ಸೆ.20ಕ್ಕೆ ಖಾಸಗಿ ಸಿಂಹಾಸನ ಜೋಡಣೆ... ಇದರ ಇತಿಹಾಸವೇನು?
ಐತಿಹಾಸಿಕ ಮೈಸೂರು ದಸರಾಗೆ ಸಿದ್ಧತೆಗಳು ಆರಂಭವಾಗಿದೆ. ಅರಮನೆಯ ಹೊರಗೆ ನಡೆಯುವ ಸಿದ್ಧತೆಗಳು ಒಂದೆಡೆಯಾದರೆ ಅರಮನೆಯ ಒಳಗಿನ ಧಾರ್ಮಿಕ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇದನ್ನು ರಾಜವಂಶಸ್ಥರು ಮಾಡಿಕೊಂಡು ಬರುತ್ತಿದ್ದಾರೆ.
ಹಿಂದಿನ ಕಾಲದಲ್ಲಿ ದಸರಾ ಸಂದರ್ಭದ ಒಂಬತ್ತು ದಿನಗಳ ಕಾಲ ರತ್ನಖಚಿತ ಸಿಂಹಾಸನವೇರಿ ದರ್ಬಾರ್ ನಡೆಸುತ್ತಿದ್ದ ಮಹಾರಾಜರು ಪ್ರಜೆಗಳ ಕಷ್ಟ ಸುಖಗಳನ್ನು ಆಲಿಸುತ್ತಿದ್ದರಲ್ಲದೆ, ನವರಾತ್ರಿ ಹಿನ್ನಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರು. ಇನ್ನು ಸಿಂಹಾಸನ ವೇರುವ ವೇಳೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನಡೆಸುತ್ತಿದ್ದರು.
ಹಿಂದಿನ ಕಾಲದಲ್ಲಿ ಪ್ರತಿನಿತ್ಯವೂ ಮಹಾರಾಜರು ಸಿಂಹಾಸನವೇರಿ ದರ್ಬಾರ್ ನಡೆಸುತ್ತಿದ್ದರಾದರೂ ನವರಾತ್ರಿ ವೇಳೆ ನಡೆಯುತ್ತಿದ್ದ ದರ್ಬಾರ್‌ಗೆ ಹೆಚ್ಚಿನ ಪ್ರಾಮುಖ್ಯತೆ ಇತ್ತು. ಸ್ವಾತಂತ್ರ್ಯದ ನಂತರ ನವರಾತ್ರಿ ಸಮಯದಲ್ಲಿ ಖಾಸಗಿಯಾಗಿ ಹಿಂದಿನ ಧಾರ್ಮಿಕ ಕೈಂಕರ್ಯದೊಂದಿಗೆ ದರ್ಬಾರ್ ನಡೆಸಲಾಗುತ್ತಿದ್ದು, ಇದು ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿದೆ.
ಖಾಸಗಿ ದರ್ಬಾರ್ ನಲ್ಲಿ ಮುಖ್ಯವಾಗಿ ಗಮನಸೆಳೆಯುವುದು ರತ್ನಖಚಿತ ಸಿಂಹಾಸನವಾಗಿದ್ದು, ಇದನ್ನು ನವರಾತ್ರಿ ಸಮಯದಲ್ಲಿ ಜೋಡಿಸಲಾಗುತ್ತದೆ. ಪ್ರತಿವರ್ಷವೂ ನವರಾತ್ರಿಗೆ ಮುನ್ನ ಸಿಂಹಾಸನವನ್ನು ಜೋಡಿಸಿ ಖಾಸಗಿ ದರ್ಬಾರ್ ಮುಗಿದ ನಂತರ ವಿಸರ್ಜಿಸಲಾಗುತ್ತದೆ.

ಪ್ರವಾಸಿಗರಿಗೆ ನಿಷೇದ
ಈ ಬಾರಿ ಸಿಂಹಾಸನ ಜೋಡಣೆ ಕಾರ್ಯ ಸೆಪ್ಟೆಂಬರ್ 20ರಂದು ಹಾಗೂ ವಿಸರ್ಜನೆ ಅಕ್ಟೋಬರ್ 20ರಂದು ನಡೆಯಲಿದೆ. ಈ ನಡುವೆ ಅರಮನೆಯಲ್ಲಿ ಧಾರ್ಮಿಕ ಕೈಂಕರ್ಯಗಳ ಮಾಹಿತಿಯನ್ನು ಮೈಸೂರು ಅರಮನೆ ಮಂಡಳಿ ಬಿಡುಗಡೆ ಮಾಡಿದ್ದು, ಸಿಂಹಾಸನ ಜೋಡಣೆ ನಡೆಯುವುದರಿಂದ ಅಂದು ಪ್ರವಾಸಿಗರಿಗೆ ಅರಮನೆಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಅರಮನೆ ಪ್ರವೇಶವನ್ನು ನಿಷೇಧಿಸಲಾಗಿದೆ.
ಇಷ್ಟೇ ಅಲ್ಲದೆ ಸೆಪ್ಟೆಂಬರ್ 26ರಂದು ಖಾಸಗಿ ದರ್ಬಾರ್ ಹಾಲ್‌ನಲ್ಲಿ ರಾಜವಂಶಸ್ಥರ ಖಾಸಗಿ ಪೂಜಾ ಕೈಂಕರ್ಯದ ಪ್ರಯುಕ್ತ ಬೆಳಿಗ್ಗೆಯಿಂದ ಮಧ್ಯಾಹ್ನ 1.30ರ ತನಕ ಪ್ರವೇಶ ಇರುವುದಿಲ್ಲ. ಅಕ್ಟೋಬರ್ 4ರಂದು ಆಯುಧ ಪೂಜೆ ನಡೆಯಲಿದ್ದು, ಅಂದು ಮಧ್ಯಾಹ್ನ 2ರ ತನಕ ಪ್ರವೇಶ ಇರುವುದಿಲ್ಲ. ಅಕ್ಟೋಬರ್ 5ರ ವಿಜಯದಶಮಿ ಪ್ರಯುಕ್ತ ಸಂಪೂರ್ಣ ದಿನ ಪ್ರವೇಶವಿರುವುದಿಲ್ಲ. ಅಕ್ಟೋಬರ್ 20ರಂದು ಸಿಂಹಾಸನ ವಿಸರ್ಜನೆ ಪ್ರಯುಕ್ತ ಮಧ್ಯಾಹ್ನ 1ರ ತನಕ ಪ್ರವೇಶ ಇರುವುದಿಲ್ಲ

ಸಿಂಹಾಸನ ವಶಪಡಿಸಿಕೊಂಡ ರಾಜಒಡೆಯರ್
ಮೈಸೂರು ಅರಮನೆಯಲ್ಲಿ ಇರುವ ಸಿಂಹಾಸನದ ಬಗ್ಗೆ ಹೇಳುವುದಾದರೆ ಇದರ ಹಿಂದೆ ಪೌರಾಣಿಕ ಇತಿಹಾಸವಿದೆ. ಹಸ್ತಿನಾವತಿಪುರದ ರಾಜರಾದ ಪಾಂಡವರ ಕಾಲದಲ್ಲಿ ಕಂಪುಲ ರಾಜನು ಇದನ್ನು ತಂದು ಪೆನಗೊಂಡದಲ್ಲಿ ಹೂತಿಟ್ಟಿದ್ದನು ಎನ್ನಲಾಗಿದೆ. 1338ರಲ್ಲಿ ಮಹರ್ಷಿ ವಿದ್ಯಾರಣ್ಯರು ಧ್ಯಾನದೃಷ್ಟಿಯಿಂದ ಇದನ್ನು ಅರಿತು ವಿಜಯನಗರದ ಚಕ್ರಾಧಿಪತ್ಯದ ಸ್ಥಾಪಕ ಹರಿಹರನಿಗೆ ತಿಳಿಸಿದರೆಂದು ಅದರಂತೆ ಭೂಮಿಯನ್ನು ಅಗೆದು ಅದನ್ನು ಹೊರತೆಗೆಯಲಾಯಿತೆಂದು ಹೇಳಲಾಗಿದೆ. ಬಳಿಕ ಸುಮಾರು ನೂರೈವತ್ತು ವರ್ಷಗಳ ಕಾಲ ಆನೆಗೊಂದಿಯಲ್ಲಿ ಇದು ಇತ್ತೆಂದು ಹೇಳಲಾಗಿದೆ.
ವಿಜಯನಗರದ ಅವನತಿಯ ವೇಳೆಗೆ ಶ್ರೀರಂಗಪಟ್ಟಣದಲ್ಲಿದ್ದ ವಿಜಯನಗರದ ರಾಯಬಾರಿ ಶ್ರೀರಂಗರಾಯನ ಅರಮನೆಗೆ ಸಾಗಿಸಲಾಯಿತೆಂದು, ಆ ನಂತರ ಅದನ್ನು 1609ರಲ್ಲಿ ಆಗಿನ ಮೈಸೂರು ಅರಸರಾದ ರಾಜಒಡೆಯರ್ ಶ್ರೀರಂಗಪಟ್ಟಣದ ಶ್ರೀರಂಗರಾಯನಿಂದ ವಶಪಡಿಸಿಕೊಂಡು 1610ರಲ್ಲಿ ತಮ್ಮ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾಯಿಸಿದಾಗ ಸಿಂಹಾಸನವನ್ನು ಮೈಸೂರಿನ ಅರಮನೆಗೆ ಸಾಗಿಸಿ ಸಿಂಹಾರೋಹಣ ಮಾಡಿದರೆಂದು ಹೇಳಲಾಗುತ್ತಿದೆ.

ರತ್ನ ಖಚಿತ ಸಿಂಹಾಸನದ ವೈಶಿಷ್ಟ್ಯ
ಸಿಂಹಾಸನವು ರತ್ನ ಖಚಿತವಾಗಿದ್ದು ಹಲವು ವೈಶಿಷ್ಟ್ಯತೆ ಹೊಂದಿರುವುದನ್ನು ಕಾಣಬಹುದಾಗಿದೆ. ಮೇಲ್ನೋಟಕ್ಕೆ ಇದು ಚಿನ್ನದ ಬಾಳೆಯ ಕಂಬ ಮತ್ತು ಚಿನ್ನದ ಮಾವಿನ ಎಲೆಗಳಿಂದ ಅಲಂಕರಿಸಲ್ಪಟ್ಟಿದ್ದು, ಛತ್ರಿಯ ತುದಿಯಲ್ಲಿ ಒಡವೆಗಳಿಂದ ಅಲಂಕರಿಸಿದ ಪಕ್ಷಿಯನ್ನು ಕೂರಿಸಲಾಗಿದೆ. ಸಿಂಹಾಸನವನ್ನೇರುವ ಎರಡು ಬದಿಯಲ್ಲೂ ಸ್ತ್ರೀ ಪುತ್ಥಳಿಯನ್ನು ನಿರ್ಮಿಸಲಾಗಿದೆ. ಜೊತೆಗೆ ಛತ್ರಿಯ ಸುತ್ತಲೂ ಮುತ್ತಿನ ಕುಚ್ಚುಗಳನ್ನು ಕಟ್ಟಲಾಗಿದೆ. ಸಿಂಹಾಸನ ಕೂರ್ಮರೂಪದ ಆಸನ ಹೊಂದಿದ್ದು ಉಭಯ ಪಾರ್ಶ್ವಗಳಲ್ಲಿ ಯಾಳಿಗಳನ್ನು ಮತ್ತು ನಾಲ್ಕು ಕಡೆಗಳಲ್ಲಿ ಬಳ್ಳಿಯ ಲತೆಗಳನ್ನು ಮತ್ತು ಪೂರ್ವ ಮುಖಭಾಗದಲ್ಲಿ ಆನೆಗಳನ್ನೂ, ದಕ್ಷಿಣಭಾಗದಲ್ಲಿ ಕುದುರೆಗಳನ್ನು, ಪಶ್ಚಿಮದಲ್ಲಿ ಕಾಲುದಳವನ್ನು, ಉತ್ತರದಲ್ಲಿ ರಥಗಳನ್ನು ಕೆತ್ತಲಾಗಿದೆ.

ಸಿಂಹಾಸನ ಮೈಸೂರಿನ ಹೆಮ್ಮೆ
ಸಿಂಹಾಸನದ ದಕ್ಷಿಣದಲ್ಲಿ ಬ್ರಹ್ಮ, ಉತ್ತರದಲ್ಲಿ ಶಿವ, ಮಧ್ಯದಲ್ಲಿ ವಿಷ್ಣುವನ್ನು ನಿಲ್ಲಿಸಲಾಗಿದೆ. ವಿಜಯ ಸೂಚಕ ನಾಲ್ಕು ಸಿಂಹಗಳನ್ನು ಇಡಲಾಗಿದೆ. ಮೂರು ಕೋನಗಳಲ್ಲೂ ರಾಕ್ಷಸ ಶರೀರ, ಎರಡು ಕುದುರೆಗಳು ಮತ್ತು ನಾಲ್ಕು ಹಂಸಪಕ್ಷಿಗಳನ್ನಿಡಲಾಗಿದೆ. ನಾಗದೇವತೆಗಳ ಚಿತ್ರಗಳು, ಸ್ವಸ್ತಿಕ ಆಕೃತಿ ಮತ್ತು ಮುತ್ತಿನ ಹಡಗು ಮೇಲಿನ ಗುಡಾರಗಳ ಚಿತ್ರಣಗಳಿವೆ. ಸಿಂಹಾಸನವನ್ನು ನಾಲ್ಕು ದಿಕ್ಕುಗಳಲ್ಲಿ ತೆರೆಯಲಾಗಿದೆ. ಸಿಂಹಾಸನದ ಛತ್ರಿಯ ಮೇಲೆ ಸಂಸ್ಕೃತದ 96 ಸಾಲುಗಳ ಆಶೀರ್ವಾದ ಪೂರ್ವಕ ಶ್ಲೋಕಗಳಿವೆ.
ಕಾಳಿ ಪುರಾಣದಲ್ಲಿ ಈ ಸಿಂಹಾಸನದ ಮಹತ್ವದ ಕುರಿತಂತೆ ಹೇಳಲಾಗಿದ್ದು, ಸಿಂಹಾಸನಾಧಿಪತಿಯು ದೇವರಿಗೂ ಮತ್ತು ಪ್ರಜೆಗಳಿಗೂ ಪ್ರತಿನಿಧಿಯಾಗಿದ್ದಾನೆಂದು ವರ್ಣಿಸಲಾಗಿದೆ. ಇಂತಹ ಸಿಂಹಾಸನ ಮೈಸೂರಿನ ಹೆಮ್ಮೆಯಾಗಿದೆ. ಅಷ್ಟೇ ಅಲ್ಲದೆ, ಇದನ್ನು ರಕ್ಷಿಸಿಕೊಂಡು ಬಂದಿರುವುದು ಮೈಸೂರು ಮಹಾರಾಜರ ಸಾಧನೆಯಾಗಿದೆ.

ರಾಜವೈಭವದ ಪ್ರತೀಕ ಸಿಂಹಾಸನ
1897ರಲ್ಲಿ ನಡೆದ ಅರಮನೆಯ ಅಗ್ನಿ ದುರಂತದ ವೇಳೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ರಕ್ಷಿಸಲಾಗಿತ್ತು. ಅವತ್ತು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಅರಮನೆ ಉರಿಯುತ್ತಿದ್ದರೆ ಬ್ರಿಟೀಷ್ ಪ್ರತಿನಿಧಿಗಳು ಮತ್ತು ಅರಮನೆಯಲ್ಲಿದ್ದ ಸೇವಕರು ಹಾಗೂ ಬೆಂಕಿ ಆರಿಸಲು ಬಂದಿದ್ದ ಸ್ವಯಂಸೇವಕರು ತಮ್ಮ ಮಾನವ ಶಕ್ತಿಯನ್ನು ಬಳಸಿ ಸಿಂಹಾಸನಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ರಕ್ಷಿಸಿದ್ದು ಇತಿಹಾಸವಾಗಿದೆ.
ಸಿಂಹಾಸನ ಮತ್ತು ದರ್ಬಾರ್ ಮೈಸೂರು ಮಹಾರಾಜರ ಆಡಳಿತಕ್ಕೆ ಹಿಡಿದ ಕೈಕನ್ನಡಿಯಾಗಿ ನಮ್ಮ ಮುಂದಿದೆ. ಈ ಸಿಂಹಾಸನ ಮತ್ತು ರಾಜವೈಭವವನ್ನು ನೋಡಲೆಂದು ಪ್ರವಾಸಿಗರು ಮೈಸೂರು ಅರಮನೆಯತ್ತ ಹೆಜ್ಜೆ ಹಾಕುತ್ತಾರೆ. ಹೀಗಾಗಿ ಮೈಸೂರು ಅರಮನೆ ವಿಶ್ವದಲ್ಲಿ ಅತಿಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿ ಗಮನಸೆಳೆಯುತ್ತಿದೆ.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್












Click it and Unblock the Notifications