Maha Kumbh Mela 2025: ಮಹಾಕುಂಭ ಮೇಳದಿಂದ ಉತ್ತರ ಪ್ರದೇಶಕ್ಕೆ ಹರಿದು ಬಂದ ಆದಾಯವೆಷ್ಟು?
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳವನ್ನು ಇಡೀ ಜಗತ್ತು ನೋಡುತ್ತಿದೆ. ವಿವಿಧ ರಾಜ್ಯಗಳಿಂದ ಮಾತ್ರವಲ್ಲದೆ ಜಗತ್ತಿನ ಮೂಲೆ ಮೂಲೆಯಿಂದ ಜನ ಇಲ್ಲಿಗೆ ಬಂದು ಪವಿತ್ರ ಸ್ನಾನ ಮಾಡುವ ಮೂಲಕ ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕೋಟ್ಯಂತರ ಭಕ್ತರ ಆಗಮನದಿಂದಾಗಿ ಉತ್ತರ ಪ್ರದೇಶಕ್ಕೆ ಆದಾಯದ ಹೊಳೆ ಕೂಡ ಹರಿದಿದೆ. ಈ ಬಗ್ಗೆ ಖುದ್ದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮಾಹಿತಿ ನೀಡಿದ್ದಾರೆ.
ಉತ್ತರಪ್ರದೇಶ ವಿಧಾನಸಭೆಯಲ್ಲಿ ಸಮಾಜವಾದಿ ಪಕ್ಷದ ಶಾಸಕಿ ರಾಗಿಣಿ ಸೋಂಕರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಯೋಗಿ ಆದಿತ್ಯನಾಥ್ ಉತ್ತರಿಸಿದ್ದಾರೆ. ಇಂದು ಉತ್ತರ ಪ್ರದೇಶದ ಸಾಮರ್ಥ್ಯವನ್ನು ದೇಶ ಮಾತ್ರವಲ್ಲ, ಇಡೀ ಜಗತ್ತು ನೋಡುತ್ತಿದೆ, ಇದು ಮಹಾ ಕುಂಭದ ಸಂಘಟನೆಯೊಂದಿಗೆ ನೇರ ಸಂಬಂಧ ಹೊಂದಿದೆ. ಮಹಾಕುಂಭ ಮೇಳವು ಉತ್ತರಪ್ರದೇಶದ ಆರ್ಥಿಕತೆಯಲ್ಲಿ 3 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಬೆಳವಣಿಗೆಯನ್ನು ತರಲಿದೆ ಎಂದು ಹೇಳಿದ್ದಾರೆ.

ಕಳೆದ ಎಂಟು ವರ್ಷಗಳಲ್ಲಿ ಯುಪಿ ಸರ್ಕಾರ ಎಂಟು ಕೋಟಿಗೂ ಹೆಚ್ಚು ಜನರನ್ನು ಬಡತನ ರೇಖೆಯಿಂದ ಹೊರತಂದಿದೆ. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಕಳೆದ 10 ವರ್ಷಗಳಲ್ಲಿ ನಾವು 25 ಕೋಟಿ ಜನರನ್ನು ಬಡತನ ರೇಖೆಗಿಂತ ಮೇಲಕ್ಕೆ ತರಲು ಸಾಧ್ಯವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಬದಲಾವಣೆಗಳಾಗಿವೆ ಎಂಬುದನ್ನು ಇದು ತೋರಿಸುತ್ತದೆ ಎಂದು ಆದಿತ್ಯನಾಥ್ ತಿಳಿಸಿದ್ದಾರೆ.
ಸ್ವಚ್ಛತೆಗೆ ಒತ್ತು: ಇಲ್ಲಿನ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ದಿನನಿತ್ಯವೂ ಅಪಾರ ಸಂಖ್ಯೆಯ ಭಕ್ತರ ಒಳಹರಿವಿನ ನಡುವೆ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವುದು ಒಂದು ದೊಡ್ಡ ಸವಾಲಾಗಿದೆ. ಈ ಹಿನ್ನೆಲೆ ಖಾಸಗಿ ಹಾಗೂ ಸರ್ಕಾರಿ ಏಜೆನ್ಸಿಗಳು ಸುಮಾರು 1.5 ಲಕ್ಷ ಶೌಚಾಲಯಗಳು ಸೇರಿದಂತೆ ಮಹಾಕುಂಭ ಮೇಳ ನಡೆಯುವ ಪ್ರದೇಶದಲ್ಲಿ ಸ್ವಚ್ಛತೆಗಾಗಿ 1 ಕೋಟಿ ಲೀಟರ್ ಶುದ್ಧೀಕರಣ ಪರಿಕರಗಳನ್ನು ಬಳಸಿವೆ. ಇಲ್ಲಿನ ಟಾಯ್ಲೆಟ್ ಸ್ವಚ್ಛತೆಗಾಗಿ ಸುಧಾರಿತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಉತ್ತರ ಪ್ರದೇಶ ಸರ್ಕಾರವು ಬೆಂಗಳೂರು ವಿಶ್ವವಿದ್ಯಾಲಯದ ನೆರವನ್ನು ಪಡೆದುಕೊಂಡಿದೆ.
