ಆನ್ ಲೈನ್ ಯುಗದಲ್ಲೂ ಎಲ್ಲಿದೆ ಚುನಾವಣೆ ಆಯೋಗ: ಶಾಸಕರ ಸಕಾಲಿಕ ಪತ್ರ
ಜನವರಿ 25ರಂದು ಮತದಾರರ ದಿನ. ಈ ದಿನಕ್ಕೆ ಮಹತ್ವ ತುಂಬುವುದಕ್ಕೆ ಮತ್ತಿನ್ನೇನು ಕಾರಣ ಬೇಕು? ಇಂಥ ದಿನದಲ್ಲಿ ಮಲ್ಲೇಶ್ವರದ ಶಾಸಕ ಡಾ.ಅಶ್ವತ್ಥನಾರಾಯಣ್ ಚುನಾವಣೆ ಆಯೋಗಕ್ಕೆ ಪತ್ರವೊಂದನ್ನು ಬರೆದಿದ್ದಾರೆ. ಚುನಾವಣೆ ವ್ಯವಸ್ಥೆಯಲ್ಲಿ ಆಗಬೇಕಾದ ಬದಲಾವಣೆ ಬಗ್ಗೆ ತಮ್ಮ ಸಲಹೆಗಳನ್ನು ನೀಡಿದ್ದಾರೆ.
ಹದಿನೆಂಟರಿಂದ ಇಪ್ಪತ್ಮೂರರ ವಯೋಮಾನದ ಹದಿನೈದು ಕೋಟಿ ಮತದಾರರು ಇರುವ ಈ ದೇಶದಲ್ಲಿ ಚುನಾವಣೆ ವ್ಯವಸ್ಥೆಯಲ್ಲಿ ಪ್ರಗತಿಪರವಾದ ಸುಧಾರಣೆ ತರುವ ಅಗತ್ಯವಿದೆ ಎಂಬುದು ಶಾಸಕರ ಗಟ್ಟಿ ನಂಬಿಕೆ. ಅಶ್ವತ್ಥನಾರಾಯಣ್ ನೀಡಿರುವ ಸಲಹೆಗಳ ಮುಖ್ಯಾಂಶಗಳು ಇಲ್ಲಿವೆ.
* ಮತದಾರರ ಪಟ್ಟಿ ಪರಿಷ್ಕರಣೆ ಎಂಬುದು ನಿರಂತರವಾದ ಪ್ರಕ್ರಿಯೆ. ಹೆಸರು ಸೇರ್ಪಡೆ, ಪರಿಷ್ಕರಣೆ, ತಪ್ಪಿದ್ದಲ್ಲಿ ಸರಿಪಡಿಸುವುದು, ಹೆಸರುಗಳನ್ನು ಪಟ್ಟಿಯಿಂದ ತೆಗೆಸುವುದು... ಇವೆಲ್ಲ ನಿರಂತರವಾಗಿ ನಡೆಯುತ್ತಲೇ ಇರಬೇಕು. ಸದ್ಯಕ್ಕೆ ಹೆಸರು ತೆಗೆಸಲು ಆಗುತ್ತಿಲ್ಲ. ಫಾರ್ಮ್- 7 ಕಡ್ಡಾಯ ಆಗಿದ್ದರೂ ದಾಖಲೆಗಳಲ್ಲಿ ಹೆಸರಿನ ಪುನರಾವರ್ತನೆಗೆ ಕಾರಣವಾಗುತ್ತಿದೆ.

* ಆಧಾರ್ ನಲ್ಲಿ ಏನೆಲ್ಲ ಒಳ್ಳೆ ಅಂಶಗಳಿವೆಯೋ ಅವುಗಳನ್ನು ಚುನಾವಣೆ ವ್ಯವಸ್ಥೆಯೊಳಗೂ ಅಳವಡಿಸಿಕೊಳ್ಳಬೇಕು. ಆಧಾರ್ ಕಾರ್ಡ್ ನ ಹೇಗೆ ಪೋಸ್ಟ್ ಮೂಲಕ ತಲುಪಿಸುವ ವ್ಯವಸ್ಥೆ ಇದೆಯೋ ಅದೇ ರೀತಿ, ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಆನ್ ಲೈನ್ ಮೂಲಕ ಅರ್ಜಿ ಹಾಕಿದರೆ, ಎಲ್ಲ ಪರಿಶೀಲನೆ ನಂತರ ಮತದಾರರ ಗುರುತಿನ ಚೀಟಿಯನ್ನು ಅರ್ಜಿದಾರರಿಗೆ ಕಳಿಸಬೇಕು. ಮತದಾರರ ಗುರ್ತಿನ ಚೀಟಿಗೆ ಆಧಾರ್ ಜೋಡಣೆ, ಬಯೋಮೆಟ್ರಿಕ್ ಮಾಡುವುದು ಕೂಡ ಉತ್ತಮವೇ. ಈ ಒಂದು ನಡೆಯಿಂದ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ನಾವು, ಇನ್ನೂ ಉತ್ತಮ ಕಾರ್ಯ ನಿರ್ವಹಣೆಯತ್ತ ಹೆಜ್ಜೆ ಹಾಕಿದಂತಾಗುತ್ತದೆ.
* ವಿಪರ್ಯಾಸ ಏನು ಗೊತ್ತಾ? ಆಧುನೀಕತೆಯಲ್ಲಿ ಇಷ್ಟು ಮುಂದುವರಿದ ಕಾಲಘಟ್ಟದಲ್ಲೂ ವಿಲೇವಾರಿ ಆಗದ ನಾಲ್ಕು ಲಕ್ಷ ಆನ್ ಲೈನ್ ಅರ್ಜಿಗಳಿವೆ. ಬಾಕಿ ಅರ್ಜಿಗಳ ವಿಲೇವಾರಿಗೆ ಅಧಿಕಾರಿಗಳಿಗೆ ಅಗತ್ಯವಾದ ಸೌಕರ್ಯಗಳಿಲ್ಲವೆ?

