MahaKumbh Mela: ಮಹಾ ಕುಂಭಮೇಳದ ಹೆಸರಿನಲ್ಲಿ ಮಹಾವಂಚನೆ: ಭಕ್ತಾದಿಗಳೇ ಎಚ್ಚರ!
ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಜಾಗತೀಕ ಮಟ್ಟದ ಹಿಂದೂ ಧರ್ಮದ ಅತ್ಯಂತ ಬೃಹತ್ ಉತ್ಸವ ಮಹಾ ಕುಂಭಮೇಳ ಕಳೆದೊಂದು ತಿಂಗಳಿನಿಂದ ಯಶಸ್ವಿಯಾಗಿ ನಡೆಯುತ್ತಿದೆ. ದೇಶ ವಿದೇಶದಿಂದ ಕೋಟ್ಯಂತರ ಭಕ್ತರು ಮಹಾ ಕುಂಭಮೇಳಕ್ಕೆ ಆಗಮಿಸುತ್ತಿದ್ದು, ಗಂಗಾ, ಯಮುನಾ ಮತ್ತು ಸರಸ್ವತಿ ಮಹಾ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಕೈಗೊಳ್ಳುತ್ತಿದ್ದಾರೆ. ಆಯೋಜಕರ ನಿರೀಕ್ಷೆಗೂ ಮೀರಿದ ಜನದಟ್ಟಣೆ ಪ್ರಯಾಗ್‌ರಾಜ್‌ನಲ್ಲಿ ಆಗುತ್ತಿದ್ದು, ಈಗಾಗಲೇ ಸುಮಾರು 45 ಕೋಟಿ ಭಕ್ತರು ಮಹಾ ಕುಂಭಮೇಳ ಪುಣ್ಯ ಸ್ನಾನ ಮಾಡಿದ್ದಾರೆ.
ಮಹಾ ಕುಂಭಮೇಳ ಸದ್ಯ ಟ್ರೆಂಡಿಂಗ್‌ನಲ್ಲಿದ್ದು, ಎಲ್ಲೆಡೆ ಕುಂಭಮೇಳದ ಫೋಟೋ ಹಾಗೂ ವಿಡಿಯೋಗಳೇ ಹರಿದಾಡುತ್ತಿದೆ. ಇದನ್ನು ನೋಡುತ್ತಿದ್ದಂತೆ ಎಂತವರಿಗಾದರೂ ಒಮ್ಮೆ ಈ ಧಾರ್ಮಿಕ ಉತ್ಸವದಲ್ಲಿ ಭಾಗಿಯಾಗಬೇಕು ಅನಿಸುತ್ತದೆ. ಹೀಗಾಗಿ ಮಹಾ ಕುಂಭಮೇಳಕ್ಕೆ ಹೋಗುವುದು ಹೇಗೆ? ಕುಂಭಮೇಳದಲ್ಲಿ ಪುಣ್ಯ ಸ್ನಾನ ಕೈಗೊಳ್ಳುವುದು ಹೇಗೆ? ಎನ್ನುವುದರ ಹುಡುಕಾಟದಲ್ಲಿರುತ್ತಾರೆ. ಹೀಗಾಗಿ ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ವಂಚಕರು ಮಹಾ ಕುಂಭಮೇಳದ ಹೆಸರಿನಲ್ಲಿ ಮಹಾ ವಂಚನೆ ಮಾಡುತ್ತಿದ್ದಾರೆ ಭಕ್ತಾದಿಗಳೇ ಎಚ್ಚರ.

144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳದಲ್ಲಿ ಭಾಗಿಯಾಗುವ ಆಸೆ ನಿಮಗೆದೆಯೇ? ಅತೀ ಕಡಿಮೆ ಹಣದಲ್ಲಿ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಲ್ಲಿ ನೀವು ಭಾಗಿಯಬಹುದು. ಐನೂರು ರೂಪಾಯಿಗೆ ನಿಮ್ಮನ್ನು ಮಹಾ ಕುಂಭಮೇಳಕ್ಕೆ ಕರೆದುಕೊಂಡು ಹೋಗಲಾಗುವುದು. ಕೇವಲ ಒಂದು ಸಾವಿರ ರೂಪಾಯಿಯೊಳಗೆ ನಿಮ್ಮ ಮಹಾ ಕುಂಭಮೇಳ ಯಾತ್ರೆ ಮುಗಿಸಬಹುದು ಎನ್ನುವ ಅನೇಕ ಜಾಹಿರಾತುಗಳನ್ನು ನೀವು ನೋಡಿರಬಹುದು. ಸದ್ಯ ಈ ರೀತಿಯ ಜಾಹಿರಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದೆ. ಆದರೆ ಈ ರೀತಿಯ ಜಾಹಿರಾತು ಅಥವಾ ಆಮಿಷಗಳಿಗೆ ಮಾರು ಹೋಗಬೇಡಿ.
ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭಾಗವಹಿಸುವ ಭಕ್ತರಿಗಾಗಿ ಸರ್ಕಾರದಿಂದ ಅನೇಕ ಸೌಲಭ್ಯಗಳನ್ನು ನೀಡಲಾಗಿದೆ. ಪ್ರತಿಯೊಂದು ರಾಜ್ಯದಿಂದ ಕನಿಷ್ಠ ಹತ್ತು ವಿಶೇಷ ರೈಲುಗಳು ಪ್ರಯಾಗ್ ರಾಜ್‌ಗೆ ಸಂಚರಿಸುತ್ತಿದೆ. ಜೊತೆಗೆ ಸರ್ಕಾರದಿಂದಲೇ ಇತರ ವ್ಯವಸ್ಥೆ ಕೂಡ ಇದ್ದು, ಕುಂಭ ಮೇಳಕ್ಕೆ ಹೋಗಬೇಕೆಂದುಕೊಂಡಿರುವ ಭಕ್ತರು ಈ ಸೌಲಭ್ಯಗಳನ್ನು ಬಳಸಿಕೊಳ್ಳಬೇಕಿದೆ.

ಇನ್ನು ಮಹಾ ಕುಂಭಮೇಳದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಖಾಸಗಿ ಜಾಹಿರಾತುಗಳಿಗೆ ಮಾರುಹೋಗಿ ಹಣ ಕಳೆದುಕೊಳ್ಳಬೇಡಿ. ಬದಲಿಗೆ ನಿಮ್ಮ ಕುಟುಂಬಸ್ಥರು ಹಾಗೂ ಆಪ್ತರ ಜೊತೆಗೆ ನೀವೇ ಪ್ರಯಾಗ್ ರಾಜ್ ಪ್ರಯಾಣಕ್ಕೆ ಪ್ಲಾನ್ ಮಾಡುವುದು ಉತ್ತಮವಾಗಿದೆ. ಇನ್ನೂ ಹದಿಮೂರು ದಿನಗಳು ಮಹಾ ಕುಂಭಮೇಳ ನಡೆಯಲಿದ್ದು, ಈ ಬಾರಿ 50 ಕೋಟಿಗೂ ಅಧಿಕ ಭಕ್ತರು ಭಾಗಿಯಾಗುವ ನಿರೀಕ್ಷೆ ಇದೆ.












Click it and Unblock the Notifications