ಛೀ..ಛೀ..ಎನ್ನಬೇಡಿ: ಚಳಿಗಾಲದ ಕೆಮ್ಮು-ಕಫ, ಶೀತಕ್ಕೆ ಕೆಂಪಿರುವೆ ಚಟ್ನಿ ಟ್ರೈ ಮಾಡಿ..!
ಅಡುಗೆಯಲ್ಲಿ ನಿಮಗೆ ಅತೀಯಾದ ಆಸಕ್ತಿ ಇದೆಯಾ. ದಿನಾಲೂ ಏನಾದರು ಡಿಫರೆಂಟ್ ಆಗಿ ಟ್ರೈ ಮಾಡುತ್ತಿದ್ದಾರಾ..? ಸೊಪ್ಪು, ತರಕಾರಿ, ಚಿಕನ್ ಮಟನ್ ಹೀಗೆ ಸಾಮಾನ್ಯವಾಗಿ ಮಾಡುವ ಅಡುಗೆ ಮಾಡಿ ಬೋರ್ ಆಗಿದ್ಯಾ..? ಹಾಗಿದ್ದರೆ ಈ ಸ್ಟೋರಿ ಓದಿ. ಬಾಯಿಗೆ ರುಚಿ ಆರೋಗ್ಯಕ್ಕೆ ಹಿತವಾದ ಅಡುಗೆ ರೆಸಿಪಿಯೊಂದನ್ನು ಇಲ್ಲಿ ನೀಡಲಾಗಿದೆ.
ಈ ಡಿಫರೆಂಟ್ ಆಹಾರ ಖಾದ್ಯವನ್ನು ಬಹುತೇಕರು ತಿಂದಿರಲು ಸಾಧ್ಯವೇ ಇಲ್ಲ. ಯಾಕೆಂದರೆ ಈ ಅಡುಗೆ ಅಥವಾ ಈ ಅಡುಗೆ ರೆಸಿಪಿಯನ್ನು ಈವರೆಗೂ ಟ್ರೈ ಮಾಡಿರುವವರು ಅತಿ ವಿರಳ. ಯಾಕೆಂದರೆ ಇದೊಂದು ಹಳೆಯ ಹಾಗೂ ಬುಡಕಟ್ಟು ಜನಾಂಗದ ಅಡುಗೆ ವಿಧಾನ. ಆದರೆ ಈ ಅಡುಗೆ ಆರೋಗ್ಯಕ್ಕೆ ಒಳ್ಳೆಯದು. ಇಷ್ಟು ಇಂಟ್ರಸ್ಟಿಂಗ್ ಆಗಿರುವ ಅಡುಗೆ ರೆಸಿಪಿಯೇ ಕೆಂಪಿರುವೆ ಚಟ್ನಿ.

ಹೌದು ಕೆಂಪಿರುವೆ ಚಟ್ನಿ ಇದೊಂದು ಮಲೆನಾಡಿನ ಹಾಗೂ ಬುಡಕಟ್ಟು ಪ್ರದೇಶದ ಖಾದ್ಯವಾಗಿದೆ. ಇದನ್ನು ಸಾಮಾನ್ಯ ಅಡುಗೆಯಂತೆ ಮನೆಯಲ್ಲಿ ತಯಾರಿಸುವುದು ಅತೀ ವಿರಳ. ಆದರೆ ಕೆಲವರು ಆರೋಗ್ಯ ದೃಷ್ಟಿಯಿಂದ ವರ್ಷಕೊಮ್ಮೆಯಾದರೂ ಇದನ್ನು ಮಾಡಿ ತಿನ್ನುತ್ತಾರೆ. ಮಲೆನಾಡು, ಕರಾವಳಿ ಭಾಗದಲ್ಲಿ ಈ ಕೆಂಪಿರುವೆಗಳು ಹೇರಳವಾಗಿ ಕಂಡು ಬರುತ್ತದೆ. ಹೀಗಾಗಿ ಇಲ್ಲಿನ ಕೆಲವೇ ಕೆಲವು ಬೆರಳೆಣಿಕೆ ಜನರು ಇದನ್ನು ತಯಾರಿಸಿ ತಿನ್ನುತ್ತಾರೆ.ಹಾಗಾದರೆ ಈ ಕೆಂಪಿರುವೆ ಚಟ್ನಿ ಮಾಡುವುದು ಹೇಗೆ ಎನ್ನುವ ವಿವರ ಇಲ್ಲಿದೆ ಓದಿ.
ಕೆಂಪಿರುವೆ ಚಟ್ನಿ ಮಾಡುವುದು ಹೇಗೆ..?
ಮಾವಿನ ಮರ, ಹಲಸಿನ ಮರ ಹೀಗೆ ಜನರಿಗೆ ಆತ್ಮೀಯವಾಗಿರುವ ಮರಗಳಲ್ಲೇ ಈ ಕೆಂಪಿರುವೆಗಳು ಹೇರಳವಾಗಿ ಕಂಡು ಬರುತ್ತದೆ. ಹೀಗಾಗಿ ಕೆಂಪಿರುವೆಗಳು ಇರುವ ಮರವನ್ನು ಹತ್ತಬೇಕು. ಕೆಂಪಿರುವೆಗಳ ಗೂಡುಗಳನ್ನು ಕಡಿದು ನಿಧಾನವಾಗಿ ಮರದಿಂದ ಕೆಳಗಿಸಬೇಕು. ಈ ಸಮಯದಲ್ಲಿ ಅವುಗಳು ಖಂಡಿತವಾಗಿಯೂ ಕಚ್ಚುತ್ತವೆ. ಬಳಿಕ ಕೆಂಪಿರುವೆ, ಅವುಗಳ ಮೊಟ್ಟೆ ಹಾಗೂ ಮರಿಗಳಿಗೆ ಉಪ್ಪು ಹಾಕಬೇಕು.
ಉಪ್ಪು ಹಾಕಿದ ಬಳಿಕ ಕೆಂಪಿರುವೆಗಳನ್ನು ನೀವು ಅಡುಗೆ ಮಾಡುವ ಸ್ಥಳಕ್ಕೆ ತೆಗೆದುಕೊಂಡು ಹೋಗಬಹುದು. ಬಳಿಕ ಅವುಗಳನ್ನು ಬಾಣಲೆಯಲ್ಲಿ ಅಥವಾ ಇತರ ಅಗಲವಾದ ಪಾತ್ರೆಯಲ್ಲಿಟ್ಟು ಬಿಸಿ ಮುಟ್ಟಿಸಿ. ಹುರಿದ ನಂತರ ಅವುಗಳನ್ನು ಜಾರಡಿಯಲ್ಲಿ ಆರಿಸಿ. ಸತ್ತ ಮೊಟ್ಟೆಗಳನ್ನು ಬೇರ್ಪಡಿಸಿ ಕೇವಲ ಕೆಂಪಿರುವೆಗಳನ್ನು ತೆಗೆದುಕೊಳ್ಳಿ ಬಳಿಕ ಮಿಕ್ಸಿ ಜಾರಿಗೆ ತೆಂಗಿನ ಕಾಯಿ ತುರಿ, ಶುಂಠಿ, ಮೆಣಸು, ಕರಿಬೇವು, ಸಾಸಿವೆ, ಜೀರಿಗೆ, ಅರಿಶಿನ, ಬೇಕಿದ್ದರೆ ಒಂದು ಗೋಲಿ ಗಾತ್ರದ ಹುಣಸೆಹಣ್ಣು ಸೇರಿಸಿ ರುಬ್ಬಿಕೊಂಡರೆ. ಕೆಂಪಿರುವೆ ಚಟ್ನಿ ಸಿದ್ಧವಾಗಿರುತ್ತದೆ.

ಬಿಸಿ ಬಿಸಿ ಅಕ್ಕಿ ರೊಟ್ಟಿ, ಇಡ್ಲಿ ಅಥವಾ ದೋಸೆ ಜೊತೆಗೆ ಈ ಕೆಂಪಿರುವೆ ಚಟ್ನಿಯನ್ನು ಸವಿಯಿರಿ. ಇಲ್ಲವೇ ಬಿಸಿ ಬಿಸಿ ಕುಚಲಕ್ಕಿ ಗಂಜಿಯ ಜೊತೆ ಈ ಚಟ್ನಿ ಮಸ್ತ್ ಕಾಂಬಿನೇಷನ್ ಆಗಿದೆ. ಸಾಮಾನ್ಯವಾಗಿ ಕೆಂಪಿರುವೆ ಚಟ್ನಿ ಎಂದರೆ ಮೂದಲಿಸುವವರೇ, ಛೀ..ಛೀ ಎನ್ನುವವರೇ ಹೆಚ್ಚು. ಆದರೆ ನೆನಪಿಡಿ ಈ ಕೆಂಪಿರುವೆ ಚಟ್ನಿಯಲ್ಲಿ ದೇಹಕ್ಕೆ ಶಕ್ತಿ ನೀಡುವ ಅಂಶಗಳು ಹೇರಳವಾಗಿದೆ.
ಕೆಂಪಿರುವೆಯಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ-21, ಫಾರ್ಮಿಕ್ ಆ್ಯಸಿಡ್, ಸತು ಮತ್ತು ಕಬ್ಬಿಣಾಂಶವಿದೆ. ಉಸಿರಾಟ ಸಮಸ್ಯೆ ಮತ್ತು ಜ್ವರ ನಿವಾರಕ, ಕಫ ಕರಗಿಸುವಿಕೆ, ಶೀತ ಕಡಿಮೆ ಮಾಡುವ ಗುಣವುಳ್ಳ ಕೆಂಪಿರುವೆ ಬುಡಕಟ್ಟು ಜನಾಂಗದ ಪ್ರಮುಖ ಆಹಾರವಾಗಿದೆ. ಹೀಗಾಗಿ ಬುಡಕಟ್ಟು ಜನಾಂಗ ಸಾಮಾನ್ಯ ಶೀತ ಜ್ವರಗಳಿಗೆ ವೈದ್ಯರ ಬಳಿ ಹೋಗದೇ ಮನೆ ಮದ್ದುಗಳಿಂದಲೇ ಚೇತರಿಸಿಕೊಳ್ಳುತ್ತಾರೆ. ಈ ಚಳಿಗಾಲದಲ್ಲಿ ಬೆನ್ನು ಬಿದ್ದಿರುವ ಕೆಮ್ಮ-ಕಫ ಕಡಿಮೆಯಾಗುತ್ತಿಲ್ಲವೆಂದರೆ ಒಮ್ಮೆ ಕೆಂಪಿರುವೆ ಚಟ್ನಿ ಟ್ರೈ ಮಾಡಬಹುದು.












Click it and Unblock the Notifications