Maha Kumbh Mela 2025: ಶೀಘ್ರದಲ್ಲೇ ಉಡುಪಿಯಿಂದ ಮಹಾ ಕುಂಭಮೇಳಕ್ಕೆ ವಿಶೇಷ ರೈಲು
ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಅತಿ ದೊಡ್ಡ ಧಾರ್ಮಿಕ ಉತ್ಸವಾಗಿರುವ ಮಹಾ ಕುಂಭಮೇಳಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದ್ದು, ಈಗಾಗಲೇ ಒಂದು ತಿಂಗಳಲ್ಲಿಯೇ 45 ಕೋಟಿ ಭಕ್ತರು ಭಾಗಿಯಾಗಿದ್ದಾರೆ. 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳದಲ್ಲಿ ಸುಮಾರು 45 ಕೋಟಿ ಭಕ್ತರು ಭಾಗಿಯಾಗುವ ನಿರೀಕ್ಷೆಯಿತ್ತು ಆದರೆ ಆಯೋಜಕರ ನಿರೀಕ್ಷೆಗೂ ಮೀರಿದ ಜನದಟ್ಟಣೆಯಾಗುತ್ತಿದೆ.
ಜನವರಿ 13ರಿಂದ ಆರಂಭವಾದ ಮಹಾ ಕುಂಭಮೇಳದಲ್ಲಿ ಕೋಟ್ಯಂತರ ಭಕ್ತರು, ಸಾಧು-ಸಂತರು ನಾಗಸಾಧುಗಳು, ವಿದೇಶಿ ಭಕ್ತರು ಮಾತ್ರವಲ್ಲದೇ ದೇಶದ ಹಾಗೂ ವಿದೇಶದ ಗಣ್ಯರು ಕೂಡ ಭಾಗಿಯಾಗುತ್ತಿದ್ದಾರೆ. ಈಗಾಗಲೇ 45 ಕೋಟಿ ಭಕ್ತರು ಪುಣ್ಯಸ್ನಾನ ಮಾಡಿದ್ದು, ಇಂದು ಒಂದೇ ದಿನ ಹತ್ತು ಲಕ್ಷಕ್ಕೂ ಅಧಿಕ ಭಕ್ತರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡುವ ನಿರೀಕ್ಷೆ ಇದೆ.

144 ವರ್ಷಗಳಿಗೊಮ್ಮೆ ನಡೆಯುವ ಪ್ರಯಾಗ್ ರಾಜ್‌ನ ಮಹಾ ಕುಂಭಮೇಳಕ್ಕೆ ಕರ್ನಾಟದದಿಂದಲೂ ಅಸಂಖ್ಯಾತ ಜನರು ತೆರಳುತ್ತಿದ್ದು, ಇನ್ನೂ ಲಕ್ಷಾಂತರ ಭಕ್ತರು ಮಹಾ ಕುಂಭಮೇಳಕ್ಕೆ ತೆರಳಲು ಸಜ್ಜಾಗುತ್ತಿದ್ದಾರೆ. ಗಂಗಾ, ಯಮುನಾ ಮತ್ತು ಸರಸ್ವತಿ ಮಹಾ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಇನ್ನೂ ಹದಿನೈದು ದಿನಗಳ ಕಾಲ ಮಹಾ ಕುಂಭಮೇಳ ನಡೆಯಲಿದೆ.
ಇದೀಗ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಭಾಗದಿಂದ ಮಹಾ ಕುಂಭಮೇಳಕ್ಕೆ ತೆರಳಬೇಕು ಎಂದುಕೊಂಡಿರುವ ಭಕ್ತರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಶೀಘ್ರದಲ್ಲೇ ಕೊಂಕಣ ಮಾರ್ಗದಲ್ಲಿ ವಿಶೇಷ ಕುಂಭ ಮೇಳ ರೈಲು ಸಂಚರಿಸಲಿದೆ. ಈ ಬಗ್ಗೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.

'144 ವರ್ಷಗಳಿಗೊಮ್ಮೆ ನಡೆಯುವ ಪ್ರಯಾಗ್ ರಾಜ್‌ನ ಮಹಾ ಕುಂಭ ಮೇಳಕ್ಕೆ ತೆರಳಬೇಕು ಎನ್ನುವ ಅಸಂಖ್ಯಾತ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಭಾಗದ ಹಿಂದೂಗಳ ಆಸೆಗೆ ಪೂರಕವಾಗಿ ಉಡುಪಿಯಿಂದ ಕೊಂಕಣ ಮಾರ್ಗದಲ್ಲಿ ವಿಶೇಷ ಕುಂಭ ಮೇಳ ರೈಲು ಓಡಿಸುವಂತೆ ಕೇಂದ್ರ ರೈಲ್ವೇ ಸಚಿವರಾದ ಅಶ್ವಿನ್ ವೈಷ್ಣವ್ ಅವರ ಬಳಿ ಮನವಿ ಮಾಡಿದ್ದೇನೆ. ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲೇ ಕುಂಭ ಮೇಳ ವಿಶೇಷ ರೈಲು ಉಡುಪಿಯಿಂದ ಪ್ರಯಾಗ್ ರಾಜ್ ನಡುವೆ ಸಂಚಾರಕ್ಕೆ ಅನುವುಮಾಡಿಕೊಡುವ ಭರವಸೆ ನೀಡಿದ್ದಾರೆ'.
'ದೇಶಾದ್ಯಂತ ಎಲ್ಲಾ ನಗರಗಳಿಂದಲೂ ವಿಶೇಷ ರೈಲುಗಳು ಓಡುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆಯ ಕುಂಭ ಮೇಳ ಸೇವೆಗಳು ಉಡುಪಿ ಜಿಲ್ಲೆಯ ಅಸಂಖ್ಯಾತ ಭಕ್ತರಿಗೂ ಲಭಿಸಬೇಕು ಎನ್ನುವ ಕಾರಣದಿಂದ ವಿಶೇಷ ಪ್ರಯತ್ನ ನಡೆಸಲಾಗಿದೆ. ದೇಶಾದ್ಯಂತ ರೈಲು ಬೋಗಿಗಳ ಕೊರತೆಯ ಕಾರಣಗಳನ್ನು ಇಲಾಖೆ ನೀಡುತಿದ್ದರೂ ಸಹ ಸಾಮಾನ್ಯ ಜನರಿಗೂ ಕೈಗೆಟುಕಲಿ ಎಂಬ ದೃಷ್ಟಿಯಿಂದ ಜನರಲ್, ಮತ್ತು ಏಸಿ ಕೋಚ್ ಇರುವ ರೈಲಿನ ವ್ಯವಸ್ಥೆಗೆ ಮನವಿ ಇಟ್ಟಿದ್ದು, ಈ ಬಗ್ಗೆ ಶೀಘ್ರ ಪ್ರಕಟಣೆ ಹೊರ ಬರುವ ನಿರೀಕ್ಷೆ ಇಟ್ಟುಕೊಂಡಿದ್ದೇನೆ. ಈ ಬೇಡಿಕೆ ಈಡೇರಿದ್ದಲ್ಲಿ ಕರಾವಳಿ ಭಾಗದ ಅಸಂಖ್ಯಾತ ಭಕ್ತರು ಕಡಿಮೆ ವೆಚ್ಚದಲ್ಲಿ ಕುಂಭಮೇಳಕ್ಕೆ ತೆರಳುವ ಅವಕಾಶಗಳನ್ನು ಕಾಣಬಹುದಾಗಿದೆ' ಎಂದು ಸಂಸದರು ತಿಳಿಸಿದ್ದಾರೆ.












Click it and Unblock the Notifications