• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಲಕಾಡು ಪಂಚಲಿಂಗ ದರ್ಶನದಲ್ಲಿ ಮುಡುಕುತೊರೆಯ ಮಹತ್ವ

|

ತಲಕಾಡಿನಲ್ಲಿ ಏಳು ವರ್ಷಗಳ ಬಳಿಕ ಮತ್ತೆ ಪಂಚಲಿಂಗ ದರ್ಶನದ ಶುಭ ಗಳಿಗೆ ಕೂಡಿ ಬಂದಿದೆ. ಡಿ.10ರಿಂದ 19ರವರೆಗೆ ಪಂಚಲಿಂಗ ದರ್ಶನ ನಡೆಯಲಿದ್ದು, ಡಿ.14ರಂದು ಪಂಚಲಿಂಗ ದರ್ಶನ ಮಹೋತ್ಸವ ಜರುಗಲಿದೆ. ಈ ಬಾರಿ ಕೊರೊನಾ ಕಾರಣಕ್ಕೆ ಕೇವಲ ಒಂದು ಸಾವಿರ ಮಂದಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲು ಜಿಲ್ಲಾಡಳಿತ ಮುಂದಾಗಿದೆ.

ಪಂಚಲಿಂಗ ದರ್ಶನ ಸಂಪೂರ್ಣವಾಗಬೇಕಾದರೆ ತಲಕಾಡಿನ ನಾಲ್ಕು ಶಿವಲಿಂಗಗಳನ್ನು ದರ್ಶನ ಮಾಡುವುದಲ್ಲದೆ, ತಲಕಾಡಿಗೆ ಮೂರು ಕಿ.ಮೀ. ದೂರದಲ್ಲಿರುವ ಮುಡುಕುತೊರೆಯ ಮಲ್ಲಿಕಾರ್ಜುನ ಲಿಂಗವನ್ನು ದರ್ಶನ ಮಾಡಲೇಬೇಕಾಗಿದೆ. ಮುಡುಕುತೊರೆ ಕೂಡ ಪೌರಾಣಿಕ, ಐತಿಹಾಸಿಕ ಮತ್ತು ಪ್ರಾಕೃತಿಕವಾಗಿ ಸುಂದರ ತಾಣವಾಗಿದ್ದು, ಕಾವೇರಿ ಸೃಷ್ಟಿಸಿದ ಸುಂದರ ತಾಣವಾಗಿಯೂ ಗಮನಸೆಳೆಯುತ್ತಿದೆ. ಈ ತಾಣವು ಮೈಸೂರು ಜಿಲ್ಲೆಯ ತಾಲೂಕು ಕೇಂದ್ರವಾದ ತಿ.ನರಸೀಪುರದಿಂದ 19 ಕಿ.ಮೀ ದೂರದಲ್ಲಿದೆ. ಮುಂದೆ ಓದಿ...

 ಪತ್ನಿ ಸಹಿತ ನೆಲೆನಿಂತ ಮಲ್ಲಿಕಾರ್ಜುನ

ಪತ್ನಿ ಸಹಿತ ನೆಲೆನಿಂತ ಮಲ್ಲಿಕಾರ್ಜುನ

ಇಲ್ಲಿ ಕಾವೇರಿ ನದಿಯು ಪಶ್ಚಿಮದಿಂದ ಉತ್ತರ ದಿಕ್ಕಿನತ್ತ ಹರಿದು, ಪೂರ್ವಕ್ಕೆ ಮುರಿದು ದಕ್ಷಿಣಕ್ಕೆ ಪ್ರವೇಶಿಸಿದ್ದರಿಂದ ಮುಡುಕುತೊರೆ ಎಂಬ ಹೆಸರು ಬಂದಿದೆ ಎನ್ನಲಾಗಿದೆ. ಇಲ್ಲಿನ ಮುನ್ನೂರು ಅಡಿಯಷ್ಟು ಎತ್ತರವಿರುವ ಸೋಮಗಿರಿ ಬೆಟ್ಟದ ಮೇಲೆ ಆದಿದೈವ ಮಲ್ಲಿಕಾರ್ಜುನ ನೆಲೆ ನಿಂತಿದ್ದಾನೆ. ಮತ್ತೊಂದು ವಿಶೇಷತೆ ಏನೆಂದರೆ, ಪತ್ನಿ ಭ್ರಮರಾಂಬೆಯ ಸಹಿತ ಮಲ್ಲಿಕಾರ್ಜುನ ನೆಲೆ ನಿಂತಿರುವುದು. ಸದ್ಯ ಈಗಿರುವ ದೇವಾಲಯವು ಗಂಗರ ಕಾಲದ ರಚನೆಯಾಗಿದೆ. (ಈ ದೇವಾಲಯವನ್ನು ಪುನರುಜ್ಜೀವನಗೊಳಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ) ಇದು ಪಶ್ಚಿಮಾಭಿಮುಖವಾಗಿದ್ದು, ಗರ್ಭಗೃಹ, ಶುಕನಾಸಿ, ಅಂತರಾಳ, ನವರಂಗ ಮತ್ತು ದ್ವಾರಮಂಟಪಗಳನ್ನು ಹೊಂದಿದೆ. ನವರಂಗದಲ್ಲಿ ವರ್ತುಲಾಕೃತಿಯ ಸ್ತಂಭಗಳನ್ನು ಕಾಣಬಹುದು.

ತಲಕಾಡು ಪಂಚಲಿಂಗ ದರ್ಶನಕ್ಕೆ ದಿನಗಣನೆ...

 ಮಲ್ಲಿಕಾರ್ಜುನನ ಶೋಭಾಯಮಾನ ಲಿಂಗ

ಮಲ್ಲಿಕಾರ್ಜುನನ ಶೋಭಾಯಮಾನ ಲಿಂಗ

ಈ ಸ್ತಂಭಗಳಲ್ಲಿ ಗಂಗಶೈಲಿಯನ್ನು ಹೋಲುವಂತಹ ರಾಮ ಲಕ್ಷ್ಮಣ ಹನುಮಂತನ ಚಿತ್ರಗಳು ಕಂಡುಬರುತ್ತವೆ. ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಬಾಗಿಲುಗಳಿದ್ದು, ನವರಂಗದ ಆಗ್ನೇಯ ಭಾಗದಲ್ಲಿ ಎರಡು ಶಿವಲಿಂಗವಿದ್ದರೆ, ಉತ್ತರ ಭಾಗದಲ್ಲಿ ಕುಮಾರಸ್ವಾಮಿಯ ಉತ್ಸವಮೂರ್ತಿ, ನಟರಾಜ, ವಿಘ್ನೇಶ್ವರ, ಶಿವಕಾಮೇಶ್ವರಿ ಅಮ್ಮನವರ ವಿಗ್ರಹಗಳಿವೆ. ಅಲ್ಲದೆ ಶುಕನಾಸಿಯಲ್ಲಿ ವೃಷಭ ಮೂರ್ತಿಯಿದೆ. ದೇಗುಲದ ಗರ್ಭಗುಡಿಯ ಮೇಲೆ ಕಲಶವಿರುವ ವಿಮಾನ, ಒಳಗೆ ಒಂದಡಿ ಚದರಳತೆಯ ಪೀಠದ ಮೇಲೆ ಐದು ಅಂಗುಲ ಪಾದಾಂಕಿತವಿರುವ ಮಲ್ಲಿಕಾರ್ಜುನನ ಶೋಭಾಯಮಾನ ಲಿಂಗವನ್ನು ನಾವು ಕಾಣಬಹುದು.

 ಪಂಚಲಿಂಗಗಳ ಎಂಟು ಪುಟ್ಟ ಗುಡಿ

ಪಂಚಲಿಂಗಗಳ ಎಂಟು ಪುಟ್ಟ ಗುಡಿ

ಮಲ್ಲಿಕಾರ್ಜುನ ದೇಗುಲದ ಬಳಿಯೇ ಪತ್ನಿ ಭ್ರಮರಾಂಬೆಯ ದೇವಾಲಯವಿದ್ದು, ವಿಜಯನಗರ ವಾಸ್ತುಶೈಲಿಯಲ್ಲಿ ದೇವಾಲಯದ ಗರ್ಭಗೃಹ, ಶುಕನಾಸಿ, ನವರಂಗ, ಮುಖಮಂಟಪವಿದೆ. ಗರ್ಭಗುಡಿಯ ಸಿಂಹ ಪೀಠದ ಮೇಲೆ ಐದಡಿ ಎತ್ತರದ ಭ್ರಮರಾಂಬ ವಿಗ್ರಹವಿದೆ. ಈ ಭ್ರಮರಾಂಬ ವಿಗ್ರಹವು ಚತುರ್ಭುಜವನ್ನು ಹೊಂದಿದೆ. ದೇಗುಲದ ಹೊರಭಾಗದ ಗೋಪುರ ಮೂರನೆಯ ಕೃಷ್ಣರಾಜ ಒಡೆಯರ ಕಾಲದಲ್ಲಿ ರೂಪುತಳೆದಿದ್ದು, ಗೋಪುರ ದ್ವಾರದ ಎರಡೂ ಬದಿಯಲ್ಲಿ ಇಟ್ಟಿಗೆ ಮತ್ತು ಗಾರೆಯಿಂದ ರಚಿಸಿದ ಎರಡು ಬಸವನ ವಿಗ್ರಹಗಳಿವೆ. ಈ ಮಂಟಪದ ಮುಂಭಾಗದಲ್ಲಿ ಪಾಕಶಾಲೆ, ಯಾಗಶಾಲೆ ಅಡುಗೆ ಮನೆಗಳಿವೆ.

ಈಶಾನ್ಯ ಭಾಗದಲ್ಲಿ ಗಣಪತಿ ಮತ್ತು ನವಗ್ರಹ ದೇವಸ್ಥಾನವಿದೆ. ಪೂರ್ವದಲ್ಲಿ ದುರ್ಗಾದೇವಿ, ಬಸವೇಶ್ವರ, ಕಾಶಿವಿಶ್ವನಾಥ ಮತ್ತು ಪಂಚಲಿಂಗಗಳ ಎಂಟು ಪುಟ್ಟ ಗುಡಿಗಳಿವೆ. ಆಗ್ನೇಯದಲ್ಲಿ ವೃಷಭಮೂರ್ತಿ ನಾಗಮೂರ್ತಿಗಳಿವೆ. ದಕ್ಷಿಣ ದ್ವಾರದ ಹೊರಗೆ ಮಾದೇಶ್ವರನ ಪಾದಪೀಠದ ಗುಡಿಯಿದೆ. ದೇವಾಲಯದ ಧ್ವಜಸ್ತಂಭವನ್ನು ತಗಡಿನಿಂದ ಮಾಡಲಾಗಿದ್ದು ಇದು ಹನ್ನೆರಡು ಅಡಿ ಎತ್ತರವಿದೆ. ಇದರ ಮುಂದೆ ವೃಷಭೇಶ್ವರ ಮೂರ್ತಿಯ ಕಲ್ಲುಕಂಬವನ್ನು ಕಾಣಬಹುದು.

ಒಂದು ಸಾವಿರ ಜನಕ್ಕೆ ಸೀಮಿತವಾಗಿ ಪಂಚಲಿಂಗ ದರ್ಶನ

 ಪಂಚಲಿಂಗದರ್ಶನದ ವೇಳೆ ನಮೋ ಎನ್ನಿ

ಪಂಚಲಿಂಗದರ್ಶನದ ವೇಳೆ ನಮೋ ಎನ್ನಿ

ಪ್ರಕೃತಿ ರಮಣೀಯ ತಾಣವಾಗಿಯೂ, ಐತಿಹಾಸಿಕ ಕ್ಷೇತ್ರವಾಗಿಯೂ ಗಮನಸೆಳೆದಿರುವ ಮುಡುಕುತೊರೆ ತನ್ನದೇ ಆದ ನಿಸರ್ಗದ ಚೆಲುವು ಹಾಗೂ ದೈವಿಕ ಶಕ್ತಿಯಿಂದ ಆಸ್ತಿಕ ನಾಸ್ತಿಕರೆನ್ನದೆ ಎಲ್ಲರನ್ನು ಸೆಳೆಯುತ್ತದೆ. ಪಂಚಲಿಂಗದರ್ಶನದ ವೇಳೆ ಮುಡುಕುತೊರೆಗೆ ತೆರಳಿ ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಕಾವೇರಿಯನ್ನು ಪ್ರಾರ್ಥಿಸಿ ಬಳಿಕ ಸೋಮಗಿರಿ ಪರ್ವತದಲ್ಲಿರುವ ಭ್ರಮರಾಂಬ ಸಹಿತ ಮಲ್ಲಿಕಾರ್ಜುನೇಶ್ವರನ ದರ್ಶನ ಮಾಡಿ ಪೂಜಿಸುವುದು ಧಾರ್ಮಿಕ ವಿಧಿ ವಿಧಾನ. ಹೀಗಾಗಿಯೇ ಮುಡುಕುತೊರೆಯ ಮಲ್ಲಿಕಾರ್ಜುನನಿಗೆ ಪಂಚಲಿಂಗದರ್ಶನದ ವೇಳೆ ನಮೋ ಎನ್ನಲೇಬೇಕಾಗಿದೆ.

English summary
Talakadu panchalinga darshana is starting after 7 years from dec 14. Here is history of mudukutore and its importance in talakadu panchalinga darshana
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X