ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ವ್ಯಕ್ತಿ ಪರಿಚಯ

|
Google Oneindia Kannada News

Recommended Video

Lok Sabha Elections 2019 : ರಮೇಶ್ ಜಿಗಜಿಣಗಿ ವ್ಯಕ್ತಿಚಿತ್ರ | Oneindia Kannada

ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ಸಚಿವರಾಗಿರುವ ರಮೇಶ್ ಜಿಗಜಿಣಗಿ ಐದು ಬಾರಿ ಸಂಸದರಾಗಿ ವಿಜಯಪುರ ಲೋಕಸಭೆ ಕ್ಷೇತ್ರದಿಂದ ದೆಹಲಿ ಪ್ರವೇಶಿಸಿದವರು.

ರಮೇಶ್ ಚಂದ್ರಪ್ಪ ಜಿಗಜಿಣಗಿ 1952ರ ಜೂನ್ 28 ರಂದು ಚಂದ್ರಪ್ಪ ಮತ್ತು ಬೋರಮ್ಮ ದಂಪತಿಯ ಮಗನಾಗಿ ವಿಜಯಪುರದ ಅಥರ್ಗಾದಲ್ಲಿ ಜನಿಸಿದರು. ಬಿಎಲ್‌ಡಿಇಎ ಕಲಾ ಕಾಲೇಜಿನಲ್ಲಿ ಬಿಎ ಪದವಿ ಪಡೆದರು. ಬಳಿಕ ತಮ್ಮ ಸ್ನಾತಕೋತ್ತರ ಪದವಿಯನ್ನು ಸಹ ಅಲ್ಲಿಯೇ ಪೂರ್ಣಗೊಳಿಸಿದರು.

ಕೃಷಿ ಕುಟುಂಬದವರಾದ ಅವರು, ದ್ರಾಕ್ಷಿ ಬೆಳೆಗಾರರಾಗಿದ್ದರು. ಆ ಸಂದರ್ಭದಲ್ಲಿ ವೈನ್ ಉದ್ಯಮ ಬೆಳವಣಿಗೆ ಹೊಂದುತ್ತಿತ್ತು. ನಂತರದ ದಿನಗಳಲ್ಲಿ ರಮೇಶ್ ಜಿಗಜಿಣಗಿ ಕರ್ನಾಟಕ ರಾಜ್ಯವು ವೈನ್ ನೀತಿ ಜಾರಿಗೊಳಿಸಿದ ಬಳಿಕ ಹಂಪಿ ಹೆರಿಟೇಜ್ ಎಂಬ ಸ್ವಂತ ವೈನ್ ಉದ್ದಿಮೆಯನ್ನು ಆರಂಭಿಸಿದ್ದರು. ಅವರು ಸಂಗೀತಗಾರರೂ ಹೌದು.

ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಅವರು, ಉತ್ತರ ಕರ್ನಾಟಕದ ಭಾಗಗಳಲ್ಲಿ ರಾಜಕೀಯ ನೆಲೆ ಕಂಡುಕೊಂಡರು. ರಾಜಕೀಯದಲ್ಲಿ ಗುರುತು ಮೂಡಿಸಿದ್ದು, ಕಾಂಗ್ರೆಸ್‌ನ ಬಿ. ಶಂಕರಾನಂದ್ ಅವರನ್ನು ಸೋಲಿಸುವ ಮೂಲಕ. ಚಿಕ್ಕೋಡಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅವರು ಕೇಂದ್ರ ಸಚಿವ ಮತ್ತು ಏಳು ಬಾರಿ ಸಂಸದರಾಗಿದ್ದ ಶಂಕರಾನಂದ್ ಅವರನ್ನು ತಮ್ಮ ಮೊದಲ ಚುನಾವಣೆಯಲ್ಲಿಯೇ 1,31,238 ಮತಗಳ ಅಂತರದಿಂದ ಸೋಲಿಸಿ 12ನೇ ಲೋಕಸಭೆಯನ್ನು ಪ್ರವೇಶಿಸಿದರು.

1998, 1999 ಮತ್ತು 2004ರಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ಲೋಕಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. 2009 ಮತ್ತು 2014ರ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದಿಂದ ಸಂಸದರಾಗಿ ಲೋಕಸಭೆ ಪ್ರವೇಶಿಸಿದ್ದರು.

ಜಿಗಜಿಣಗಿ ರಾಜಕೀಯ ಯಾನ

ಜಿಗಜಿಣಗಿ ರಾಜಕೀಯ ಯಾನ

ಆರಂಭದಲ್ಲಿ ಅವರು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಮಾರ್ಗದರ್ಶನದಲ್ಲಿ ರಾಜಕೀಯದ ಪಾಠ ಕಲಿತರು. ರಾಮಕೃಷ್ಣ ಹೆಗಡೆ ರಾಷ್ಟ್ರೀಯ ನವನಿರ್ಮಾಣ ವೇದಿಕೆ ಸ್ಥಾಪಿಸಿದಾಗ ಅವರಿಗೆ ಬೆಂಬಲವಾಗಿ ಜೊತೆಗೆ ತೆರಳಿದ ಮೊದಲಿಗ ಶಾಸಕರಲ್ಲಿ ಜಿಗಜಿಣಗಿಯೂ ಒಬ್ಬರು. ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಅವರು ಹೊಸ ಪಕ್ಷ ಸೇರಿಕೊಂಡರು.

ಬಳಿಕ ರಾಮಕೃಷ್ಣ ಹೆಗಡೆ ಅವರು ಸ್ಥಾಪಿಸಿದ ಲೋಕಶಕ್ತಿ ಪಕ್ಷವನ್ನು ಸೇರಿಕೊಂಡರು. ಲೋಕಶಕ್ತಿಯು ಸಂಯುಕ್ತ ಜನತಾದಳದೊಂದಿಗೆ ವಿಲೀನವಾದಾಗ ಜನತಾದಳಕ್ಕೆ ಮರುಸೇರ್ಪಡೆಯಾದರು. ರಾಮಕೃಷ್ಣ ಹೆಗಡೆ ಅವರ ನಿಧನದ ಬಳಿಕ ಭಾರತೀಯ ಜನತಾ ಪಕ್ಷವನ್ನು ಸೇರಿಕೊಂಡರು.

ರಮೇಶ್ ಜಿಗಜಿಣಗಿ ಅವರು 1978 ರಲ್ಲಿ ಇಂಡಿ ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯರಾಗಿ ಆಯ್ಕೆಯಾಗಿದ್ದರು. 1980ರಲ್ಲಿ ಇಂಡಿ ಭೂ ನ್ಯಾಯ ಮಂಡಳಿ ಸದಸ್ಯರಾಗಿ ಆಯ್ಕೆಯಾದರು. ನಂತರ ಅವರು ರಾಜ್ಯ ರಾಜಕಾರಣಕ್ಕೆ ಪ್ರವೇಶಿಸಿದರು.

ಶಾಸಕ-ಸಚಿವ-ಸಂಸದರಾಗಿ ರಮೇಶ್

ಶಾಸಕ-ಸಚಿವ-ಸಂಸದರಾಗಿ ರಮೇಶ್

1983 ರಲ್ಲಿ ಬಳ್ಳೊಳ್ಳಿ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ ಅವರು, 1998 ರವರೆಗೆ ಒಟ್ಟು 3 ಬಾರಿ ಈ ಕ್ಷೇತ್ರದಿಂದ ಶಾಸಕರಾಗಿ ಚುನಾಯಿತರಾಗಿದ್ದರು.

1983ರಲ್ಲಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದರು. ನಂತರ 1984-85ರಲ್ಲಿ ಅಬಕಾರಿ ಖಾತೆ ರಾಜ್ಯ ಸಚಿವರಾಗಿದ್ದರು.

