ಮೇಲ್ವರ್ಗದ ಬಡವರಿಗೆ ಮೀಸಲಾತಿ: ಸುಪ್ರೀಂ ಮುಂದೆ 3 ಪ್ರಶ್ನೆಗಳು
ಸಂವಿಧಾನದ 103ನೇ ತಿದ್ದುಪಡಿ ಕಾಯ್ದೆ ಅಡಿ ಜನರಲ್ ಕೆಟಗರಿಗೆ ಸೇರಿರುವ, ಆದರೆ ಆರ್ಥಿಕವಾಗಿ ದುರ್ಬಲವಾಗಿರುವ ಜನರಿಗೆ ಶೇ. 10ರಷ್ಟು ಮೀಸಲಾತಿ ಕಲ್ಪಿಸಲು ಅವಕಾಶ ಮಾಡಿಕೊಡಲಾಗಿದೆ. ಈ ತಿದ್ದುಪಡಿ ಕಾಯ್ದೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ, ಮೀಸಲಾತಿ ವ್ಯವಸ್ಥೆಯ ಆಶಯಕ್ಕೆ ವಿರುದ್ಧವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದೀಗ ಸುಪ್ರೀಂಕೋರ್ಟ್ ಇಂದು ಮಂಗಳವಾರದಿಂದ ಈ ವಿಚಾರದ ಬಗ್ಗೆ ವಿಚಾರಣೆ ಆರಂಭಿಸುತ್ತಿದೆ.
ಸಂವಿಧಾನದ 103ನೇ ತಿದ್ದುಪಡಿ ಕಾಯ್ದೆಯಿಂದ ಸಂವಿಧಾನದ ಸ್ವರೂಪಕ್ಕೆ ಧಕ್ಕೆ ಆಗುತ್ತದಾ ಎಂಬುದನ್ನು ಸರ್ವೋಚ್ಚ ನ್ಯಾಯಾಲಯ ಪರಿಶೀಲನೆ ನಡೆಸಲಿದೆ. ಸಿಜೆಐ ಯು ಯು ಲಲಿತ್ ನೇತೃತ್ವದ ಸಂವಿಧಾನಿಕ ಪೀಠದಲ್ಲಿ ವಿಚಾರಣೆ ನಡೆಯಲಿದೆ. ಮುಖ್ಯನ್ಯಾಯಮೂರ್ತಿ ಜೊತೆಗೆ ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್, ದಿನೇಶ್ ಮಹೇಶ್ವರಿ, ಎಸ್ ಬಿ ಪರ್ದಿವಾಲ ಮತ್ತು ಬೇಲಾ ತ್ರಿವಾದಿ ಅವರು ಈ ಸರ್ವೋಚ್ಚ ನ್ಯಾಯಪೀಠದಲ್ಲಿದ್ದಾರೆ.
ಸಂವಿಧಾನ 103ನೇ ತಿದ್ದುಪಡಿಯನ್ನು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ 10 ಪರ್ಸೆಂಟ್ ಕೋಟಾವನ್ನು ವಿರೋಧಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. 2020ರ ಆಗಸ್ಟ್ ತಿಂಗಳಲ್ಲಿ ಸಂವಿಧಾನದ ಪೀಠಕ್ಕೆ ಅರ್ಜಿಯನ್ನು ವರ್ಗಾಯಿಸಲಾಯಿತು.
ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ನಾಲ್ಕು ವಿಚಾರಗಳ ಬಗ್ಗೆ ನ್ಯಾಯಪೀಠದ ಗಮನ ಸೆಳೆದರು. ಈ ಪೈಕಿ ಮೂರು ಪ್ರಮುಖ ವಿಚಾರಗಳ ಬಗ್ಗೆ ಪರಿಶೀಲನೆ ನಡೆಸಲು ನ್ಯಾಯಪೀಠ ಕಳೆದ ವಾರ ನಿರ್ಧರಿಸಿತು. ಅದರಂತೆ ಸೆ. 13ರಂದು ವಿಚಾರಣೆ ಆರಂಭಗೊಳ್ಳುತ್ತಿದೆ.

ಸುಪ್ರೀಂ ಮುಂದಿರುವ 3 ಪ್ರಶ್ನೆಗಳು
1) 103ನೇ ಸಂವಿಧಾನ ತಿದ್ದುಪಡಿಯಲ್ಲಿ ಆರ್ಥಿಕತೆ ಆಧಾರದಲ್ಲಿ ಮೀಸಲಾತಿ ಮೊದಲಾದ ವಿಶೇಷ ವ್ಯವಸ್ಥೆ ಮಾಡಲು ಸರಕಾರಕ್ಕೆ ಅವಕಾಶ ಇದೆಯಾ? ಇದು ಸಂವಿದಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗುತ್ತದಾ?
2) ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಏಡೆಡ್ ಅಲ್ಲದ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ಮೀಸಲಾತಿ ಕಲ್ಪಿಸಿದರೆ ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗುತ್ತದಾ?
3) ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು (ಎಸ್‌ಇಬಿಸಿ), ಇತರ ಹಿಂದುಳಿದ ವರ್ಗಗಳು (ಒಬಿಸಿ), ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳು (ಎಸ್‌ಸಿ ಎಸ್‌ಟಿ) ಈ ಸಮುದಾಯಗಳನ್ನು ಇಡಬ್ಲ್ಯುಎಸ್ ಮೀಸಲಾತಿ ಪರಿಧಿಯಿಂದ ಹೊರಗಿಡುವುದರಿಂದ ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗುತ್ತದಾ?

ಏನಿದು 103ನೇ ಸಂವಿಧಾನ ತಿದ್ದುಪಡಿ?
ಈಗಾಗಲೇ ಮೀಸಲಾತಿ ಪಡೆಯುತ್ತಿರುವ ಒಬಿಸಿ, ಎಸ್ಸಿ ಎಸ್ಟಿ ಮತ್ತಿತರು ಹೊರತುಪಡಿಸಿ ಉಳಿದ ಜನರಲ್ ಕೆಟಗರಿಗೆ ಸೇರಿದ ಸಮುದಾಯಗಳಲ್ಲಿನ ಆರ್ಥಿಕವಾಗಿ ಹಿಂದುಳಿದ ಜನರಿಗೆ ಶೇ. 10ರಷ್ಟು ಮೀಸಲಾತಿ ಒದಗಿಸಲು ಅನುವಾಗುವ ರೀತಿಯಲ್ಲಿ ಸಂವಿಧಾನದಲ್ಲಿ ತಿದ್ದುಪಡಿ ತರಲಾಯಿತು. ಆರ್ಟಿಕಲ್ 15 ಮತ್ತು 16ರಲ್ಲಿ ತುಸು ಮಾರ್ಪಾಡು ಮಾಡಲಾಯಿತು. ಆರ್ಟಿಕಲ್ 15(6) ಮತ್ತು ಆರ್ಟಿಕಲ್ 16(6) ಅನ್ನು ಸೇರಿಸಲಾಯಿತು.
ಆರ್ಟಿಕಲ್ 15 ಏನು?: ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರದಲ್ಲಿ ತಾರತ್ಮ ಮಾಡುವುದನ್ನು ಆರ್ಟಿಕಲ್ 15 ನಿರ್ಬಂಧಿಸುತ್ತದೆ.
ಆರ್ಟಿಕಲ್ 16 ಏನು?: ಸರಕಾರಿ ಉದ್ಯೋಗ ವಿಚಾರದಲ್ಲಿ ಎಲ್ಲರಿಗೂ ಸಮಾನ ಅವಕಾಶವನ್ನು ಸಂವಿಧಾನದ ಈ ವಿಧಿ ಖಚಿತಪಡಿಸುತ್ತದೆ.

ಯಾವ ಆಧಾರದಲ್ಲಿ ಇಡಬ್ಲ್ಯೂಎಸ್ ಮೀಸಲಾತಿ?
ನಿವೃತ್ತ ಮೇಜರ್ ಜನರಲ್ ಎಸ್ ಆರ್ ಸಿನ್ಹೋ ನೇತೃತ್ವದ ಆಯೋಗವೊಂದು ಮಾಡಿದ್ದ ಶಿಫಾರಸುಗಳ ಆಧಾರಲ್ಲಿ ಮೇಲ್ವರ್ಗದ ಬಡವರಿಗೆ ಮೀಸಲಾತಿ ಕಲ್ಪಿಸಲಾಗಿದೆ.
2005ರಲ್ಲಿ ಯುಪಿಎ ಸರಕಾರ ಇದ್ದಾಗ ಎಸ್ ಆರ್ ಸಿನ್ಹೋ ಆಯೋಗ ರಚಿಸಲಾಗಿದ್ದು. ಮೇಲ್ವರ್ಗದಲ್ಲಿ ಬಡತನ ಹೇಗಿದೆ ಎಂದು ಅಧ್ಯಯನ ನಡೆಸಲು ಈ ಆಯೋಗದ ರಚನೆಯಾಗಿತ್ತು. 2010ರಲ್ಲಿ ಈ ಆಯೋಗದ ವರದಿ ಸಲ್ಲಿಕೆ ಮಾಡಿತು.
