ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರಿಚಯ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಹಾಲಿ ಸಂಸದರು ಬಿ.ವೈ.ರಾಘವೇಂದ್ರ. ಕರ್ನಾಟಕ ಬಿಜೆಪಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ. 2018ರ ನವೆಂಬರ್‌ನಲ್ಲಿ ನಡೆದ ಲೋಕಸಭಾ ಉಪ ಚುನಾವಣೆಯಲ್ಲಿ ಗೆಲ್ಲುವ ಮೂಲಕ 2ನೇ ಬಾರಿಗೆ ಸಂಸತ್ ಪ್ರವೇಶ ಮಾಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಲೋಕಸಭಾ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೊದಲು ಶಿಕಾರಿಪುರ ಕ್ಷೇತ್ರದ ಶಾಸಕರಾಗಿಯೂ ಕೆಲಸ ಮಾಡಿದ್ದಾರೆ. 2009ರಲ್ಲಿ ಅವರು ಮೊದಲ ಬಾರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು.
45 ವರ್ಷದ ಬಿ.ವೈ.ರಾಘವೇಂದ್ರ ಅವರು ಜನಿಸಿದ್ದು 16 ಆಗಸ್ಟ್ 1973ರಂದು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಶಿಕಾರಿಪುರ ಮತ್ತು ಬೆಂಗಳೂರಿನಲ್ಲಿ ಮುಗಿಸಿದ್ದಾರೆ. ಶಿವಮೊಗ್ಗದ ಡಿ.ವಿ.ಎಸ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ. ಆಚಾರ್ಯ ತುಳಸಿ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ ಬಿಬಿಎಂ ವ್ಯಾಸಂಗ ಮಾಡಿದ್ದಾರೆ.

ಬಿ.ವೈ.ರಾಘವೇಂದ್ರ ಅವರು 2007ರಲ್ಲಿ ಶಿಕಾರಿಪುರ ಪುರಸಭೆ ಸದಸ್ಯರಾಗಿ ರಾಜಕೀಯ ಪ್ರವೇಶ ಮಾಡಿದರು.
2009ರ ಚುನಾವಣೆಯಲ್ಲಿ ಶಿವಮೊಗ್ಗ ಸಂಸದರಾಗಿ ಆಯ್ಕೆಯಾದರು. 2014ರ ಉಪ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದ ಶಾಸಕರಾದರು. 2018ರ ಉಪ ಚುನಾವಣೆಯಲ್ಲಿ ಶಿವಮೊಗ್ಗ ಸಂಸದರಾಗಿ 2ನೇ ಬಾರಿಗೆ ಆಯ್ಕೆಯಾದರು.
ರಾಜಕೀಯ ಹೊರತುಪಡಿಸಿ ಪ್ರೇರಣಾ ಎಜುಕೇಷನಲ್ ಅಂಡ್ ಸೋಷಿಯಲ್ ಟ್ರಸ್ಟ್ ಮೂಲಕ ಶಿವಮೊಗ್ಗದಲ್ಲಿ, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಮೂಲಕ ಶಿಕಾರಿಪುರದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ.
1995ರಿಂದ ಶ್ರೀಮತಿ ಗಂಗಮ್ಮ ವೀರಭದ್ರಶಾಸ್ತ್ರಿ ಸ್ಮಾರಕ ಟ್ರಸ್ಟ್ (ರಿ) ಅಡಿಯಲ್ಲಿ ಕಲೆ, ಸಾಹಿತ್ಯ, ಸಂಗೀತ ಪ್ರೋತ್ಸಾಹಿಸಲು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. 1993ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಅಕ್ಟೋಬರ್ 8, 2012ರಂದು 6 ವರ್ಷಗಳ ಅವಧಿಗೆ ಅಖಿಲ ಭಾರತ ವೀರಶೈವ ಮಹಾಸಭಾದ ಕೇಂದ್ರ ಸಮಿತಿ ಸದಸ್ಯರಾಗಿ ಆಯ್ಕೆಯಾದರು. ಸೆಪ್ಟೆಂಬರ್ 26, 2010ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಯುವ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದರು.
2008ರಲ್ಲಿ ಪ್ರೇರಣಾ ಎಜುಕೇಷನಲ್ ಅಂಡ್ ಸೋಷಿಯಲ್ ಟ್ರಸ್ಟ್ ಮೂಲಕ ಕಾಲೇಜುಗಳನ್ನು ಸ್ಥಾಪಿಸಿ ಪಬ್ಲಿಕ್ ಸ್ಕೂಲ್, ಡಿಪ್ಲೊಮಾ, ಪಿಯುಸಿ, ಇಂಜಿನಿಯರಿಂಗ್ ಹಾಗೂ ಎಂಬಿಎ ಕಾಲೇಜುಗಳ ಮ್ಯಾನೇಜಿಂಗ್ ಟ್ರಸ್ಟಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
1996ರಿಂದ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಮೂಲಕ ಶಿಕಾರಿಪುರದಲ್ಲಿ ಕಾಲೇಜುಗಳನ್ನು ಆರಂಭಿಸಿ ಪ್ರಾಥಮಿಕ ಶಿಕ್ಷಣ/ ಪ್ರೌಢ ಶಿಕ್ಷಣ/ಪದವಿಪೂರ್ವ ಶಿಕ್ಷಣ/ಡಿಎಡ್ ಕಾಲೇಜು/ಬಿಎಡ್ ಕಾಲೇಜು/ನರ್ಸಿಂಗ್ ಕಾಲೇಜುಗಳ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.












Click it and Unblock the Notifications