ರೂಪಾಂತರಿ ರಾಕ್ಷಸ: ಕೊವಿಡ್-19 ಲಸಿಕೆ ಹಾಕಿಸಿಕೊಂಡವರಿಗೂ ಈ ರೋಗಾಣು ಮಾರಕ!
ನವದೆಹಲಿ, ಆಗಸ್ಟ್ 31: ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಕೊರೊನಾವೈರಸ್ ಸೋಂಕಿನ ರೂಪಾಂತರ ವೈರಸ್ ಕಾಟ ಶುರುವಾಗಿದೆ. ಕೊವಿಡ್-19 ಲಸಿಕೆ ನೀಡಿದ ಪರಿಣಾಮವನ್ನೂ ಮೀರಿಸಿ ಹರಡುವಂತಾ ರೂಪಾಂತರ ವೈರಸ್ ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಪತ್ತೆಯಾಗಿದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.
ದಕ್ಷಿಣ ಆಫ್ರಿಕಾದ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಕಮ್ಯುನಿಕೇಬಲ್ ಡಿಸೀಸಸ್ ಮತ್ತು ಕ್ವಾಜುಲು-ನಟಲ್ ರಿಸರ್ಚ್ ಇನೋವೇಷನ್ ಆಫ್ ಸೀಕ್ವೆನ್ಸಿಂಗ್ ಪ್ಲಾಟ್ ಫಾರ್ಮ್ ತಜ್ಞರು ಕೊವಿಡ್-19 ರೂಪಾಂತರದ ಬಗ್ಗೆ ಎಚ್ಚರಿಸಿದ್ದಾರೆ. ಕಾಳಜಿಯ ರೂಪಾಂತರ ವೈರಸ್ ಆಗಿರುವ C.1.2 ದಕ್ಷಿಣ ಆಫ್ರಿಕಾದಲ್ಲಿ ಮೇ ತಿಂಗಳಿನಲ್ಲಿ ಮೊದಲ ಬಾರಿಗೆ ವರದಿಯಾಗಿದೆ ಎಂದಿದ್ದಾರೆ.
ಕೊರೊನಾವೈರಸ್ ಸೋಂಕಿನ C.1.2 ರೂಪಾಂತರವು ಆಗಸ್ಟ್ 13ರ ವೇಳೆಗೆ ಚೀನಾ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಮಾರಿಷಸ್, ಇಂಗ್ಲೆಂಡ್, ನ್ಯೂಜಿಲೆಂಡ್, ಪೋರ್ಚಿಗೀಸ್, ಸ್ವಿಜರ್ಲೆಂಡ್ ರಾಷ್ಟ್ರಗಳಲ್ಲಿ ವರದಿಯಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಪ್ರಸ್ತುತ C.1.2 ರೂಪಾಂತರ ವೈರಸ್ ಈಗಿರುವ ರೋಗಾಣುವಿಗಿಂತ ಹೇಗೆ ವಿಭಿನ್ನವಾಗಿದೆ?, ಲಸಿಕೆ ಪಡೆದುಕೊಂಡವರ ಮೇಲೆ ವೈರಾಣುವಿನ ಪರಿಣಾಮ ಹೇಗಿರುತ್ತದೆ?, ಹೊಸ ರೂಪಾಂತರದ ಬಗ್ಗೆ ತಜ್ಞರು ನೀಡುವ ಎಚ್ಚರಿಕೆ ಏನು ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

C.1.2 ರೂಪಾಂತರ ರೋಗಾಣುವಿನ ವಂಶಾವಳಿ ಯಾವುದು?
ಆಗಸ್ಟ್ 24ರ ವೇಳೆಗೆ ತಿಳಿದು ಬಂದಿರುವ ಅಧ್ಯಯನ ಮಾಹಿತಿ ಪ್ರಕಾರ, C.1.2 ರೂಪಾಂತರ ವೈರಸ್ ಅನ್ನು C.1 ರೂಪಾಂತರ ತಳಿಯ ಜೊತೆಗೆ ಹೋಲಿಕೆ ಮಾಡಿ ನೋಡಲಾಗುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ ಇದೇ C.1 ರೂಪಾಂತರ ತಳಿಯು ಕೊರೊನಾವೈರಸ್ ಮೊದಲನೇ ಅಲೆಗೆ ಮುಖ್ಯ ಕಾರಣವಾಗಿತ್ತು. ಹೊಸ ರೂಪಾಂತರವು ಇತರ ಕಾಳಜಿ (VOCs) ಅಥವಾ ಆಸಕ್ತಿಯ ರೂಪಾಂತರಗಳಿಗಿಂತ (VOIs) ಪ್ರಪಂಚದಾದ್ಯಂತ ಪತ್ತೆಯಾಗಿರುವುದಕ್ಕಿಂತ ಹೆಚ್ಚಿನ ರೂಪಾಂತರಗಳನ್ನು ಹೊಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಹಲವು ರಾಷ್ಟ್ರಗಳಿಗೆ ವ್ಯಾಪಿಸಿದ C.1.2 ರೂಪಾಂತರ ವೈರಸ್
ಕೊರೊನಾವೈರಸ್ ಸೋಂಕಿನ C.1.2 ರೂಪಾಂತರ ತಳಿಯು ದಕ್ಷಿಣ ಆಫ್ರಿಕಾದ ಮಟ್ಟಿಗೆ ಸೀಮಿತವಾಗಿಲ್ಲ. ಹಲವು ರಾಷ್ಟ್ರಗಳಿಗೆ ಹೊಸ ರೂಪಾಂತರ ವೈರಸ್ ಹರಡಿದೆ. ದಕ್ಷಿಣ ಆಫ್ರಿಕಾದಲ್ಲಿ ಪ್ರತಿ ತಿಂಗಳು C.1.2 ರೂಪಾಂತರ ತಳಿಯ ಸೋಂಕು ಅಂಟಿಕೊಂಡವರ ಸಂಖ್ಯೆ ಕ್ರಮೇಣ ಏರಿಕೆಯಾಗುತ್ತಿದೆ. 0.2ರಷ್ಟಿದ್ದ ರೂಪಾಂತರ ಸೋಂಕಿತ ಪ್ರಕರಣಗಳ ಪ್ರಮಾಣವು ಜೂನ್ ತಿಂಗಳಿನಲ್ಲಿ 1.6ರಷ್ಟಾಗಿದ್ದು, ಅದು ಜುಲೈ ವೇಳೆಗೆ ಶೇ.2ರಷ್ಟು ಏರಿಕೆಯಾಗಿತ್ತು. "ದೇಶದಲ್ಲಿ ಇದೇ ಮೊದಲು ಪತ್ತೆ ಆಗಿರುವ ಬೀಟಾ ಮತ್ತು ಡೆಲ್ಟಾ ರೂಪಾಂತರಗಳಂತೆ ಈ ರೋಗಾಣು ಪ್ರಮಾಣ ಹೆಚ್ಚಳವಾಗಲಿದೆ," ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಕೊವಿಡ್-19 ಸೋಂಕು ಹರಡುವಿಕೆಯು ಇಮ್ಮಡಿ
ಅಧ್ಯಯನದ ಪ್ರಕಾರ, C.1.2 ತಳಿಯ ರೂಪಾಂತರ ಪ್ರಮಾಣವು ಶೇ.41.8ರಷ್ಚಿದೆ. ಪ್ರಸ್ತುತ ಜಗತ್ತಿನಲ್ಲಿ ರೂಪಾಂತರ ತಳಿಗಳ ಹರಡುವಿಕೆ ಪ್ರಮಾಣಕ್ಕಿಂತ ಇದು ಎರಡು ಪಟ್ಟು ಹೆಚ್ಚಾಗಿರಲಿದೆ ಎಂದು ತಿಳಿದು ಬಂದಿದೆ. 2019ರಲ್ಲಿ ಚೀನಾದ ವುಹಾನ್ ನಗರದಲ್ಲಿ ಪತ್ತೆಯಾದ ಮೂಲ ಕೊರೊನಾವೈರಸ್ ರೋಗಾಣುವಿಗಿಂತ C.1.2 ತಳಿಯು ವಿಭಿನ್ನವಾಗಿದೆ. ಈ ರೂಪಾಂತರದಲ್ಲಿ ಸೋಂಕು ಹರಡುವಿಕೆಯ ವೇಗವನ್ನು ಹೆಚ್ಚಿಸುವ ಸಾಮರ್ಥ್ಯ ಹೆಚ್ಚಾಗಿರುತ್ತದೆ ಸೂಕ್ಷ್ಮಾಣುರೋಗಶಾಸ್ತ್ರಜ್ಞ ಉಪಾಸನಾ ರಾಯ್ ಹೇಳಿದ್ದಾರೆ.
ಕೊರೊನಾವೈರಸ್ ಸೋಂಕಿನ C.1.2 ರೋಗಾಣು ಸಾಮಾನ್ಯ ವೈರಸ್ ಗಿಂತ ಹೆಚ್ಚು ಹರಡಬಲ್ಲ ಹಾಗೂ ವೇಗವಾಗಿ ಅಂಟಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈವರೆಗೂ ಹಲವಾರು ರೂಪಾಂತರಗಳು ಪ್ರೊಟೀನ್ ಅಂಶವನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿವೆ. ಈ ಹಂತದಲ್ಲಿ ಅಪಾಯಕಾರಿ ಎನಿಸಿರುವ ರೂಪಾಂತರ ವೈರಸ್ ಈಗಾಗಲೇ ಜನರಿಗೆ ನೀಡಿರುವ ಲಸಿಕೆಯ ಪರಿಣಾಮವನ್ನು ಮೀರಿಸಿ ಹರಡುವ ಶಕ್ತಿಯನ್ನು ಹೊಂದಿರುತ್ತದೆ," ಎಂದು ಕೋಲ್ಕತ್ತಾದ ಸಿಎಸ್ಐಆರ್-ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಕೆಮಿಕಲ್ ಬಯಾಲಜಿಯ ಸೂಕ್ಷ್ಮಾಣುರೋಗಶಾಸ್ತ್ರಜ್ಞ ಉಪಾಸನಾ ರಾಯ್ ತಿಳಿಸಿದ್ದಾರೆ.

C.1.2 ರೂಪಾಂತರ ವೈರಸ್ ಹರಡುವಿಕೆಗೆ ಕಡಿವಾಣ
"ಕೊರೊನಾವೈರಸ್ ರೋಗ ಹರಡುವಿಕೆಯನ್ನು ನಿಯಂತ್ರಿಸಲು ಮತ್ತು ಹರಡುವಿಕೆಯ ಸರಪಳಿಯನ್ನು ಕತ್ತರಿಸಲು ನಿಮಯಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ತೀರಾ ಅತ್ಯಗತ್ಯವಾಗಿದೆ," ಎಂದು ರಾಯ್ ಹೇಳಿದ್ದಾರೆ. ಅರ್ಧದಷ್ಟು C.1.2 ತಳಿಯು 14 ರೂಪಾಂತರಗಳನ್ನು ಹೊಂದಿವೆ, ಆದರೆ ಕೆಲವು ತಳಿಗಳಲ್ಲಿ ಹೆಚ್ಚುವರಿ ವ್ಯತ್ಯಾಸಗಳನ್ನು ಗಮನಿಸಲಾಗಿದೆ. ಬಹುಪಾಲು C.1.2 ರೂಪಾಂತರಗಳಲ್ಲಿ ಈ ತಳಿಯು ಪತ್ತೆಯಾಗಿದ್ದು, ಈ ವಂಶಾವಳಿಯು ಹೆಚ್ಚಾಗಿ ಕಂಡು ಬಂದಿರುವ ಪ್ರದೇಶಗಳಲ್ಲಿ ಹಲವು ವ್ಯತ್ಯಾಸಗಳಿವೆ ಎಂದಿದ್ದಾರೆ. C.1.2 ರೂಪಾಂತರಿಗಳು ಹೆಚ್ಚಾಗಿ ವರದಿಯಾದ ಪ್ರದೇಶದಲ್ಲಿ ಸುಮಾರು ಶೇ.52ರಷ್ಟು ರೂಪಾಂತರಗಳು ಈ ಹಿಂದೆ ಇತರ ಕಾಳಜಿಯ ಮತ್ತು ಆಸಕ್ತಿದಾಯಕ ತಳಿಗಳಾಗಿರುವುದು ಗೊತ್ತಾಗಿದೆ.

ರೋಗ ನಿರೋಧಕ ಶಕ್ತಿಯನ್ನು ಮೀರಿಸುವ ರೂಪಾಂತರ
ಮನುಷ್ಯದ ಜೀವಕೋಶಕ್ಕೆ ವೈರಸ್ ಪ್ರವೇಶಿಸುವ ಮತ್ತು ಸೋಂಕು ತಗುಲಿಸುವುದಕ್ಕಾಗಿ ಕೊರೊನಾವೈರಸ್ ರೋಗಾಣು ತನ್ನಲಿನ ಪ್ರೊಟೀನ್ ಅಂಶವನ್ನು ಹೆಚ್ಚಿಸಿಕೊಳ್ಳುತ್ತಿದೆ. ಈ ರೋಗಾಣುಗಳ ವಿರುದ್ಧ ಹೋರಾಡುವ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉದ್ದೇಶವನ್ನು ಇಟ್ಟುಕೊಂಡು ಹಲವು ಲಸಿಕೆಗಳನ್ನು ಸಂಶೋಧಿಸಲಾಗುತ್ತದೆ. ಆದರೆ N440K ಮತ್ತು Y449H ರೂಪಾಂತರಗಳು ರೋಗ ನಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳುವ ಅಂಶವು C.1.2 ರೂಪಾಂತರದಲ್ಲಿ ಪತ್ತೆಯಾಗಿದೆ. ಪ್ರತಿಕಾಯ ವ್ಯವಸ್ಥೆಯನ್ನು ತಟಸ್ಥಗೊಳಿಸುವ ಹಾಗೂ ರೋಗ ನಿರೋಧಕ ಶಕ್ತಿ ವಿರುದ್ಧ ಪರಿಣಾಮಕಾರಿಯಾಗಿ ತಪ್ಪಿಸಿಕೊಳ್ಳುವ ಸಾಮರ್ಥ್ಯವು ಈಗಿನ ರೂಪಾಂತರಗಳಲ್ಲಿ ಪತ್ತೆಯಾಗಿದೆ.
ಆಲ್ಫಾ ಮತ್ತು ಬೀಟಾ ರೂಪಾಂತರ ರೋಗಾಣುಗಳ ವಿರುದ್ಧ ಹೋರಾಟಬಲ್ಲ ಲಸಿಕೆಯನ್ನು ಸಿದ್ಧಪಡಿಸಲಾಗಿದೆ. ಈ ರೋಗಾಣುಗಳನ್ನು ಸಮರ್ಥವಾಗಿ ಎದುರಿಸುವ ಪ್ರತಿಕಾಯ ವ್ಯವಸ್ಥೆಯಿಂದ ತಪ್ಪಿಸಿಕೊಂಡು ಸೋಂಕು ಹರಡುವಿಕೆ ಪ್ರಮಾಣವನ್ನು ಹೆಚ್ಚಿಸುವ ಶಕ್ತಿ ಹೊಸ ರೂಪಾಂತರ ರೋಗಾಣುಗಳಲ್ಲಿ ಕಂಡು ಬಂದಿದೆ.












Click it and Unblock the Notifications