ಬಡತನ ರೇಖೆಯಿಂದ ಕೆಳಗೆ ಇರುವ (ಬಿಪಿಎಲ್) ಜನರಲ್ ಕೆಟಗರಿಗೆ ಸೇರಿದ ಕುಟುಂಬಗಳು, ತೆರಿಗೆ ಮಿತಿಗಿಂತ ಕಡಿಮೆ ಆದಾಯ ಇರುವ ಕುಟುಂಬಗಳನ್ನು ಆರ್ಥಿಕವಾಗಿ ಹಿಂದುಳಿದ ವರ್ಗ (ಇಬಿಸಿ) ಎಂದು ಪರಿಗಣಿಸಬೇಕು ಎಂದು ಸಿನ್ಹೋ ಆಯೋಗ ತನ್ನ ವರದಿಯಲ್ಲಿ ಹೇಳಿತು.

ಕಾನೂನು ಅನ್ವಯ ಹೇಗೆ?
103ನೇ ಸಂವಿಧಾನ ತಿದ್ದುಪಡಿ ಆಧಾರದ ಮೇಲೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) 2019 ಜನವರಿ 31ರಂದು ಉದ್ಯೋಗ ಮತ್ತು ಶಿಕ್ಷಣ ಪ್ರವೇಶಕ್ಕೆ ಇಬ್ಲ್ಯುಎಸ್ ಮೀಸಲಾತಿ ಅಂಶವನ್ನು ಸೇರಿಸಿ ಅಧಿಸೂಚನೆ ಹೊರಡಿಸಿತು.
ಈ ಅಧಿಸೂಚನೆ ಪ್ರಕಾರ, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ನೀಡಲಾಗುವ ಮೀಸಲಾತಿ ವ್ಯವಸ್ಥೆಯ ಅಡಿಯಲ್ಲಿ ಬರದ ವ್ಯಕ್ತಿ ಮತ್ತು ವಾರ್ಷಿಕ 8 ಲಕ್ಷ ರೂ ಒಟ್ಟು ಆದಾಯ ಇರದ ಕುಟುಂಬಕ್ಕೆ ಸೇರದ ವ್ಯಕ್ತಿಗೆ ಮೀಸಲಾತಿ ಕಲ್ಪಿಸಬೇಕು ಎಂದಿದೆ. ಹಾಗೆಯೇ, ಕುಟುಂಬದ ಆದಾಯ ಕಡಿಮೆ ಇದ್ದರೂ ಕೆಲ ನಿರ್ದಿಷ್ಟ ಆಸ್ತಿಯನ್ನು ಹೊಂದಿರುವ ಕುಟುಂಬಗಳನ್ನು ಮೀಸಲಾತಿಯ ವ್ಯಾಪ್ತಿಯಿಂದ ಹೊರಗಿಟ್ಟಿತು. ಈ ನಿರ್ದಿಷ್ಟ ಆಸ್ತಿಯಲ್ಲಿ ಐದು ಎಕರೆಗಿಂತ ಹೆಚ್ಚು ಕೃಷಿ ಭೂಮಿ ಇದೆ.

ತಿದ್ದುಪಡಿಗೆ ಯಾಕೆ ವಿರೋಧ?
103ನೇ ತಿದ್ದುಪಡಿಯಿಂದ ಸಂವಿಧಾನದ ಮೂಲ ರಚನೆ ಅಥವಾ ಮೂಲ ಸ್ವರೂಪಕ್ಕೆ ಧಕ್ಕೆ ಆಗುತ್ತದೆ ಎಂಬುದು ವಿರೋಧಿಗಳ ಪ್ರಮುಖ ವಾದ. ಆದರೆ, ಸಂವಿಧಾನದ ಯಾವ ಮೂಲ ರಚನೆಗೆ ಧಕ್ಕೆ ಆಗುತ್ತದೆ ಎಂಬುದು ಪ್ರಶ್ನೆ.
