ಮುಂದಿನ ಕುಂಭ ಮೇಳ ಎಲ್ಲಿ..ಯಾವಾಗ..ನಡೆಯಲಿದೆ? ಇಲ್ಲಿದೆ ವಿವರ
ಭಾರತ ಮಾತ್ರವಲ್ಲದೇ ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಉತ್ಸವ ಎಂದರೆ ಅದು ಕುಂಭ ಮೇಳ. ಈ ಬಾರಿ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭ ಮೇಳ ಅದ್ಧೂರಿಯಾಗಿ ನಡೆದು ಸಂಪನ್ನಗೊಂಡಿದೆ. ಈ ವರ್ಷದ ಮಕರ ಸಂಕ್ರಾತಿಯ ಹಿಂದಿನ ದಿನ ಅಂದರೆ ಜನವರಿ 13ರಂದು ಆರಂಭವಾದ ಈ ಮಹಾ ಕುಂಭಮೇಳವು 45 ದಿನಗಳನ್ನು ಯಶಸ್ವಿಯಾಗಿ ಮುಗಿಸಿ, ಇಂದು ಮಹಾ ಶಿವರಾತ್ರಿಯ ದಿನ ಅಮೃತ ಸ್ನಾನದೊಂದಿಗೆ ಕೊನೆಗೊಳ್ಳಲಿದೆ. ಇಂದು ರಾತ್ರಿಯವರೆಗೆ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಇರಲಿದೆ.
ಈ ಬಾರಿಯ ಮಹಾ ಕುಂಭಮೇಳದಲ್ಲಿ 45 ಕೋಟಿ ಭಕ್ತರು ಭಾಗಿಯಾಗುವ ನಿರೀಕ್ಷೆ ಇತ್ತು. ಆದರೆ ಆಯೋಜಕರ ನಿರೀಕ್ಷೆಗೂ ಮೀರಿ ಭಕ್ತ ಸಾಗರ ಹರಿದು ಬಂದಿದ್ದು, ಭಾರತದ ಮೂಲೆ ಮೂಲೆಯಿಂದ ಮಾತ್ರವಲ್ಲದೇ ವಿದೇಶದಿಂದಲೂ ಭಕ್ತರು ಹಾಗೂ ಗಣ್ಯರು ಆಗಮಿಸಿದ್ದು ಸುಮಾರು ಅವರವತ್ತು ಕೋಟಿ ಭಕ್ತರು ಮಹಾ ಕುಂಭ ಮೇಳದಲ್ಲಿ ಪವಿತ್ರ ಸ್ನಾನ ಕೈಗೊಂಡಿದ್ದಾರೆ.

ಈ ಬಾರಿಯ ಮಹಾ ಕುಂಭ ಮೇಳ ಯಶಸ್ವಿಯಾದ ಬೆನ್ನಲ್ಲೇ ಮುಂದಿನ ಕುಂಭ ಮೇಳ ಎಲ್ಲಿ ಎನ್ನುವ ಪ್ರಶ್ನೆ ಈಗಾಗಲೇ ಉದ್ಭವಗೊಂಡಿದೆ. ಮುಂದಿನ ಕುಂಭ ಮೇಳ ಎಲ್ಲಿ ಎನ್ನುವ ಮೊದಲು ಕುಂಭ ಮೇಳದ ಬಗ್ಗೆ ಕೆಲವು ವಿಚಾರಗಳನ್ನು ಈ ಕೆಳಗೆ ನೀಡಲಾಗಿದೆ.
ಕುಂಭ ಮೇಳದ ವಿಧಗಳೇನು?
700 ವರ್ಷಗಳ ಇತಿಹಾಸ ಇರುವ ಈ ಕುಂಭ ಮೇಳವನ್ನು ವರ್ಷಗಳಿಗೆ ಅನುಗುಣವಾಗಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಸಾಮಾನ್ಯವಾಗಿ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿರುವ ಸರಸ್ವತಿ, ಗಂಗಾ ಹಾಗೂ ಯಮುನಾ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಕುಂಭ ಮೇಳವನ್ನು ನಡೆಸಲಾಗುತ್ತದೆ. ಇನ್ನು ಆರು ವರ್ಷಗಳಿಗೊಮ್ಮೆ ಅರ್ಧ ಕುಂಭ ಮೇಳ ನಡೆಸಲಾಗುತ್ತದೆ. ಹಾಗೂ ಸಂಪೂರ್ಣ ಹನ್ನೆರಡು ವರ್ಷಗಳಿಗೊಮ್ಮೆ ಪೂರ್ಣ ಕುಂಭ ಮೇಳ ಎಂದು ಕರೆಯಲಾಗುತ್ತದೆ.
ಎಲ್ಲೆಲ್ಲಿ ಕುಂಭ ಮೇಳ ನಡೆಯುತ್ತದೆ?
ಉತ್ತರಾಖಂಡದ ಗಂಗಾ ನದಿಯ ದಡದಲ್ಲಿರುವ ಹರಿದ್ವಾರದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಮಹಾ ಕುಂಭಮೇಳವನ್ನು ನಡೆಸಲಾಗುತ್ತದೆ. ಅಲ್ಲದೇ ಕೆಲವೊಂದು ಬಾರಿ ಇದೇ ಪ್ರದೇಶದಲ್ಲಿ ಪ್ರತಿ ಆರು ವರ್ಷಗಳಿಗೊಮ್ಮೆ ಅರ್ಧ ಕುಂಭ ಮೇಳವನ್ನು ಸಹ ಆಯೋಜಿಲಾಗುತ್ತದೆ. ಮಹಾರಾಷ್ಟ್ರದ ಗೋದಾವರಿ ನದಿಯ ದಡದಲ್ಲಿರುವ ನಾಸಿಕ್‌ನಲ್ಲಿ ಹಾಗೂ ಮಧ್ಯಪ್ರದೇಶದ ಶಿಪ್ರಾ ನದಿಯ ದಡದಲ್ಲಿರುವ ಉಜ್ಜಯಿನಿಯಲ್ಲಿ ಕುಂಭಮೇಳ ನಡೆಯುತ್ತವೆ.

ಹೀಗಾಗಿ ಮುಂದಿನ ಕುಂಭ ಮೇಳ ಎಲ್ಲಿ ಎನ್ನುವ ಪ್ರಶ್ನೆಗೆ ಈಗಾಗಲೇ ಉತ್ತರ ಸಿಕ್ಕಿದೆ. ಹೌದು ಮುಂದಿನ ಪೂರ್ಣ ಕುಂಭ ಮೇಳ ಮಹಾರಾಷ್ಟ್ರದ ನಾಸಿಕ್‌ನಲ್ಲಿ 2027ರಂದು ನಡೆಯಲಿದೆ. ಮುಂಬರುವ ಪೂರ್ಣ ಕುಂಭ ಮೇಳ ಗೋದಾವರಿ ನದಿ ತೀರದಲ್ಲಿ ನಡಯಲಿದೆ. ಇದನ್ನು ಸಿಂಹ ಹಸ್ತ ಕುಂಭಮೇಳ ಎಂದು ಸಹ ಕರೆಯಲಾಗುತ್ತದೆ. ಸುಮಾರು 17ನೇ ಶತಮಾನದಿಂದಲೂ ಕೂಡ ನಾಸಿಕ್‌ನಲ್ಲಿ ಈ ಕುಂಭ ಮೇಳವನ್ನು ನಡೆಸಿಕೊಂಡು ಬರಲಾಗುತ್ತಿದೆ.












Click it and Unblock the Notifications