ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಪೆಟ್ರೋಲ್ ಕದಿಯವ ಬೇಬಿ ಟ್ಯಾಂಕ್ ಕರಾಳ ದಂಧೆ ಬಯಲು!

|
Google Oneindia Kannada News

ಬೆಂಗಳೂರು, ಜ. 17: ಟ್ಯಾಂಕರ್ ಒಳಗೆ ರಹಸ್ಯವಾಗಿ ಮಿನಿ ಟ್ಯಾಂಕ್ ಬಚ್ಚಿಟ್ಟು ಪೆಟ್ರೋಲ್ ಮತ್ತು ಡೀಸೆಲ್ ಕದಿಯುವ 'ಬೇಬಿ ಟ್ಯಾಂಕ್ ಪೆಟ್ರೋಲ್ ಕದಿಯುವ ಮಾಫಿಯಾ' ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಕರಾಳ ದಂಧೆ ಪೆಟ್ರೋಲ್ ಬಂಕ್ ಮಾಲೀಕರನ್ನೇ ಬೆಚ್ಚಿ ಬೀಳಿಸಿದೆ. ಹಲವು ವರ್ಷಗಳಿಂದ ಬಂಕ್ ಮಾಲೀಕರು ಮೋಸ ಹೋಗಿರುವ ಅನುಮಾನ ವ್ಯಕ್ತವಾಗಿದೆ. ದೇವನಗುಂದಿ ಸಮೀಪ ಇರುವ ಟರ್ಮಿನಲ್‌ಗೆ ಹೋಗುವ ಪೆಟ್ರೋಲ್, ಡೀಸೆಲ್ ಸರಬರಾಜು ಮಾಡುವ 1200 ಟ್ಯಾಂಕರ್‌ಗಳಲ್ಲಿ ಶೇ. 80 ರಷ್ಟು ಟ್ಯಾಂಕರ್‌ಗಳು ಈ ದಂಧೆ ಮಾಡುತ್ತಿವೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಕರಾಳ ದಂಧೆ ಟ್ಯಾಂಕರ್ ವಿರುದ್ಧ ಕ್ರಿಮಿನಲ್ ಕೇಸು: ಈ ಬೇಬಿ ಟ್ಯಾಂಕ್ ಫಿಟ್ ಮಾಡಿ ಇಂಧನ ಕದಿಯವ ಟ್ಯಾಂಕರ್ ಮಾಲೀಕರ ವಿರುದ್ಧ ಅಳತೆ ಮತ್ತು ಮಾಪನ ಶಾಸ್ತ್ರ ಇಲಾಖೆ ಹೊಸಕೋಟೆ ತಾಲೂಕಿನ ಅನುಗೊಂಡಹಳ್ಳಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸು ದಾಖಲಿಸಿದೆ. ಕೇಸ್ ಸಂ. 03/2022 ಪ್ರಕರಣ ದಾಖಲಾಗಿದ್ದು, ಕಾನೂನು ಮಾಪನ ಶಾಸ್ತ್ರ ಇಲಾಖೆಯ ತನಿಖಾ ದಳದ ಅಧಿಕಾರಿ ಮಹಮ್ಮದ್ ಆಸಿಫ್ ದೂರು ನೀಡಿದ್ದಾರೆ.

ಅದರಂತೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ KA 01 AL 2468 ಸಂಖ್ಯೆ ಟ್ಯಾಂಕರ್ ಚಾಲಕ ಪ್ರವೀಣ್ ಕುಮಾರ್, ಶಿವು, ಚನ್ನರಾಯಪಟ್ಟನ ತಾಲೂಕಿನ ಅಗರಸರಳ್ಳಿ ನಿವಾಸಿ, ಟ್ಯಾಂಕರ್ ಒಡತಿ ಶೃತಿ, ಗುತ್ತಿಗೆದಾರ ಶಿವರಾಜು, ಬೇಬಿ ಟ್ಯಾಂಕ್ ಫಿಟ್ ಮಾಡಿದ ವೆಲ್ಡರ್ ವಿರುದ್ಧ ಕ್ರಿಮಿನಲ್ ದಾವೆ ಹೂಡಲಾಗಿದೆ. ಟ್ಯಾಂಕರ್ ಚಾಲಕ ಮತ್ತು ಕ್ಲೀನರ್ ಎಸ್ಕೇಪ್ ಆಗಿದ್ದಾರೆ. 2019 ರಿಂದಲೂ ಟ್ಯಾಂಕರ್‌ನೊಳಗೆ ಈ ಬೇಬಿ ಟ್ಯಾಂಕ್/ಕುಟ್ಟಿ ಟ್ಯಾಂಕ್ ಇಟ್ಟು ಪ್ರತಿ ಟ್ರಿಪ್ ಗೆ ಸುಮಾರು 50 ಲೀಟರ್ ಪೆಟ್ರೋಲ್ ಕದಿಯುತ್ತಿದ್ದ ಸ್ಫೋಟಕ ಸಂಗತಿ ಹೊರಬಿದ್ದಿದೆ. ಈ ದಂಧೆ ಕುರಿತ ಇಂಚಿಂಚು ವರದಿ ಒನ್ಇಂಡಿಯಾ ಕನ್ನಡ ಇಲ್ಲಿ ಪ್ರಸ್ತುತ ಪಡಿಸುತ್ತಿದೆ.

ಏನಿದು ಕರಾಳ ದಂಧೆ

ಏನಿದು ಕರಾಳ ದಂಧೆ

ಪೆಟ್ರೋಲ್ ಬಂಕ್ ಮಾಲೀಕರೊಬ್ಬರು ನೀಡಿದ ದೂರಿನ ಆಧಾರದ ಮೇಲೆ KA 01 AL 2468 ಸಂಖ್ಯೆಯ ಟ್ಯಾಂಕರ್ ನ್ನು ದೇವನಗುಂದಿಯ ಹೆಚ್‌ಪಿಸಿಎಲ್ ಟರ್ಮಿನಲ್‌ನಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಎಚ್‌ಪಿಸಿಎಲ್ ಅಧಿಕಾರಿಗಳ ಸಮ್ಮುಖದಲ್ಲಿ ಟ್ಯಾಂಕರ್ ಬಿಚ್ಚಿದಾಗ ಟ್ಯಾಂಕರ್ ಒಳಗೆ ಬೇಬಿ ಟ್ಯಂಕ್ ಇಟ್ಟಿರುವುದು ಬೆಳಕಿಗೆ ಬಂದಿದೆ.ಟ್ಯಾಂಕರ್ ನ ಕೊನೆ ಕಂಪಾರ್ಟ್ ಮೆಂಟ್‌ಗೆ ಬೇಬಿ ಟ್ಯಾಂಕ್ ಅಳವಡಿಸಿ ಪ್ರತಿ ಟ್ರಿಪ್‌ಗೂ 50 ಲೀಟರ್ ನಷ್ಟು ಇಂಧನ ಕದಿಯುತ್ತಿರುವ ಸಂಗತಿಯನ್ನು ಬಯಲಿಗೆ ಎಳೆದಿದ್ದಾರೆ. ಕಾನೂನು ಮಾಪನ ಶಾಸ್ತ್ರ ಇಲಾಖೆ ಮುಖ್ಯಸ್ಥರಾದ ಶ್ರೀರೂಪ ಅವರ ಮಾರ್ಗದರ್ಶನದಲ್ಲಿ ಭಾಸ್ಕರಾವ್ ಮತ್ತು ಆಸಿಫ್ ನೇತೃತ್ವದ ತನಿಖಾ ದಳ ಬೇಬಿ ಟ್ಯಾಂಕ್‌ನ್ನು ಪತ್ತೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಸಾಕ್ಷಾಧಾರಗಳನ್ನು ಸಂಗ್ರಹಿಸಿದ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳು ನೀಡಿದ ದೂರಿನ ಮೇಲೆ ಟ್ಯಾಂಕರ್ ಗುತ್ತಿಗೆದಾರ, ಚಾಲಕ, ಮಾಲೀಕರ ವಿರುದ್ಧ ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ವಿಪರ್ಯಾಸವೆಂದರೆ ಈ ಟ್ಯಾಂಕರ್ ಅಳತೆಯಲ್ಲಿ ಕ್ರಮಬದ್ಧವಾಗಿದೆ ಎಂದು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಹಿರಿಯ ಅಧಿಕಾರಿ ಕುಮಾರ್ ಕಾಲಿಬ್ರೇಷನ್ ಮಾಡಿ ದೃಢೀಕರಣ ನೀಡಿದ್ದರು. ಆದರಲ್ಲಿಯೇ ಈ ಅಕ್ರಮ ಬೆಳಕಿಗೆ ಬಂದಿರುವುದು ಕಾನೂನು ಮಾಪನ ಶಾಸ್ತ್ರ ಇಲಾಖೆಯನ್ನೇ ಅನುಮಾನದಿಂದ ನೋಡುವಂತಹ ಪರಿಸ್ಥಿತಿ ಎದುರಾಗಿದೆ.

