ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾರ್ಖಂಡ್ ಸಿಎಂ ಶಾಸಕ ಸ್ಥಾನದಿಂದ ಅನರ್ಹ; ಮುಂದೇನು ಕಥೆ?

|
Google Oneindia Kannada News

ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಲಾಭದಾಯಕ ಹುದ್ದೆ ಹಾಗೂ ಹಿತಾಸಕ್ತಿ ಸಂಘರ್ಷದ ಆರೋಪದಲ್ಲಿ ಹೇಮಂತ್ ಸೊರೇನ್ ಅವರನ್ನು ಶಾಸಕ ಸ್ಥಾನದಿಂದ ಚುನಾವಣಾ ಆಯೋಗ ಅನರ್ಹಗೊಳಿಸಿದೆ. ಹೀಗಾಗಿ, ಸೊರೇನ್ ಸಿಎಂ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆ ಇದೆ.

ಚುನಾವಣಾ ಆಯೋಗ ತನ್ನನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದೆ ಎಂಬ ಸುದ್ದಿಯನ್ನು ಕೆಲ ಹೊತ್ತಿನ ಮೊದಲು ಹೇಮಂತ್ ಸೊರೇನ್ ತಳ್ಳಿಹಾಕಿದ್ದರು. ಅದೇ ವೇಳೆ, ತನ್ನ ಸರಕಾರವನ್ನು ಉಳಿಸಿಕೊಳ್ಳಲು ಸೊರೇನ್ ಪ್ರಯತ್ನ ಕೂಡ ಮಾಡುತ್ತಿದ್ದಾರೆ.

ಶಾಸಕ ಸ್ಥಾನದಿಂದ ಸಿಎಂ ಹೇಮಂತ್ ಸೋರೆನ್ ಅನರ್ಹ!?ಶಾಸಕ ಸ್ಥಾನದಿಂದ ಸಿಎಂ ಹೇಮಂತ್ ಸೋರೆನ್ ಅನರ್ಹ!?

ಶುಕ್ರವಾರ ಯುಪಿಎ ಮೈತ್ರಿಕೂಟದ ೪೦ಕ್ಕೂ ಹೆಚ್ಚು ಶಾಸಕರು ಸೊರೇನ್ ನಿವಾಸದಲ್ಲಿ ಸೇರಿ ಚರ್ಚಿಸಿರುವುದು ತಿಳಿದುಬಂದಿದೆ. ಆಡಳಿತ ಮೈತ್ರಿಕೂಟದ ಶಾಸಕರನ್ನು ಮೂರು ಬಸ್ಸುಗಳಲ್ಲಿ ಛತ್ತೀಸ್‌ಗಡಕ್ಕೆ ಸಾಗಿಸಲಾಗುತ್ತಿದೆ ಎಂದು ಬಿಜೆಪಿ ನಾಯಕರು ಕುಹಕ ಆಡಿದ್ದಾರೆ.

ಹೇಮಂತ್ ಸೊರೇನ್ ಸಿಎಮ್ ಸ್ಥಾನದಿಂದ ಕೆಳಗಿಳಿದ ಬಳಿಕ ಬಿಜೆಪಿಯಿಂದ ಅಧಿಕಾರಕ್ಕಾಗಿ ಪ್ರಯತ್ನ ಹೆಚ್ಚಿಸುವ ಸಾಧ್ಯತೆ ಇಲ್ಲದಿಲ್ಲ. ಹೀಗಾಗಿ, ಜಾರ್ಖಂಡ್‌ನಲ್ಲಿ ರಿಸಾರ್ಟ್ ಪೊಲಿಟಿಕ್ಸ್ ನಡೆಯಲಿದೆ. ಬಿಜೆಪಿ ಸೇರುವ ಸಾಧ್ಯತೆ ಇರುವ ಶಾಸಕರನ್ನು ಗುರುತಿಸಿ ಅವರನ್ನು ಪಶ್ಚಿಮ ಬಂಗಾಳ ಅಥವಾ ಬಿಹಾರ ರಾಜ್ಯಗಳ ರೆಸಾರ್ಟ್‌ನಲ್ಲಿ ಸೇರಿಸಬಹುದು ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ.

