ಹಜ್ 2022ಕ್ಕೆ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಪ್ರಕಟಿಸಿದ ಕೇಂದ್ರ ಸರ್ಕಾರ
ಮುಂಬೈ, ನವೆಂಬರ್ 2: ಹಜ್ 2022 ಕ್ಕಾಗಿ ಆನ್ ಲೈನ್ ಅರ್ಜಿ ಪ್ರಕ್ರಿಯೆ ಇಂದು ನವೆಂಬರ್ 1 ರಿಂದ ಪ್ರಾರಂಭವಾಗಿದೆ. ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಮುಂಬೈನ ಹಜ್ ಹೌಸ್‌ನಲ್ಲಿ ಪ್ರಕಟಿಸಿದ್ದಾರೆ. ಹಜ್ 2022ರಲ್ಲಿ ಗಮನಾರ್ಹ ಸುಧಾರಣೆಗಳು ಮತ್ತು ವರ್ಧಿತ ಸೌಲಭ್ಯಗಳೊಂದಿಗೆ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ಹಜ್ ಯಾತ್ರೆಯನ್ನು ಘೋಷಿಸಿದ ಸಚಿವರು, "ಇಡೀ ಹಜ್ ಪ್ರಕ್ರಿಯೆಯು ಶೇಕಡಾ 1೦೦ ರಷ್ಟು ಆನ್‌ಲೈನ್‌ನಲ್ಲಿರುತ್ತದೆ. ಜನರು ಆನ್ ಲೈನ್ ನಲ್ಲಿ ಮತ್ತು ಆಧುನಿಕ ಸೌಲಭ್ಯಗಳನ್ನು ಹೊಂದಿರುವ 'ಹಜ್ ಮೊಬೈಲ್ ಆ್ಯಪ್' ಮೂಲಕವೂ ಅರ್ಜಿ ಸಲ್ಲಿಸಬಹುದು. ಹಜ್ 2022ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಜನವರಿ, 2022. 'ಹಜ್ ಆಪ್ ಇನ್ ಯುವರ್ ಹ್ಯಾಂಡ್' ಎಂಬ ಟ್ಯಾಗ್‌ಲೈನ್‌ನೊಂದಿಗೆ ಅಪ್ಲಿಕೇಶನ್‌ಅನ್ನು ನವೀಕರಿಸಲಾಗಿದೆ. ಇದು ಹಲವಾರು ಹೊಸ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಇದರಲ್ಲಿ ಬಹಳ ಸರಳವಾಗಿ ಫಾರ್ಮ್ ಅನ್ನು ಭರ್ತಿ ಮಾಡಲು ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು, ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಮಾಹಿತಿ ಮತ್ತು ಅರ್ಜಿದಾರರಿಗೆ ಮಾಹಿತಿಯನ್ನು ನೀಡುವ ವೀಡಿಯೊಗಳೂ ಸೇರಿವೆ."
ಆಯ್ಕೆ ಪ್ರಕ್ರಿಯೆ, ಡಿಜಿಟಲ್ ಆರೋಗ್ಯ ಕಾರ್ಡ್ ಇನ್ನಿತರ ವಿವರಗಳು ಮುಂದಿವೆ...

ಹಜ್ 2022: ಸ್ಥಳೀಯತೆಗೆ ಧ್ವನಿ
ಈ ಬಾರಿ ಭಾರತೀಯ ಹಜ್ ಯಾತ್ರಿಕರು ಸ್ಥಳೀಯ ಉತ್ಪನ್ನಗಳೊಂದಿಗೆ ಹಜ್ ಗೆ ತೆರಳುತ್ತಿದ್ದು, "ಸ್ಥಳೀಯತೆಗೆ ಧ್ವನಿಯಾಗಿ" ಅನ್ನು ಉತ್ತೇಜಿಸಲಿದ್ದಾರೆ ಎಂದು ಸಚಿವರು ಹೇಳಿದರು. ಈ ಹಿಂದೆ, ಹಜ್ ಯಾತ್ರಿಕರು ಸೌದಿ ಅರೇಬಿಯಾದಲ್ಲಿ ಬೆಡ್‌ಶೀಟ್‌ಗಳು, ದಿಂಬುಗಳು, ಟವೆಲ್‌ಗಳು, ಛತ್ರಿಗಳು ಮತ್ತು ಇತರ ವಸ್ತುಗಳನ್ನು ವಿದೇಶಿ ಹಣ ನೀಡಿ ಖರೀದಿಸುತ್ತಿದ್ದರು. ಈ ಬಾರಿ, ಈ ದೇಶೀಯ ಸರಕುಗಳಲ್ಲಿ ಹೆಚ್ಚಿನವು ಭಾರತದಲ್ಲಿ ಭಾರತೀಯ ಹಣದಲ್ಲಿ ಖರೀದಿಸಿದ್ದಾಗಿರುತ್ತವೆ. ಸೌದಿ ಅರೇಬಿಯಾಕ್ಕೆ ಹೋಲಿಸಿದರೆ ಈ ಸರಕುಗಳ ದರ ಭಾರತದಲ್ಲಿ ಸುಮಾರು ಶೇ.50ರಷ್ಟು ಕಡಿಮೆ ಬೆಲೆಯದ್ದಾಗಿರುತ್ತದೆ, ಇದು "ಸ್ವದೇಶಿ" ಮತ್ತು "ಸ್ಥಳೀಯತೆಗೆ ಧ್ವನಿಯಾಗಿ" ಯನ್ನು ಪ್ರೋತ್ಸಾಹಿಸುತ್ತದೆ. ಈ ಎಲ್ಲಾ ವಸ್ತುಗಳನ್ನು ಹಜ್ ಯಾತ್ರಿಕರಿಗೆ ಭಾರತದಿಂದ ತೆರಳುವ ತಾಣಗಳಲ್ಲಿ ನೀಡಲಾಗುವುದು ಎಂದು ತಿಳಿಸಿದರು.

ಯಾತ್ರಿಕರಿಗೆ ಕೋಟ್ಯಂತರ ರೂಪಾಯಿ ಉಳಿತಾಯ
ದಶಕಗಳಿಂದ ಹಜ್ ಯಾತ್ರಿಕರು ಸೌದಿ ಅರೇಬಿಯಾದಲ್ಲಿ ಈ ಎಲ್ಲಾ ವಸ್ತುಗಳನ್ನು ವಿದೇಶಿ ಹಣ ನೀಡಿ ಖರೀದಿಸುತ್ತಿದ್ದರು ಎಂದು ನಖ್ವಿ ಹೇಳಿದರು. ಕುತೂಹಲಕಾರಿ ಸಂಗತಿಯೆಂದರೆ, ಈ ವಸ್ತುಗಳಲ್ಲಿ ಹೆಚ್ಚಿನವು "ಮೇಡ್ ಇನ್ ಇಂಡಿಯಾ"ದ್ದಾಗಿದ್ದು, ವಿವಿಧ ಕಂಪನಿಗಳು ಭಾರತದಿಂದ ಖರೀದಿಸಿ ಸೌದಿ ಅರೇಬಿಯಾದ ಹಜ್ ಯಾತ್ರಿಕರಿಗೆ ದುಪ್ಪಟ್ಟು ಅಥವಾ ಮೂರು ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದವು. ಒಂದು ಅಂದಾಜಿನ ಪ್ರಕಾರ, ಈ ವ್ಯವಸ್ಥೆಯಿಂದ ಭಾರತೀಯ ಹಜ್ ಯಾತ್ರಿಕರಿಗೆ ಕೋಟ್ಯಂತರ ರೂಪಾಯಿ ಉಳಿತಾಯವಾಗಲಿದೆ ಎಂದು ನಖ್ವಿ ಹೇಳಿದರು. ಪ್ರತಿ ವರ್ಷ 2 ಲಕ್ಷ ಹಜ್ ಯಾತ್ರಿಕರನ್ನು ಭಾರತದಿಂದ ಕಳುಹಿಸಲಾಗುತ್ತದೆ.

ಕೋವಿಡ್-19 ಲಸಿಕೆಯ ಆಧಾರದ ಮೇಲೆ ಆಯ್ಕೆ
ಹಜ್ 2022ರ ಅವಧಿಯಲ್ಲಿ ಕೋವಿಡ್-19 ಶಿಷ್ಟಾಚಾರಗಳನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣ ಲಸಿಕೆಯ ಡೋಸ್‌ಗಳು ಮತ್ತು ಭಾರತ ಮತ್ತು ಸೌದಿ ಅರೇಬಿಯಾ ಸರ್ಕಾರಗಳು ನಿರ್ಧರಿಸುವ ಮಾರ್ಗಸೂಚಿಗಳು ಮತ್ತು ಮಾನದಂಡಗಳೆರಡರ ರೀತ್ಯ ಹಜ್ ಯಾತ್ರಿಕರ ಆಯ್ಕೆ ಪ್ರಕ್ರಿಯೆಯನ್ನು ಮಾಡಲಾಗುವುದು ಎಂದು ನಖ್ವಿ ಹೇಳಿದರು.