ರಾಜ್ಯದಲ್ಲಿ ಬೇಬಿ ಟ್ಯಾಂಕ್ ದಂಧೆ ಬಯಲು

ರಾಜ್ಯದಲ್ಲಿ ಬೇಬಿ ಟ್ಯಾಂಕ್ ದಂಧೆ ಬಯಲು

ರಾಜ್ಯದಲ್ಲಿ ಮೊದಲಿನಿಂದಲೂ ಪೆಟ್ರೋಲ್ ಟ್ಯಾಂಕರ್‌ಗಳು ಇಂಧನ ಕದಿಯುವ ಕರಾಳ ದಂಧೆ ಮೊದಲಿನಿಂದಲೂ ನಡೆಯುತ್ತಿದೆ. ಅದು ಗೊತ್ತಿದ್ದೂ- ಗೊತ್ತಿಲ್ಲದಂತೆ ಪೊಲೀಸರು ಸುಮ್ಮನಾಗಿದ್ದಾರೆ. ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳಂತೂ ಅಂತದ್ದೇನೂ ಇಲ್ಲವೇ ಎಲ್ಲ ಎಂಬಂತೆ ನಡೆದುಕೊಳ್ಳುತ್ತಿದೆ. ಕೆಲ ದಿನಗಳ ಹಿಂದೆ ಪೊಲೀಸ್ ಕಾನ್‌ ಸ್ಟೇಬಲ್‌ಗೆ ಸೇರಿದ ಟ್ಯಾಂಕರ್‌ನಲ್ಲಿ ಬೇಬಿ ಟ್ಯಾಂಕ್ ಇಟ್ಟು ಇಂಧನ ಕದ್ದಿದ್ದ ಪ್ರಕರಣ ತಿಪಟೂರಿನಲ್ಲಿ ಬೆಳಕಿಗೆ ಬಂದಿತ್ತು. ಈ ಪ್ರಕರಣವನ್ನು ಹಾಸನ ಪೊಲೀಸರಿಗೆ ವರ್ಗಾವಣೆ ಮಾಡಲಾಯಿತು. ಪ್ರಕರಣ ತನಿಖೆ ನಡಸಿದಾಗ ಸುಮಾರು 34 ಕ್ಕೂ ಹೆಚ್ಚು ಪೆಟ್ರೋಲ್ ಟ್ಯಾಂಕರ್ ಗಳಲ್ಲಿ ಬೇಬಿ ಟ್ಯಾಂಕ್ ಇರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಪ್ರಕರಣದ ತನಿಖೆ ಆರಂಭವಾಗುತ್ತಿದ್ದಂತೆ ನೂರಾರು ಟ್ಯಾಂಕರ್‌ಗಳು ಬೇಬಿ ಟ್ಯಾಂಕ್ ತೆಗೆಸಿ ಹಾಕಿವೆ. ಈ ವೇಳೆ ಬೆಂಗಳೂರಿನಲ್ಲಿಯೇ ಬೇಬಿ ಟ್ಯಾಂಕ್ ದಂಧೆ ನಡೆಯುತ್ತಿರುವ ಮಾಹಿತಿ ಬೆಂಗಳೂರಿನ ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಆದರೆ, ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ. ಕೇವಲ ನೆಪಕ್ಕೆ ಕೆಲವು ಟ್ಯಾಂಕರ್ ಮತ್ತು ಬಂಕ್‌ಗಳನ್ನು ಪರಿಶೀಲಿಸಿ ಸುಮ್ಮನಾಗಿದ್ದರು. ಪೆಟ್ರೋಲ್ ಬಂಕ್ ಮಾಲೀಕರೇ ಖುದ್ದು ದೂರು ನೀಡಿ ಹದಿನಾಲ್ಕು ದಿನಗಳು ಕಳೆದ ಬಳಿಕ ಕುಟ್ಟಿ ಟ್ಯಾಂಕ್ ಮೂಲಕ ಪೆಟ್ರೋಲ್ ಕದ್ದು ಬಂಕ್ ಮಾಲೀಕರಿಗೆ ನಾಮ ಹಾಕುವ ಕರಾಳ ದಂಧೆ ಅನಾವರಣಗೊಂಡಿದೆ.