ಸಂವಿಧಾನದಲ್ಲಿ ನಮ್ಮದು ಜಾತ್ಯತೀತ, ಸಮಾಜವಾದ ದೇಶ. ಇಲ್ಲಿ ಎಲ್ಲಾ ಜಾತಿ, ಭಾಷೆ, ಜನಾಂಗ, ವರ್ಗಗಳ ಮಧ್ಯೆ ತಾರತಮ್ಯ ಇರಬಾರದು ಎಂಬುದು ಸಂವಿಧಾನದ ಮೂಲ ಆಶಯ. ಪ್ರತಿಯೊಬ್ಬ ವ್ಯಕ್ತಿಯ ಸ್ವಾತಂತ್ರ್ಯವನ್ನು ಸಂವಿಧಾನ ರಕ್ಷಿಸುತ್ತದೆ. ಸಾಮಾಜಿಕವಾಗಿ ತುಳಿತಕ್ಕೊಳಕ್ಕಾದ ಗುಂಪುಗಳಿಗೆ ಸಂವಿಧಾನದಲ್ಲಿ ವಿಶೇಷ ರಕ್ಷಣೆಯಲ್ಲಿ ಕಲ್ಪಿಸಲಾಗಿದೆ. ಇಡಬ್ಲ್ಯುಎಸ್ ಮೀಸಲಾತಿ ಕಲ್ಪಿಸುವುದರಿಂದ ಸಂವಿಧಾನದ ಈ ಆಶಯಕ್ಕೆ ಧಕ್ಕೆ ಆಗುತ್ತದೆ ಎಂಬುದು ವಾದ.
ಇನ್ನೂ ಒಂದು ವಾದ ಎಂದರೆ ಮೀಸಲಾತಿ ಶೇ. 50ಕ್ಕೆ ಮಿತಿಗೊಳ್ಳಬೇಕು ಎಂದು 1992ರಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಇಡಬ್ಲ್ಯುಎಸ್‌ನ ಶೇ. 10 ಮೀಸಲಾತಿ ಸೇರಿದರೆ ಒಟ್ಟಾರೆ ಮೀಸಲಾತಿ ಶೇ. 60ಕ್ಕೆ ಹೆಚ್ಚಾಗುತ್ತದೆ. ಇದೂ ಕೂಡ ಕೋರ್ಟ್ ಆದೇಶದ ಉಲ್ಲಂಘನೆಯಾಗುತ್ತದೆ.
ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಸರಕಾರ ಬಲವಂತವಾಗಿ ತನ್ನ ಮೀಸಲಾತಿ ವ್ಯವಸ್ಥೆ ಹೇರುವ ಮೂಲಕ ಅವುಗಳ ಸ್ವತಂತ್ರ ಕಾರ್ಯನಿರ್ವಹಣೆಗೆ ಅಡ್ಡಿ ಪಡಿಸುತ್ತಿದೆ ಎಂಬುದು ಮತ್ತೊಂದು ವಾದ.

ಸರಕಾರದ ನಿಲುವೇನು?
ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸುವ ತನ್ನ ನಿಲುವನ್ನು ಸರಕಾರ ಸಮರ್ಥಿಸಿಕೊಳ್ಳುತ್ತಿದೆ. ಈ ಸಂಬಂಧ ಸಂವಿಧಾನದ 46ರ ವಿಧಿಯ ಅಂಶವನ್ನು ಉಲ್ಲೇಖಿಸಿದೆ. ಆರ್ಥಿಕವಾಗಿ ದುರ್ಬಲ ವರ್ಗಗಳ ಹಿತಾಸಕ್ತಿಯನ್ನು ರಕ್ಷಿಸುವುದು ಸರಕಾರದ ಕರ್ತವ್ಯ ಎಂದು ಆರ್ಟಿಕಲ್ 46 ಹೇಳುತ್ತದೆ.
ಇನ್ನು ಮೀಸಲಾತಿ ಶೇ. 50ಕ್ಕೆ ಮಿತಿಗೊಳ್ಳಬೇಕು ಎಂದು ಸುಪ್ರೀಂಕೋರ್ಟ್‌ನ 1992ರ ತೀರ್ಪಿಗೆ ಪ್ರತಿಯಾಗಿ ಕೇಂದ್ರ ಸರಕಾರ 2008ರ ಸುಪ್ರೀಂ ಕೋರ್ಟ್ ತೀರ್ಪನ್ನು ತನ್ನ ವಾದಕ್ಕೆ ಬಳಸಿಕೊಂಡಿದೆ. ಕೇಂದ್ರ ಸರಕಾರ ವರ್ಸಸ್ ಅಶೋಕ ಕುಮಾರ್ ಪ್ರಕರಣದಲ್ಲಿ ಒಬಿಸಿಗಳಿಗೆ ಶೇ. 27 ಮೀಸಲಾತಿ ಕೊಡುವ ನಿರ್ಧಾರಕ್ಕೆ ಕೋರ್ಟ್ ಸಮ್ಮತಿ ವ್ಯಕ್ತಪಡಿಸಿತ್ತು.
ಈ ವಾದ ಪ್ರತಿವಾದಗಳನ್ನು ಸುಪ್ರೀಂ ಕೋರ್ಟ್ ಇಂದಿನಿಂದ ಆಲಿಸುತ್ತಿದೆ. ತ್ವರಿತವಾಗಿ ವಿಚಾರಣೆಗಳು ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications