ಹೆಣ್ಣು ಮಕ್ಕಳು ಸಾರಿಗೆ ಬಸ್‌ನ ಸೀಟ್‌ನಲ್ಲಿ ಕೂರುವುದು ಸರಿಯೋ? ತಪ್ಪೋ?
ಸುದ್ದಿಯ ಹೆಡ್‌ಲೈನ್‌ನಲ್ಲೇ ಒಂದು ಗೊಂದಲ ಇದೆ ಅಲ್ವಾ? ಹೌದು ಇದೊಂದು ಪ್ರಶ್ನೆಯೋ ಅಥವಾ ಗೊಂದಲವೋ ಗೊತ್ತಿಲ್ಲ? ಆದರೆ ಇದಕ್ಕೆ ಉತ್ತರ ಮಾತ್ರ ಇಲ್ಲ. ಸಾರಿಗೆ ಬಸ್‌ಗಳಲ್ಲಿ ಹೆಣ್ಣು ಮಕ್ಕಳು ಅಂದರೆ ಒಂದು ಮಧ್ಯ ವಯಸ್ಸಿನ ಹುಡುಗಿ, ಮಹಿಳೆ, ಒಟ್ಟಾರೆಯಾಗಿ ಮೂವತ್ತು ವರ್ಷಕ್ಕಿಂತ ಕಡಿಮೆ ಇರುವ ಯುವತಿಯರು ಬಸ್ಸಿನ ಸೀಟ್‌ನಲ್ಲಿ ಕೂರಬೇಕೋ ಬೇಡವೋ ಎನ್ನುವ ಪ್ರಶ್ನೆಯೊಂದಿದೆ. ಇದೆಂತಹ ಪ್ರಶ್ನೆ? ಪ್ರಶ್ನೆಯೇ ಅಸಮಂಜಸ, ತಲೆ ಬುಡ ಇಲ್ಲದೇ ಪ್ರಶ್ನೆ ಎಂದುಕೊಳ್ಳುವವರು ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ.
ಶಕ್ತಿ ಯೋಜನೆ ಬಂದ ಮೇಲಂತೂ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರ ಓಡಾಟ ಹೆಚ್ಚಾಗಿದೆ. ಯಾಕೆಂದರೆ ದುಡ್ಡು ಯಾರಿಗೂ ಸುಮ್ಮನೆ ಬರಲ್ಲ.. ಹೌದು ರಾಜ್ಯ ಸರ್ಕಾರ ಶಕ್ತಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿ ಎರಡು ವರ್ಷಗಳು ಸಮೀಪಿಸುತ್ತಿದೆ. ರಾಜ್ಯದ ಮಹಿಳೆಯರು ಇದನ್ನು ಸದುಪಯೋಗ ಪಡಿಸಿಕೊಂಡಿದ್ದು, ಯೋಜನೆ ಯಶಸ್ವಿಯಾಗಿದೆ. ಹೀಗಾಗಿ ಯಾವುದೇ ಸಾರಿಗೆ ಬಸ್ ನೋಡಿದರೂ ತುಂಬಿ ತುಳುಕುತ್ತಿರುತ್ತದೆ.

ಈ ತುಂಬಿ ತುಳುಕುವ ಸಾರಿಗೆ ಬಸ್ ಒಂಥರಾ ಯುದ್ಧ ಭೂಮಿಯಂತೆ. ಬಸ್ ಎಂಬ ಯುದ್ಧ ಭೂಮಿಯಲ್ಲಿ ಹೋರಾಡಿ ಸಿಂಹಾಸನದಂತೆ ಭಾವನೆ ಕೊಡುವ ಆಸನ ಅಂದರೆ ಬಸ್ ಸೀಟ್ ಪಡೆಯುವುದು ಎಷ್ಟು ಕಷ್ಟವೋ..? ಪಡೆದ ಆ ಸೀಟ್‌ಅನ್ನು ಇಳಿಯುವರೆಗೂ ನಮ್ಮ ಸಾಮ್ರಾಜ್ಯದಂತೆ ಕಾಪಾಡಿಕೊಳ್ಳುವುದು ಅಷ್ಟೇ ಕಷ್ಟ. ಬಸ್‌ನ ಸೀಟಿಗೆ ಯಾಕಿಷ್ಟೋಂದು ರೂಪಕ ಎನ್ನುಬೇಡಿ. ಕಷ್ಟಪಟ್ಟು ಸೀಟ್ ಹಿಡಿದು ಯಾರದೋ ಭಯಕ್ಕೆ ಬೇರೆಯವರಿಗೆ ಬಿಟ್ಟುಕೊಟ್ಟ ನೋವನ್ನು ಒಮ್ಮೆ ಅನುಭವಿಸಿರುವವರಿಗೆ ಮಾತ್ರ ಗೊತ್ತು.
ಬಹುಶಃ ಎಲ್ಲಾ ಹುಡುಗಿಯರಿಗೂ ಈ ಅನುಭವ ಒಂದು ಬಾರಿಯಾದರೂ ಆಗಿರುತ್ತದೆ. ಕೆಲವೊಬ್ಬರಿಗೆ ಬಸ್ ಹತ್ತಿದ ತಕ್ಷಣ ಸೀಟು ಸಿಗಬೇಕು. ಎಲ್ಲಿಯವರೆಗೂ ಅಂದರೆ ಕೊನೆಯಲ್ಲಿ ಎಲ್ಲೋ ತಿಂಗಳ ಹಿಂದೆ ಕಾಣಿಸಿಕೊಂಡ ಮಂಡಿನ ನೋವಿನ ನೆಪ ಹೇಳಿ ಕುಳಿತಿರುವವರನ್ನು ಎಬ್ಬಿಸಿ ತಾನು ಕೂರುವ ಮಟ್ಟಿಗೆ. ಪ್ರತಿ ದಿನ ಸಾರಿಗೆ ಬಸ್‌ನಲ್ಲಿ ತಿರುಗಾಡುವ ನಾನು ಇದನ್ನು ಈ ವಿಚಾರವನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದ್ದೇನೆ.
ವೃದ್ಧರು, ಗರ್ಭಿಣಿಯರು, ಮಗುವನ್ನು ಎತ್ತಿಕೊಂಡಿರುವ ತಾಯಿ, ರೋಗಿಗಳು ಹೀಗೆ ಬಸ್‌ನಲ್ಲಿ ನಿಲ್ಲಲು ಆಗದವರನ್ನು ಕಂಡಾಗ ಎಂತವರಾದರೂ ತಾವು ಕುಳಿತ ಸೀಟ್‌ಅನ್ನು ಬಿಟ್ಟುಕೊಡುತ್ತಾರೆ. ಆದರೆ ಸಾರಿಗೆ ಬಸ್‌ನಲ್ಲಿ ಒಂದು ಅಲಿಖಿತ ನಿಯಮವಿದೆ. ಈ ನಿಯಮದ ಸೃಷ್ಟಿಕರ್ತರು ಯಾರೋ ಗೊತ್ತಿಲ್ಲ. ಆದರೆ ಇದರಿಂದ ತೀರಾ ತೊಂದರೆಗೊಳಗಾದವರು ಮಾತ್ರ ನಮ್ಮಂತ ಮಧ್ಯ ವಯಸ್ಸಿನ ಹೆಣ್ಣು ಮಕ್ಕಳು. ಹಾಗಾದ್ರೆ ಆ ನಿಯಮ ಏನು ಅಂತಿರಾ ಮುಂದೆ ಓದಿ.

ಇತ್ತೀಚಿಗೆ ಒಂದು ಘಟನೆಯನ್ನು ಗಮನಿಸಿದ್ದೆ. ಮಹಿಳೆಯೊಬ್ಬರು ಅಂದರೆ ನೆಲವತ್ತು ವರ್ಷದ ಆಸುಪಾಸಿನವರಿರಬಹುದು. ಬಸ್ ಹತ್ತಿದ ತಕ್ಷಣವೇ ಮಹಿಳೆಯರ ಸೀಟ್‌ನಲ್ಲಿ ಆಗಷ್ಟೇ ಕುಳಿತಿದ್ದ ಹುಡುಗಿಯೊಬ್ಬರನ್ನು ಎಬ್ಬಿಸಿ ತಾನು ಕುಳಿತುಕೊಂಡರು. ತಪ್ಪೇನು ಅಂತಾ ನೀವು ಕೇಳಬಹುದು? ಹೌದು ತಪ್ಪೇನಿಲ್ಲಾ ಆದರೆ ಆಗಷ್ಟೇ ಅಬ್ಬಾ ಸೀಟ್ ಸಿಕ್ಕಿತು ಅಂತಾ ಕುಳಿತಿದ್ದ ಆ ಹುಡುಗಿ ಬಸ್‌ನಲ್ಲಿ ನಿಲ್ಲಲು ಸಾಧ್ಯವಾಗಿದ್ದ ಮಹಿಳೆಯಗೆ ಯಾಕೆ ಸೀಟು ಬಿಟ್ಟುಕೊಡಬೇಕು. ನೀವು ಅನೇಕ ಬಾರಿ ಗಮನಿಸಿರಬಹುದು..ಇದೇ ರೀತಿಯ ಅನೇಕ ಮಹಿಳೆಯರು ಕುಳಿತಿರುವ ಹೆಣ್ಣು ಮಕ್ಕಳನ್ನು ಬಲವಂತವಾಗಿ ಜೋರಾಗಿ ಗದರಿ, ನಾಲ್ಕು ಜನ ಆಕೆಯನ್ನೇ ನೋಡುವಂತೆ ಮಾಡಿ, ಕೊನೆಗೂ ಸೀಟ್ ಗಿಟ್ಟಿಸಿಕೊಳ್ಳುತ್ತಾರೆ. ಕೊನೆಯಲ್ಲಿ ನಿಂತ ಆ ಹುಡುಗಿ ಗಂಟೆಗಟ್ಟಲೆ ಬಸ್‌ನಲ್ಲಿ ನಿಂತು ತನ್ನ ನಿಲ್ದಾಣದಲ್ಲಿ ಇಳಿದು ಹೋಗಬೇಕು.