* ಇದಕ್ಕಿಂತ ಹೆಚ್ಚಾಗಿ ಆನ್ ಲೈನ್ ವ್ಯವಸ್ಥೆಯೇ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ನೋಂದಣಿ ಮಾಡಿಕೊಳ್ಳುವವರಿಗೆ ನೋಟಿಫಿಕೇಷನ್ ಪಡೆಯುವುದಕ್ಕೆ ಅವಕಾಶಗಳಿವೆ. ಉದಾಹರಣೆಗೆ, ಬೂತ್ ಬದಲಾವಣೆ ಇತ್ಯಾದಿ. ಕೆಲವೇ ಕೆಲವು ಮತದಾರರಿಗೆ ಈ ಬಗ್ಗೆ ಅರಿವಿದೆ. ಈ ಬಗ್ಗೆ ಸಾಮಾಜಿಕವಾಗಿ ಅರಿವು ಮೂಡಿಸುವುದಕ್ಕೆ ಚುನಾವಣೆ ಆಯೋಗದಿಂದ ದೊಡ್ಡ ಮಟ್ಟದ ಅಭಿಯಾನವೇ ಮಾಡಬೇಕು. ಆ ಮೂಲಕ ಬದಲಾಗುವ ಚುನಾವಣೆ ನಿಯಮಗಳು ಹೇಗೆ ಅವರ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಂಶಗಳು ಕೂಡ ಗೊತ್ತಾಗುತ್ತವೆ.
* ಹೆಸರು ಹೊಂದಾಣಿಕೆ ಆಗ್ತಿಲ್ಲ, ಅಡ್ರೆಸ್ ಪ್ರೂಫ್ ಹೀಗೇ ಇರಬೇಕು ಅಂತೆಲ್ಲ ಹಳೆ ನಿಯಮಗಳು ಏನಿವೆ, ಅದರಲ್ಲೇ ಕೆಲ ಲೋಪ- ಸಮಸ್ಯೆಗಳಿದ್ದು, ಸರಿಪಡಿಸದೇ ಇದ್ದಲ್ಲಿ ಪ್ರಯತ್ನ ಫಲಕಾರಿ ಆಗುವುದಿಲ್ಲ.
* ಬೂತ್ ಮಟ್ಟದ ಅಧಿಕಾರಿಗಳೇ ಸರಿಯಾಗಿ ಕೆಲಸ ಮಾಡಲ್ಲ ಎಂಬುದು ಅಂಗೈ ಹುಣ್ಣಿನಷ್ಟೇ ಸತ್ಯವಾದ ಸಂಗತಿ. ಹಾಗೆ ನೋಡಿದರೆ ಅವರೇ ಸ್ವತಃ ಮನೆಮನೆಗೂ ಭೇಟಿ ಕೊಟ್ಟು ಮಾಹಿತಿ ಪರಿಶೀಲಿಸಬೇಕು. ಆದರೆ ಅವರ ಕರ್ತವ್ಯಲೋಪದ ಕಾರಣಕ್ಕೆ ನಕಲಿ ಹಾಗೂ ಬೋಗಸ್ ಮತದಾರರು ಸೇರ್ಪಡೆಯಾಗುತ್ತಿದ್ದಾರೆ. ಇಡೀ ದೇಶದಲ್ಲಿನ ಲೋಪದ ಪ್ರಯೋಜನವನ್ನು ಬಾಂಗ್ಲಾದೇಶಿ ಅಕ್ರಮ ವಲಸಿಗರು ಪಡೆಯುತ್ತಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ನನ್ನ ರಾಜ್ಯ ಕರ್ನಾಟಕದಲ್ಲೇ ಅಂಥ ಲಕ್ಷಾಂತರ ಅಕ್ರಮ ವಲಸಿಗರ ಹೆಸರು ಮತದಾರರ ಪಟ್ಟಿ ಸೇರಿದೆ. ಆಡಳಿತಾರೂಢ ಪಕ್ಷದ ಸ್ಥಳೀಯ ನಾಯಕರೇ ಈ ಕೆಲಸ ಮಾಡಿಸುತ್ತಿದ್ದಾರೆ. ಆ ಪೈಕಿ ಕೆಲವು ಉದಾಹರಣೆಗಳನ್ನು ಪತ್ರದ ಜತೆ ಲಗತ್ತಿಸಿದ್ದೇನೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ನಿಮ್ಮಲ್ಲಿ ಮನವಿ ಮಾಡ್ತಿದ್ದೀನಿ.











Click it and Unblock the Notifications