1996-98ರ ಅವಧಿಯಲ್ಲಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಸಂಪುಟದಲ್ಲಿ ಸಮಾಜ ಕಲ್ಯಾಣ ಮತ್ತು ಕಂದಾಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

ರಾಜ್ಯ ರಾಜಕಾರಣದಿಂದ ಅವರು ರಾಷ್ಟ್ರ ರಾಜಕಾರಣದೆಡೆಗೆ ಗಮನ ಹರಿಸಿದರು. 1998, 1999 ಮತ್ತು 2004ರಲ್ಲಿ ಸತತವಾಗಿ ಚಿಕ್ಕೋಡಿ ಕ್ಷೇತ್ರದಿಂದ ಸಂಸದರಾಗಿ ಲೋಕಸಭೆ ಪ್ರವೇಶಿಸಿದರು.

ನಂತರ ಕ್ಷೇತ್ರ ಬದಲಿಸಿದರು. 2009 ಮತ್ತು 2014ರಲ್ಲಿ ವಿಜಯಪುರ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು.

ಸಂಸದರಾಗಿ ಅವರು ಹಣಕಾಸು ಸಚಿವಾಲಯದ ಸಂಸದೀಯ ಸಲಹಾ ಸಮಿತಿ ಸದಸ್ಯರಾಗಿ, ವಾಣಿಜ್ಯ ಸಂಸದೀಯ ಸಮಿತಿ ಸದಸ್ಯರಾಗಿ, ಗೃಹ ವ್ಯವಹಾರಗಳ ಸಂಸದೀಯ ಸಮಿತಿ ಹಾಗೂ ಅದರ ಉಪ ಸಮಿತಿಯಾದ ಕೇಂದ್ರ ಅರೆಸೇನಾ ಪಡೆಗಳ ಸಿಬ್ಬಂದಿ ನೀತಿಯ ಸದಸ್ಯರಾಗಿ ಹಾಗೂ ಇತರೆ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ್ದರು.

70 ಸಾವಿರ ಮತಗಳ ಗೆಲುವು

70 ಸಾವಿರ ಮತಗಳ ಗೆಲುವು

2014ರ ಚುನಾವಣೆಯಲ್ಲಿ ಅವರು ವಿಜಯಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಕಾಶ್ ರಾಥೋಡ್ ಅವರ ಎದುರು ಸುಮಾರು 70 ಸಾವಿರ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು. ಜಿಗಜಿಣಗಿ 4,71,757 ಮತಗಳನ್ನು ಪಡೆದಿದ್ದರೆ, ರಾಥೋಡ್ ಅವರು 4,01,938 ಮತಗಳನ್ನು ಪಡೆದುಕೊಂಡಿದ್ದರು. ಚಲಾವಣೆಯಾದ ಮತಗಳಲ್ಲಿ ಶೇ 48.8ರಷ್ಟು ಮತಗಳನ್ನು ಅವರು ಗಳಿಸಿದ್ದರು.

2009ರ ಚುನಾವಣೆಯಲ್ಲಿ ಜಿಗಜಿಣಗಿ ಅವರು 3,08939 ಮತಗಳನ್ನು ಪಡೆದಿದ್ದರೆ, ಅವರ ಎದುರಾಳಿ 2,66,535 ಮತಗಳನ್ನು ಪಡೆದಿದ್ದರು. ಶೇ 47.56ರಷ್ಟು ಮತಗಳು ಅವರಿಗೆ ದೊರೆತಿದ್ದವು.

2004ರ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎಸ್‌ಬಿ ಘಾಟಗೆ ಅವರನ್ನು ಸುಮಾರು 40,000 ಮತಗಳ ಅಂತರದಿಂದ ಸೋಲಿಸಿದ್ದರು. ಜಿಗಜಿಣಗಿ ಅವರು 3,79,580 ಮತಗಳನ್ನು ಪಡೆದಿದ್ದರೆ ಘಾಟಗೆ ಅವರಿಗೆ 3,36,088 ಮತಗಳು ದೊರೆತಿದ್ದವು.

