• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿದ್ದರಾಮಯ್ಯ- ದೇವೇಗೌಡರ ಮಧ್ಯೆ ಹಸಿ ಹುಲ್ಲು ಹಾಕಿದರೂ ಧಗ್ಗೆನ್ನುವ 23 ವರ್ಷದ ಹಗೆತನ

|

ಬೆಂಗಳೂರು, ಆಗಸ್ಟ್ 23: ಕರ್ನಾಟಕದ ರಾಜಕಾರಣದ ಇತಿಹಾಸದಲ್ಲಿ ಬಹುಶಃ ಇವರಿಬ್ಬರ ನಡುವಿನ ಕಲಹ, ಹಗೆತನಗಳು ತನ್ನದೇ ಆದ ಕಾರಣಕ್ಕೆ ನೆನಪಿನಲ್ಲಿ ಉಳಿಯುವ ಎಲ್ಲಾ ಸಾಧ್ಯತೆಗಳಿವೆ. ಒಬ್ಬರು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಮತ್ತೊಬ್ಬರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಸಮಾಜವಾದಿ ಚಿಂತನೆಯ ರಾಜಕೀಯ ನೆಲೆಯಲ್ಲಿ ರಾಜಕಾರಣ ಆರಂಭಿಸಿ ಇವತ್ತು ವಿರುದ್ಧ ದಿಕ್ಕಿನಲ್ಲಿ 'ಗುರು- ಶಿಷ್ಯ' ಹೆಜ್ಜೆ ಹಾಕುತ್ತಿದ್ದಾರೆ. ಕಳೆದ ಎರಡು ದಿನಗಳ ಅಂತರದಲ್ಲಿ ಸಮ್ಮಿಶ್ರ ಸರಕಾರದ ಪತನ ಹಾಗೂ ಅದರ ಕಾರಣಗಳನ್ನು ಮುಂದಿಟ್ಟು ಪರಸ್ಪರ ಆರೋಪ ಪ್ರತ್ಯಾರೋಪಗಳಿಗೆ ಇಳಿದಿದ್ದಾರೆ. ಇದು ಇಬ್ಬರು ಹಿರಿಯ ರಾಜಕೀಯ ನಾಯಕರ ನಡುವಿನ ಹಳೇ ಕಾದಾಟದ ಹೊಸ ಅಧ್ಯಾಯ ಅಷ್ಟೆ.

ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿರುವ ಇಬ್ಬರು ಹಿರಿಯ ನಾಯಕರ ಮಾತುಗಳಲ್ಲಿ ಯಾರು ಸತ್ಯಕ್ಕೆ ಹತ್ತಿರವಾಗಿದ್ದಾರೆ? ಇಲ್ಲಿ, ಯಾರು ಸಾಚಾ ಎಂಬುದನ್ನು ನೋಡುವುದಕ್ಕೆ ಮುಂಚೆ ಗಮನಿಸಬೇಕಿರುವುದು ಸಿದ್ದರಾಮಯ್ಯ ಹಾಗೂ ದೇವೇಗೌಡರ ನಡುವಿನ ಮುನಿಸಿಗೆ ತನ್ನದೇ ಆದ ಇತಿಹಾಸ ಇದೆ ಎಂಬುದು.

ಮೈತ್ರಿ ಸರಕಾರ ಬೀಳಲು, ತಾವು- ತಮ್ಮ ಮೊಮ್ಮಗನ ಸೋಲಿಗೆ ಕಾರಣ ಹೊರಗಿಟ್ಟ ದೇವೇಗೌಡರು

ಜೆಡಿಎಸ್‌ನಲ್ಲಿದ್ದ ಸಿದ್ದರಾಮಯ್ಯ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಯಿತು. ನಂತರ ಅಹಿಂದ ಹೆಸರಿನಲ್ಲಿ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಸಮಯದಾಯವನ್ನು ಗುರಿಯಾಗಿಟ್ಟುಕೊಂಡು ಸಿದ್ದರಾಮಯ್ಯ ರಾಜಕಾರಣದಲ್ಲಿ ಪುನರ್ಜನ್ಮಕ್ಕೆ ಕೊನೆಯ ಸುತ್ತಿನ ಪ್ರಯತ್ನಕ್ಕೆ ಇಳಿದರು. ಹೀಗಿರುವಾಗಲೇ ಕಾಂಗ್ರೆಸ್ ಪಕ್ಷದ ಆಹ್ವಾನದ ಮೇರೆಗೆ ರಾಷ್ಟ್ರೀಯ ಪಕ್ಷವನ್ನು ಸೇರಿದರು. ನಂತರ ಎದುರಾಗಿದ್ದು ಚಾಮುಂಡೇಶ್ವರಿ ಉಪ ಚುನಾವಣೆ.

ಅದು ಚಾಮುಂಡೇಶ್ವರಿ ಹೋರಾಟ

ಅದು ಚಾಮುಂಡೇಶ್ವರಿ ಹೋರಾಟ

ಸಿದ್ದರಾಮಯ್ಯ ಪಾಲಿಗೆ 2006ರ ನವೆಂಬರ್‌ನಲ್ಲಿ ನಡೆದ ಚಾಮುಂಡೇಶ್ವರಿ ಉಪಚುನಾವಣೆ ರಾಜಕೀಯ ಬದುಕಿನ ನಿರ್ಧಾರಿತ ಹಣಾಹಣಿಯಾಗಿತ್ತು. ಅವತ್ತಿಗೆ ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿ- ಜೆಡಿಎಸ್ ಸಮ್ಮಿಶ್ರ ಸರಕಾರ ಕೂಡ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿತು. ಅದಕ್ಕೆ ಪ್ರಮುಖ ಕಾರಣ ದೇವೇಗೌಡರು ಎಂಬುದು ಸಿದ್ದರಾಮಯ್ಯ ಅವರಿಗೆ ಇವತ್ತಿಗೂ ಇರುವ ಕೋಪ. ಬಿಜೆಪಿಯಿಂದ ಅಭ್ಯರ್ಥಿಯನ್ನೇ ಕಣಕ್ಕಿಳಿಸದೆ, ಜೆಡಿಎಸ್‌ನಿಂದ ಶಿವಬಸವಯ್ಯರನ್ನು ಅಭ್ಯರ್ಥಿಯನ್ನಾಗಿ ಮುಂದಿಡಲಾಗಿತ್ತು. ಹೆಚ್ಚು ಕಡಿಮೆ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ರಾಜಕೀಯ ಭವಿಷ್ಯವನ್ನೇ ಕಿತ್ತುಕೊಳ್ಳುವ ಮಟ್ಟಿಗೆ ರಣಾಂಗಣ ಸಿದ್ಧವಾಗಿತ್ತು. ಅಂತಿಮವಾಗಿ ಫಲಿತಾಂಶ ಹೊರಬಂದಾಗ ಸಿದ್ದರಾಮಯ್ಯ ಕೇವಲ 277 ಮತಗಳ ಅಂತರದಲ್ಲಿ ಗೆಲ್ಲುವ ಮೂಲಕ ದೇವೇಗೌಡ ಕುಟುಂಬದ ಸೇಡನ್ನು ಗೆದ್ದಿದ್ದರು. ಕರ್ನಾಟಕ ರಾಜಕಾರಣದಲ್ಲಿ ಭವಿಷ್ಯವನ್ನೂ ಕಂಡುಕೊಂಡಿದ್ದರು. ಅವರ ಆಪ್ತರು ಹೇಳುವ ಪ್ರಕಾರ, ಸಿದ್ದರಾಮಯ್ಯ ಅವರಿಗೆ ದೇವೇಗೌಡ ಹಾಗೂ ಕುಟುಂಬದ ಬಗೆಗೆ ಇರುವ ದೊಡ್ಡ ಅಸಮಾಧಾನಕ್ಕೆ ಮೂಲ ಕಾರಣ ಈ ಉಪಚುನಾವಣೆ.