ಸಾಂಕ್ರಾಮಿಕ ರೋಗಗಳ ಸವಾಲುಗಳ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ, ಆರೋಗ್ಯ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ನಾಗರಿಕ ವಿಮಾನಯಾನ ಸಚಿವಾಲಯ, ಭಾರತೀಯ ಹಜ್ ಸಮಿತಿ, ಸೌದಿ ಅರೇಬಿಯಾದ ಭಾರತೀಯ ರಾಯಭಾರ ಕಚೇರಿ ಮತ್ತು ಜೆಡ್ಡಾದಲ್ಲಿನ ಭಾರತದ ರಾಯಭಾರ ಕಚೇರಿ ಮತ್ತು ಇತರ ಸಂಸ್ಥೆಗಳ ನಡುವೆ ನಡೆದ ಸಮಾಲೋಚನೆಯ ನಂತರ ಇಡೀ ಹಜ್ 2022 ಪ್ರಕ್ರಿಯೆಯನ್ನು ರೂಪಿಸಲಾಗಿದೆ ಎಂದು ನಖ್ವಿ ಹೇಳಿದರು.

ಹಜ್ 2022 ಗಾಗಿ 10 ವಿದೇಶಕ್ಕೆ ತೆರಳುವ ತಾಣಗಳು
ಹಜ್ 2022ರ ವಿದೇಶಕ್ಕೆ ತೆರಳುವ ಕೇಂದ್ರಗಳನ್ನು 21 ರಿಂದ 10ಕ್ಕೆ ಇಳಿಸಲಾಗಿದೆ. ದೆಹಲಿ, ಮುಂಬೈ, ಕೋಲ್ಕತ್ತಾ, ಅಹಮದಾಬಾದ್, ಹೈದರಾಬಾದ್, ಬೆಂಗಳೂರು, ಲಕ್ನೋ, ಕೊಚ್ಚಿನ್, ಗುವಾಹಟಿ ಮತ್ತು ಶ್ರೀನಗರ ಈ 10 ವಿದೇಶಕ್ಕೆ ತೆರಳುವ ವಿಮಾನ ನಿಲ್ದಾಣಗಳಾಗಿವೆ.
ದೆಹಲಿಯ ವಿಮಾನ ನಿಲ್ದಾಣವು ದೆಹಲಿ, ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ಚಂಡೀಗಢ, ಉತ್ತರಾಖಂಡ, ರಾಜಸ್ಥಾನ, ಉತ್ತರ ಪ್ರದೇಶದ ಪಶ್ಚಿಮ ಜಿಲ್ಲೆಗಳನ್ನು ಒಳಗೊಂಡಿರುತ್ತದೆ.
ಮುಂಬೈ ನಿಲ್ದಾಣವು ಮಹಾರಾಷ್ಟ್ರ, ಗೋವಾ, ಮಧ್ಯಪ್ರದೇಶ, ಛತ್ತೀಸ್ ಗಢ, ದಮನ್ ಮತ್ತು ದಿಯು, ದಾದ್ರಾ ಮತ್ತು ನಗರ ಹವೇಲಿಯನ್ನು ಒಳಗೊಳ್ಳುತ್ತದೆ. ಕೋಲ್ಕತ್ತಾ ನಿಲ್ದಾಣ, ಪಶ್ಚಿಮ ಬಂಗಾಳ, ಒಡಿಶಾ, ತ್ರಿಪುರ, ಜಾರ್ಖಂಡ್ ಮತ್ತು ಬಿಹಾರವನ್ನು ಒಳಗೊಂಡಿರುತ್ತದೆ.
ಅಹಮದಾಬಾದ್ ಇಡೀ ಗುಜರಾತ್ ಅನ್ನು ಒಳಗೊಳ್ಳುತ್ತದೆ. ಬೆಂಗಳೂರು ಇಡೀ ಕರ್ನಾಟಕ ಮತ್ತು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯನ್ನು ಒಳಗೊಳ್ಳುತ್ತದೆ
ಹೈದರಾಬಾದ್ ಆಂಧ್ರಪ್ರದೇಶ ಮತ್ತು ತೆಲಂಗಾಣವನ್ನು ಒಳಗೊಳ್ಳುತ್ತದೆ.
ಲಕ್ನೋ ಪಶ್ಚಿಮ ಭಾಗಗಳನ್ನು ಹೊರತುಪಡಿಸಿ ಉತ್ತರ ಪ್ರದೇಶದ ಎಲ್ಲಾ ಭಾಗಗಳನ್ನು ಒಳಗೊಳ್ಳುತ್ತದೆ. ಕೊಚ್ಚಿನ್ ನಿಲ್ದಾಣ ಕೇರಳ, ಲಕ್ಷದ್ವೀಪ, ಪುದುಚೇರಿ, ತಮಿಳುನಾಡು ಮತ್ತು ಅಂಡಮಾನ್ ನಿಕೋಬಾರ್ ಗಳನ್ನು ಒಳಗೊಳ್ಳುತ್ತದೆ
ಗುವಾಹಟಿ ನಿಲ್ದಾಣ ಅಸ್ಸಾಂ, ಮೇಘಾಲಯ, ಮಣಿಪುರ, ಅರುಣಾಚಲ ಪ್ರದೇಶ, ಸಿಕ್ಕಿಂ ಮತ್ತು ನಾಗಾಲ್ಯಾಂಡ್ ಗಳನ್ನು ಒಳಗೊಳ್ಳುತ್ತದೆ
ಶ್ರೀನಗರ ಜಮ್ಮು-ಕಾಶ್ಮೀರ, ಲೇಹ್-ಲಡಾಖ್-ಕಾರ್ಗಿಲ್ ಅನ್ನು ಒಳಗೊಳ್ಳುತ್ತದೆ.

ಡಿಜಿಟಲ್ ಆರೋಗ್ಯ ಕಾರ್ಡ್
ಡಿಜಿಟಲ್ ಆರೋಗ್ಯ ಕಾರ್ಡ್, "ಇ-ಮಸೀಹಾ" ಆರೋಗ್ಯ ಸೌಲಭ್ಯ ಮತ್ತು "ಇ-ಲಗೇಜ್ ಪ್ರಿ-ಟ್ಯಾಗ್" ಮಕ್ಕಾ-ಮದೀನದಲ್ಲಿ ವಸತಿ/ಸಾರಿಗೆಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಎಲ್ಲಾ ಹಜ್ ಯಾತ್ರಿಕರಿಗೆ ಒದಗಿಸುತ್ತದೆ ಎಂದು ನಖ್ವಿ ಹೇಳಿದರು.
ಮೆಹ್ರೆಮ್ (ಪುರುಷ ಸಹಯಾತ್ರಿ) ಇಲ್ಲದ ಪ್ರವರ್ಗದಲ್ಲಿ 3000ಕ್ಕೂ ಹೆಚ್ಚು ಮಹಿಳೆಯರು ಹಜ್ 2020 ಮತ್ತು 2021ಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ನಖ್ವಿ ಹೇಳಿದರು. ಅವರು ಹಜ್ 2022 ಅನ್ನು ಮಾಡಲು ಹೋಗಲು ಬಯಸಿದರೆ ಅವರ ಅರ್ಜಿಗಳು ಹಜ್ 2022ಕ್ಕೂ ಅರ್ಹವಾಗಿರುತ್ತವೆ. ಇತರ ಮಹಿಳೆಯರು "ಮೆಹ್ರಾಮ್" ಇಲ್ಲದೆ ಹಜ್ 2022ಕ್ಕೆ ಅರ್ಜಿಸಲ್ಲಿಸಬಹುದು. "ಮೆಹ್ರಾಮ್" ಇಲ್ಲದ ಪ್ರವರ್ಗದ ಎಲ್ಲಾ ಮಹಿಳೆಯರಿಗೆ ಲಾಟರಿ ವ್ಯವಸ್ಥೆಯ ಮೂಲಕ ವಿನಾಯಿತಿ ನೀಡಲಾಗುತ್ತದೆ. ಹಜ್ ಮೊಬೈಲ್ ಆಪ್ ಅನ್ನು ಇಲ್ಲಿ ಡೌನ್ ಲೋಡ್ ಮಾಡಬಹುದು. (ಮಾಹಿತಿ ಕೃಪೆ: ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ)