ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Mysuru Dasara Exhibition 2022 : ಮೈಸೂರು ದಸರಾಕ್ಕೆ ಮೆರುಗು ತರಲಿದೆ ವಸ್ತುಪ್ರದರ್ಶನ

By ಬಿಎಂ ಲವಕುಮಾರ್
|
Google Oneindia Kannada News

ಮೈಸೂರು, ಆಗಸ್ಟ್‌ 25: ಮೈಸೂರು ದಸರಾದಲ್ಲಿ ನಡೆಯುವ ಕಾರ್ಯಕ್ರಮ ಮತ್ತು ಸಂಭ್ರಮ ಸೀಮಿತ ಅವಧಿಯದ್ದಾಗಿರುತ್ತದೆ. ಆದರೆ ದಸರಾ ಮುಗಿದರೂ ಸಂಭ್ರಮವನ್ನು ಒಂದಷ್ಟು ಹಿಡಿದಿಡುವುದು ದಸರಾ ವಸ್ತುಪ್ರದರ್ಶನ ಎಂದರೆ ತಪ್ಪಾಗಲಾರದು.

ಮೈಸೂರು ದಸರಾ ವಸ್ತು ಪ್ರದರ್ಶನಕ್ಕೆ ತನ್ನದೇ ಆದ ಹಿನ್ನಲೆಯಿದ್ದು, ವರ್ಷದಿಂದ ವರ್ಷಕ್ಕೆ ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಕೆಲಸವೂ ನಡೆಯುತ್ತಿದೆ. ದಸರಾ ಕಳೆದ ನಂತರವೂ ಜನ ದಸರಾ ವಸ್ತು ಪ್ರದರ್ಶನಕ್ಕೆ ಬಂದು ಒಂದಷ್ಟು ಹೊತ್ತು ಅಡ್ಡಾಡಿ ತಮಗೆ ಬೇಕಾಗಿದ್ದನ್ನು ಖರೀದಿಸಿ, ಇಷ್ಟಪಟ್ಟ ತಿನಿಸನ್ನು ಸವಿದು, ಆಟವಾಡಿ ಸಂತೋಷದಿಂದ ಮನೆಯ ಹಾದಿ ಹಿಡಿಯುತ್ತಾರೆ.

ಮೈಸೂರು ದಸರಾ ಅಂದ್ರೆ... ಸಂಸ್ಕೃತಿಯ ವೈಭವದ ಮೆರವಣಿಗೆಮೈಸೂರು ದಸರಾ ಅಂದ್ರೆ... ಸಂಸ್ಕೃತಿಯ ವೈಭವದ ಮೆರವಣಿಗೆ

ಕಳೆದ ಎರಡು ವರ್ಷಗಳ ಕಾಲ ಕೊರೊನಾ ಕಾರಣದಿಂದ ವಸ್ತುಪ್ರದರ್ಶನ ನಡೆದಿರಲಿಲ್ಲ. ಈ ಬಾರಿ ಅದ್ಧೂರಿ ದಸರಾ ಆಚರಣೆ ವೇಳೆ ವಸ್ತು ಪ್ರದರ್ಶನಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಜನರಿಗೆ ಅನುಕೂಲವಾಗುವಂತೆ ಸುಮಾರು 15 ದಿನಗಳ ಮುಂಚಿತವಾಗಿಯೇ ಅಂದರೆ ದಸರಾ ಉದ‍್ಘಾಟನೆ ದಿನದಂದೇ ಸೆ.26ರಂದು ವಸ್ತುಪ್ರದರ್ಶನದ ಉದ‍್ಘಾಟನೆ ನಡೆಯಲಿದೆ. ಸೆ.26ರಿಂದ ಆರಂಭವಾಗಲಿರುವ ವಸ್ತುಪ್ರದರ್ಶನ ಡಿಸೆಂಬರ್ 12ರವರೆಗೆ ಸುಮಾರು 90 ದಿನಗಳ ಕಾಲ ನಡೆಯಲಿದೆ.

 ಸ್ಯಾಂಡ್ ಮ್ಯೂಸಿಯಂ ಈ ಬಾರಿಯ ಆಕರ್ಷಣೆ

ಸ್ಯಾಂಡ್ ಮ್ಯೂಸಿಯಂ ಈ ಬಾರಿಯ ಆಕರ್ಷಣೆ

ಈ ಬಾರಿ ಎಂದಿನಂತೆ ವಸ್ತುಗಳ ಮಾರಾಟ ಹಾಗೂ ವಿವಿಧ ಇಲಾಖೆಗಳ 48 ಮಳಿಗೆಗಳು ಇರಲಿದ್ದು, ಸೆಪ್ಟೆಂಬರ್‌ 20ಕ್ಕೆ ಎಲ್ಲಾ ಸಿದ್ಧತೆಗಳನ್ನೂ ಪೂರ್ಣಗೊಳಿಸುವ ಸಲುವಾಗಿ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿವೆ. ಕೊರೊನಾ ಕಾರಣದಿಂದಾಗಿ ಜನ ಮೈಸೂರು ವಸ್ತುಪ್ರದರ್ಶನದ ಸಂಭ್ರಮವನ್ನು ಮರೆತಿದ್ದರು. ಹೀಗಾಗಿ ಎರಡು ವರ್ಷಗಳ ಬಳಿಕ ನಡೆಯುತ್ತಿರುವ ವಸ್ತುಪ್ರದರ್ಶನವನ್ನು ವಿಭಿನ್ನ ಹಾಗೂ ವಿಶಿಷ್ಟವಾಗಿಸಲು ಸರ್ವ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಈ ಬಾರಿ ಸ್ಯಾಂಡ್ ಮ್ಯೂಸಿಯಂ, ತ್ರಿಡಿ ಮ್ಯಾಪಿಂಗ್ ಆಕರ್ಷಣೆಯಾಗಿದ್ದು, ಪುನೀತ್ ರಾಜ್‌ಕುಮಾರ್, ಆಜಾದಿ ಕಾ ಅಮೃತ ಮಹೋತ್ಸವದ ಥೀಮ್, ಪ್ರಧಾನಿ ನರೇಂದ್ರ ಮೋದಿ, ವೀರ ಸಾವರ್ಕರ್ ಸೇರಿದಂತೆ ಏಳು ಕಲಾಕೃತಿಗಳು ಸ್ಯಾಂಡ್ ಮ್ಯೂಸಿಯಂಗೆ ಮೆರುಗು ತರಲಿದೆ. ಇದರ ಜತೆಗೆ ಬಹುಮಾಧ್ಯಮ ಕಲಾ ಗ್ಯಾಲರಿಯೂ ಇರಲಿದೆ.

 ಮಳೆಯಿಂದ ಸಮಸ್ಯೆಯಿಲ್ಲ

ಮಳೆಯಿಂದ ಸಮಸ್ಯೆಯಿಲ್ಲ

ಈ ಹಿಂದೆ ಮಳೆ ಸುರಿದಾಗ ವಸ್ತು ಪ್ರದರ್ಶನ ಆಟಗಳನ್ನಿಡುವ ಪ್ರದೇಶ ನೀರಿನಿಂದ ತುಂಬಿ ಹೋಗುತ್ತಿತ್ತು. ಇದರಿಂದ ಬಹಳಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿತ್ತು. ಈ ಬಾರಿ ಆ ರೀತಿಯ ಸಮಸ್ಯೆ ಎದುರಾಗಲ್ಲ ಎನ್ನುವುದು ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಅವರ ಅಭಿಪ್ರಾಯವಾಗಿದೆ.

ಈ ಹಿಂದೆ ಮಳೆ ಬಂದಾಗ ವಸ್ತುಪ್ರದರ್ಶನದ ಆವರಣ ನೀರಿನಿಂದ ತುಂಬಿರುತ್ತಿತ್ತು. ಇದರಿಂದಾಗಿ ಮಳಿಗೆದಾರರು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು. ಪ್ರಾಧಿಕಾರದ ಹಿಂಭಾಗವಿರುವ ಚರಂಡಿಯಲ್ಲಿ ಹೂಳು ತುಂಬಿಕೊಂಡಿದ್ದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗುತ್ತಿರಲಿಲ್ಲ. ಹೂಳನ್ನೆಲ್ಲ ತೆಗೆಸಿದ್ದು, ಮಳೆ ನೀರು ತುಂಬಿಕೊಳ್ಳುವುದಿಲ್ಲ. ಜತೆಗೆ ಆವರಣದಲ್ಲಿ ಕಾಂಕ್ರೀಟ್ ಹಾಕಿಸಲಾಗುವುದು. ಡಾಂಬರೀಕರಣವೂ ನಡೆಯುತ್ತಿದೆ. ಹೀಗಾಗಿ ಈ ಬಾರಿ ಮಳೆ ಸಮಸ್ಯೆ ಕಾಡುವುದಿಲ್ಲ ಎನ್ನುವ ಭರವಸೆ ಅವರದ್ದಾಗಿದೆ.

 ವಯಸ್ಕರಿಗೆ 30, ಮಕ್ಕಳಿಗೆ 20 ರೂ ಪ್ರವೇಶದರ

ವಯಸ್ಕರಿಗೆ 30, ಮಕ್ಕಳಿಗೆ 20 ರೂ ಪ್ರವೇಶದರ

ಇನ್ನು ವಸ್ತು ಪ್ರದರ್ಶನ ಕುರಿತಂತೆ ಹೆಚ್ಚಿನ ಮಾಹಿತಿ ನೀಡಿರುವ ಅವರು, ಸುಮಾರು ತೊಂಬತ್ತು ದಿನಗಳ ಕಾಲ ನಡೆಯುವ ವಸ್ತುಪ್ರದರ್ಶನ ಜನಪರವಾಗಿರಲಿದೆ. ಹಿಂದೆಂದಿಗಿಂತಲೂ ವಿಭಿನ್ನ ಕಾರ್ಯಕ್ರಮಗಳನ್ನು ಈ ಬಾರಿ ಆಯೋಜಿಸಲಾಗಿದೆ. ಸಾರ್ವಜನಿಕರಿಗೆ ವಸ್ತುಪ್ರದರ್ಶನದಲ್ಲಿನ ಮಳಿಗೆಗಳ ಮಾಹಿತಿ ನೀಡುವ ಸಲುವಾಗಿ ಡಿಜಿಟಲ್ ಆಪ್ ಸೌಲಭ್ಯ ಕಲ್ಪಿಸಲಾಗಿದೆ. ಟಿಕೆಟ್ ಕೌಂಟರ್ ಬಳಿ ಆಪ್ ಡೌನ್‌ಲೋಡ್ ಮಾಡಿಕೊಂಡು ವಸ್ತುಪ್ರದರ್ಶನದ ಸಂಪೂರ್ಣ ನಕ್ಷೆ ಹಾಗೂ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಲು ಕ್ರಮ ವಹಿಸಲಾಗುತ್ತದೆ. ವಯಸ್ಕರಿಗೆ 30, ಮಕ್ಕಳಿಗೆ 20 ರೂ ಪ್ರವೇಶದರ ನಿಗದಿಪಡಿಸಲಾಗಿದೆ.

 ಪ್ಲಾಸ್ಟಿಕ್ ಮುಕ್ತ ವಲಯ

ಪ್ಲಾಸ್ಟಿಕ್ ಮುಕ್ತ ವಲಯ

ಅರಣ್ಯ ಇಲಾಖೆ ಹಾಗೂ ಕೃಷಿ ಇಲಾಖೆ ವತಿಯಿಂದ ಸಸಿಗಳು ಹಾಗೂ ಕೃಷಿ ಪರಿಕರಗಳನ್ನು ವಸ್ತುಪ್ರದರ್ಶನ ಪ್ರಾಧಿಕಾರದ ಮಳಿಗೆಗಳಲ್ಲಿ ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತದೆ. ವಸ್ತುಪ್ರದರ್ಶನಕ್ಕೆ ಭೇಟಿ ನೀಡುವ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಪ್ರಾಧಿಕಾರದ ವತಿಯಿಂದ ವ್ಯವಸ್ಥಿತವಾಗಿ ವಿತರಿಸಲು ಆರ್‌ಒ ಪ್ಲಾಂಟ್ ನಿರ್ಮಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ. ವಸ್ತುಪ್ರದರ್ಶನ ಆವರಣದ ಸ್ವಚ್ಛತೆ ಕಾಪಾಡಲು ಕ್ರಮ ವಹಿಸಲಾಗಿದ್ದು, ಪ್ಲಾಸ್ಟಿಕ್ ಮುಕ್ತ ವಲಯ ಎಂದು ಘೋಷಿಸಲಾಗಿದೆ. ಮಾಹಿತಿ ಕೇಂದ್ರ, ಪೊಲೀಸ್ ಉಪಠಾಣೆ, ಅಗ್ನಿಶಾಮಕ ವಾಹನ ಹಾಗೂ ಪ್ರಥಮ ಚಿಕಿತ್ಸಾ ಘಟಕ ತೆರೆಯುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆದಿದ್ದೇವೆ ಎಂದು ತಿಳಿಸಿದ್ದಾರೆ.

 ಹಲವು ಇಲಾಖೆಗಳ ಮಳಿಗೆಗಳ ನಿರ್ಮಾಣ

ಹಲವು ಇಲಾಖೆಗಳ ಮಳಿಗೆಗಳ ನಿರ್ಮಾಣ

ಈ ಬಾರಿ ದಸರಾ ವಸ್ತುಪ್ರದರ್ಶನದ ಅವಧಿಯಲ್ಲಿ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖಾ ಮಳಿಗೆಗಳು, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖಾ, ವಾರ್ತಾ ಇಲಾಖೆ ಮತ್ತು ವಿಶೇಷ ಆಕರ್ಷಣೀಯ ಮಳಿಗೆಗಳನ್ನು ತೆರೆಯಲಾಗುತ್ತದೆ. ಜತೆಗೆ ಮನೊರಂಜನಾ ಪಾರ್ಕ್, ಸ್ಟೈಟ್ರ್ಯಾಕ್ ಮಾನೋ ರೈಲು, ದೋಣಿ ವಿಹಾರ ಮತ್ತು ಜಾಹೀರಾತು ಈವೆಂಟ್ಸ್ ನಿರ್ವಹಣೆ ಹಾಗೂ ಶುಲ್ಕ ವಸೂಲಾತಿ ಹಕ್ಕು ಪಡೆದುಕೊಳ್ಳಲು 8.7 ಕೋಟಿಗೆ ಟೆಂಡರ್ ಆಹ್ವಾನಿಸಲಾಗಿದೆ. ಇಷ್ಟೇ ಅಲ್ಲದೆ ಗ್ಲೋಬಲ್ ಇ-ಟೆಂಡರ್ ಕರೆಯಲಾಗಿದ್ದು, ಎ ಮತ್ತು ಬಿ ಬ್ಲಾಕ್ ಮಳಿಗಗಳು, ಸಿ-ಬ್ಲಾಕ್ ಮಳಿಗೆಗಳು, ತಿಂಡಿ ತಿನಿಸು ಮಳೆಗೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.

ಒಟ್ಟಾರೆ ಈ ಬಾರಿ ಅದ್ಧೂರಿ ದಸರಾ ವಸ್ತುಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದ್ದು, ಇನ್ನೇನೆಲ್ಲ ವಿಶೇಷತೆಗಳನ್ನು ಸೇರ್ಪಡೆಗೊಳಿಸಲಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

English summary
Mysuru Dasara is not just a celebration of a Hindu festival, Celebration of Tradition, Heritage, and Glory and one of the greatest events annually in Karnataka, Dasara Exhibition also bring joy to karnataka people
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X