ರಾಷ್ಟ್ರ ರಾಜಕಾರಣದಲ್ಲಿ ಮಮತಾ ಬಿತ್ತಿದ ಬಿಜೆಪಿ ಹೊರತಾದ 'ಪರ್ಯಾಯ ರಂಗ'ದ ಹೊಸ ಕನಸು
ಪ್ರಾದೇಶಿಕ ಪಕ್ಷಗಳೆಲ್ಲ ತೃತೀಯ ರಂಗ ಎನ್ನುವ ಹೆಸರಿನಲ್ಲಿ ಒಂದೇ ಗೂಡಿನಲ್ಲಿ ಸೇರಲು ಪ್ರಯತ್ನವನ್ನು ಮತ್ತೆ ಆರಂಭಿಸಿದೆ. ರಾಷ್ಟ್ರ ರಾಜಕಾರಣದಲ್ಲಿ ಇದೇನು ಹೊಸದಲ್ಲ, ಕಳೆದ ಲೋಕಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಮತ್ತು ಚಂದ್ರಬಾಬು ನಾಯ್ಡು ಈ ಪ್ರಯತ್ನಕ್ಕೆ ಮುನ್ನುಡಿಯನ್ನು ಬರೆದಿದ್ದರು.
ಎಲ್ಲಾ ಪ್ರಾದೇಶಿಕ ಪಕ್ಷಗಳ ನಿರೀಕ್ಷಿತ ಬೆಂಬಲ, ಬಿಜೆಪಿ ಮತ್ತು ಕಾಂಗ್ರೆಸ್ ಜೊತೆಗೆಯೇ ರಾಜಕಾರಣ ನಡೆಸೋಣ ಎನ್ನುವ ನಿಲುವಿಗೆ ಕೆಲವು ಪಕ್ಷಗಳು ಅಂಟಿಕೊಂಡಿದ್ದರಿಂದ, ಕಳೆದ ಬಾರಿ ಆ ಪ್ರಯತ್ನಕ್ಕೆ ಫಲ ಸಿಕ್ಕಿರಲಿಲ್ಲ. ದೇಶದ ರಾಜಕೀಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪ್ರಭಲವಾಗಿದ್ದ ವೇಳೆ ಅದನ್ನು ವಿರೋಧಿಸಿ ಪರ್ಯಾಯ ಶಕ್ತಿಯ ಒಕ್ಕೂಟ ರಚನೆಗೆ ಹಿಂದೆ ಕೂಡಾ ಪ್ರಯತ್ನಗಳಾಗಿದ್ದವು.
2019ರ ಲೋಕಸಭಾ ಚುನಾವಣೆಯಲ್ಲಿ ತೆಲುಗುದೇಶಂ ಹೇಳ ಹೆಸರಿಲ್ಲದಂತೆ ಸೋಲುಂಡಿದ್ದು, ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಪಕ್ಷ ನಿರೀಕ್ಷಿತ ರೀತಿಯಲ್ಲಿ ಸಫಲವಾಗದೇ ಇದ್ದದ್ದು, ಪರ್ಯಾಯ ರಂಗದ ಕನಸಿಗೆ ಹಿನ್ನಡೆಯನ್ನು ಉಂಟು ಮಾಡಿತ್ತು.
ಈಗ, ಅಸೆಂಬ್ಲಿ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ನಂತರ ಮಮತಾ ಬ್ಯಾನರ್ಜಿ ಮುಂದಾಳತ್ವದಲ್ಲಿ ತೃತೀಯ ರಂಗದ ಕನಸು ಚಿಗುರೊಡೆಯಲಾರಂಭಿಸಿದೆ. ಇದಕ್ಕೆ ದಕ್ಷಿಣದ ರಾಜ್ಯದಿಂದ ಉತ್ತಮ ಬೆಂಬಲವೂ ಸಿಗುತ್ತಿದೆ. ಇದು ಬಿಜೆಪಿಯಿಂದ ಹೊರತಾದ ಒಕ್ಕೂಟ ರಚನೆಯ ಭಾಗ ಎನ್ನುವುದು ಗಮನಿಸಬೇಕಾದ ವಿಚಾರ.

ಸದ್ಯದ ಮಟ್ಟಿಗೆ ಬಲಾಢ್ಯವಾಗಿರುವುದು ಮಮತಾ ನೇತೃತ್ವದ ತೃಣಮೂಲ ಕಾಂಗ್ರೆಸ್
ದೇಶದಲ್ಲಿರುವ ಹತ್ತು ಹಲವಾರು ಪ್ರಾದೇಶಿಕ ಪಕ್ಷಗಳ ಪೈಕಿ ಸದ್ಯದ ಮಟ್ಟಿಗೆ ಬಲಾಢ್ಯವಾಗಿರುವುದು ಮಮತಾ ನೇತೃತ್ವದ ತೃಣಮೂಲ ಕಾಂಗ್ರೆಸ್. ನಲವತ್ತು ಲೋಕಸಭಾ ಕ್ಷೇತ್ರವನ್ನು ಹೊಂದಿರುವ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸಾಧನೆ ಏನಿರಲಿದೆ ಎನ್ನುವುದರ ಮೇಲೆ ತೃತೀಯ ರಂಗದ ಭವಿಷ್ಯ ನಿರ್ಧಾರವಾಗಲಿದೆ. ದಕ್ಷಿಣದಲ್ಲೂ ಪ್ರಾದೇಶಿಕ ಪಕ್ಷಗಳ ಪ್ರಭಾವ ಹೆಚ್ಚಾಗಿದ್ದರೂ, ಇಲ್ಲಿನ ಪಕ್ಷಗಳಿಗೆ ಒಂದಲ್ಲಾ ಒಂದು ರೀತಿಯಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ಜೊತೆ ನಂಟು ಇದ್ದೇ ಇದೆ.

ತೆಲಂಗಾಣದಲ್ಲಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್‌ಎಸ್
ತಮಿಳುನಾಡಿನಲ್ಲಿ ಸ್ಟಾಲಿನ್ ನೇತೃತ್ವದ ಡಿಎಂಕೆ, ತೆಲಂಗಾಣದಲ್ಲಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್‌ಎಸ್, ಕರ್ನಾಟಕದಲ್ಲಿ ದೇವೇಗೌಡ್ರ ನೇತೃತ್ವದ ಜೆಡಿಎಸ್ ಪಕ್ಷದಿಂದ ಈಗಾಗಲೇ ಮಮತಾ ಬರೆಯಲು ಹೊರಟಿರುವ ಹೊಸ ರಾಜಕೀಯ ಶಕ್ತಿಗೆ ಬೆಂಬಲ ಸಿಕ್ಕಾಗಿದೆ. ಆದರೆ, ತಮಿಳುನಾಡಿನ ಇನ್ನೊಂದು ಪ್ರಭಲ ಪ್ರಾದೇಶಿಕ ಪಕ್ಷವಾದ ಎಐಎಡಿಎಂಕೆ ಮತ್ತು ಆಂಧ್ರ ಪ್ರದೇಶದ ಜಗನ್ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷ, ಪ್ರತ್ಯಕ್ಷ/ಪರೋಕ್ಷವಾಗಿ ಬಿಜೆಪಿ ಜೊತೆಗಿರುವುದರಿಂದ, ದಕ್ಷಿಣದಲ್ಲಿ ಪ್ರಾದೇಶಿಕ ಪಕ್ಷಗಳ ಮಿಲನಕ್ಕೆ ಅಡ್ಡಿಯಾಗಬಹುದು.

ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ
ಇನ್ನು ಮಹಾರಾಷ್ಟ್ರದಲ್ಲಿ ಶಿವಸೇನೆ, ಒಡಿಸ್ಸಾದಲ್ಲಿ ಬಿಜು ಜನತಾದಳ, ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮುಂತಾದ ಪ್ರಾದೇಶಿಕ ಪಕ್ಷಗಳ ಬೆಂಬಲ ಮಮತಾ ಬ್ಯಾನರ್ಜಿಗೆ ಸಿಗದೇ ಇರಬಹುದು. ಅದೇ ರೀತಿ, ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ನಿಲುವು ಏನಿರಲಿದೆ ಎನ್ನುವುದೂ ಗಮನಿಸಬೇಕಾದ ವಿಚಾರ. ರಾಷ್ಟ್ರ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರವನ್ನು ಬರೆಯುವ ಉತ್ತರ ಪ್ರದೇಶದ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜಪಕ್ಷದ ಬೆಂಬಲ ಮಮತಾ ಬ್ಯಾನರ್ಜಿಗೆ ಸಿಗಬಹುದು.

ಪರ್ಯಾಯ ರಂಗದಲ್ಲಿ ಕಾಂಗ್ರೆಸ್ಸಿನ ಪಾತ್ರವೇನು ಎನ್ನುವುದು ಪ್ರಶ್ನೆ
ಪರ್ಯಾಯ ರಂಗದಲ್ಲಿ ಕಾಂಗ್ರೆಸ್ಸಿನ ಪಾತ್ರವೇನು ಎನ್ನುವುದನ್ನು ಈಗಾಗಲೇ ಮಮತಾ ಬ್ಯಾನರ್ಜಿ ಪರೋಕ್ಷವಾಗಿ ಸ್ಪಷ್ಟ ಪಡಿಸಿದ್ದಾರೆ. ಪರ್ಯಾಯ ರಂಗ ಎನ್ನುವುದು ಬಿಜೆಪಿ ಮತ್ತು ಕಾಂಗ್ರೆಸ್ ಹೊರತಾದ ಘಟಬಂಧನವಾಗಿರಲಿದೆ. ದೆಹಲಿಗೆ ಹೋದರೂ ಸೋನಿಯಾ ಮತ್ತು ರಾಹುಲ್ ಗಾಂಧಿ ಜೊತೆ ಅಂತರವನ್ನು ಕಾಯ್ದುಕೊಳ್ಳುತ್ತಿರುವ ಮಮತಾಗೆ ಮತ್ತು ಒಕ್ಕೂಟಕ್ಕೆ ಸೇರಲು ಬಯಸುತ್ತಿರುವ ಪ್ರಾದೇಶಿಕ ಪಕ್ಷಗಳಿಗೆ ಎರಡೂ ರಾಷ್ಟ್ರೀಯ ಪಕ್ಷಗಳ ಸಹವಾಸ ಬೇಕಾದಂತೆ ಕಾಣಿಸುತ್ತಿಲ್ಲ.

ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯುವುದು
ಪರ್ಯಾಯ ರಂಗದ ಮೂಲ ಉದ್ದೇಶವೇ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯುವುದು. ಆದರೆ, ಕಾಂಗ್ರೆಸ್ ಅನ್ನು ದೂರವಿಟ್ಟು ಸಾಧ್ಯವೇ ಎನ್ನುವುದಿಲ್ಲಿ ಮಿಲಿಯನ್ ಡಾಲರ್ ಪ್ರಶ್ನೆ. ಯಾಕೆಂದರೆ, ಗುಜರಾತ್, ಉತ್ತರಾಖಂಡ, ಕರ್ನಾಟಕ, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ ಮುಂತಾದ ಕಡೆ ಈಗಲೂ ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದರೆ, ಪಂಜಾಬ್ ಮತ್ತು ರಾಜಸ್ಥಾಅನದಲ್ಲಿ ಅಧಿಕಾರದಲ್ಲಿದೆ. ಹಾಗಾಗಿ, ಕಾಂಗ್ರೆಸ್ ಹೊರತಾದ ಒಕ್ಕೂಟ ರಚನೆ/ಸರಕಾರ ರಚಿಸುವ ಕನಸು ನನಸಾಗುವುದು ಕನಸಿನ ಮಾತೇ..












Click it and Unblock the Notifications