Sira Exit Poll Results; Btv ಸಮೀಕ್ಷೆಯಲ್ಲಿ ಯಾರಿಗೆ ಎಷ್ಟು ಮತ?
ಬೆಂಗಳೂರು, ನವೆಂಬರ್ 07: ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ವಿವಿಧ ಮತದಾನೋತ್ತರ ಸಮೀಕ್ಷೆಗಳು ಉಪ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ಹೇಳಿವೆ.
ನವೆಂಬರ್ 3ರಂದು ಶಿರಾ ಕ್ಷೇತ್ರದ ಉಪ ಚುನಾವಣೆ ನಡೆದಿತ್ತು. ಶೇ 84.54ರಷ್ಟು ಮತದಾನ ನಡೆದಿತ್ತು. ಇದುವರೆಗೂ ಶಿರಾದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿಲ್ಲ. ಆದ್ದರಿಂದ, ಬಿಜೆಪಿ ಜಯಗಳಿಸಿದರೆ ಐತಿಹಾಸಿಕ ದಾಖಲೆ ಆಗಲಿದೆ.
ಶಿರಾ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದ ಬಿಜೆಪಿ ಅಧಿಸೂಚನೆ ಪ್ರಕಟವಾಗುವ ಮೊದಲೇ ಸಿದ್ಧತೆಯನ್ನು ಆರಂಭಿಸಿತ್ತು. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ, ಬಿಜೆಪಿ ರಾಜ್ಯಾ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಕ್ಷೇತ್ರದಲ್ಲಿಯೇ ವಾಸ್ತವ್ಯ ಹೂಡಿ ಪ್ರಚಾರದ ಹೊಣೆ ಹೊತ್ತುಕೊಂಡಿದ್ದರು.

ಶನಿವಾರ ಕನ್ನಡದ ಬಿಟಿವಿ, ಪಬ್ಲಿಕ್ ಟಿವಿ, ಸಿ-ವೋಟರ್ ನಡೆಸಿದ ಚುನಾವಣೋತ್ತರ ಸಮೀಕ್ಷೆಗಳ ವರದಿಗಳು ಪ್ರಕಟವಾಗಿವೆ. ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿವೆ.
ನವೆಂಬರ್ 10ರಂದು ಶಿರಾ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಕಾಂಗ್ರೆಸ್‌ನಿಂದ ಟಿ. ಬಿ. ಜಯಚಂದ್ರ, ಜೆಡಿಎಸ್‌ನಿಂದ ಅಮ್ಮಾಜಮ್ಮ ಸೇರಿದಂತೆ 13 ಅಭ್ಯರ್ಥಿಗಳು ಶಿರಾದಲ್ಲಿ ಕಣದಲ್ಲಿದ್ದಾರೆ.
ಬಿಟಿವಿ ವಾಹಿನಿಯ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಶಿರಾದದಲ್ಲಿ ಬಿಜೆಪಿ ಶೇ 37.9ರಷ್ಟು ಮತಗಳನ್ನು ಪಡೆಯಲಿದೆ. ಕಾಂಗ್ರೆಸ್ 29.5 ರಷ್ಟು ಮತಗಳನ್ನು ಪಡೆಯಲಿದೆ. ಜೆಡಿಎಸ್ ಜೆಡಿಎಸ್ ಶೇ 23.2 ರಷ್ಟು ಮತ ಪಡೆದರೆ, ಇತರ ಅಭ್ಯರ್ಥಿಗಳು ಶೇ 9.4 ಮತಗಳನ್ನು ಪಡೆಯಲಿದ್ದಾರೆ.
ಶಿರಾ ಕ್ಷೇತ್ರದ ಚುನಾವಣೆ ಎಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಹೋರಾಟ ಎಂಬ ಮಾತಿದೆ. ಇದನ್ನು ಸಾಬೀತು ಮಾಡುವಂತೆ ಶಿರಾದಲ್ಲಿ ಒಮ್ಮೆಯೂ ಬಿಜೆಪಿ ಗೆದ್ದಿಲ್ಲ. ಅಲ್ಲದೇ ಕಳೆದ 3 ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು 25 ಸಾವಿರ ಮತಗಳನ್ನು ಪಡೆಯಲು ಸಹ ವಿಫಲರಾಗಿದ್ದಾರೆ.
ಆದರೆ, ಉಪ ಚುನಾವಣೆಯ ಚಿತ್ರಣವೇ ಬೇರೆಯಾಗಿದೆ. 2018ರಲ್ಲಿ ಶಿರಾದಲ್ಲಿ ಜೆಡಿಎಸ್‌ನ ಬಿ. ಸತ್ಯನಾರಾಯಣ ಗೆದ್ದಿದ್ದರು. ಅವರ ಅಕಾಲಿಕ ನಿಧನದಿಂದ ತೆರವಾದ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ನವೆಂಬರ್ 10ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications