ಬೆಂಗಳೂರು ಜನ ದಿನಕ್ಕೆ ಎಷ್ಟು ಗಂಟೆ ನಿದ್ದೆ ಮಾಡ್ತಾರೆ ಗೊತ್ತಾ? ಶಾಕಿಂಗ್ ವರದಿ ಬಹಿರಂಗ
ಪ್ರತಿಯೊಬ್ಬರಿಗೂ ನಿದ್ದೆ ಅನ್ನೋದು ಬಹಳ ಮುಖ್ಯ. ಚೆನ್ನಾಗಿ ನಿದ್ದೆ ಮಾಡುವವರನ್ನು ಸೋಂಬೇರಿ ಎಂದು ಕರೆದರೆ, ಚೆನ್ನಾಗಿ ನಿದ್ದೆ ಮಾಡದಿದ್ರೆ ಅಪಾಯ ಕಟ್ಟಿಟ್ಟಬುತ್ತಿ ಅಂತಾರೆ ವೈದ್ಯರು. ಅತಿಯಾಗದಿದ್ದರೂ ದಿನದಲ್ಲಿ ಇಷ್ಟು ಗಂಟೆ ನಿದ್ದೆ ಮಾಡೋದು ಆರೋಗ್ಯಕ್ಕೆ ಒಳ್ಳೇದು ಅಂತಾರೆ. ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನ ಜನರು ನಿದ್ರೆಗೆ ಎಷ್ಟು ಮಹತ್ವ ಕೊಡ್ತಾರೆ ಎಂಬ ವಿಚಾರದಲ್ಲಿ ಅಚ್ಚರಿಯ ವರದಿಯೊಂದು ಬಹಿರಂಗವಾಗಿದೆ. ಉದ್ಯಾನಗರಿಯ ಜನರು ಎಷ್ಟು ಗಂಟೆ ನಿದ್ದೆ ಮಾಡ್ತಾರೆ? ಎಂಬ ಅಂಶಗಳು ಕೂಡ ರಿವೀಲ್ ಆಗಿವೆ. ಆದರೆ, ಈ ವರದಿಯು ಬೆಂಗಳೂರಿಗೆ ಶಾಕ್ ನೀಡುವಂತಿದೆ.
ಲೋಕಲ್ ಸರ್ಕಲ್ಸ್ ಎಂಬ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಅಚ್ಚರಿಯ ವಿಚಾರಗಳು ಬಹಿರಂಗವಾಗಿವೆ. ಬೆಂಗಳೂರಿಗರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಆರು ಗಂಟೆಗಳಿಗಿಂತ ಕಡಿಮೆ ನಿದ್ದೆ ಮಾಡುತ್ತಾರೆ ಎಂದು ವರದಿ ಹೇಳಿದೆ. ಇದಕ್ಕೆ ಕಾರಣಗಳೇನು ಎಂಬುದು ಕೂಡ ಪತ್ತೆಯಾಗಿದೆ. ರಾತ್ರಿ ನಿದ್ದೆ ವೇಳೆ ಶೌಚಾಲಯಕ್ಕೆ ಹೋಗುವುದು ಇದಕ್ಕೆ ಕಾರಣ ಎಂದು ಶೇ 35ರಷ್ಟು ಮಂದಿ ಕಾರಣ ನೀಡಿದ್ದಾರೆ. ಶೇ 33ರಷ್ಟು ಮಂದಿ ತಡವಾಗಿ ನಿದ್ದೆ ಮಾಡಿ ಮತ್ತು ಬೇಗನೆ ಎಚ್ಚರಗೊಳ್ಳುವುದಾಗಿ ತಿಳಿಸಿದ್ದಾರೆ. ಉಳಿದಂತೆ ಶೇ 17ರಷ್ಟು ಮಂದಿ ನಿರಂತರವಾಗಿ ಎಂಟು ಗಂಟೆಗಳ ಕಾಲ ನಿದ್ದೆ ಮಾಡಲು ಸಾಧ್ಯವೇ ಆಗುತ್ತಿಲ್ಲ ಎಂದು ಕಾರಣ ನೀಡಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಈ ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ ಶೇ 59ರಷ್ಟು ಜನರು ರಾತ್ರಿ ಆರು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವುದಾಗಿ ವರದಿ ಮಾಡಿದ್ದಾರೆ. ಇದು ಅವರ ಆರೋಗ್ಯ ಮತ್ತು ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬುದೂ ಪತ್ತೆಯಾಗಿದೆ. ಅಲ್ಲದೆ ನಿದ್ದೆ ವೇಳೆ ಅಡಚಣೆಗಳಿಂದಲೂ ನಿದ್ರಿಸುವ ಸಮಯ ಕಡಿಮೆ ಆಗಿದೆ. ಶೇ 72ರಷ್ಟು ಜನರು ಶೌಚಾಲಯಕ್ಕೆ ಹೋಗಲು ಎಚ್ಚರಗೊಳ್ಳುತ್ತಾರಂತೆ. ಇನ್ನೂ ಕೆಲವರು ಅರೆಬರೆ ನಿದ್ರೆ ಮಾಡುವುದು, ಹೊರಗಿನ ಅಡಚಣೆಗಳಿಂದ ಎಚ್ಚರಗೊಳ್ಳುವುದು, ತಮ್ಮ ವೈದ್ಯಕೀಯ ಪರಿಸ್ಥಿತಿ, ಕೌಟುಂಬಿಕ ಅಡಚಣೆಗಳು ಹಾಗೂ ಮೊಬೈಲ್ ಫೋನ್‌ನಿಂದ ಆಗುವ ಅಡಚಣೆಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಎಲ್ಲ ಅಂಶಗಳು ತಮ್ಮ ನಿದ್ರೆಯ ಅವಧಿ ಮೇಲೆ ಪರಿಣಾಮ ಬೀರುವುದಾಗಿ ತಿಳಿಸಿದ್ದಾರೆ.