ಇಲ್ಲಿ ನನ್ನ ಪ್ರಶ್ನೆ ಅಥವಾ ವಾದ ಏನು ಅಂದರೆ ಯಾಕೆ ಆ ಹೆಣ್ಣು ಮಗಳಿಗೆ ಬಸ್‌ನ ಸೀಟ್‌ನಲ್ಲಿ ಕೂರಲು ಅರ್ಹತೆ ಇಲ್ಲವೇ? ಒಮ್ಮೆ ಯೋಚಿಸಿ ಆ ಹೆಣ್ಣು ಮಗಳಿಗೂ ಏನೋ ಆರೋಗ್ಯ ಸಮಸ್ಯೆ ಇರಬಹುದು, ಮುಟ್ಟಿನ ಸಮಯವಾಗಿರಬಹುದು, ತಿಂಗಳ ಗರ್ಭಿಣಿಯಾಗಿರಬಹುದು, ಕೆಲಸದ ಒತ್ತಡ ಇರಬಹುದು, ಬೆನ್ನು ನೋವಿರಬಹುದು, ಹೀಗೆ ಅವಳಲ್ಲಿಯೂ ತೋರಿಸಿಕೊಳ್ಳಲಾಗದ ಹೇಳಲಾಗದ ಅನೇಕ ಸಮಸ್ಯೆಗಳಿರಬಹುದು. ಬಸ್ ಏರಿದ ತಕ್ಷಣವೇ ಸೀಟು ಬೇಕು ಎಂದಿಕೊಳ್ಳುವ ಕೆಲವು ಮಹಿಳೆಯರು ಅರ್ಥ ಮಾಡಿಕೊಳ್ಳಿ.
ಬಸ್‌ನಲ್ಲಿ ಸೀಟಿಗಾಗಿ ಮಹಿಳೆಯರ ಮಾರಾಮಾರಿ, ಬಸ್‌ನಲ್ಲಿ ಸೀಟಿಗಾಗಿ ಚಪ್ಪಲಿಯಲ್ಲಿ ಬಡಿದಾಡಿಕೊಂಡ ಮಹಿಳೆಯರು, ಶಕ್ತಿ ಯೋಜನೆಯ ಪರಿಣಾಮ ಎಂದೆಲ್ಲಾ ಸುದ್ದಿ ಹಾಗೂ ವಿಡಿಯೋ ವೈರಲ್ ಆಗುತ್ತಲ್ಲಾ, ಈ ಜಗಳಗಳ ಹಿಂದಿನ ಕಾರಣ ಇದು ಕೂಡ ಆಗಿರಬಹುದು. ಹೀಗಾಗಿ ಒಮ್ಮೆ ಬಸ್ ಸೀಟ್‌ನಲ್ಲಿ ಕುಳಿತ ಹೆಣ್ಣು ಮಗಳನ್ನು ಯಾರೇ ಆಗಲಿ ಬಲವಂತವಾಗಿ ಎಬ್ಬಿಸಬೇಡಿ. ನಿಮ್ಮನ್ನು ನೋಡಿ ಕನಿಕರ ಬಂದರೆ ಅವಳೇ ಎದ್ದು ಸೀಟು ಬಿಟ್ಟುಕೊಡುತ್ತಾಳೆ ಯಾಕೆಂದರೆ ಅವಳು ಕೂಡ ಹೆಣ್ಣು.












Click it and Unblock the Notifications