ಯಾವ ಸಮಸ್ಯೆ ಹೊಂದಿರುವವರಿಗೆ ಕೊರೊನಾ ಲಸಿಕೆಯ ಅಡ್ಡಪರಿಣಾಮದ ಅಪಾಯವಿದೆ?
ನವದೆಹಲಿ, ಆಗಸ್ಟ್ 10: ಕೊರೊನಾ ಸೋಂಕಿನ ವಿರುದ್ಧ ಹೋರಾಟಕ್ಕೆ ಹಲವು ದೇಶಗಳಲ್ಲಿ ಭಿನ್ನ ಭಿನ್ನ ಕೊರೊನಾ ಲಸಿಕೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಆದರೆ ಈ ಕೊರೊನಾ ಲಸಿಕೆಗಳನ್ನು ಪಡೆದುಕೊಂಡ ನಂತರ ಕೆಲವರಲ್ಲಿ ಅಡ್ಡಪರಿಣಾಮಗಳು ಕಾಣಿಸಿಕೊಳ್ಳುತ್ತಿರುವ ವರದಿಯಾಗಿದೆ.
ಲಸಿಕೆ ಪಡೆದ ನಂತರ ಜ್ವರ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಕೆಲವರಲ್ಲಿ ಲಸಿಕೆ ಪಡೆದ ನಂತರ ಗಂಭೀರ ಅಡ್ಡಪರಿಣಾಮಗಳು ಕಾಣಿಸಿಕೊಂಡಿವೆ. ಲಸಿಕೆ ಪಡೆದ ನಂತರ ಜ್ವರ ಹೆಚ್ಚಾಗಿ ಆಸ್ಪತ್ರೆ ಸೇರಿದ ಪ್ರಕರಣಗಳೂ ಇವೆ. ಆದರೆ ಈ ಪ್ರಕರಣಗಳು ಅಪರೂಪ. ಹಾಗಿದ್ದರೆ ಲಸಿಕೆಯಿಂದ ಯಾರಲ್ಲಿ ಹೆಚ್ಚಾಗಿ ಈ ಅಡ್ಡಪರಿಣಾಮಗಳು ಉಂಟಾಗಬಹುದು? ಯಾವ ರೀತಿಯ ಆರೋಗ್ಯ ಸಮಸ್ಯೆ ಇದ್ದವರಿಗೆ ಕೊರೊನಾ ಲಸಿಕೆ ಪಡೆದ ನಂತರ ಅಡ್ಡಪರಿಣಾಮ ಉಂಟಾಗುವ ಅಪಾಯವಿದೆ?
ಯಾವ ರೀತಿಯ ಆರೋಗ್ಯ ಸಮಸ್ಯೆಯಿದ್ದವರು ಕೊರೊನಾ ಲಸಿಕೆ ಪಡೆಯುವ ಮುನ್ನ ವೈದ್ಯರ ಸಲಹೆ ಪಡೆಯುವ ಅಗತ್ಯವಿದೆ? ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ...

ಲಸಿಕೆ ಪಡೆದ ನಂತರ ಕಾಣಿಸಿಕೊಳ್ಳುವ ಸಾಮಾನ್ಯ ಬದಲಾವಣೆ
ಕೊರೊನಾ ಲಸಿಕೆ ಪಡೆದ ನಂತರ ದೇಹದಲ್ಲಿ ಉತ್ಪತ್ತಿಯಾಗುವ ಪ್ರತಿಕಾಯ ಪ್ರತಿಕ್ರಿಯೆ ಕೆಲವು ಬದಲಾವಣೆಗಳಿಗೆ ಕಾರಣವಾಗುತ್ತದೆ. ಲಸಿಕೆ ಪಡೆದ ನಂತರ ಲಸಿಕೆ ಪಡೆದ ಜಾಗದಲ್ಲಿ ಅತಿಯಾದ ನೋವು ಕಾಣಿಸಿಕೊಳ್ಳುವುದು ಸಹಜವಾಗಿದೆ. ನೋವು, ಜ್ವರ, ಮೈಕೈ ನೋವು, ಆಯಾಸ ಹಾಗೂ ಚಳಿ ಅನುಭವವಾಗುತ್ತದೆ. ಇವು ಸಾಮಾನ್ಯ ಲಕ್ಷಣಗಳಾಗಿವೆ. ಇನ್ನೂ ಕೆಲವರಿಗೆ ವಿಪರೀತ ತಲೆ ನೋವು ಕಾಣಿಸಿಕೊಳ್ಳುತ್ತದೆ. ಆದರೆ ಎರಡು ಮೂರು ದಿನಗಳಲ್ಲಿ ಈ ಪರಿಣಾಮಗಳು ಕ್ರಮೇಣ ತಗ್ಗುತ್ತವೆ.
ಕೊರೊನಾ ಮೂರನೇ ಅಲೆ ಕೆಟ್ಟ ತಿರುವು ಪಡೆಯಬಹುದು; ತಜ್ಞರ ಎಚ್ಚರಿಕೆ

ಕೆಲವರಲ್ಲಿ ಲಸಿಕೆ ಪಡೆದ ನಂತರ ಸಮಸ್ಯೆ ಗೋಚರ
ಸದ್ಯಕ್ಕೆ ಈಗಿರುವ ಎಲ್ಲಾ ಕೊರೊನಾ ಲಸಿಕೆಗಳು ಸುರಕ್ಷಿತವಾಗಿವೆ. ಅಡ್ಡಪರಿಣಾಮಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ಲಸಿಕೆಗಳನ್ನು ಅಭಿವೃದ್ಧಿಗೊಳಿಸಿ ಸುರಕ್ಷಿತ ಮಾನದಂಡಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಸೋಂಕಿನಿಂದ ದೇಹವನ್ನು ರಕ್ಷಿಸಿಕೊಳ್ಳಲು ಅನುವಾಗುವಂತೆ ಈ ಲಸಿಕೆಗಳನ್ನು ರೂಪಿಸಲಾಗಿದೆ. ಇದಾಗ್ಯೂ ಕೆಲವರಲ್ಲಿ ಕೆಲವು ಸಮಸ್ಯೆಗಳು ಗೋಚರಿಸುತ್ತಿವೆ.

ಅಲರ್ಜಿ ಸಮಸ್ಯೆಯಿದ್ದವರು ಸಲಹೆ ಪಡೆಯಬೇಕು
ಯಾವುದೇ ಲಸಿಕೆ ಪಡೆದ ನಂತರ ಅಲರ್ಜಿಯಾಗುವ ಸಮಸ್ಯೆ ಕೆಲವರಲ್ಲಿ ಇರುತ್ತದೆ. ಅಂಥವರು ಲಸಿಕೆ ಪಡೆದುಕೊಳ್ಳುವ ಮುನ್ನ ಜಾಗ್ರತೆ ವಹಿಸಬೇಕು. ಇನ್ನೂ ಕೆಲವರಿಗೆ ಕೆಲವು ಆಹಾರಗಳಿಂದ ಅಲರ್ಜಿ ಉಂಟಾಗುತ್ತದೆ. ಅಂಥವರು ಕೂಡ ಲಸಿಕೆ ಪಡೆಯುವ ಮುನ್ನ ಸಲಹೆ ಪಡೆಯಬೇಕಾಗುತ್ತದೆ. ಕೆಲವರಿಗೆ ಮೊಟ್ಟೆ ಎಂದರೆ ಅಲರ್ಜಿ. ಅಂಥವರಿಗೆ ಕೊರೊನಾ ಲಸಿಕೆ ಅಡ್ಡಪರಿಣಾಮ ತರಬಹುದು. ಹೀಗಾಗಿ ಅಲರ್ಜಿಯ ಹಿನ್ನೆಲೆ ಇರುವವರು ವೈದ್ಯಕೀಯ ಸಲಹೆ ಪಡೆದು ಲಸಿಕೆ ತೆಗೆದುಕೊಳ್ಳಬೇಕು.

ಬೇರೆ ಔಷಧ ಪಡೆದುಕೊಳ್ಳುತ್ತಿರುವವರಿಗೆ ಸಮಸ್ಯೆ
ಬೇರೆ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದು, ಆ ಸಮಸ್ಯೆಗಳಿಗೆ ಔಷಧಗಳನ್ನು ತೆಗೆದುಕೊಳ್ಳುತ್ತಿರುವವರು ಕೂಡ ವೈದ್ಯರ ಸಲಹೆ ಪಡೆದು ಕೊರೊನಾ ಲಸಿಕೆ ಪಡೆಯಬೇಕು. ವಯಸ್ಸು, ಲಿಂಗ ಹಾಗೂ ವಂಶವಾಹಿ ಅಂಶಗಳು ಕೂಡ ಕೊರೊನಾ ಲಸಿಕೆ ಅಡ್ಡಪರಿಣಾಮಕ್ಕೆ ಕಾರಣವಾಗಬಹುದು.

ರಕ್ತ ಹೆಪ್ಪುಗಟ್ಟುವ ಸಮಸ್ಯೆಯಿದ್ದವರಿಗೆ ಅಪಾಯ
ಕೆಲವರಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಇರುತ್ತದೆ. ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿರುತ್ತದೆ. ಅಂಥವರು ಕೊರೊನಾ ಲಸಿಕೆ ಪಡೆದರೆ ಸಮಸ್ಯೆಯಾಗುವ ಸಾಧ್ಯತೆಯಿರುತ್ತದೆ. ಕೆಲವು ಕೊರೊನಾ ಲಸಿಕೆಗಳು ರಕ್ತ ಹೆಪ್ಪುಗಟ್ಟುವ ಸಮಸ್ಯೆಗೆ ಕಾರಣವಾಗಿರುವುದಾಗಿಯೂ ವರದಿಯಾಗಿದೆ. ಹೀಗಾಗಿ ಲಸಿಕೆ ಪಡೆಯುವ ಮುನ್ನ ಈ ಸಮಸ್ಯೆಯಿದ್ದವರು ವೈದ್ಯಕೀಯ ಸಲಹೆ ಪಡೆಯಬೇಕು.












Click it and Unblock the Notifications