ಮೈಸೂರು ರಾಜರ ಶ್ವಾನ ಪ್ರೀತಿಗೆ ಸಾಕ್ಷಿಯಾದ ಸಮಾಧಿ!
ಮೈಸೂರನ್ನು ಆಳಿದ ಮಹಾರಾಜರು ಕಲೆ, ಸಂಸ್ಕೃತಿಯ ಪೋಷಕರು ಎಂಬುದಕ್ಕೆ ನಾವು ಇವತ್ತು ಆಚರಿಸಲ್ಪಡುವ ಐತಿಹಾಸಿಕ ದಸರಾ ಸಾಕ್ಷಿಯಾಗಿದೆ. ಜತೆಗೆ ಇವರು ಪ್ರಾಣಿಪ್ರಿಯರು ಎಂಬುದಕ್ಕೆ ಇವರು ಸಾಕುತ್ತಿದ್ದ, ನಾಯಿ, ಆನೆ, ಕುದುರೆ, ಒಂಟೆ, ಹಸುಗಳು, ಅಷ್ಟೇ ಅಲ್ಲದೆ ನಗರದಲ್ಲಿರುವ ಮೃಗಾಲಯ ನಿದರ್ಶನವಾಗಿದೆ.
ಮೈಸೂರು ಅರಮನೆಯಲ್ಲಿ ನಾಯಿಗಳನ್ನು ಮುದ್ದು ಮಾಡಿ ಸಾಕಲಾಗುತ್ತಿತ್ತು. ಶ್ವಾನ ಪ್ರಿಯರಾಗಿ ರಾಜರು ಅವು ಮೃತಪಟ್ಟಾಗ ನೆನಪಿಗಾಗಿ ಅವುಗಳ ಹೆಸರಿನಲ್ಲಿ ಸಮಾಧಿ ನಿರ್ಮಿಸಿದ್ದರು. ಆಗಿನ ಕಾಲದಲ್ಲಿಯೇ ಅವರು ಶ್ವಾನದ ಮೇಲೆ ಎಷ್ಟೊಂದು ಪ್ರೀತಿ ತೋರಿಸುತ್ತಿದ್ದರು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಇವತ್ತು ಮೈಸೂರು ನಗರದಾದ್ಯಂತ ಅಡ್ಡಾಡಿದರೆ ಮೈಸೂರಿನ ಇತಿಹಾಸ ಕಥೆ ಹೇಳುವುದಕ್ಕೆ ಹಲವು ಸ್ಮಾರಕಗಳು ಎದ್ದು ನಿಂತಿವೆಯೇನೋ ಎಂಬಂತೆ ಭಾಸವಾಗುತ್ತದೆ.
ಇನ್ನು ವಿಜಯನಗರದ ಸಾಮ್ರಾಜ್ಯವಿದ್ದ ಕಾಲದಲ್ಲಿ ಕನ್ನಡದ ಸಾಹಿತ್ಯ, ಸಂಗೀತ, ಸಂಗೀತ, ಸಂಸ್ಕೃತಿ ಮೇಳೈಸಿತ್ತು. ರಾಜ್ಯ ಸಂಪದ್ಭರಿತವಾಗಿತ್ತು ಎಂಬ ವಿಚಾರಗಳು ಇತಿಹಾಸದಿಂದ ತಿಳಿದು ಬರುತ್ತದೆ. ಆದರೆ ವಿಜಯನಗರ ಪತನದ ನಂತರ ಕತ್ತಲಾಗಿದ್ದ ಕನ್ನಡದ ಸಂಸ್ಕೃತಿ ಮೈಸೂರಿನಲ್ಲಿ ಬೆಳಗಿತು. ಅಲ್ಲಿ ಆರಿದ ಕಿಡಿ ಇಲ್ಲಿ ಪ್ರಜ್ವಲಿಸಿತು. ವಿಜಯನಗರದ ಯುದ್ಧದಲ್ಲಿ ಸಿಡಿದು ಒಡೆದ ಮಹಾತಾಯಿ ಭುವನೇಶ್ವರಿ ದೇವಿಯ ಕಿರೀಟದಿಂದ ಉದುರಿದ ನವರತ್ನವೇ ಮೈಸೂರು ಎಂದು ಮೈಸೂರಿನ ಅಧ್ಯಯನ ಮಾಡಿದ ಬರಹಗಾರ ಎಂ.ಕೆ.ಲಿಂಗಯ್ಯ ಹೇಳಿದ್ದಾರೆ.

ಕಂಚಿನ ಹುಲಿಗಳ ಪ್ರತಿಮೆ
ಮೈಸೂರು ರಾಜರ ಪ್ರಾಣಿಪ್ರೀತಿ ಯಾವ ಮಟ್ಟಿಗೆ ಇತ್ತೆಂದರೆ ಅರಮನೆ ಆವರಣಕ್ಕೆ ಹುಲಿಯೂ ಬಂದು ಹೋಗುತ್ತಿತ್ತಂತೆ. ಅದು ಕಾಣಿಸದೆ ಇದ್ದಾಗ ಅದರ ನೆನಪಿಗಾಗಿ ಆವರಣದಲ್ಲಿ ಕಂಚಿನ ಹುಲಿಗಳ ಪ್ರತಿಮೆಯನ್ನು ನಿರ್ಮಿಸಲಾಯಿತು ಎನ್ನಲಾಗಿದೆ. ಹಾಗೆಯೇ ಅರಮನೆಯಲ್ಲಿ ಹಲವು ಸಾಕು ನಾಯಿಗಳಿದ್ದವು. ಈ ಪೈಕಿ ಟಾಮ್, ಬಾಬಿ, ಮಿಕ್ಕಿ, ಮಿನ್ನಿ ಮತ್ತು ಮಿಟ್ಸೇಜ್ ಗೈರ್ಸ್ ಎಂಬ ಐದು ಶ್ವಾನಗಳು ಪ್ರಮುಖವಾಗಿದ್ದು, ಇವುಗಳು ಸಾವನ್ನಪ್ಪಿದಾಗ ಅವುಗಳ ನೆನಪಿಗಾಗಿ ಬೇರೆ ಬೇರೆ ಕಡೆ ಅಂತ್ಯಕ್ರಿಯೆ ನಡೆಸಿ ಸಮಾಧಿ ನಿರ್ಮಿಸಿದ್ದರು.

ಮುದ್ದಿನ ಶ‍್ವಾನಗಳಿಗೆ ಕಲ್ಲಿನ ಸ್ಮಾರಕ
ಅಂದು ಮಹಾರಾಜರು ತಮ್ಮ ಮುದ್ದಿನ ಶ‍್ವಾನಗಳ ನೆನಪಿಗಾಗಿ ಅವುಗಳ ಹೆಸರು ಹಾಗೂ ಅವುಗಳು ಮರಣ ಹೊಂದಿರುವ ದಿನಾಂಕವನ್ನೊಳಗೊಂಡ ಕಲ್ಲಿನ ಸ್ಮಾರಕ ಸ್ಥಾಪಿಸಿದ್ದರು. ಇಂತಹ ಸ್ಮಾರಕಗಳು ಮೈಸೂರು ವಿವಿ ವ್ಯಾಪ್ತಿಯಲ್ಲಿದ್ದವು. ಆದರೆ ಆ ಜಾಗದಲ್ಲಿ ಇಂದು ಮುಕ್ತ ವಿವಿಯ ಕಟ್ಟಡ ನಿರ್ಮಾಣವಾಗಿರುವುದರಿಂದ ಅಲ್ಲಿದ್ದ ಶ್ವಾನಗಳ ಕಲ್ಲಿನ ಸ್ಮಾರಕಗಳನ್ನು ಸ್ಥಳಾಂತರ ಮಾಡಿ ಮಾನಸ ಗಂಗೋತ್ರಿ ಕ್ಯಾಂಪಸ್‌ನಲ್ಲಿರುವ ಜಯಲಕ್ಷಿ ವಿಲಾಸ್ ಅರಮನೆಯ ಆವರಣದಲ್ಲಿ ತಂದು ಸ್ಥಾಪಿಸಲಾಗಿದೆ. ಇದು ಎಲ್ಲರ ಗಮನಸೆಳೆಯುತ್ತಿದೆ.

550 ವರ್ಷಗಳ ಕಾಲ ಧೀರ್ಘವಾದ ಆಳ್ವಿಕೆ
ಮೈಸೂರು ಸಾಂಸ್ಕೃತಿಕ ನಗರವಾಗಿ ಬೆಳೆಯಲು ಮೈಸೂರು ಸಂಸ್ಥಾನವನ್ನು 550 ವರ್ಷಗಳ ಕಾಲ ಧೀರ್ಘವಾಗಿ ಆಳಿದ ಸುಮಾರು ಇಪ್ಪತ್ತೈದು ಮಹಾರಾಜರು ಕಾರಣರಾಗಿದ್ದಾರೆ. ಇಲ್ಲಿ ಪ್ರತಿಯೊಬ್ಬ ರಾಜರ ಒಂದೊಂದು ಕೊಡುಗೆಗಳು ಎದ್ದು ಕಾಣುತ್ತವೆ. ಒಂದು ರಾಜವಂಶಸ್ಥರು ಸುಮಾರು 550 ವರ್ಷಗಳ ಕಾಲ ಆಡಳಿತ ನಡೆಸುವುದು ಸುಲಭದ ಮಾತಲ್ಲ. ಆದರೆ ಆ ಕೀರ್ತಿ ಮೈಸೂರು ರಾಜರಿಗೆ ಸಲ್ಲುತ್ತದೆ. ಇತಿಹಾಸದ ಪ್ರಕಾರ ಮೈಸೂರು ರಾಜರ ಆಡಳಿತವು 1399ರಿಂದ ಆರಂಭವಾಗುತ್ತದೆಯಲ್ಲದೆ, ಯದುರಾಯರನ್ನು ಯದುವಂಶದ ಸ್ಥಾಪಕರೆಂದು ಹೇಳಲಾಗುತ್ತದೆ. ಉತ್ತರದ ದ್ವಾರಕಾಪಟ್ಟಣದ ರಾಜದೇವನ ಮಗನೇ ಯದುರಾಯ. ಆ ನಂತರ ಮೈಸೂರು ಸಂಸ್ಥಾನದ ಆಳ್ವಿಕೆ ಆರಂಭವಾಗುತ್ತದೆ.

ಮೈಸೂರಿನ ಅಭಿವೃದ್ಧಿಯಲ್ಲಿ ಮಹಾರಾಜರು ಪ್ರಮುಖ ಪಾತ್ರ
ಈ ನಡುವೆ ಹಲವು ರಾಜರು ಆಳ್ವಿಕೆ ನಡೆಸುತ್ತಾರೆ. ಹಲವು ಸಂಕಷ್ಟಗಳನ್ನು ರಾಜರು ಅನುಭವಿಸಬೇಕಾಗುತ್ತದೆ. ಸ್ವಾತಂತ್ರ್ಯದ ಕಿಚ್ಚು ದೇಶದಲ್ಲಿ ಹರಡಿದ ಕಾಲದಲ್ಲಿ ರಾಜ್ಯಭಾರ ನಡೆಸುತ್ತಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಲವು ಅಭಿವೃದ್ಧಿ ಯೋಜನೆಗಳನ್ನು ಮಾಡಿದ್ದರು. ಅವರು 1940ರಲ್ಲಿ ಕಾಲವಾದರು. 1919ರಲ್ಲಿ ಜನಿಸಿದ ಜಯಚಾಮರಾಜೇಂದ್ರ ಒಡೆಯರ್‌ಗೆ 1940ರಲ್ಲಿ ಪಟ್ಟಾಭಿಷೇಕ ನಡೆಯಿತು. ಇವರು ರಾಜ್ಯಭಾರ ವಹಿಸಿಕೊಂಡ ಏಳು ವರ್ಷಕ್ಕೆ ಭಾರತ ಸ್ವಾತಂತ್ರ್ಯವಾಯಿತು.

1950ರಲ್ಲಿ ಅಖಂಡ ಭಾರತದಲ್ಲಿ ಲೀನ
ಆ ನಂತರ 1950ರಲ್ಲಿ ಜಾರಿಗೆ ಬಂದ ರಾಜ್ಯಾಂಗ ರಚನೆಯ ಪ್ರಕಾರ ರಾಜತ್ವ ಕೊನೆಗೊಂಡು ಅಖಂಡ ಭಾರತದಲ್ಲಿ ಲೀನವಾಯಿತು. ಆ ನಂತರ 1950 ರಿಂದ 1956ರವರೆಗೆ ಜಯಚಾಮರಾಜೇಂದ್ರ ಒಡೆಯರ್ ಮೈಸೂರಿನ ಗವರ್ನರ್ ಆಗಿ ಸೇವೆ ಸಲ್ಲಿಸಿದರು. ಅವರು 1974ರಲ್ಲಿ ಕಾಲವಾದರು. ಅಲ್ಲಿಗೆ ಸುಮಾರು 550 ವರ್ಷಗಳ ಮೈಸೂರು ರಾಜರ ರಾಜ್ಯಭಾರವೂ ಕೊನೆಗೊಂಡಿತು. ಆದರೆ ಆಂಗ್ಲರ ಸಹಕಾರದೊಂದಿಗೆ ರಾಜ್ಯವನ್ನು ನಡೆಸುತ್ತಿದ್ದ ಮಹಾರಾಜರು ಮೈಸೂರು ನಗರವನ್ನು ಸುಂದರವಾಗಿ ರೂಪಿಸುವಲ್ಲಿ ಯಶಸ್ವಿಯಾಗಿದ್ದರು.












Click it and Unblock the Notifications