ರಾಜವೈಭವದ ಸಂಕೇತ ಮೈಸೂರಿನ ಸಾರೋಟು!
ಕೊರೊನಾ ಕಾರಣದಿಂದ ಎರಡು ವರ್ಷಗಳ ಕಾಲ ದಸರಾ ಅದ್ಧೂರಿಯಾಗಿ ನಡೆದಿರಲಿಲ್ಲ. ಜತೆಗೆ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಿದ್ದರಿಂದ ಪ್ರವಾಸಿಗರು ಕೂಡ ಮೈಸೂರಿನತ್ತ ಮುಖ ಮಾಡಿರಲಿಲ್ಲ. ಹೀಗಾಗಿ ಪ್ರವಾಸಿಗರನ್ನು ನಂಬಿ ಜೀವನ ಸಾಗಿಸುತ್ತಿದ್ದ ನಗರದ ಹಲವು ಕ್ಷೇತ್ರದ ಜನರ ಬದುಕು ಅತಂತ್ರವಾಗಿತ್ತು. ಆದರೆ ಈ ಬಾರಿ ಅದ್ಧೂರಿ ದಸರಾ ನಡೆಯುತ್ತಿರುವುದರಿಂದ ಎಲ್ಲರ ಬದುಕು ನಿಧಾನವಾಗಿ ಯಥಾಸ್ಥಿತಿಗೆ ಮರಳಲು ಆರಂಭಿಸಿದೆ.
ಸಾಮಾನ್ಯವಾಗಿ ರಜಾ ದಿನಗಳಲ್ಲಿ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಾರೆ. ಆದರೆ ದಸರಾ ಸಮಯದಲ್ಲಿ ಆಗಮಿಸುವುದೇ ಒಂಥರಾ ಮಜಾ ನೀಡುತ್ತದೆ. ದೂರದಿಂದ ಬರುವ ಪ್ರವಾಸಿಗರು ನಗರದಲ್ಲಿ ಅಡ್ಡಾಡುವುದನ್ನು ನೋಡುವುದೇ ಚೆಂದ. ಹೆಚ್ಚಿನ ಪ್ರವಾಸಿಗರು ಮೈಸೂರು ನಗರವನ್ನು ಟಾಂಗಾ ಅಥವಾ ಸಾರೋಟಿನಲ್ಲಿ ಕುಳಿತು ನೋಡಬೇಕೆಂದು ಬಯಸುತ್ತಾರೆ. ಅದೊಂದು ವಿಶಿಷ್ಟ ಅನುಭವವೂ ಹೌದು.
ಹಾಗೆನೋಡಿದರೆ ಮೈಸೂರಿನಲ್ಲಿರುವ ಸಾರೋಟು ಮಾಮೂಲಿ ಟಾಂಗಾಗಳಿಗಿಂತ ದೊಡ್ಡದಾಗಿದ್ದು, ವಿಭಿನ್ನ ಮತ್ತು ವಿಶಿಷ್ಟವಾಗಿದೆ. ಸಾರೋಟು ಎನ್ನುವುದು ರಾಜವೈಭವದ ಸಂಕೇತವೂ ಹೌದು. ಇತ್ತೀಚೆಗಿನ ವರ್ಷಗಳಲ್ಲಿ ಮೈಸೂರು ನಗರದಲ್ಲಿ ಸಾರೋಟುಗಳು ಆಕರ್ಷಿಸುತ್ತಿವೆ. ರಾತ್ರಿ ಹೊತ್ತಿನಲ್ಲಿ ಮಿರಮಿರ ಮಿನುಗುವ ವಿದ್ಯುದ್ದೀಪಗಳಲ್ಲಿ ಸಂಗೀತ ಕೇಳುತ್ತಾ ಟಕ ಟಕ ಸದ್ದು ಮಾಡುತ್ತಾ ಸಾಗುವ ಸಾರೋಟಿನಲ್ಲಿ ಕುಟುಂಬ ಸಹಿತ ಕುಳಿತು ಹರಟೆ ಹೊಡೆಯುತ್ತಾ ಸೆಲ್ಫಿ ತೆಗೆದುಕೊಳ್ಳುತ್ತಾ ಇಂದ್ರನ ಅಮರಾವತಿಯಂತೆ ಕಂಗೊಳಿಸುವ ಅರಮನೆಗೆ ಸುತ್ತು ಹೊಡೆಯುವುದು ಮರೆಯಲಾರದ ಅನುಭವಾಗಿದೆ.

ಗಮನ ಸೆಳೆಯುವ ಸರೋಟು ಓಟ
ಇನ್ನು ಹಗಲು ಹೊತ್ತಿನಲ್ಲಿ ಸಾಗಿದರೆ ಮತ್ತೊಂದು ರೀತಿಯ ಅನುಭವವಾಗುತ್ತದೆ. ವಿಶಾಲವಾದ ರಾಜ ಮಾರ್ಗಗಳಲ್ಲಿ ಸಾಗುವಾಗ ಅರಮನೆಯಾಚೆಯ ಕೋಟೆಕೊತ್ತಲಗಳು, ದೇಗುಲಗಳು ಪಾರಂಪರಿಕ ಕಟ್ಟಡಗಳು ಗಮನಸೆಳೆಯುತ್ತವೆ. ಈ ಹಿಂದೆ ಟಾಂಗಾದಲ್ಲಿ ಓಡಾಡುತ್ತಿದ್ದವರು ಈಗ ಸಾರೋಟಿನತ್ತ ಮುಖ ಮಾಡುತ್ತಿರುವುದು ಎದ್ದು ಕಾಣಿಸುತ್ತಿದೆ. ಸಾರೋಟುಗಳು ನಗರಕ್ಕೆ ಎಂಟ್ರಿ ಕೊಟ್ಟು ಒಂದು ದಶಕ ಕಳೆದಿದೆ. ಕೊರೊನಾ ಬಾರದೆ ಹೋಗಿದ್ದರೆ ಅವುಗಳ ಸಂಖ್ಯೆ ಹೆಚ್ಚಾಗುತ್ತಿತ್ತೇನೋ ಆದರೆ ಎರಡು ವರ್ಷಗಳ ಕಾಲ ಸಾರೋಟು ಮತ್ತು ಟಾಂಗಾ ಓಡಿಸುವವರ ಬದುಕು ಮೂರಾಬಟ್ಟೆಯಾಗಿದೆ. ಬಹುಶಃ ಎಲ್ಲವೂ ಸರಿಹೋದರೆ ಅವರ ಬದುಕು ಚೇತರಿಸಿಕೊಳ್ಳಲು ಸಾಧ್ಯವಾಗಬಹುದು.

ಹಿಂದೆ ಮೈಸೂರಿನ ಸಂಚಾರ ಸಾಧನ
ಇವತ್ತು ಹೊಸತನದಿಂದ ಕೂಡಿದ ಸಾರೋಟುಗಳು ಮೈಸೂರು ನಗರದಲ್ಲಿ ಕಾಣಿಸಬಹುದು. ಆದರೆ ಅವುಗಳ ಜತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಟಾಂಗಾಗಳೇ ಮಹಾರಾಜರ ಕಾಲದಲ್ಲಿ ಮೈಸೂರಿನ ಸಂಚಾರ ಸಾಧನಗಳಾಗಿದ್ದವು. ಸಾಮಾನ್ಯ ಜನರು ಟಾಂಗಾ ಗಾಡಿಗಳಲ್ಲಿ ತೆರಳುತ್ತಿದ್ದರೆ, ಮಹಾರಾಜರು ಮಾತ್ರ ಸಾರೋಟಿನಲ್ಲಿ ರಾಜಗಾಂಭೀರ್ಯದಿಂದ ಪ್ರಯಾಣಿಸುತ್ತಿದ್ದರು.
