ನಟ ಪ್ರಕಾಶ್ ರಾಜ್ ರಂಗಸಂಸ್ಥೆಯಲ್ಲಿ ವಿನೂತನ ಪ್ರಯತ್ನ: ಇಲ್ಲಿದೆ ಹೊಸ ವಿಚಾರ
ಮೈಸೂರು, ಡಿಸೆಂಬರ್ 14: ಬಹುಭಾಷಾ ಚಲನಚಿತ್ರ ನಟ ಪ್ರಕಾಶ್ ರಾಜ್ ಅವರ ರಂಗಸಂಸ್ಥೆಯಾದ ನಿರ್ದಿಗಂತದ ವತಿಯಿಂದ ಎರಡು ದಿನಗಳ ಕಾಲ ಶಾಲಾ ರಂಗಮಕ್ಕಳ ಹಬ್ಬ ನಡೆಯುತ್ತಿದೆ. ಇಲ್ಲಿ ಶಾಲಾರಂಗ ವಿಕಾಸ ಯೋಜನೆಯಲ್ಲಿ ತರಬೇತಿ ಹೊಂದಿದ ಮಕ್ಕಳು ನಾಟಕಗಳ ಪ್ರದರ್ಶನದ ಜೊತೆಗೆ ಹಾಡು, ನೃತ್ಯ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಪಂಚತಂತ್ರವನ್ನು ರಂಗದ ಮೇಲೆ ತರುವ ಆಲೋಚನೆಯನ್ನು ನಿರ್ದಿಗಂತ ಸಂಸ್ಥೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಸುಮಾರು ಏಳೆಂಟು ರಂಗ ನಿರ್ದೇಶಕರು 6 ತಿಂಗಳು ಕಾಲ ಸಂಶೋಧನೆ ನಡೆಸಿ, ನಾಟಕಕ್ಕೆ ಒಂದು ರೂಪವನ್ನು ಕೊಡಲಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಲೋಕದ ಜ್ಞಾನದ ಅರಿವು ಮೂಡಿಸುವಲ್ಲಿ ಈ ನಾಟಕಗಳು ಸಹಕಾರಿಯಾಗಬೇಕು ಎನ್ನುವ ಉದ್ದೇಶದಿಂದ ದೀರ್ಘವಾದ ನಾಟಕಗಳನ್ನು ಮಾಡದೇ ಬಿಡಿ-ಬಿಡಿಯಾಗಿ ನಾಟಕ ಮಾಡುವ ಯೋಜನೆ ಇದಾಗಿದೆ.

ಡಿಸೆಂಬರ್ 26 ರಿಂದ ಮೂರು ದಿನಗಳ ಕಾಲ ನಿರ್ದಿಗಂತದಲ್ಲಿ ದೇಶದ ವಿವಿಧ ಕಡೆಯ ವಿಷಯ ತಜ್ಞರು, ಮಕ್ಕಳ ಮನಶಾಸ್ತ್ರಜ್ಞರು, ರಂಗಭೂಮಿಗೆ ಸಂಬಂಧಿಸಿದವರು ಒಂದೆಡೆ ಕುಳಿತು ಮಕ್ಕಳಿಗೆ ರಂಗ ಶಿಕ್ಷಣ ಕುರಿತು ಚರ್ಚೆ-ಸಂವಾದ ನಡೆಸಲಿದ್ದಾರೆ. ಆ ಸಭೆಯಲ್ಲಿ ಹೊರಬರುವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ.
ಮಕ್ಕಳಿಗೆ ರಂಗ ಶಿಕ್ಷಣದ ಅವಶ್ಯಕತೆ ಬಹಳ ಇದೆ. ಇದರಿಂದ ಮಕ್ಕಳು ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಲು ಕಲಿಯುತ್ತಾರೆ. ವಿಜ್ಞಾನ-ಗಣಿತಗಳ ಬಗ್ಗೆ ಏಕಾಗ್ರತೆ ಮೂಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಕೀಳರಿಮೆ ಹೋಗುತ್ತದೆ. ನಾಲ್ಕು ಜನರ ಮುಂದೆ ನಿಲ್ಲುವ ಧೈರ್ಯ ಬರುತ್ತದೆ ಎಂಬುದು ನಟ ಪ್ರಕಾಶ್ ರಾಜ್ ಅವರ ಅಭಿಪ್ರಾಯವಾಗಿದೆ

6 ತಿಂಗಳ ಕಾಲ ಶಾಲೆಯಲ್ಲಿ ರಂಗಶಿಕ್ಷಣ
ಶಾಲೆಯಲ್ಲಿ ರಂಗ ಶಿಕ್ಷಣ ನೀಡಬೇಕು. ಸರ್ಕಾರ ಸುಮಾರು 65 ಜನ ರಂಗ ಶಿಕ್ಷಕರನ್ನು ನೇಮಕ ಮಾಡಿದೆ. ಆದರೆ ಅವರಿಗೆ ಕಲಿಸುವುದಕ್ಕೆ ಪಠ್ಯಕ್ರಮವಿಲ್ಲ. ಆ ಶಿಕ್ಷಕರನ್ನು ನಿರ್ದಿಗಂತ ಸಂಸ್ಥೆಗೆ ಕಳುಹಿಸಿಕೊಡಿ, ಅವರನ್ನು ತರಬೇತಿಗೊಳಿಸಿ, ಪಠ್ಯವನ್ನು ನೀಡುತ್ತೆವೆ ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಏಕೆಂದರೆ ಎಲ್ಲವನ್ನೂ ಸರ್ಕಾರ ಮಾಡಲು ಸಾಧ್ಯವಿಲ್ಲ ಸಮಾಜವೂ ಮಾಡಬೇಕು ಅವರು ಹೇಳಿದ್ದಾರೆ.
ಡಿ.15ರಂದು ಬೆಳಗ್ಗೆ 10ಕ್ಕೆ ಮೈಸೂರಿನ ಕಲಿಯುವ ಮನೆ ಮಕ್ಕಳಿಂದ ಬೆಳಕಿನ ಕಡೆಗೆ ನಾಟಕ, ಮಧ್ಯಾಹ್ನ 12ಕ್ಕೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಜಕ್ಕನಕಟ್ಟೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಮಕ್ಕಳಿಂದ ಪ್ರೀತಿಯ ಕಾಳು ನಾಟಕ ಪ್ರದರ್ಶನವಿರುತ್ತದೆ. ಮಧ್ಯಾಹ್ನ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.
ಶಾಲಾರಂಗ ವಿಕಾಸ ಎಂಬ ಪ್ರಾಯೋಗಿಕ ಯೋಜನೆಯಡಿಯಲ್ಲಿ ಐದು ಮಂದಿ ರಂಗ ಶಿಕ್ಷಕರನ್ನು ರಾಜ್ಯದ 5ವಸತಿ ಶಾಲೆಗಳಿಗೆ ನಿರ್ದಿಗಂತ ಸಂಸ್ಥೆಯಿಂದ ಕಳುಹಿಸಿ, ಅವರು 6 ತಿಂಗಳ ಕಾಲ ಶಾಲೆಯಲ್ಲಿ ಶಿಕ್ಷಣ ಮತ್ತು ರಂಗಭೂಮಿಯ ವಿಷಯಗಳ ಬಗ್ಗೆ ಮಕ್ಕಳಿಗೆ ಕಲಿಸುತ್ತಾ, ಅಲ್ಲಿ ಪ್ರತಿ ವಾರಾಂತ್ಯ ರಂಗ ಪ್ರದರ್ಶನ, ಬಣ್ಣದ ಹೆಜ್ಜೆ ಶಿಬಿರ, ಕಾವ್ಯರಂಗ ಮುಂತಾದ ಚಟುವಟಿಕೆಗಳನ್ನು ನಡೆಸಿದ್ದಾರೆ.
ಇವುಗಳ ಸಮಾರೋಪ ಸಮಾರಂಭವೇ ಶಾಲಾರಂಗ ಮಕ್ಕಳ ಹಬ್ಬವಾಗಿದೆ. 6 ತಿಂಗಳು ಕಲಿತಿರುವುದನ್ನು ಸುಮಾರು 150 ಮಕ್ಕಳು ರಂಗದ ಮೇಲೆ ಪ್ರದರ್ಶನ ಮಾಡಲಿದ್ದಾರೆ. ಶಾಲಾರಂಗ ಯೋಜನೆಯಲ್ಲಿ 10 ಜನರನ್ನೊಳಗೊಂಡ ನಮ್ಮ ರಂಗತಂಡವು ರಾಜ್ಯದ ಸುಮಾರು 110ಶಾಲೆಗಳಲ್ಲಿ 30 ನಿಮಿಷದ 3 ಕಿರುನಾಟಕಗಳು. ಗೊಂಬೆಯಾಟ, ಅಭಿನಯಗೀತೆಗಳು, ಕಥಾಭಿನಯಗಳು, ಮಕ್ಕಳ ಹಾಡುಗಳು ಇವೆಲ್ಲವನ್ನೂ ಪ್ರದರ್ಶಿಸಿದೆ. ಜೊತೆಗೆ ಮಕ್ಕಳಿಗೆ ನೆರವಾಗಬಲ್ಲ ರಂಗಾಟಿಕೆಗಳು, ಹಾಡುಗಳು, ಲೇಖನಗಳ ಹೊತ್ತಿಗೆಯನ್ನು ಆಯಾ ಶಾಲೆಗಳಿಗೆ ಕೊಡುಗೆಯಾಗಿ ನೀಡಿರುವುದು ವಿಶೇಷವಾಗಿದೆ.












Click it and Unblock the Notifications