆ ಹಲವು ಸಂದೇಶವನ್ನು ಜಗತ್ತಿಗೆ ಸಾರುತ್ತಾ ಬಂದಿರುವುದು ಗಮನಾರ್ಹವಾಗಿದೆ.












Click it and Unblock the Notifications