ಇತಿಹಾಸದ ಪುಟಗಳನ್ನು ತಿರುವಿನೋಡಿದರೆ ಮೈಸೂರಿನಲ್ಲಿ ವಾಹನ ಸೌಲಭ್ಯವಿಲ್ಲದ ದಿನಗಳಲ್ಲಿ ಎತ್ತಿನ ಬಂಡಿಯಲ್ಲಿ ಜನರು ಒಂದೆಡೆಯಿಂದ ಮತ್ತೊಂದು ಕಡೆಗೆ ಸಾಗುತ್ತಿದ್ದರು. ಆದರೆ ಇವತ್ತು ನಮಗೆ ಕಾಣಸಿಗುವ ಟಾಂಗಾ ಗಾಡಿಗಳು ಬಂದಿದ್ದು ಮಹಾರಾಜರ ಕಾಲದಲ್ಲಿ. ಅಂದರೆ 1897ರಲ್ಲಿ ಎಂದು ಹೇಳಲಾಗಿದೆ. ಅಂದಿನ ದಿನಗಳಲ್ಲಿ ಟಾಂಗಾ ಗಾಡಿಗಳು ಹೆಚ್ಚಿನ ಜನಪ್ರಿಯತೆ ಪಡೆದಿದ್ದವಲ್ಲದೆ, ಟಾಂಗಾ ಗಾಡಿಗಳಲ್ಲಿ ತೆರಳುವುದೆಂದರೆ ಅದೊಂದು ಪ್ರತಿಷ್ಠೆಯ ಸಂಕೇತವಾಗಿತ್ತು. ಆಗ ಇದರ ಉಸ್ತುವಾರಿಯನ್ನು ಮುನ್ಸಿಪಾಲಿಟಿ ವಹಿಸಿಕೊಂಡಿತ್ತು.

ಷಾ ಪಂಸದ್ ಫೇಮಸ್ ಸೊಬಗು
ದೂರದ ಊರುಗಳಿಗೆ ತೆರಳುವವರು ಮುನ್ಸಿಪಾಲಿಟಿಗೆ ಬಾಡಿಗೆ ನೀಡಿ ಟಾಂಗಾ ಗಾಡಿಯಲ್ಲಿ ಹೋಗಬೇಕಾಗಿತ್ತು. ಆಗ ಮೈಸೂರು ನಗರದಲ್ಲಿ ಸುಮಾರು ಆರುನೂರಕ್ಕೂ ಹೆಚ್ಚಿನ ಟಾಂಗಾಗಾಡಿಗಳು ಓಡಾಡುತ್ತಿದ್ದವಲ್ಲದೆ ಕೊಳ್ಳೇಗಾಲ, ಚಾಮರಾಜನಗರ, ನಂಜನಗೂಡು, ಕೆ.ಆರ್.ನಗರಗಳಲ್ಲಿಯೂ ಜನಪ್ರಿಯತೆಯನ್ನು ಗಳಿಸಿದ್ದವು. ಮುಂಬಯಿಯ ವಿಕ್ಟೋರಿಯ, ಮೈಸೂರಿನ ಮಹಾರಾಜರ ಷಾ ಪಂಸದ್ ಟಾಂಗಾಗಳು ಖ್ಯಾತಿ ಪಡೆದಿದ್ದವು. ಈ ಟಾಂಗಾ ಗಾಡಿಗಳಲ್ಲಿ ದೀಪದ ವ್ಯವಸ್ಥೆಯೂ ಇತ್ತು ಎನ್ನಲಾಗಿದೆ. ದಸರಾ ಸಂದರ್ಭದಲ್ಲಿ ಟಾಂಗಾ ಗಾಡಿಗಳಿಗೂ ಗೌರವ ಸ್ಥಾನ ನೀಡಲಾಗುತ್ತಿತ್ತಲ್ಲದೆ, ದಸರಾ ಮೆರವಣಿಗೆಯಲ್ಲಿಯೂ ತಮ್ಮದೇ ಪೋಷಾಕು ಧರಿಸಿ ಮುನ್ನಡೆಯುತ್ತಿದ್ದರು. ಈ ಸಂಪ್ರದಾಯ ಈಗಲೂ ಮುಂದುವರೆದಿದೆ.

ರಾಜವೈಭವದ ಸಂಕೇತ
ದಸರಾ ಸೇರಿದಂತೆ ಇತರೆ ದಿನಗಳಲ್ಲಿ ಅರಮನೆ ಮುಂಭಾಗ ಬೀಡುಬಿಡುವ ಸಾರೋಟು ಗಾಡಿಗಳು ಪ್ರವಾಸಿಗರನ್ನು ಅರಮನೆಗೆ ಸುತ್ತುಹೊಡೆಸಿಕೊಂಡು ಬರುತ್ತಿವೆ. ಸಾರೋಟುಗಳು ಇಂದು ಪ್ರವಾಸಿಗರನ್ನು ಕರೆದೊಯ್ಯಲು ಸೀಮಿತವಾಗಿವೆ. ಜತೆಗೆ ನಿರ್ವಹಣೆಯೂ ಕಷ್ಟವಾಗಿರುವುದರಿಂದ ನಗರದ ಅರಮನೆ, ಮೃಗಾಲಯ ಮುಂತಾದ ಕಡೆ ನಿಂತು ಪ್ರವಾಸಿಗರನ್ನು ಬಲತ್ಕಾರವಾಗಿ ತಮ್ಮ ಬಳಿಗೆ ಕರೆದು ನಗರ ಪ್ರದಕ್ಷಿಣೆ ಮಾಡಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಸುಮಾರು ಹನ್ನೆರಡು ವರ್ಷಗಳ ಹಿಂದೆ ಟಾಂಗಾ ಗಾಡಿಗಳಷ್ಟೆ ಇದ್ದವು. ಈ ವೇಳೆ ರಾಜವೈಭವದ ಸಂಕೇತವಾಗಿರುವ ಸಾರೋಟುಗಳನ್ನು ಪರಿಚಯಿಸುವ ಕಾರ್ಯವನ್ನು ಮಾಡಲಾಯಿತು. ಅದರಂತೆ ಒಂದಷ್ಟು ಸಾರೋಟುಗಳು ಟಾಂಗಾ ಗಾಡಿಗಳ ಜತೆಗೆ ಸೇರಿಕೊಂಡವು.
ಟಾಂಗಾಗಳಿಗೆ ಹೋಲಿಸಿದರೆ ಸಾರೋಟುಗಳು ಆಕರ್ಷಣೀಯವಾಗಿದೆ ಹಾಗೂ ಹೆಚ್ಚು ಜನರು ಕುಳಿತು ನೆಮ್ಮದಿಯಾಗಿ ಪ್ರಯಾಣಿಸಬಹುದು. ಇವತ್ತಿನ ಸೆಲ್ಫಿ ಜಗತ್ತಿಗೆ ಎಂಜಾಯ್ ಮಾಡಲು ಫೋಟೋ ಕ್ಲಿಕ್ಕಿಸಿಕೊಳ್ಳಲು ಅವು ಸಹಕಾರಿಯಾಗಿವೆ. ಹೀಗಾಗಿ ಹೆಚ್ಚಿನ ಪ್ರವಾಸಿಗರು ಸಾರೋಟಿನ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಅದೇನೆ ಇರಲಿ ಮೈಸೂರಿಗೆ ಬರುವ ಪ್ರವಾಸಿಗರು ಸಾರೋಟಿನಲ್ಲಿ ಪ್ರಯಾಣಿಸಲು ಮರೆಯದಿರಿ.
-
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ












Click it and Unblock the Notifications