ದೇವೇಗೌಡರು ಸ್ವಜಾತಿಯವರನ್ನೇ ಬೆಳೆಸುವುದಿಲ್ಲ: ಸಿದ್ದರಾಮಯ್ಯ

ಅಧಿಕಾರ ರಾಜಕಾರಣ; ಪರಸ್ಪರ ಪಟ್ಟುಗಳು

ಅಧಿಕಾರ ರಾಜಕಾರಣ; ಪರಸ್ಪರ ಪಟ್ಟುಗಳು

ಚಾಮುಂಡೇಶ್ವರಿ ಚುನಾವಣೆ ನಂತರ ಸಿದ್ದರಾಮಯ್ಯ ಮತ್ತೊಮ್ಮೆ ರಾಜ್ಯ ರಾಜಕಾರಣದಲ್ಲಿ ಪುನರ್ಜನ್ಮ ಪಡೆದುಕೊಂಡರು. ಪ್ರತಿಪಕ್ಷದ ನಾಯಕರಾದರು. ಬಳ್ಳಾರಿ ಗಣಿ ಧಣಿಗಳ ವಿರುದ್ಧ ಸದನದೊಳಗೆ ಅಕ್ಷರಶಃ ತೊಡೆ ತಟ್ಟಿದರು. ಅಕ್ರಮ ಗಣಿಗಾರಿಕೆಯಿಂದ ಜರ್ಜರಿತಗೊಂಡಿದ್ದ ಬಳ್ಳಾರಿಗೆ ಪಾದಯಾತ್ರೆ ನಡೆಸಿದರು. ಒಬ್ಬ ವಿರೋಧ ಪಕ್ಷದ ನಾಯಕ ಮಾಡಬೇಕಾದ ಕೆಲಸವನ್ನು ಚುನಾವಣೆಗೆ ಇನ್ನೇನು ಕೆಲವೇ ದಿನಗಳಿರುವ ಹಂತದಲ್ಲಿ ಮಾಡಿ ಮುಗಿಸಿದರು. ಪರಿಣಾಮ 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತ ಪಡೆದು ಸರಕಾರ ರಚನೆ ಮಾಡಿತು. ಪಕ್ಷದ ಎಲ್ಲಾ ಹಿರಿಯ ನಾಯಕರನ್ನೂ ಪಕ್ಕಕ್ಕೆ ಸರಿಸಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಇದೇ ಅವಧಿಯಲ್ಲಿ ಜೆಡಿಎಸ್ ಬಂಡಾಯ ಶಾಸಕರನ್ನು ಪೋಷಿಸುವ ಕೆಲಸ ನಡೆಯಿತು. ದೇವೇಗೌಡರು ಕೂಡ ಸಿದ್ದರಾಮಯ್ಯ ಸರಕಾರದಿಂದ ದೂರವೇ ಉಳಿದರು. ಕೊನೆಗೆ ಅದೇನಾಯಿತೋ ಸಿದ್ದರಾಮಯ್ಯ ದೇವೇಗೌಡರ ಮನೆಗೆ ಹೋಗಿ ಮಾತುಕತೆ ನಡೆಸಿದರು. ಕಾವೇರಿ ನದಿ ನೀರಿನ ವಿವಾದ ಎದುರಾದಾಗ ರಾಜ್ಯದ ಹಿತವನ್ನು ಮುಂದಿಟ್ಟು ಇಬ್ಬರು ನಾಯಕರು ಪರಸ್ಪರ ಬೆರೆತು ಜನರಿಗೆ ವಿಶ್ವಾಸದ ಸಂದೇಶ ರವಾನಿಸಿದರು. ಆದರೆ ಆಳದಲ್ಲಿ ಹಳೆಯ ಕಹಿಗಳನ್ನು ಇಬ್ಬರು ಉಣ್ಣುತ್ತಲೇ ಇದ್ದರು.

ದೇವೇಗೌಡರು ಪ್ರಧಾನಿ ಹುದ್ದೆಗೆ ಏರಿ, ರಾಜ್ಯದಲ್ಲಿ ಜೆ. ಎಚ್, ಪಟೇಲ್ ರನ್ನು ಮುಖ್ಯಮಂತ್ರಿ ಮಾಡಿದರಲ್ಲಾ, ಆಗಲೇ ತಾವು ಆ ಹುದ್ದೆಯನ್ನು ನಿರೀಕ್ಷಿಸಿದ್ದವರು ಸಿದ್ದರಾಮಯ್ಯ. ಆಗ ತಮಗೆ ಅಧಿಕಾರ ಸಿಗದಂತೆ ಮಾಡಿದರು ದೇವೇಗೌಡ ಎಂಬುದು ಸಿದ್ದರಾಮಯ್ಯ ಮನಸಿನಲ್ಲಿ ಉಳಿದುಹೋಗಿದೆ.