ಜನವರಿ 13ರಂದು ಮಹಾಕುಂಭ ಮೇಳ ಶುರುವಾದಾಗಿನಿಂದ ಅಧಿಕಾರಿಗಳು 3.5 ಲಕ್ಷ ಕೆ.ಜಿ ಪ್ರಮಾಣದಷ್ಟು ಬ್ಲೀಚಿಂಗ್ ಪೌಡರ್, 75,600 ಲೀಟರ್ ಫೆನಾಯಿಲ್, 41,000 ಕೆಜಿ ಮ್ಯಾಲಥಿಯಾನ್ ಸೇರಿದಂತೆ ಹೆಚ್ಚಿನ ಪ್ರಮಾಣದ ಸ್ವಚ್ಛತಾ ಪರಿಕರಗಳನ್ನು ಮಹಾಕುಂಭ ಮೇಳದ ಪ್ರದೇಶದಲ್ಲಿ ಸ್ವಚ್ಛತೆಗಾಗಿ ಬಳಸಲಾಗಿದೆ. ಅಲ್ಲದೆ ಮಹಾಕುಂಭ ಮೇಳಕ್ಕೆ ಈವರೆಗೆ 50 ಕೋಟಿಗೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್ ಅವರ ಆದೇಶದ ಮೇರೆಗೆ ಹಲವು ಏಜೆನ್ಸಿಗಳು ಪರಿಸರ ಸ್ನೇಹಿ ಶುಚಿಗೊಳಿಸುವಲ್ಲಿ ಯಶಸ್ವಿಯಾಗಿವೆ. ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಕೂಡ ಉತ್ತಮವಾಗಿ ಜಾರಿಗೊಳಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಮೃತ್ ಅಭಿಜತ್ ತಿಳಿಸಿದ್ದಾರೆ. ಇಲ್ಲಿನ ಶುಚಿತ್ವದ ಮೇಲ್ವಿಚಾರಣೆಗಾಗಿ ವಿಶೇಷ ಅಧಿಕಾರಿಗಳ ತಂಡವನ್ನು ಕೂಡ ನಿಯೋಜಿಸಲಾಗಿದೆ.
ಪ್ರಯಾಗ್‌ರಾಜ್‌ನಲ್ಲಿರುವ ಬಸ್ವರ್ ಸ್ಥಾವರದಲ್ಲಿ ಪ್ರತಿದಿನ ಸುಮಾರು 650 ಮೆಟ್ರಿಕ್ ಟನ್ ಕಸವನ್ನು ಸಂಸ್ಕರಿಸಲಾಗುತ್ತಿದೆ. ಹಸಿ ತ್ಯಾಜ್ಯವನ್ನು ನಿರ್ವಹಿಸಲು 350 ಹೀರುವ ಯಂತ್ರಗಳನ್ನು ಕೂಡ ಮೇಳ ನಡೆಯುವ ಜಾಗದಲ್ಲಿ ನಿಯೋಜಿಸಲಾಗಿದೆ. ತ್ರಿವೇಣಿ ಸಂಗಮದಲ್ಲಿ ನದಿಗಳಲ್ಲಿನ ಮಾಲಿನ್ಯ ತಡೆಗಟ್ಟಲು, ನಗರದಲ್ಲಿ ಮೂರು ಶಾಶ್ವತ ಎಸ್‌ಟಿಪಿ ಸೇರಿದಂತೆ ಮೂರು ಒಳಚರಂಡಿ ಸಂಸ್ಕರಣಾ ಘಟಕಗಳನ್ನು ಕೂಡ ಸ್ಥಾಪಿಸಲಾಗಿದೆ. ಇದರ ಜೊತೆಗೆ ಸ್ವಚ್ಛತೆ ಮೇಲ್ವಿಚಾರಣೆಗೆ ವೈದ್ಯಕೀಯ ಅಧಿಕಾರಿಗಳು, ಮೇಲ್ವಿಚಾರಕರು ಮತ್ತು ವಲಯದ ಉಸ್ತುವಾರಿಗಳನ್ನು ನಿಯೋಜಿಸಲಾಗಿದೆ.












Click it and Unblock the Notifications