ಸರ್ಕಾರಿ ನೌಕರರ ವೇತನ ಶೇ. 17ರಷ್ಟು ಏರಿಕೆ; ಯಾರಿಗೆ, ಎಷ್ಟು ಸಿಗಲಿದೆ?
ಕರ್ನಾಟಕ ಸರ್ಕಾರ ಸರ್ಕಾರಿ ನೌಕರರ ವೇತನ ಶೇ 17ರಷ್ಟು ಹೆಚ್ಚಳ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಸರ್ಕಾರಿ ನೌಕರರ ವೇತನ ಶೇ 17ರಷ್ಟು ಹೆಚ್ಚಳದವಾದ ಮೇಲೆ ಯಾರಿಗೆ ಎಷ್ಟು ಸಿಗಲಿದೆ? ಎಂಬ ಲೆಕ್ಕಾಚಾರ ಇಲ್ಲಿದೆ.
ಬೆಂಗಳೂರು, ಮಾರ್ಚ್ 01; 7ನೇ ವೇತನ ಆಯೋಗದ ಶಿಫಾರಸು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕದ ಸರ್ಕಾರಿ ನೌಕರರು ಬುಧವಾರದಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೌಕರರ ವೇತನವನ್ನು ಶೇ 17ರಷ್ಟು ಏರಿಕೆ ಮಾಡಿದರು. ಈಗ ನೌಕರರು ಮುಷ್ಕರ ವಾಪಸ್ ಪಡೆದಿದ್ದಾರೆ. ಜನರಿಗೆ ಆದ ತೊಂದರೆಗೆ ಕ್ಷಮೆ ಕೇಳಿದ್ದಾರೆ.
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಬಳಿಕ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಸೇವೆಗಳು-2) ಸರ್ಕಾರಿ ನೌಕರರ ವೇತನ ಶೇ 17ರಷ್ಟು ಹೆಚ್ಚಳದ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದಾರೆ. 2023ರ ಏಪ್ರಿಲ್ 1ರಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.

ಕರ್ನಾಟಕದ ಸರ್ಕಾರಿ ನೌಕರರ ವೇತನವನ್ನು ಶೇ. 17ರಷ್ಟು ಹೆಚ್ಚಳ ಮಾಡಲಾಗಿದೆ. ಹಾಗಾದರೆ ಯಾವ ನೌಕರರಿಗೆ ಎಷ್ಟು ವೇತನ ಹೆಚ್ಚಳವಾಗಲಿದೆ ಎಂಬ ಮಾಹಿತಿ ಈ ಪಿಡಿಎಫ್‌ನಲ್ಲಿ ಲಭ್ಯವಿದೆ. ಸರ್ಕಾರದ ಅಧಿಕೃತವಾಗಿ ಆದೇಶದ ಬಳಿಕ ಸರ್ಕಾರಿ ನೌಕರರು ಮುಷ್ಕರ ವಾಪಸ್ ಪಡೆದು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.
ಬುಧವಾರ ಬೆಳಗ್ಗೆ ಬಸವರಾಜ ಬೊಮ್ಮಾಯಿ ಗೃಹ ಕಚೇರಿ ಕೃಷ್ಣದಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಮುಷ್ಕರ ನಿರತ ಸರ್ಕಾರಿ ನೌಕರರ ಬೇಡಿಕೆ ಯಾವ ರೀತಿ ಈಡೇರಿಸಬಹುದು ಎಂದು ಅಧಿಕಾರಿಗಳಿಂದ ವಿವರ ಪಡೆದಿದ್ದರು. ಬಳಿಕ ಮಾತನಾಡಿ, "ಸರ್ಕಾರಿ ನೌಕರರಿಗೆ ಮಧ್ಯಂತರವಾಗಿ ಶೇ 17ರಷ್ಟು ವೇತನ ಹೆಚ್ಚಳ ಮಾಡುವ ತೀರ್ಮಾನ ಆಗಿದೆ" ಎಂದು ಘೋಷಣೆ ಮಾಡಿದ್ದರು.
ರಾಜ್ಯ ಸರ್ಕಾರದ ಅಂತಿಮ ಆದೇಶದಲ್ಲಿ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಪರಿಶೀಲಿಸಲು 7ನೇ ರಾಜ್ಯ ವೇತನ ಆಯೋಗವನ್ನು ರಚಿಸಿ ಆದೇಶಗಳನ್ನು ಹೊರಡಿಸಲಾಗಿರುತ್ತದೆ. ಪ್ರಸ್ತುತ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳ ಹಿನ್ನೆಲೆಯಲ್ಲಿ, ಸರ್ಕಾರದ ನೀತಿ ನಿರ್ಣಯದಂತೆ 7ನೇ ರಾಜ್ಯ ವೇತನ ಆಯೋಗದ ಅಂತಿಮ ವರದಿಯನ್ನು ಕಾಯ್ದಿರಿಸಿ ಈ ಆದೇಶ ಹೊರಡಿಸಲಾಗಿದೆ ಎಂದು ಹೇಳಿದೆ.
ರಾಜ್ಯ ಸರ್ಕಾರಿ ನೌಕರರಿಗೆ, ಸ್ಥಳೀಯ ಸಂಸ್ಥೆಗಳ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹಾಗೂ ವಿಶ್ವವಿದ್ಯಾನಿಲಯಗಳ ಬೋಧಕೇತರ ಸಿಬ್ಬಂದಿಗಳಿಗೆ ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ಸರ್ಕಾರವು ನಿರ್ಧರಿಸಿ ಈ ಆದೇಶ ಹೊರಡಿಸಲಾಗಿದೆ.
2018ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರುಗಳಿಗೆ 1ನೇ ಏಪ್ರಿಲ್ 2023 ರಿಂದ ಜಾರಿಗೆ ಬರುವಂತೆ ಮೂಲ ವೇತನದ ಶೇಕಡ 17 ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ಸರ್ಕಾರವು ಹರ್ಷಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಆದೇಶದ ಮೂಲಕ ಮಂಜೂರಾದ ತಾತ್ಕಾಲಿಕ ಪರಿಹಾರದ ಮೊತ್ತವು ವಿಶಿಷ್ಠ ಸಂಭಾವನೆಯಾಗಿದೆ. ಇದು ನಿವೃತ್ತಿ ಸೌಲಭ್ಯ/ ತುಟ್ಟಿಭತ್ಯೆಯನ್ನು ನಿರ್ಧರಿಸುವಾಗ ಅಥವ ಬೇರೆ ಯಾವುದೇ ಉದ್ದೇಶಗಳಿಗೆ ಪರಿಗಣಿಸತಕ್ಕದ್ದಲ್ಲ ಎಂದು ಸರ್ಕಾರ ಹೇಳಿದೆ.
Download











Click it and Unblock the Notifications