ಲೋಕಸಭಾ ಚುನಾವಣೆ; ಮೈಸೂರಿನ ವೇದಿಕೆ

ಲೋಕಸಭಾ ಚುನಾವಣೆ; ಮೈಸೂರಿನ ವೇದಿಕೆ

ಹೀಗಿರುವಾಗಲೇ ಮತ್ತೊಂದು ವಿಧಾನಸಭೆ ಚುನಾವಣೆ ಎದುರಾಯಿತು. ಮೈಸೂರಿನಲ್ಲಿ ಬಹಿರಂಗ ಪ್ರಚಾರದ ನಡೆಸುತ್ತಿದ್ದ ವೇಳೆ ಅವತ್ತು ಎಐಸಿಸಿ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಜೆಡಿಎಸ್ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸುವ ಮೂಲಕ ಅಚ್ಚರಿ ಮೂಡಿಸಿದರು. ಜೆಡಿಎಸ್ ಭಾರತೀಯ ಜನತಾ ಪಕ್ಷದ 'ಬಿ-ಟೀಮ್', ಜೆಡಿಎಸ್ ಎಂದರೆ ಜನತಾದಳ- ಸಂಘಪರಿವಾರ ಎನ್ನುವ ಅನಿರೀಕ್ಷಿತ ಸಂದೇಶ ರವಾನಿಸಿದರು. ಅವತ್ತು ರಾಹುಲ್ ಬಾಯಲ್ಲಿ ಹೊರಬಿದ್ದ ಮಾತುಗಳ ಹಿಂದೆ ಇದ್ದ ನೆರಳು ಸಿದ್ದರಾಮಯ್ಯ ಅವರದ್ದು ಎಂಬುದು ವಿಶ್ಲೇಷಣೆಯಾಗಿತ್ತು. ಅಂತಿಮವಾಗಿ ಫಲಿತಾಂಶ ಬಂದಾಗ ಅತಂತ್ರ ವಿಧಾನಸಭೆ ನಿರ್ಮಾಣವಾಯಿತು. ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತಾದರೂ ಮ್ಯಾಜಿಕ್ ನಂಬರ್ ತಲುಪಲಿಲ್ಲ. ಯಥಾ ಪ್ರಕಾರ ಜೆಡಿಎಸ್ ಕಿಂಗ್ ಮೇಕರ್ ಸ್ಥಾನದಲ್ಲಿ ಬಂದು ನಿಂತಿತು.

ಅದೊಂದು ಚಿತ್ರ; ಕಲಹದ ಇನ್ನೊಂದು ಮುಖ

ಅದೊಂದು ಚಿತ್ರ; ಕಲಹದ ಇನ್ನೊಂದು ಮುಖ

ಅವತ್ತು ಮೇ. 15 2018. ರಾಜ್ಯ ವಿಧಾನಸಭೆಯ ಫಲಿತಾಂಶ ಇನ್ನೂ ಅಧಿಕೃತವಾಗಿ ಹೊರಬಿದ್ದಿರಲಿಲ್ಲ. ಮಧ್ಯಾಹ್ನ 12 ಗಂಟೆ ಹೊತ್ತಿಗೆಲ್ಲಾ ಅತಂತ್ರ ವಿಧಾನಸಭೆಯ ಮುನ್ಸೂಚನೆ ಸಿಕ್ಕಿಯಾಗಿತ್ತು. ಕಾಂಗ್ರೆಸ್ ಹೈಕಮಾಂಡ್, 'ಯಾವುದೇ ಷರತ್ತುಗಳಿಲ್ಲದೆ 'ಕಿಂಗ್ ಮೇಕರ್' ಸ್ಥಾನದಲ್ಲಿ ಬಂದು ನಿಂತ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡುವ ತೀರ್ಮಾನವನ್ನು ಪ್ರಕಟಿಸಿತ್ತು. ಕಾಂಗ್ರೆಸ್ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಝಾದ್ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಅವರನ್ನು ಕರೆದುಕೊಂಡು ರಾಜಭವನಕ್ಕೆ ಹೋದರು. ಈ ಸಮಯದಲ್ಲಿ ಸಿದ್ದರಾಮಯ್ಯ ಅತ್ಯಂತ ನಿರ್ಲಿಪ್ತ ಭಾವವನ್ನು ಹೊತ್ತು ದೂರವೇ ಕುಳಿತ ಚಿತ್ರವೊಂದು ಹೊರಬಿತ್ತು. ಅದು ಅವತ್ತಿಗೆ ಸಿದ್ದರಾಮಯ್ಯ ಅವರ ದುಗುಡ, ಅಸಹಾಯಕತೆ, ಅಂತರಂಗದ ಕಲಹಗಳನ್ನೆಲ್ಲಾ ಹಿಡಿದಿಟ್ಟಿತ್ತು ಆ ಚಿತ್ರ. ಯಾರನ್ನು ನಖಶಿಖಾಂತ ವಿರೋಧಿಸಿಕೊಂಡು ಬಂದರೋ, ಅವರನ್ನೇ ಅಪ್ಪಿಕೊಳ್ಳುವ ಅನಿರ್ವಾಯತೆ ಸೃಷ್ಟಿಯಾಗಿತ್ತು ಸಿದ್ದರಾಮಯ್ಯ ಅವರಿಗೆ.