ಜಾರ್ಖಂಡ್ ವಿಧಾನಸಭೆ ಬಲ

ಜಾರ್ಖಂಡ್ ವಿಧಾನಸಭೆ ಬಲ

ಜಾರ್ಖಂಡ್‌ನ 82 ಸದಸ್ಯಬಲದ ವಿಧಾನಸಭೆಯಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್ ಮತ್ತು ಆರ್‌ಜೆಡಿ ಸೇರಿ ಮೈತ್ರಿಕೂಟ ರಚಿಸಿ ಆಡಳಿತ ನಡೆಸುತ್ತಿವೆ. ಯುಪಿಎ ಮೈತ್ರಿಕೂಟ ಒಟ್ಟು 47 ಸ್ಥಾನಗಳನ್ನು ಹೊಂದಿದೆ. ಜೆಎಂಎಂನ 30 ಶಾಸಕರಿದ್ದರೆ, ಕಾಂಗ್ರೆಸ್‌ನ 16 ಶಾಸಕರಿದ್ದಾರೆ.

ಇನ್ನೊಂದೆಡೆ ಬಿಜೆಪಿ 26 ಸ್ಥಾನಗಳನ್ನು ಹೊಂದಿದೆ. ಜೆವಿಪಿ ಸೇರಿ ಇತರರು 9 ಸ್ಥಾನಗಳನ್ನು ಹೊಂದಿದ್ದಾರೆ. ಒಂದು ವೇಳೆ ಬಿಜೆಪಿ ಇಲ್ಲಿ ಸರಕಾರ ರಚಿಸಬೇಕೆಂದರೆ ಕನಿಷ್ಠ 16 ಶಾಸಕರನ್ನಾದರೂ ಸೆಳೆದುಕೊಳ್ಳಬೇಕಾಗಬಹುದು.

ಹೇಮಂತ್ ಸೊರೇನ್ ಅನರ್ಹತೆ ಯಾಕೆ?

ಹೇಮಂತ್ ಸೊರೇನ್ ಅನರ್ಹತೆ ಯಾಕೆ?

ಲಾಭದಾಯಕ ಹುದ್ದೆ ಮತ್ತು ಹಿತಾಸಕ್ತಿ ಸಂಘರ್ಷದ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಸೊರೇನ್‌ಗೆ ಎದುರಾಗಿದೆ. ಹೇಮಂತ್ ಸೊರೇನ್ ಹೆಸರಿನಲ್ಲಿ ಗಣಿ ಕಂಪನಿ ಇದೆ. ಸಿಎಂ ಸ್ಥಾನದ ಜೊತೆ ಅವರು ಗಣಿಗಾರಿಕೆ ಖಾತೆಯನ್ನೂ ಹೊಂದಿದ್ದರು. ಆ ಅವಧಿಯಲ್ಲಿ ಅವರ ಹೆಸರಿನಲ್ಲಿದ್ದ ಗಣಿ ಕಂಪನಿಯ ಪರವಾನಿಗೆಯನ್ನು ನವೀಕರಿಸಲಾಗಿತ್ತು. ಇದು ಜನಪ್ರತಿನಿಧಿ ಕಾಯ್ದೆಯ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ.

ಗಣಿ ಕಂಪನಿ ಮಾಲೀಕರಾಗಿದ್ದರೂ ಗಣಿಗಾರಿಕೆ ಸಚಿವ ಸ್ಥಾನ ಹೊಂದಿದ್ದು ಹಿತಾಸಕ್ತಿ ಸಂಘರ್ಷ ನಿಯಮದ ಉಲ್ಲಂಘನೆ ಎನಿಸಿದೆ. ಈ ಹಿನ್ನೆಲೆಯಲ್ಲಿ ಅವರ ಶಾಸಕ ಸ್ಥಾನವನ್ನು ರದ್ದು ಮಾಡುವಂತೆ ವಿಪಕ್ಷ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿತ್ತು. ಇದೀಗ ಅವರನ್ನು ಅನರ್ಹಗೊಳಿಸಲಾಗಿದೆ.

