ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ವರ್ಷ ಇಡಿ ರೇಡ್ ಆದ ದೊಡ್ಡದೊಡ್ಡವರು; ಜಪ್ತಿಯಾದ ಹಣ ಸಿಕ್ಕಾಪಟ್ಟೆ

|
Google Oneindia Kannada News

ನವದೆಹಲಿ, ಆಗಸ್ಟ್ 4: ಕೇಂದ್ರ ಸರಕಾರ ತನ್ನ ವಿರೋಧಿಗಳನ್ನ ಹಣಿಯಲು ಇಡಿ, ಸಿಬಿಐನಂಥ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪಗಳ ಮಧ್ಯೆ ಈ ಸಂಸ್ಥೆಗಳ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಲೇ ಇದೆ.

ನರೇಂದ್ರ ಮೋದಿ ನೇತೃತ್ವದ ಸರಕಾರ 2014ರಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಇಡಿ, ಸಿಬಿಐ ಕಾರ್ಯಾಚರಣೆ ಬಹಳಷ್ಟು ನಡೆದಿದೆ. ಲಕ್ಷ ಕೋಟಿಗಟ್ಟಲೆ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಒಂದು ಅಂಕಿ ಅಂಶದ ಪ್ರಕಾರ, ಕಳೆದ ಎಂಟು ವರ್ಷಗಳಲ್ಲಿ ಜಾರಿ ನಿರ್ದೇಶನಾಲಯ ಮೂರು ಸಾವಿರಕ್ಕೂ ಹೆಚ್ಚು ದಾಳಿಗಳನ್ನು ಮಾಡಿದೆ. ಪಿಎಂಎಲ್‌ಎ ಅಡಿಯಲ್ಲಿ 99,356 ಕೋಟಿ ರೂ ಹಣವನ್ನು ಮುಟ್ಟುಗೋಲು ಹಾಕಿದೆ. 888 ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಫೈಲ್ ಮಾಡಿದೆ. 23 ಮಂದಿಗೆ ಶಿಕ್ಷೆಯಾಗಿದೆ.

ಖರ್ಗೆ ಹಾಜರಿ; ಯಂಗ್ ಇಂಡಿಯನ್ ಕಚೇರಿಯಲ್ಲಿ ಇಡಿ ಶೋಧಖರ್ಗೆ ಹಾಜರಿ; ಯಂಗ್ ಇಂಡಿಯನ್ ಕಚೇರಿಯಲ್ಲಿ ಇಡಿ ಶೋಧ

ಈ ವರ್ಷವೂ ಜಾರಿ ನಿರ್ದೇಶನಾಲಯ ಹಲವು ರೇಡ್ ಮಾಡಿದೆ. ಅದರಲ್ಲಿ ನ್ಯಾಷನಲ್ ಹೆರಾಲ್ಡ್ ಪ್ರಕರಣದ ಆರೋಪಿಗಳಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರೂ ಒಳಗೊಂಡಿದ್ದಾರೆ. ಮುಂಬೈನ ಪಾತ್ರ ಚಾಲ್ ಹಗರಣ, ಬಂಗಾಳದ ಶಿಕ್ಷಕ ನೇಮಕಾತಿ ಹಗರಣ ಇತ್ಯಾದಿ ಇನ್ನೂ ಅನೇಕ ಹೈಪ್ರೊಫೈಲ್ ಕೇಸ್‌ಗಳಲ್ಲಿ ಇಡಿ ಕಾರ್ಯಾಚರಣೆ ನಡೆದಿದೆ. ಇಂಥ ಕೆಲ 10 ಪ್ರಕರಣಗಳ ಬಗ್ಗೆ ಒಂದು ವಿವರ:

