Mahakumbh Mela 2025: ಕಾಲ್ತುಳಿತದಿಂದ 30 ಜನರ ಸಾವು: ದೊಡ್ಡ ಘಟನೆಯಲ್ಲ ಎಂದ ಹೇಮಾ ಮಾಲಿನಿ
ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಜಾಗತೀಕ ಮಟ್ಟದ ಹಿಂದೂ ಧರ್ಮದ ಅತ್ಯಂತ ಬೃಹತ್ ಉತ್ಸವ ಮಹಾ ಕುಂಭಮೇಳ ಮೂರು ವಾರಗಳನ್ನು ಯಶಸ್ವಿಯಾಗಿ ಮುಗಿಸಿದ್ದು, ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಆದರೆ ಹದಿನೇಳನೇ ದಿನ ಸಂಭವಿಸಿದ ಆ ಒಂದು ಅವಘಡ ಈ ಬಾರಿಯ ಮಹಾ ಕುಂಭಮೇಳಕ್ಕೆ ಕಪ್ಪು ಚುಕ್ಕೆಯಾಗಿದೆ.
ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಹಾ ಕುಂಭಮೇಳಕ್ಕೆ ಒಂದೇ ದಿನ ಪವಿತ್ರ ಸ್ನಾನ ಮಾಡಲು ಕೋಟ್ಯಂತರ ಭಕ್ತರು ಆಗಮಿಸಿದ್ದು, ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿತ್ತು. ಈ ಕಾಲ್ತುಳಿತದಲ್ಲಿ ಮೂವತ್ತು ಜನರು ಸಾವನ್ನಪ್ಪಿದ್ದು, ನೂರಾರು ಜನರು ಗಾಯಗೊಂಡಿದ್ದರು. ಮಹಾ ಕುಂಭ ಮೇಳದಲ್ಲಿ ಪುಣ್ಯ ಸ್ನಾನ ಮಾಡಲು ಬಂದ ಮೂವತ್ತು ಜನ ಭಕ್ತರು, ಇತರ ಭಕ್ತಾಧಿಗಳ ಕಾಲ ಕೆಳಗೆ ಸಿಲುಕಿ ಉಸಿರುಗಟ್ಟಿ ಅಲ್ಲೇ ಕೊನೆಯುಸಿರೆಳೆದರು. ಈ ಘಟನೆಯಿಂದ ಕೂಡಲೇ ಎಚ್ಚೆತ್ತ ಉತ್ತರ ಪ್ರದೇಶ ಸರ್ಕಾರ ಭಕ್ತರ ರಕ್ಷಣೆಗೆ ಇನ್ನಷ್ಟು ಭದ್ರತೆಯನ್ನು ಹೆಚ್ಚಿಸಿತು.

ಈ ಘಟನೆ ದೇಶದಾದ್ಯಂತ ಸುದ್ದಿಯಾಗಿದ್ದು, ಮಹಾ ಕುಂಭಮೇಳಕ್ಕೆ ಭೇಟಿ ನೀಡಬೇಕು ಎಂದುಕೊಂಡವರ ಎದೆ ನಡುಗಿಸಿದಂತೂ ಸತ್ಯ. ಆದರೆ ಇಷ್ಟೊಂದು ಸಾವು-ನೋವುಗಳು ಸಂಭವಿಸಿದರೂ ಈ ಘಟನೆಯ ಬಗ್ಗೆ ನಿರ್ಲಕ್ಷ್ಯವಾಗಿ ಇದೊಂದು ದೊಡ್ಡ ಘಟನೆಯಲ್ಲ ಎನ್ನುವ ನಟಿ ಹಾಗೂ ಬಿಜೆಪಿ ಸಂಸದೆ ಹೇಮಾ ಮಾಲಿನಿ ಹೇಳಿಕೆ ಅಚ್ಚರಿ ಮೂಡಿಸಿದೆ.
'ಕಾಲ್ತುಳಿತ ಅಷ್ಟೊಂದು ದೊಡ್ಡ ಘಟನೆಯಾಗಿರಲಿಲ್ಲ. ಈ ಘಟನೆ ಅಷ್ಟು ದೊಡ್ಡದು ಅಂತಾ ನನಗೆ ಅನಿಸಿಲ್ಲ. ಇದನ್ನು ಉತ್ಪ್ರೇಕ್ಷಿಸಲಾಗುತ್ತಿದೆ' ಎಂದ ಬಿಜೆಪಿ ಸಂಸದೆ ಹೇಮಾ ಮಾಲಿನಿ, 'ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಡಳಿತ ಮಹಾ ಕುಂಭಮೇಳವನ್ನು ಅತ್ಯಂತ ಉತ್ತಮವಾಗಿ ನಿರ್ವಹಿಸಿದೆ. ಎಲ್ಲಾ ವ್ಯವಸ್ಥೆಯನ್ನು ತುಂಬಾ ಚೆನ್ನಾಗಿ ಮಾಡಲಾಗಿದೆ. ಜನ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ನಿರ್ವಹಿಸಲು ತುಂಬಾ ಕಷ್ಟ' ಎಂದು ಹೇಳಿಕೆ ನೀಡಿದ್ದರು.

ಮೂವತ್ತು ಭಕ್ತರ ಸಾವು ದೊಡ್ಡ ಘಟನೆಯಲ್ಲ ಎನ್ನುವ ಹೇಮಾ ಮಾಲಿನಿ ಹೇಳಿಕೆಗೆ ಉತ್ತರ ಪ್ರದೇಶದ ಕತಿಹಾರ್‌ನ ಕಾಂಗ್ರೆಸ್ ಸಂಸದ ತಾರಿಕ್ ಅನ್ವರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. 'ಕಾಲ್ತುಳಿತಕ್ಕೆ ಕಾರಣವಾದ ಭೀಕರ ಜನಸಂದಣಿ ನಿಜವಾಗಿಯೂ ಹೇಗಿತ್ತು ಎನ್ನುವುದು ನಟಿಗೆ ತಿಳಿದಿಲ್ಲ. ಅವರು ಭೇಟಿ ನೀಡಿದಾಗ ಅವರಿಗೆ ವಿಐಪಿ ಸತ್ಕಾರ ನೀಡಲಾಗಿತ್ತು. ಪೊಲೀಸರು ಹಾಗೂ ಆಯೋಜಕರು ವಿಐಪಿಗಳನ್ನು ನೋಡಿಕೊಳ್ಳುತ್ತಿದ್ದರಿಂದ ಮಹಾ ಕುಂಭಮೇಳದಲ್ಲಿ ಸಾಮಾನ್ಯ ಭಕ್ತರಿಗಾಗಿ ಮಾಡಲಾಗಿದ್ದ ವ್ಯವಸ್ಥೆ ಹದಗೆಟ್ಟಿತು. ಸಾಮಾನ್ಯ ಜನರ ವ್ಯವಸ್ಥೆ ಮತ್ತು ಭದ್ರತೆಯ ಬಗ್ಗೆ ಅವರು ತಲೆಕೆಡಿಸಿಕೊಳ್ಳಲಿಲ್ಲ ಹೀಗಾಗಿ ಅವರಿಗೆ ಇದು ದೊಡ್ಡ ವಿಷಯವಾಗಿ ಕಂಡಿಲ್ಲ. ಈ ರೀತಿ ಹೇಳಿಕೆ ಸಾವನ್ನಪ್ಪಿವರನ್ನು ಅಣುಕಿಸಿದಂತಾಗುತ್ತದೆ' ಎಂದರು.












Click it and Unblock the Notifications