ಶಾಂತಿವನದಲ್ಲಿ ಸೋರಿಕೆಯಾದ ಮಾತುಕತೆ

ಶಾಂತಿವನದಲ್ಲಿ ಸೋರಿಕೆಯಾದ ಮಾತುಕತೆ

ಒಲ್ಲದ ಮನಸ್ಸಿನಲ್ಲಿಯೇ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದ ನಂತರ ಸಿದ್ದರಾಮಯ್ಯ ಕೂಡ ಸುಮ್ಮನೆ ಕೂರಲಿಲ್ಲ. ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರಾದರು. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಇದ್ದ ಸರಕಾರದ ನಿವಾಸವನ್ನೂ ಅವರು ಖಾಲಿ ಮಾಡಲಿಲ್ಲ. ಇಡೀ ಸರಕಾರದಲ್ಲಿ ತಮ್ಮದೇ ಆದ ಪ್ರಭಾವಳಿಯೊಂದು ಉಳಿದುಕೊಳ್ಳುವಂತೆ ನೋಡಿಕೊಂಡರು. ಇದೇ ಸಮಯದಲ್ಲಿ ನೈಸರ್ಗಿಕ ಚಿಕಿತ್ಸೆ ನೆಪದಲ್ಲಿ ಧರ್ಮಸ್ಥಳದ ಶಾಂತಿವನವನ್ನು ಸೇರಿಕೊಂಡರು ಸಿದ್ದರಾಮಯ್ಯ. ಅಲ್ಲಿ ತಮ್ಮ ಆಪ್ತರ ಜತೆ, "ಲೋಕಸಭಾ ಚುನಾವಣೆ ಮುಗಿಯಲಿ" ಎಂದು ಭವಿಷ್ಯ ನುಡಿದ ಅವರ ಮಾತುಗಳು ಸೋರಿಕೆಯಾದವು. ದೇವೇಗೌಡರು ಕೂಡ ಲೋಕಸಭೆ ಚುನಾವಣೆ ನಂತರ ಚುನಾವಣೆಗೆ ಸಿದ್ಧರಾಗಿ ಎಂದು ಬಹಿರಂಗ ಭಾಷಣವನ್ನೂ ಮಾಡಿದರು. ಬಿಜೆಪಿಯನ್ನು ಅಧಿಕಾರದಿಂದ ಇಡುವ ಏಕೈಕ ರಾಷ್ಟ್ರೀಯ ಆಯಾಮ ಹೊಂದಿರುವ ಏಕೈಕ ಉದ್ದೇಶದೊಂದಿಗೆ ಒಂದಾದ ಜೋಡಿ ಯಾವುದೇ ಕಾರಣಕ್ಕೂ ಹಳೆಯ ವೈಮನಸ್ಸು ಮರೆಯಲು ಸಾಧ್ಯವೇ ಇಲ್ಲ ಎಂಬುದನ್ನು ಆಗಾಗ್ಗೆ ಸಾರ್ವಜನಿಕವಾಗಿ ತೋರಿಸಿಕೊಳ್ಳುತ್ತಲೇ ಬಂತು.

ಚುನಾವಣೆ ಸೋಲಿಗೆ ನನ್ನ ಮೇಲೆ ಗೂಬೆ ಕೂರಿಸಬೇಡಿ; ಸಿದ್ದರಾಮಯ್ಯ

ಸರಕಾರ ಪತನ; ವಿರೋಧ ಪಕ್ಷದ ನಾಯಕ ಸ್ಥಾನ

ಸರಕಾರ ಪತನ; ವಿರೋಧ ಪಕ್ಷದ ನಾಯಕ ಸ್ಥಾನ

ಸಿದ್ದರಾಮಯ್ಯ ಮತ್ತು ದೇವೇಗೌಡರು ತಮ್ಮ ಆಪ್ತರ ಬಳಿ ಹೇಳಿಕೊಂಡು ಬಂದಂತೆ ಲೋಕಸಭೆ ಚುನಾವಣೆ ನಂತರ ಸಮ್ಮಿಶ್ರ ಸರಕಾರ ಪತನವಾಯಿತು. ಆ ಮೂಲಕ ಕಳೆದ ವಿಧಾನಸಭೆಯಲ್ಲಿ ತಮ್ಮ ತವರಿನಲ್ಲಿಯೇ ಸೋತು ಹೋದ ಹೊಸ ಸೇಡಿನ ಜತೆಗೆ ಹಳೆಯ ಗಾಯಗಳಿಗೆಲ್ಲಾ ಸಿದ್ದರಾಮಯ್ಯ ತೃಪ್ತಿಯ ಮುಲಾಮು ಹಚ್ಚಿಕೊಂಡರು. ಇವೆಲ್ಲಾ ನಡೆದು ತಿಂಗಳ ಅಂತರದಲ್ಲಿ ಮೊದಲು ದೇವೇಗೌಡರೇ ಅಸಮಾಧಾನವನ್ನು ಹೊರಹಾಕಿದರು. ರಾಷ್ಟ್ರೀಯ ಪತ್ರಿಕೆಯೊಂದರ ಸಂದರ್ಶನವನ್ನು ಅದಕ್ಕೆ ವೇದಿಕೆಯನ್ನಾಗಿ ಮಾಡಿಕೊಂಡರು. ಪ್ರತಿ ಪಕ್ಷದ ನಾಯಕ ಸ್ಥಾನಕ್ಕಾಗಿ ಸಿದ್ದರಾಮಯ್ಯ ಸರಕಾರ ಬೀಳಿಸಿದರು ಎಂಬರ್ಥದಲ್ಲಿ ದೇವೇಗೌಡರು ಆರೋಪ ಮಾಡಿದರು. ಇದಕ್ಕೆ ಸಿದ್ದರಾಮಯ್ಯ ಶುಕ್ರವಾರ ಉತ್ತರ ನೀಡಿದ್ದಾರೆ. ಯಾರಾದರೂ ವಿರೋಧ ಪಕ್ಷದ ನಾಯಕ ಸ್ಥಾನಕ್ಕಾಗಿ ಸರಕಾರ ಬೀಳಿಸುತ್ತಾರಾ ಎಂದು ಪ್ರಶ್ನಿಸಿದ್ದಾರೆ.

ಒಬ್ಬರಲ್ಲಿ ಯಾರು ಸತ್ಯ ಹೇಳುತ್ತಿದ್ದಾರೆ? ಈ ಪ್ರಶ್ನೆಯನ್ನು ಇಷ್ಟೆಲ್ಲಾ ಹಿನ್ನೆಲೆಗಳ ಮೂಲಕ ನೋಡಿದರೆ, ಇಬ್ಬರೂ ಸತ್ಯ ಹೇಳುವುದಕ್ಕಿಂತ ತಮ್ಮ ತಮ್ಮ ನೆಲೆಗಳನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇರುವುದರಲ್ಲಿ ಸಿದ್ದರಾಮಯ್ಯ ಅವರ ಮಾತುಗಳೇ ಹೆಚ್ಚು ಒಪ್ಪಿತವಾಗಿವೆ. ಅಂತಿಮವಾಗಿ ಇವರಿಬ್ಬರು ಶುದ್ಧ ರಾಜಕಾರಣವನ್ನೇ ಮಾಡುತ್ತಿದ್ದರೂ ಜನರ ಎದುರಲ್ಲಿ ತಪ್ಪು ತಮ್ಮದಲ್ಲ ಎಂಬುದನ್ನು ತೋರಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾರೆ. ರಾಜಕಾರಣದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ ಎಂಬುದು ಸಾಮಾನ್ಯವಾಗಿ ಬಳಸುವ ಮಾತು. ಆದರೆ ಸಿದ್ದರಾಮಯ್ಯ ಮತ್ತು ದೇವೇಗೌಡರ ನಡೆಗಳನ್ನು ಗಮನಿಸಿದರೆ, 'ರಾಜಕೀಯ ಹಗೆತನವೇನಾದರೂ ವೈಯಕ್ತಿಕ ಮಟ್ಟಿಗೆ ಇಳಿದರೆ ಅದಕ್ಕೆ ಪರ್ಯಾಯವೇ ಇಲ್ಲ' ಎಂಬ ಹೊಸ ವಾಕ್ಯವನ್ನೂ ಸೇರಿಕೊಳ್ಳುವುದು ಸೂಕ್ತ ಎನ್ನಿಸುತ್ತದೆ.

English summary
Poltical war between former Prime Minister HD Deve Gowda and former Chief Minister Siddaramaiah is in the news again. Here is an analytical story on these rare political hostility of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X