ಸೋನಿಯಾ, ರಾಹುಲ್ ಗಾಂಧಿ

ಸೋನಿಯಾ, ರಾಹುಲ್ ಗಾಂಧಿ

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಭಾಗಿಯಾಗಿರುವ ನ್ಯಾಷನಲ್ ಹೆರಾಲ್ಡ್ ಪ್ರಕರಣ ದೊಡ್ಡ ಸದ್ದು ಮಾಡುತ್ತಿದೆ. ಗಾಂಧಿ ಕುಟುಂಬದ ಒಡೆತನದ ಕಂಪನಿಯಿಂದ ಹಣದ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ದಾಖಲಾದ ಪ್ರಕರಣವನ್ನು ಇಡಿ ಅಧಿಕಾರಿಗಳು ಜಾಲಾಡುತ್ತಿದ್ದಾರೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹಾಗು ಇತರರನ್ನು ವಿಚಾರಣೆ ಮಾಡಲಾಗಿದೆ. ಇದೇ ಆಗಸ್ಟ್ 2ರಂದು ದೆಹಲಿಯ 12 ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ಮಾಡಿದರು. ದೆಹಲಿಯಲ್ಲಿರುವ ಯಂಗ್ ಇಂಡಿಯಾ ಸಂಸ್ಥೆಯ ಕಚೇರಿಗೆ ಇಡಿ ಸೀಲ್ ಹಾಕಿತು.

ಚನ್ನಿ ಅಪ್ತ ಹನಿ

ಚನ್ನಿ ಅಪ್ತ ಹನಿ

ಪಂಜಾಬ್‌ನ ಮಾಜಿ ಸಿಎಂ ಚರಣಜೀತ್ ಸಿಂಗ್ ಚನ್ನಿ ಸಂಬಂಧಿ ಭೂಪಿಂದರ್ ಸಿಂಗ್ ಹನಿ ಎಂಬುವವರು ಭಾಗಿಯಾಗಿರುವ ಪ್ರಕರಣ ಇದು. ಅಕ್ರಮ ಮರಳು ಗಣಿಗಾರಿಕೆ ಅರೋಪದ ಮೇಲೆ ಇಡಿ ಫೆಬ್ರವರಿ 3ರಂದು ಹನಿಯನ್ನು ಬಂಧಿಸಿತ್ತು. ಅವರ ಮನೆಯ ಮೇಲೆ ದಾಳಿ ಮಾಡಿದ್ದ ಇಡಿ 10 ಕೋಟಿ ರೂಗೂ ಹೆಚ್ಚು ಹಣ, 21 ಲಕ್ಷ ರೂಗೂ ಹೆಚ್ಚು ಮೌಲ್ದಯ ಒಡವೆ, 12 ಲಕ್ಷ ರೂ ಮೌಲ್ಯದ ರೋಲೆಕ್ಸ್ ವಾಚನ್ನು ವಶಪಡಿಸಿಕೊಂಡಿತ್ತು.

ಪೂಜಾ ಸಿಂಘಲ್

ಪೂಜಾ ಸಿಂಘಲ್

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಆಪ್ತೆಯಾಗಿದ್ದ ಐಎಎಸ್ ಅಧಿಕಾರಿ ಪೂಜಾ ಸಿಂಘಲ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿದ್ದಾರೆ. ಜಾರ್ಖಂಡ್‌ನ ಛಾತ್ರ, ಕುಂತಿ ಜಿಲ್ಲೆಗಳಲ್ಲಿ ನರೇಗಾ ಯೋಜನೆಯ ಹಣವನ್ನು ಲಪಟಾಯಿಸಿದ ಪ್ರಕರಣ ಇದಾಗಿದೆ. ಪೂಜಾ ಸಿಂಘಲ್ ಮತ್ತವರ ಚಾರ್ಟರ್ಡ್ ಅಕೌಂಟೆಂಟ್ ನಿವಾಸಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿ 20 ಕೋಟಿಗೂ ಹೆಚ್ಚು ನಗದು ಹಣವನ್ನು ಜಫ್ತಿ ಮಾಡಿದ್ದರು. ಮೇ ತಿಂಗಳಲ್ಲಿ ಪೂಜಾ ಅವರ ಬಂಧನವಾಯಿತು.

ಪೂಜಾ ಅವರು ಜಾರ್ಖಂಡ್‌ನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಜಾರ್ಖಂಡ್ ರಾಜ್ಯ ಖನಿಜ ಅಭಿವೃದ್ಧಿ ನಿಗಮ ಸಂಸ್ಥೆಯ ನಿರ್ವಾಹಕ ನಿರ್ದೇಶಕರಾಗಿದ್ದರು. ಅವರ ತಂದೆ ಅಭಿಷೇಕ್ ಝಾ ರಾಂಚಿಯಲ್ಲಿ ಒಂದು ಆಸ್ಪತ್ರೆಯ ಮಾಲೀಕರೂ ಹೌದು. ಇಡಿ ಅಧಿಕಾರಿಗಳು ಆ ಆಸ್ಪತ್ರೆ ಮೇಲೂ ದಾಳಿ ಮಾಡಿದ್ದರು.

ಪಾರ್ಥ ಚಟರ್ಜಿ

ಪಾರ್ಥ ಚಟರ್ಜಿ

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರ ಆಪ್ತರಾಗಿದ್ದ ಪಾರ್ಥ ಚಟರ್ಜಿ ಹೆಸರು ಬಂದಿರುವ ಬಹುದೊಡ್ಡ ಹಗರಣ ಇದು. ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಎಸಗಲಾಗಿರುವುದು ಕಂಡುಬಂದಿದೆ. ಮಾಜಿ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಮನೆಯಲ್ಲಿ ಇಡಿ ಅಧಿಕಾರಿಗಳಿಗೆ 21 ಕೋಟಿ ರೂ ಹಣ ಮತ್ತು ಚಿನ್ನಾಭರಣ ಸಿಕ್ಕಿತ್ತು. ಅದಾದ ಬಳಿಕ ಪಾರ್ಥ ಚಟರ್ಜಿಯ ಬಂಧನವಾಗಿತ್ತು.

ಸಿಎಂ ಮಮತಾ ಬ್ಯಾನರ್ಜಿ ಕೂಡಲೇ ಕ್ರಮ ಕೈಗೊಂಡು ಪಾರ್ಥ ಚಟರ್ಜಿಯನ್ನು ಸಂಪುಟದಿಂದ ಕೈಬಿಟ್ಟರು ಮತ್ತು ಪಕ್ಷದಿಂದಲೇ ಅವರನ್ನು ಉಚ್ಛಾಟಿಸಲಾಯಿತು. ಈಗಲೂ ಈ ಪ್ರಕರಣದಲ್ಲಿ ಪಾರ್ಥ ಚಟರ್ಜಿ, ಅರ್ಪಿತಾ ಮುಖರ್ಜಿಗೆ ಸಂಬಂಧಿಸಿದ ಸ್ಥಳಗಳನ್ನು ಗುರುತಿಸಿ ಇಡಿ ದಾಳಿ ಮಾಡುವ ಕೆಲಸ ನಡೆಯುತ್ತಿದೆ.

ಸತ್ಯೇಂದರ್ ಜೈನ್

ಸತ್ಯೇಂದರ್ ಜೈನ್

ಐದು ವರ್ಷಗಳ ಹಿಂದಿನ ಅಕ್ರಮ ಆಸ್ತಿ ಪ್ರಕರಣದಲ್ಲಿ ದೆಹಲಿ ಎಎಪಿ ಮುಖಂಡ ಹಾಗು ಸಚಿವ ಸತ್ಯೇಂದರ್ ಜೈನ್ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿತ್ತು. ಈ ವರ್ಷ ಇದೇ ಮೇ ತಿಂಗಳಲ್ಲಿ ಜಾರಿ ನಿರ್ದೇಶನಾಲಯವು ಸತ್ಯೇಂದರ್ ಜೈನ್‌ರನ್ನು ಬಂಧಿಸಿದೆ. ಜೈನ್ ಮನೆಯಿಂದ ಇಡಿ ಅಧಿಕಾರಿಗಳು ಹಲವು ದಾಖಲೆಗಳನ್ನು ಜಫ್ತಿ ಮಾಡಿಕೊಂಡಿದೆ. ಜೈನ್ ಹಾಗು ಅವರ ಕೆಲ ಆಪ್ತರ ಮನೆಯಲ್ಲಿ 2 ಕೋಟಿ ರೂಗೂ ಹೆಚ್ಚು ಹಣ ಮತ್ತು 1.8 ಕಿಲೋ ಚಿನ್ನ ಸಿಕ್ಕಿದೆ.

ಪಿ ಚಿದಂಬರಂ, ಕಾರ್ತಿ

ಪಿ ಚಿದಂಬರಂ, ಕಾರ್ತಿ

ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರು ಚೀನೀ ವೀಸಾ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಸಿಬಿಐ ಇದೇ ಮೇ ತಿಂಗಳಲ್ಲಿ ಪಿ ಚಿದಂಬರಂ ಮತ್ತು ಕಾರ್ತಿಗೆ ಸಂಬಂಧಿಸಿದ ಹಲವು ಸ್ಥಳಗಳ ಮೇಲೆ ದಾಳಿ ಮಾಡಿತ್ತು. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವೂ ಕೇಸ್ ದಾಖಲಿಸಿದೆ.

ಪಂಜಾಬ್‌ನಲ್ಲಿ ವಿದ್ಯುತ್ ಉತ್ಪಾದನೆ ಘಟಕದಲ್ಲಿ ವೇದಾಂತ ಗ್ರೂಪ್‌ನ ಕಂಪನಿ ಜೊತೆ ಚೀನಾದ ಒಂದು ಕಂಪನಿ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಚೀನೀ ಕಂಪನಿಯಿಂದ 300 ಚೀನೀ ರಾಷ್ಟ್ರೀಯರಿಗೆ ವೀಸಾ ನೀಡಲು ಕಾರ್ತಿ ಚಿದಂಬರಂ ಅವರು ವೇದಾಂತ ಗ್ರೂಪ್‌ನಿಂದ 50 ಲಕ್ಷ ರೂ ಲಂಚ ಪಡೆದರೆಂಬುದು ಆರೋಪ.

ಪಾತ್ರ ಚಾಲ್ ಹಗರಣ

ಪಾತ್ರ ಚಾಲ್ ಹಗರಣ

ಮುಂಬೈನ ಪಾತ್ರ ಚಾಲ್ ಸೊಸೈಟಿ ಸ್ಥಳದ ಮರು ಅಭಿವೃದ್ಧಿಯಲ್ಲಿ ಅಕ್ರಮ ಮತ್ತು ವಂಚನೆ ಎಸಗಿದ ಪ್ರಕರಣ ಇದಾಗಿದೆ. ಶಿವಸೇನಾ ಸಂಸದ ಸಂಜಯ್ ರಾವತ್ ಈ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಇದೆ. ಅವರ ಮನೆಯಿಂದ ಇಡಿ ಅಧಿಕಾರಿಗಳು 11.5 ಲಕ್ಷ ರೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಸಂಜಯ್ ರಾವತ್ ಅವರನ್ನು ಇಡಿ ಬಂಧಿಸಿತ್ತು.

ಯೆಸ್ ಬ್ಯಾಂಕ್ ಡಿಎಚ್‌ಎಫ್‌ಎಲ್ ವಂಚನೆ

ಯೆಸ್ ಬ್ಯಾಂಕ್ ಡಿಎಚ್‌ಎಫ್‌ಎಲ್ ವಂಚನೆ

ಯೆಸ್ ಬ್ಯಾಂಕ್ ಮತ್ತು ಡಿಎಚ್‌ಎಫ್‌ಎಲ್ ವಂಚನೆ ಹಗರಣದ ಮೊತ್ತ 1827 ಕೋಟಿ ರೂ. ಇಡಿ ಅಧಿಕಾರಿಗಳು ಸಂಜಯ್ ಛಾಬ್ರಿಯಾರ 251 ಕೋಟಿ ಹಾಗು ಅವಿನಾಶ್ ಭೋಸಲೆಯ 164 ಕೋಟಿ ರೂ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಸಂಜಯ್ ಛಾಬ್ರಿಯಾ ಅವರ ಬೆಂಗಳೂರಿನ ಆಸ್ತಿಯೂ ಇದರಲ್ಲಿ ಒಳಗೊಂಡಿದೆ. ಸಂಜಯ್ ಛಾಬ್ರಿಯಾ ಮತ್ತು ಅವಿನಾಶ್ ಭೋಸ್ಲೆ ಅವರಿಬ್ಬರನ್ನೂ ಇಡಿ ಜೂನ್ ತಿಂಗಳಲ್ಲಿ ಬಂಧಿಸಿದೆ.

ನವಾಬ್ ಮಲಿಕ್

ನವಾಬ್ ಮಲಿಕ್

ಎನ್‌ಸಿಪಿ ಮುಖಂಡ ನವಾಬ್ ಮಲಿಕ್ ಮತ್ತು ದಾವೂದ್ ಇಬ್ರಾಹಿಂನ ಡಿ ಗ್ಯಾಂಗ್ ಮಧ್ಯೆ ಬಹಳ ಕಾಲದಿಂದ ಸಂಬಂಧ ಇದೆ ಎಂದು ಇಡಿ ತನಿಖೆಯಿಂದ ಗೊತ್ತಾಗಿದೆ. 1996ರಲ್ಲಿ ಮುಂಬೈನ ಕುರ್ಲಾ ವೆಸ್ಟ್‌ನಲ್ಲಿರುವ ಗೋವಾವಾಲ ಕಟ್ಟಡದ ಕಾಂಪೌಂಡ್ ಅನ್ನು ಕಬಳಿಸಲು ನವಾಬ್ ಮಲಿಕ್ ಹುನ್ನಾರ ನಡೆಸಿದ್ದರು ಎಂದು ಇಡಿ ಹೇಳಿದೆ. ಇದನ್ನು ತನಿಖೆ ಮಾಡುತ್ತಿರುವಂತೆಯೇ ಡಿ ಗ್ಯಾಂಗ್ ಜೊತೆ ಮಲಿಕ್‌ಗಿರುವ ಸಂಬಂಧದ ಸುಳಿವು ತೆರೆದುಕೊಳ್ಳುತ್ತಾ ಹೋಗಿದೆ.

ಫಾರೂಕ್ ಅಬ್ದುಲ್ಲಾ

ಫಾರೂಕ್ ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆ ಫಂಡಿಂಗ್ ಹಗರಣದಲ್ಲಿ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಹೆಸರಿದೆ. ಕ್ರಿಕೆಟ್ ಸಂಸ್ಥೆಯ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಅಧಿಕೃತ ಬ್ಯಾಂಕ್ ಖಾತೆಗಳಿಂದ ನಗದು ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಲಾಗಿದೆ. ಅದಕ್ಕೆ ಲೆಕ್ಕವೇ ಇಟ್ಟಿಲ್ಲ.

ಇವರಷ್ಟೇ ಅಲ್ಲದೆ, ರಾಣಾ ಆಯುಬ್ ಮೊದಲಾದವರ ಮೇಲೂ ಇಡಿ ಪ್ರಕರಣ ಮತ್ತು ತನಿಖೆ ಇದೆ.

(ಒನ್ಇಂಡಿಯಾ ಸುದ್ದಿ)

English summary
Enforcement Directorate has made several raids this year, that includes National Herald, Patra Chawl scam. Karti Chidambaram, Partha Chaterjee and names prop up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X