ದೀರ್ಘಕಾಲದ ಆಯಾಸ ಕೂಡ ನಿದ್ರೆಯ ಮೇಲೆ ಪರಿಣಾಮ ಬೀರುತ್ತಿದೆ. ನಿದ್ರೆಯಿಂದ ವಂಚಿತರಾದ ಶೇ 38ರಷ್ಟು ಭಾರತೀಯರು ವಾರಾಂತ್ಯದಲ್ಲಿ ನಿದ್ರೆಯನ್ನು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಿನ ಶೇ 28ರಷ್ಟು ಮಂದಿ ಕೂಡ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎನ್ನಲಾಗಿದೆ. ಈ ಸಮೀಕ್ಷೆಯನ್ನು 348 ಜಿಲ್ಲೆಗಳಲ್ಲಿ ನಡೆಸಲಾಗಿದೆ. ಒಟ್ಟು 43,000 ಕ್ಕೂ ಹೆಚ್ಚು ಮಂದಿ ಇದರಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಶೇ 61ರಷ್ಟು ಪುರುಷರು ಹಾಗೂ ಶೇ 39ರಷ್ಟು ಮಹಿಳೆಯರು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.

ಅತಿಯಾಗಿ ನಿದ್ರಿಸುವ ಮೂಲಕ ಕಳೆದುಹೋದ ನಿದ್ರೆಯನ್ನು ಸರಿದೂಗಿಸಲು ಸಾಧ್ಯವಿಲ್ಲ. ನಿದ್ರೆ ಸ್ವಾಭಾವಿಕವಾಗಿ ದೈನಂದಿನ ಚಕ್ರದಲ್ಲಿ ಒಳಗೊಂಡಿರುತ್ತೆ. ನಿದ್ರೆಯ ಮೇಲೆ ಕೇಂದ್ರೀಕರಿಸುವ ಬದಲು, ನಿದ್ರೆ ನಿಮ್ಮನ್ನು ಮರುದಿನ ಉಲ್ಲಾಸದಿಂದ ಮತ್ತು ಎಚ್ಚರವಾಗಿಡುತ್ತದೆಯೇ ಎಂಬುದು ಮುಖ್ಯ. ನೀವು ಹಗಲಿನ ನಿದ್ರೆಯನ್ನು ಸಹ ಅನುಭವಿಸಬಾರದು ಎಂದು ತಜ್ಞ ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅನೇಕ ಜನರು ಕಳೆದುಕೊಂಡ ನಿದ್ರೆಯನ್ನು ಸರಿದೂಗಿಸಲು ಪ್ರಯತ್ನ ಪಡುತ್ತಾರೆ. ಆದರೆ, ಇದರಿಂದ ಲಾಭ ಎನ್ನುವುದು ಇನ್ನೂ ನಿಖರವಾಗಿಲ್ಲ. ಆದರೆ, ದೀರ್ಘಕಾಲದ ನಿದ್ರಾಹೀನತೆಯಿಂದ ಚೇತರಿಸಿಕೊಳ್ಳುವುದು ಬಹಳ ಕಷ್ಟ. ವಾರಾಂತ್ಯದಲ್ಲಿ ನಿದ್ರಾಹೀನತೆ ಎದುರಿಸುವುದು ಹಾನಿಕಾರಕ ಎಂದು ಎಲ್ಲಿಯೂ ಸಾಬೀತಾಗಿಲ್ಲ ಎಂದೂ ಹೇಳಿದ್ದಾರೆ. ಉತ್ತಮ ಆರೋಗ್ಯಕ್ಕೆ ಕನಿಷ್ಠ 8 ಗಂಟೆಗಳ ಕಾಲ ನಿದ್ರಿಸುವುದು ಒಳ್ಳೆಯದು ಎಂದು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications