
ಮಂಕಿಪಾಕ್ಸ್ ವೈರಸ್‌ನ ರೂಪಾಂತರದ ಅಟಕ್ಕೆ ವಿಜ್ಞಾನಿಗಳು ಅಚ್ಚರಿ
ಲಂಡನ್, ಜೂನ್ 27: ಹೋದ್ಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಲಿ ಎಂಬಂತೆ ಅಲೆಗಳ ರೂಪದಲ್ಲಿ ಕೋವಿಡ್-19 ರೋಗದ ದಾಳಿಯ ಹೊಡೆತದಿಂದ ಇನ್ನೂ ಚೇತರಿಸಿಕೊಳ್ಳದ ಮನುಕುಲಕ್ಕೆ ಈಗ ಮಂಕಿಪಾಕ್ಸ್ ಎಂಬ ಮತ್ತೊಂದು ಕಾಯಿಲೆ ಗಾಬರಿ ಹುಟ್ಟಿಸುತ್ತಿದೆ. ಮಂಕಿಪಾಕ್ಸ್ ವೈರಸ್ ಸೋಂಕು ವಿಶ್ವಾದ್ಯಂತ ಹಲವು ದೇಶಗಳಲ್ಲಿ ಹರಡುತ್ತಿದೆ. ಇದರ ತಳಿಯ ವರ್ತನೆಯನ್ನು ಅಧ್ಯಯನ ನಡೆಸುತ್ತಿರುವ ಸಂಶೋಧಕರು ಕಳವಳಕಾರಿ ಮಾಹಿತಿ ಪತ್ತೆ ಮಾಡಿದ್ದಾರೆ.
ಸಂಶೋಧಕರು ಅಂದಾಜು ಮಾಡಿದ್ದಕ್ಕಿಂತ ಬಹಳ ಹೆಚ್ಚು ವೇಗದಲ್ಲಿ ಮಂಕಿಪಾಕ್ಸ್ ವೈರಸ್ ಸೋಂಕು ರೂಪಾಂತರಗೊಂಡಿದೆಯಂತೆ. ಪೋರ್ಚುಗಲ್‌ನ ನ್ಯಾಷನಲ್ ಇನ್ಸ್‌ಟ್ಯೂಟ್ ಆಫ್ ಹೆಲ್ತ್ ಸಂಸ್ಥೆಯ ಸಂಶೋಧಕರು ವರದಿ ಮಾಡಿರುವ ಪ್ರಕಾರ ಈಗ ಕಾಣಿಸಿಕೊಂಡಿರುವ ಮಂಕಿಪಾಕ್ಸ್ ವೈರಸ್‌ನ 50ಕ್ಕೂ ಹೆಚ್ಚು ರೂಪಾಂತರಿ ತಳಿ ಕಂಡುಬಂದಿದೆಯಂತೆ.
ಮಂಕಿಪಾಕ್ಸ್ ನಿರ್ಲಕ್ಷ್ಯ ಬೇಡ, ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತೆ ಹುಷಾರ್ ಎಂದ ಡಬ್ಲ್ಯೂಎಚ್‌ಒ
2018 ಮತ್ತು 2019ರಲ್ಲಿ ಕಂಡುಬಂದಿದ್ದ ಮಂಕಿಪಾಕ್ಸ್ ವೈರಸ್‌ನ ರೂಪಾಂತರ ತಳಿಗಳ ಸಂಖ್ಯೆಗಿಂತ ಈಗ ಹತ್ತು ಪಟ್ಟು ಹೆಚ್ಚು ಇದೆ. ಈ ರೂಪಾಂತರಿ ವೈರಸ್ ತಳಿ ಬಹಳ ವೇಗದಲ್ಲಿ ವಿಕಾಸ ಹೊಂದುತ್ತಿರುವುದರ ಸುಳಿವು ಇದು ಎನ್ನುತ್ತಾರೆ ಈ ಪೋರ್ಚುಗಲ್ ವಿಜ್ಞಾನಿಗಳು.
ಈ ರೂಪಾಂತರಿ ಮಂಕಿಪಾಕ್ಸ್ ವೈರಾಣುಗಳು ಎಷ್ಟರಮಟ್ಟಿಗೆ ಅಪಾಯಕಾರಿ ಎಂಬುದು ಗೊತ್ತಾಗಿಲ್ಲ. ಸೋಂಕಿನ ವೇಗ ಹೆಚ್ಚಿಸಲು ಈ ರೂಪಾಂತರಿಗಳು ಸಹಾಯವಾಗುತ್ತವಾ ಎಂಬುದೂ ತಿಳಿದುಬಂದಿಲ್ಲ.

ಇಷ್ಟೊಂದು ರೂಪಾಂತರಿಗಳಾ?
ಪೋರ್ಚುಗಲ್‌ನ ವಿಜ್ಞಾನಿಗಳು ಒಟ್ಟು 15 ಮಂಕಿಪಾಕ್ಸ್ ವೈರಸ್‌ನ ಜಿನೋಮ್ ಸೀಕ್ವೆನ್ಸ್‌ಗಳನ್ನು ಸಂಗ್ರಹಿಸಿ, ಅವುಗಳ ತಳಿ ದತ್ತಾಂಶವನ್ನು ಪುನರಾಚರಿಸಿದ್ದಾರೆ.
"ವೈರಾಣು ವಿಕಸನ ಹೊಂದುತ್ತಿರುವುದು ಮತ್ತು ಮನುಷ್ಯರ ದೇಹಕ್ಕೆ ಹೊಂದಿಕೊಳ್ಳುತ್ತಿರುವುದು ನಾವು ಕಲೆಹಾಕಿದ ದತ್ತಾಂಶದಿಂದ ತಿಳಿದುಬಂದಿತ್ತು... ಜನರ ರೋಗನಿರೋಧಕ ವ್ಯವಸ್ಥೆಯೊಂದಿಗೆ ಹೊಂದಿಕೆಯಾಗುವ ವೈರಾಣುವಿನ ಪ್ರೋಟೀನ್‌ಗಳನ್ನು ಗುರುತಿಸಿದ್ದೇವೆ.
"ಈ ರೂಪಾಂತರಿ ಮಂಕಿಪಾಕ್ಸ್ ವೈರಾಣುಗಳಿಂದ ಜನರ ಮಧ್ಯೆ ಸೋಂಕು ಹರಡುವಿಕೆ ಹೆಚ್ಚುತತದಾ ಎಂಬುದು ಗೊತ್ತಾಗಿಲ್ಲ. ಆದರೆ, 50 ರೂಪಾಂತರಿ ತಳಿಗಳು ಸೃಷ್ಟಿಯಾಗುತ್ತವೆ ಎಂಬುದು ಮಾತ್ರ ನಮಗೆ ಅನಿರೀಕ್ಷಿತವಾಗಿದೆ" ಎಂದು ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಹೆಲ್ತ್ ಸಂಸ್ಥೆಯ ಜಿನೋಮಿಕ್ಸ್ ಅಂಡ್ ಬಯೋಇನ್ಫಾರ್ಮ್ಯಾಟಿಕ್ಸ್ ಯೂನಿಟ್‌ನ ಮುಖ್ಯಸ್ಥ ಜೋವೋ ಪೌಲೋ ಗೋಮ್ಸ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಮಂಕಿಪಾಕ್ಸ್ ರೋಗ ನಿಯಂತ್ರಣಕ್ಕೆ ಏನೆಲ್ಲಾ ಕ್ರಮ ಜಾರಿ?

2017ರಲ್ಲಿ ಕಾಣಿಸಿದ ವೈರಸ್ ವಂಶಸ್ಥ
"ಈಗ ಹರಡುತ್ತಿರುವ ಮಂಕಿಪಾಕ್ಸ್ ವೈರಾಣುವು 2017ರಲ್ಲಿ ನೈಜೀರಿಯಾದಲ್ಲಿ ಹರಡಿದ್ದ ಮಂಕಿಪಾಕ್ಸ್ ವೈರಸ್‌ನ ವಂಶಸ್ಥನಂತೆ. ನಾಲ್ಕೈದು ವರ್ಷಗಳಲ್ಲಿ 5ರಿಂದ 10 ಹೆಚ್ಚುವರಿ ರೂಪಾಂತರಿಗಳನ್ನು ನಿರೀಕ್ಷಿಸಬಹುದು. ಆದರೆ 50 ಮ್ಯುಟೇಶನ್‌ಗಳಾಗಿರುವುದು ಅಚ್ಚರಿ ಎನಿಸಿದೆ" ಎಂದು ಗೋಮ್ಸ್ ಅಭಿಪ್ರಾಯಪಟ್ಟಿದ್ದಾರೆ.
ಮಂಕಿಪಾಕ್ಸ್ ವೈರಾಣುವಿನ ರೂಪಾಂತರಿ ತಳಿಗಳು ಸೋಂಕಿನ ಹರಡುವಿಕೆಯನ್ನು ಸುಲಭಗೊಳಿಸಿವೆ ಎಂದು ಮತ್ತೊಬ್ಬ ಅಧ್ಯಯನಕಾರರು ಹೇಳಿದ್ಧಾರೆ.

ಮಂಕಿಪಾಕ್ಸ್ ಹೆಲ್ತ್ ಎಮರ್ಜೆನ್ಸಿಯಾ?
ಮಂಕಿಪಾಕ್ಸ್ ವೈರಸ್ ವಿಚಾರದಲ್ಲಿ ವಿಜ್ಞಾನಿಗಳಲ್ಲಿ ಇನ್ನೂ ಕೆಲ ಗೊಂದಲಗಳಿವೆ. ಮಂಕಿಪಾಕ್ಸ್ ಸೋಂಕು ಹರಡುವಿಕೆಯನ್ನು ಆತಂಕದ ಹೆಲ್ತ್ ಎಮರ್ಜೆನ್ಸಿ ಎಂದು ಘೋಷಿಸುವ ಬಗ್ಗೆ ಭಿನ್ನತೆ ಇದೆ. ಮಂಕಿಪಾಕ್ಸ್ ವೈರಸ್ ಜಾಗತಿಕವಾಗಿ ಕಳವಳಪಡಬೇಕಾದ ಪಬ್ಲಿಕ್ ಹೆಲ್ತ್ ಎಮರ್ಜೆನ್ಸಿಯಾಗಿದೆ ಎಂದು ವಿಜ್ಞಾನಿಗಳ ಸಹಭಾಗಿತ್ವದ ಗುಂಪಾಗಿರುವ ವರ್ಲ್ಡ್ ಹೆಲ್ತ್ ನೆಟ್ವರ್ಕ್ ಕಳೆದ ವಾರ ಹೇಳಿತ್ತು. ಅಂದರೆ ಮಂಕಿಪಾಕ್ಸ್ ಕೇವಲ ಆಫ್ರಿಕಾ ಮತ್ತು ಯೂರೋಪ್‌ನ ಕೆಲವೇ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ, ಎಲ್ಲೆಡೆ ಅಪಾಯಕಾರಿಯಾಗುವ ರೀತಿಯಲ್ಲಿ ಹರಡುತ್ತಿದೆ ಅಥವಾ ಹರಡುವ ಸಾಧ್ಯತೆ ಇದೆ ಎಂಬುದು ಅವರ ಸಂಶಯ.
ಈಗಾಗಲೇ ಬಹಳ ವರ್ಷಗಳಿಂದ ಆಫ್ರಿಕಾದ ಕೆಲವೇ ದೇಶಗಳಿಗೆ ಎಂಡೆಮಿಕ್ ಕಾಯಿಲೆಯಾಗಿ ಸೀಮಿತವಾಗಿದ್ದ ಮಂಕಿಪಾಕ್ಸ್ ವೈರಸ್ ಸೋಂಕು ಈಗ ಬೇರೆ 32 ದೇಶಗಳಲ್ಲಿ ಹರಡುತ್ತಿರುವುದರಿಂದ ಡಬ್ಲ್ಯೂಎಚ್‌ಒ ಅಂತಾರಾಷ್ಟ್ರೀಯ ಆರೋಗ್ಯ ತಜ್ಞರ ತುರ್ತು ಸಭೆಯನ್ನು ಕರೆದು ಚರ್ಚಿಸಿತು. ಮಂಕಿಪಾಕ್ಸ್ ಸೋಂಕಿನ ಬಗ್ಗೆ ಕಳವಳಪಡಬೇಕಾದ್ದು ಹೌದಾದರೂ ಸಾರ್ವಜನಿಕ ಆರೋತ್ಯ ತುರ್ತುಸ್ಥಿತಿ ಎಂದು ಘೋಷಿಸುವ ಅಗತ್ಯ ಇಲ್ಲ ಎಂದು ಈ ಸಭೆಯಲ್ಲಿ ನಿರ್ಧರಿಸಲಾಯಿತೆನ್ನಲಾಗಿದೆ.

ಮಂಕಿಪಾಕ್ಸ್ ಸೋಂಕು ಎಷ್ಟು?
ಆಫ್ರಿಕಾದ ದೇಶಗಳೂ ಸೇರಿ ವಿಶ್ವಾದ್ಯಂತ 50ಕ್ಕೂ ಹೆಚ್ಚು ದೇಶಗಳಲ್ಲಿ ಸದ್ಯ ಮಂಕಿಪಾಕ್ಸ್ ಸೋಂಇನ 3 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅಂದರೆ ದೃಢಪಟ್ಟಿರುವ ಪ್ರಕರಣಗಳು ಇವಾಗಿವೆ. ಇಲ್ಲಿಯವರೆಗೆ ಒಬ್ಬ ವ್ಯಕ್ತಿ ಮಾತ್ರ ಮೃತಪಟ್ಟಿರುವುದು.
ಮಂಕಿಪಾಕ್ಸ್ ಎಂಬುದು ಸಿಡುಬಿನ ಒಂದು ಪ್ರಭೇದ. 1958ರಲ್ಲಿ ಆಫ್ರಿಕಾದ ಪ್ರಯೋಗಾಲಯದಲ್ಲಿ ಇದ್ದ ಕೋತಿಗಳಲ್ಲಿ ಈ ವೈರಾಣು ಮೊದಲಿಗೆ ಕಂಡಿದ್ದು. ಈ ಕಾರಣಕ್ಕೆ ಮಂಕಿಪಾಕ್ಸ್ ಎಂದು ಹೆಸರು ಬಂತು. 1970ರಲ್ಲಿ ಮನುಷ್ಯರಲ್ಲಿ ಮೊದಲ ಬಾರಿಗೆ ಈ ವೈರಸ್ ಇರುವುದು ದೃಢಪಟ್ಟಿದ್ದು.
ವಿಶೇಷ ಏನೆಂದರೆ ಈ ವೈರಸ್ ಮನುಷ್ಯರ ದೇಹ ಪ್ರವೇಶಿಸಿದ ಬಳಿಕ ಗಾತ್ರ ಹಿಗ್ಗಿಹೋಗುತ್ತದೆ. ಸೋಂಕು ಹತ್ತಿ ಜ್ವರ ಶುರುವಾದ ಮೂರ್ನಾಲ್ಕು ದಿನದೊಳಗೆ ಚರ್ಮದಲ್ಲಿ ಸಣ್ಣ ಬೊಕ್ಕೆಗಳಾಗುತ್ತವೆ. ನೀರಿನಿಂದ ಕೂಡಿದ ಈ ಗುಳ್ಳೆಗಳು ಹಳದಿ ಬಣ್ಣದಲ್ಲಿ ಇರುತ್ತದೆ. 2-4 ವಾರಗಳ ಕಾಲ ಈ ಸೋಂಕು ಇರುತ್ತದೆ. ಅದಾದ ಬಳಿಕ ಸೋಂಕಿತರು ಚೇತರಿಸಿಕೊಳ್ಳುತ್ತಾರೆ.
ಈ ಕಾರಣಕ್ಕೆ ಮಂಕಿಪಾಕ್ಸ್ ರೋಗವನ್ನು ಇನ್ನೂ ಅಪಾಯಕಾರಿ ಎಂದು ಯಾರೂ ಪರಿಗಣಿಸಿಲ್ಲ. ಆದರೆ, ಮಧುಮೇಹ, ರಕ್ತದೊತ್ತಡ ಇತ್ಯಾದಿ ಆರೋಗ್ಯಸಮಸ್ಯೆಗಳಿರುವವರಿಗೆ ಈ ರೋಗ ಅಪಾಯಕಾರಿಯಾಗಿರುವ ಸಾಧ್ಯತೆ ಇದೆ. ಈಗ ನಮ್ಮ ಜನಸಂಖ್ಯೆಯಲ್ಲಿ ಬಹಳಷ್ಟು ಮಂದಿಗೆ ಬಿಪಿ, ಶುಗರ್ ಇತ್ಯಾದಿ ಬಾಧೆಗಳು ಇರುವುದರಿಂದ ಮಂಕಿಪಾಕ್ಸ್ ರೋಗವನ್ನು ಗಂಭೀರವಾಗಿ ಪರಿಗಣಿಸಬೇಕಾದ್ದು ಅನಿವಾರ್ಯವೇ.
(ಒನ್ಇಂಡಿಯಾ ಸುದ್ದಿ)