ಬೇಬಿ ಟ್ಯಾಂಕ್ ನಿಂದ ತಿಂಗಳ ಲಕ್ಷ ಲಕ್ಷ ವಹಿವಾಟು

ಬೇಬಿ ಟ್ಯಾಂಕ್ ನಿಂದ ತಿಂಗಳ ಲಕ್ಷ ಲಕ್ಷ ವಹಿವಾಟು

ಒಂದು ಟ್ಯಾಂಕರ್ ದಿನಕ್ಕೆ ಕನಿಷ್ಠ ಎರಡರಿಂದ ಮೂರು ಟ್ರಿಪ್ ಇಂಧನ ಪೂರೈಸುತ್ತದೆ. ಒಂದು ಟ್ರಿಪ್‌ಗೆ 50 ಲೀಟರ್ ಸರಾಸರಿ ಇಂಧನ ಕದ್ದರೆ ದಿನಕ್ಕೆ ನೂರು ಲೀಟರ್. ತಿಂಗಳಿಗೆ ಮೂರು ಸಾವಿರ ಲೀಟರ್ ಕದ್ದಂತಾಗುತ್ತದೆ. ಅಂದರೆ ತಿಂಗಳಿಗೆ ಹರಾಮಿ ದುಡಿಮೆ ಬರೋಬ್ಬರಿ 3 ಲಕ್ಷ ರೂ. ಒಂದು ವರ್ಷಕ್ಕೆ 36 ಲಕ್ಷ ರೂ. ಎರಡು ಹೊಸ ಟ್ಯಾಂಕರ್ ಖರೀದಿ ಮಾಡಬಹುದು. ಇನ್ನು ಬರುವ ಹರಾಮಿ ದುಡ್ಡಿನಲ್ಲಿ ಚಾಲಕನಿಗೆ ನಿರ್ವಾಹಕನಿಗೆ, ಗುತ್ತಿಗೆದಾರನಿಗೆ, ಪೊಲೀಸ್ ಸೇರಿದಂತೆ ಮಾಮೂಲಿ ವಿತರಣೆಯಾಗಿ ಕನಿಷ್ಠ ಒಂದು ಲಕ್ಷ ಉಳಿದರೂ ಸಾಕಲ್ಲವೇ? ಇನ್ನು ಬೆಂಗಳೂರಿನ ಹೊರ ವಲಯದ ದೇವನಗುಂದಿ ಬಳಿ ಇರುವ ಟರ್ಮಿನಲ್‌ಗೆ 1200 ಟ್ಯಾಂಕರ್ ಇಂಧನ ಪೂರೈಕೆ ಮಾಡುತ್ತಿವೆ. ಸುಮಾರು ಐದನೂರು ಟ್ಯಾಂಕರ್ ಈ ದಂಧೆಯಲ್ಲಿ ತೊಡಗಿವೆ ಎಂಬ ಆರೋಪ ಕೇಳಿ ಬರುತ್ತಿದೆ. ಹೀಗೆ ಲೆಕ್ಕ ಹಾಕಿ ಈ ದಂಧೆ ಎಷ್ಟು ದೊಡ್ಡ ಮಟ್ಟದ್ದು ಎಂದು ಅರ್ಥವಾಗುತ್ತದೆ ಅಲ್ಲವೇ? ಟ್ಯಾಂಕರ್ ಬಾಡಿಗೆಗಿಂತಲೂ ಬೇಬಿ ಟ್ಯಾಂಕ್ ಆದಾಯವೇ ಜಾಸ್ತಿ!

ರಾಜ್ಯದಲ್ಲಿ ಪೆಟ್ರೋಲ್ ಟ್ಯಾಂಕರ್‌ಗಳ ವಹಿವಾಟು

ರಾಜ್ಯದಲ್ಲಿ ಪೆಟ್ರೋಲ್ ಟ್ಯಾಂಕರ್‌ಗಳ ವಹಿವಾಟು

ರಾಜ್ಯದಲ್ಲಿ 12261 ಇಂಧನ ವಿತರರಿಸುವ ಬಂಕ್‌ಗಳಿವೆ. ಬೆಂಗಳೂರು ಮತ್ತು ಸುತ್ತಮುತ್ತ ನಗರದಲ್ಲಿ 2000 ಕ್ಕೂಹೆಚ್ಚು ಇಂಧನ ಬಂಕ್‌ಗಳಿವೆ. ದಿನಕ್ಕೆ ಸರಾಸರಿ 20 ರಿಂದ 30 ಸಾವಿರ ಲೀಟರ್ ಒಂದು ಬಂಕ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಹಾಸನದಲ್ಲಿರುವ ಟರ್ಮಿನಲ್ ಮೂಲಕ ಶಿವಮೊಗ್ಗ, ದಾವಣಗೆರೆ, ಉತ್ತರ ಕರ್ನಾಟಕಕ್ಕೆ ಪೂರೈಕೆಯಾಗುತ್ತದೆ. ಎಲ್ಲಾ ಬಂಕ್‌ಗಳು ಸ್ವಂತ ಟ್ಯಾಂಕರ್ ಹೊಂದಿಲ್ಲ. ಹೊಂದಿದ್ದರೂ ಟರ್ಮಿನಲ್‌ಗೆ ಹೋಗಿ ಬರಲು ದಿನಗಳೇ ಬೇಕು. ಹೀಗಾಗಿ ಅನಿವಾರ್ಯವಾಗಿ ಖಾಸಗಿ ಟ್ಯಾಂಕ್‌ಗಳನ್ನೇ ಎಲ್ಲಾ ಬಂಕ್ ಮಾಲೀಕರು ನಂಬಲೇಬೇಕು. ಇನ್ನು ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಗೆ ದೇವನಗುಂದಿ ಬಳಿ ಯಿರುವ ಐಒಸಿಎಲ್, ಎಚ್‌ಪಿಸಿಎಲ್, ಬಿಸಿಪಿಎಲ್ ಟರ್ಮಿನಲ್ ಗಳಿಂದ ಇಂಧನ ಪೂರೈಕೆ ಮಾಡಲಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಗುತ್ತಿಗೆದಾರರು ಬೇಬಿ ಟ್ಯಾಂಕ್ ಮೂಲಕ ಇಂಧನ ಕದ್ದು ಕೋಟಿ ಕೋಟಿ ದುಡಿಮೆ ಮಾಡಿ ರಾತ್ರೋ ರಾತ್ರಿ ಶ್ರೀಮಂತರಾಗುತ್ತಿದ್ದಾರೆ.

ಏನಿದು ಬೇಬಿ ಟ್ಯಾಂಕ್ ದಂಧೆ ಟೆಕ್ನಿಕ್

ಏನಿದು ಬೇಬಿ ಟ್ಯಾಂಕ್ ದಂಧೆ ಟೆಕ್ನಿಕ್

ಸಾಮಾನ್ಯವಾಗಿ ಇಂಧನ ಪೂರೈಕೆ ಮಾಡುವ ಟ್ಯಾಂಕರ್‌ಗೆ ಮೂರು ಕಂಪಾರ್ಟ್ ಮೆಂಟ್ ಇರುತ್ತವೆ. ಸರಾಸರಿ ಐದು ಸಾವಿರ ಲೀಟರ್ ತುಂಬುವ ಸಾಮರ್ಥ್ಯ ಇರುತ್ತವೆ. ಈ ಟ್ಯಾಂಕರ್‌ನ ಅಳತೆ ಬಗ್ಗೆ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳು ತಪಾಸಣೆ ಮಾಡಿ ಸೀಲ್ ಹಾಕುತ್ತಾರೆ. ಅದನ್ನೇ ಕಾನೂನು ಪರಿಭಾಷೆಯಲ್ಲಿ ಕಾಲಿಬ್ರೆಷನ್ ಅಂತಲೇ ಕರೆಯುತ್ತಾರೆ. ಇದನ್ನು ಸಮರ್ಥವಾಗಿ ಮಾಡಿ ಬಿಟ್ಟರೆ ಒಂದೇ ಒಂದು ಟ್ಯಾಂಕರ್ ಕೂಡ ಬೇಬಿ ಟ್ಯಾಂಕ್ ಮೂಲಕ ಕದಿಯಲು ಸಾಧ್ಯವಿಲ್ಲ. ಆದರೆ, ಅಧಿಕಾರಿಗಳು ಟ್ಯಾಂಕರ್‌ಗಳ ಬಳಿ ಹೋಗದೇ ಕಾಲಿಬ್ರೇಷನ್ ಮಾಡಿಕೊಡುವ ಹಂತಕ್ಕೆ ಇಳಿದಿದ್ದಾರೆ. ಹೀಗಾಗಿ ಟ್ಯಾಂಕರ್ ಒಳಗಿನ ಒಂದು ಕಂಪಾರ್ಟ್ ಮೆಂಟ್ ನೊಳಗೆ ಗ್ಯಾರೇಜ್‌ನ ವೆಲ್ಡರ್ ಸಹಾಯದ ಮೂಲಕ ಬೇಬಿ ಟ್ಯಾಂಕ್ ನಿರ್ಮಿಸುತ್ತಾರೆ. ಇಂಧನ ತುಂಬುವಾಗ ಈ ಬೇಬಿ ಟ್ಯಾಂಕ್ ತುಂಬುತ್ತದೆ. ಆದರೆ, ಇಂಧನವನ್ನು ಟ್ಯಾಂಕರ್ ಮೂಲಕ ಪೆಟ್ರೋಲ್ ಬಂಕ್‌ಗೆ ತುಂಬುವಾಗ ಈ ಬೇಬಿ ಟ್ಯಾಂಕ್ ಲಾಕ್ ಆಗಿರುತ್ತದೆ. ಹೀಗಾಗಿ ಸುಮಾರು 50 ಲೀಟರ್ ಇಂಧನ ಬೇಬಿ ಟ್ಯಾಂಕ್‌ನಲ್ಲಿ ತುಂಬಿರುತ್ತದೆ. ಇದನ್ನು ಹೊರ ತೆಗೆದು ಮಾರಾಟ ಮಾಡುವುದೇ ಬೇಬಿ ಟ್ಯಾಂಕ್ ಧಂಧೆ.

ಬೇಬಿ ಟ್ಯಾಂಕ್ ಕರಾಳ ದಂಧೆ ಹಿಂದೆ ಕಿಂಗ್‌ಪಿನ್

ಬೇಬಿ ಟ್ಯಾಂಕ್ ಕರಾಳ ದಂಧೆ ಹಿಂದೆ ಕಿಂಗ್‌ಪಿನ್

ದೇವನಗುಂದಿ ಟರ್ಮಿನಲ್‌ನಿಂದ ಬೆಂಗಳೂರು ಸುತ್ತಮುತ್ತ ಇಂಧನ ಪೂರೈಸುವ ಬಹುತೇಕ ಟ್ಯಾಂಕರ್‌ಗಳಲ್ಲಿ ಈ ಬೇಬಿ ಟ್ಯಾಂಕ್ ಅಳವಡಿಸಲಾಗಿದೆ ಎಂಬ ಆರೋಪವಿದೆ. ಇದರ ಹಿಂದೆ ಹಾಸನ ಮೂಲದ ಕಿಂಗ್ ಪಿನ್ ಇದ್ದಾನೆ ಎಂದು ಹೇಳಲಾಗುತ್ತಿದೆ. ಯಾವುದೇ ಟ್ಯಾಂಕರ್ ಸಿಕ್ಕಿಬಿದ್ದರೂ ಅದನ್ನು ಬಚಾವ್ ಮಾಡಿಸುವ ಜತೆಗೆ ಒಂದಷ್ಟು ಮಾಮೂಲಿ ಕೊಟ್ಟು ಎಲ್ಲವನ್ನು ಇತ್ಯರ್ಥ ಪಡಿಸುವ ಕಾಯಕದಲ್ಲಿ ತೊಡಗಿದ್ದಾನೆ. ಕಾನೂನು ಮಾಪನ ಶಾಸ್ತ್ರ ಇಲಾಖೆಯ ಕೆಲ ಅಧಿಕಾರಿಗಳೊಂದಿಗೆ ಉತ್ತಮ ಒಡನಾಟವಿದ್ದು, ದಂಧೆಗೆ ಯಾವುದೇ ನೆರಳು ಬೀಳುದಂತೆ ನಡೆಸಿಕೊಂಡು ಹೋಗುತ್ತಿದ್ದಾನೆ ಎಂಬ ಮಾಹಿತಿ ಒನ್ ಇಂಡಿಯಾ ಕನ್ನಡಕ್ಕೆ ಲಭ್ಯವಾಗಿದೆ.

ಕಾನೂನು ಮಾಪನ ಅಧಿಕಾರಿ ಕಾಲಿಬ್ರೇಷನ್ ಸೀಕ್ರೇಟ್

ಕಾನೂನು ಮಾಪನ ಅಧಿಕಾರಿ ಕಾಲಿಬ್ರೇಷನ್ ಸೀಕ್ರೇಟ್

ಇನ್ನು ಬೇಬಿ ಟ್ಯಾಂಕ್ ಮೂಲಕ ಪೆಟ್ರೋಲ್ ಕದಿಯುತ್ತಿದ್ದ ಟ್ಯಾಂಕರ್ ಸಾಕ್ಷ್ಯ ಸಮೇತ ಸಿಕ್ಕಿಬಿದ್ದಿದೆ. ಈ ಟ್ಯಾಂಕರ್ 2019 ರಲ್ಲಿಯೇ ಬೇಬಿ ಟ್ಯಾಂಕ್ ಫಿಟ್ ಮಾಡಿ ಪೆಟ್ರೋಲ್ ಕದಿಯುತ್ತಿದ್ದ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದೇ ಟ್ಯಾಂಕರ್ ನ ಅಳತೆ ಸತ್ಯಾಪನೆ ಮಾಡಿ (ಕ್ಯಾಲಿಬ್ರೇಷನ್ ಮಾಡಿ) ಸೀಲ್ ಗುದ್ದಿ ಸರ್ಟಿಫೈಡ್ ಮಾಡಿದ್ದವರು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿ ಕುಮಾರ್. ಈ ಪ್ರಕರಣದ ತನಿಖೆ ಹೆಸರಿನಲ್ಲಿ ಬೇಬಿ ಟ್ಯಾಂಕ್ ಹೊಂದಿದ್ದ ಟ್ಯಾಂಕರ್‌ಗೆ ಅಳವಡಿಸಿದ್ದ ಇಲಾಖೆಯ ಸೀಲು ಕ್ಯಾಲಿಬ್ರೇಷನ್‌ಗೆ ಸಂಬಂಧಿಸಿದ ಮಾಹಿತಿಯನ್ನು ಮರೆ ಮಾಚಲು ಸಾಕ್ಷ ನಾಶ ಮಾಡಿದರೇ ಎಂಬ ಗುಮಾನಿ ಎದ್ದಿದೆ. ಡಿ. 31 ರಂದು ಪೆಟ್ರೋಲ್ ಬಂಕ್ ಮಾಲೀಕರು ದೂರು ನೀಡಿದ್ದು. ಎಫ್ಐಆರ್ ಆಗಿರುವುದು ಜ. 10 ರ ನಂತರ ಅದೂ ತನಿಖಾ ದಳಕ್ಕೆ ಪ್ರಕರಣ ವಹಿಸಿದ ಬಳಿಕ. ಇದಕ್ಕೂ ಮೊದಲು ಪ್ರಕರಣ ತನಿಖೆ ನಡೆಸಿದ್ದ ಕುಮಾರ್ ಮಾಡಿದ್ದೇನು ಎಂಬ ಪ್ರಶ್ನೆಗಳು ಎದ್ದಿವೆ.

Recommended Video

Virat Kohli ನಿರ್ಧಾರದಿಂದ ಆಘಾತಗೊಂಡ Rohit Sharma ಹೇಳಿದ್ದೇನು? | Oneindia Kannada

English summary
Baby tank scam cheating petrol bunk owners found in Bengaluru. Legal Meteorological dept filed case in Anugondahalli police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X