ಜೆಡಿಯುನಿಂದ ಆಯ್ಕೆ

ಜೆಡಿಯುನಿಂದ ಆಯ್ಕೆ

1999ರಲ್ಲಿ ಅವರು ಸಂಯುಕ್ತ ಜನತಾದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆಗ 3,92450 ಮತಗಳು ದೊರೆತಿದ್ದರೆ, ಕಾಂಗ್ರೆಸ್‌ನ ಕಣಗಲಿ ಪಿ. ಅವರಿಗೆ 3,07,860 ಮತಗಳು ಬಂದಿದ್ದವು. ಚಲಾವಣೆಯಾದ ಶೇ 52ರಷ್ಟು ಮತಗಳು ಜಿಗಜಿಣಗಿ ಅವರಿಗೆ ದೊರೆತಿದ್ದವು.

ಅದಕ್ಕೂ ಮೊದಲು 1998ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆ ಅವರ ಪಾದಾರ್ಪಣೆಯ ಚುನಾವಣೆಯಾಗಿತ್ತು. ಈ ಚುನಾವಣೆಯಲ್ಲಿ ಏಳು ಬಾರಿ ಸಂಸದರಾಗಿದ್ದ ಅನುಭವಿ ಕಾಂಗ್ರೆಸ್ ನಾಯಕ ಶಂಕರಾನಂದ್ ಅವರನ್ನು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸುವ ಮೂಲಕ ಲೋಕಸಭೆಗೆ ಮೊದಲ ಹೆಜ್ಜೆ ಇರಿಸಿದ್ದರು. ಜಿಗಜಿಣಗಿ 3,59,760 ಮತಗಳನ್ನು ಗಳಿಸಿದ್ದರೆ, ಶಂಕರಾನಂದ 2,28,522 ಮತಗಳನ್ನು ಪಡೆದಿದ್ದರು. ಚಲಾವಣೆಯಾದ ಮತಗಳಲ್ಲಿ ಶೇ 52.99ರಷ್ಟು ಮತ ಜಿಗಜಿಣಗಿ ಅವರಿಗೆ ಬಿದ್ದಿದ್ದವು.

ಲೋಕಸಭೆಯಲ್ಲಿ ಜಿಗಜಿಣಗಿ ಸಾಧನೆ

ಲೋಕಸಭೆಯಲ್ಲಿ ಜಿಗಜಿಣಗಿ ಸಾಧನೆ

ಸಚಿವ ಜಿಗಜಿಣಗಿ ಅಧಿವೇಶನಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪ್ರಸಕ್ತ ಅವಧಿಯಲ್ಲಿ ರಮೇಶ್ ಜಿಗಜಿಣಗಿ ಸಂಸತ್ ಕಲಾಪಗಳಿಗೆ ಶೇ 97ರಷ್ಟು ಹಾಜರಾತಿ ಹಾಕಿದ್ದಾರೆ. ಆದರೆ, ಕಲಾಪದ ಚಟುವಟಿಕೆಗಳಲ್ಲಿ ಅವರು ತೊಡಿಗಿಸಿಕೊಂಡಿರುವುದು ಕಡಿಮೆ. ಸಂಸದರಾಗಿ ಅವರು ಯಾವುದೇ ಚರ್ಚೆಯಲ್ಲಿ ಭಾಗವಹಿಸಿಲ್ಲ. ಇನ್ನು ಕೇಳಿರುವುದು ಒಂದು ಪ್ರಶ್ನೆಯನ್ನು ಮಾತ್ರ.

English summary
Lok Sabha Elections 2019: Vijayapura BJP candidate Ramesh Jigajinagi is a state minister for Drinking water and Sanitation. Here is his profile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X