ಮುಂದೇನು?

ಮುಂದೇನು?

ಹೇಮಂತ್ ಸೊರೇನ್ ರಾಜೀನಾಮೆ ಕೊಡದೇ ಮುಂದುವರಿಯಲು ಇಚ್ಛಿಸಿದರೆ ಆಗಬಹುದು. ಆದರೆ, ಆರು ತಿಂಗಳೊಳಗೆ ಅವರು ಚುನಾವಣೆಯಲ್ಲಿ ಗೆದ್ದು ಮತ್ತೆ ಶಾಸಕರಾಗಿ ಆಯ್ಕೆ ಆಗಬೇಕಾಗುತ್ತದೆ. ವಿಧಾನಪರಿಷತ್ ಇಲ್ಲದೇ ಇರುವುದರಿಂದ ಎಂಎಲ್‌ಸಿ ಆಗಲು ಅವಕಾಶ ಇಲ್ಲ. ಹೇಮಂತ್ ಸೊರೇನ್‌ಗೆ ಚುನಾವಣೆ ಎದುರಿಸುವುದು ದೊಡ್ಡ ವಿಷಯವಲ್ಲ. ಆದರೆ, ಬಹುಮತ ಸಾಬೀತು ಮಾಡುವುದು ಪ್ರಮುಖ ಸವಾಲು ಇದೆ.

ಇನ್ನೊಂದು ಸಾಧ್ಯತೆ ಎಂದರೆ ಹೇಮಂತ್ ಸೊರೇನ್ ಅವರ ಪತ್ನಿ ಕಲ್ಪನಾ ಸೊರೇನ್ ಸಿಎಂ ಆಗಬಹುದು ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ. ಮಗದೊಂದು ಸಾಧ್ಯತೆ ಎಂದರೆ ಹೇಮಂತ್ ಸೊರೇನ್ ಚುನಾವಣಾ ಆಯೋಗದ ಅನರ್ಹತೆಯ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಬಹುದು.

ಇನ್ನೂ ಒಂದು ಸಾಧ್ಯತೆ ಎಂದರೆ ಅವರು ಬಿಜೆಪಿ ಜೊತೆ ಸೇರಿ ಸರಕಾರ ರಚಿಸುವುದು.

ಮೈತ್ರಿಕೂಟದಲ್ಲಿ ಬಿರುಕು

ಮೈತ್ರಿಕೂಟದಲ್ಲಿ ಬಿರುಕು

ಹೇಮಂತ್ ಸೊರೇನ್ ಅವರಿಗೆ ಸಿಎಂ ಸ್ಥಾನ ಉಳಿಸಿಕೊಳ್ಳುವುದು ಮತ್ತು ಚುನಾವಣೆಯಲ್ಲಿ ಗೆಲ್ಲುವುದು ದೊಡ್ಡ ವಿಷಯವಲ್ಲ. ಆದರೆ, ಮೈತ್ರಿಕೂಟವನ್ನು ಉಳಿಸಿಕೊಳ್ಳುವುದೇ ಕಷ್ಟದ ಸಂಗತಿಯಾಗಿದೆ. ಜೆಎಂಎಂ ಮತ್ತು ಕಾಂಗ್ರೆಸ್ ಪಕ್ಷದೊಳಗೆ ಬಿರುಕು ಮೂಡುತ್ತಿದೆ. ಈಗ ಸೊರೇನ್‌ರನ್ನು ಶಾಸಕ ಸ್ಥಾನದಿಂದ ಅನರ್ಹಗೊಂಡ ಬಳಿಕ ಬಿರುಕು ಹೆಚ್ಚಾಗಿ ಎರಡೂ ಪಕ್ಷಗಳಿಂದ ಅಸಮಾಧಾನಿತ ಶಾಸಕರು ಬಿಜೆಪಿಯತ್ತ ನುಗ್ಗಿದರೆ ಅಚ್ಚರಿ ಇಲ್ಲ.

ಮೇ ತಿಂಗಳಲ್ಲಿ ಈ ಎರಡು ಪಕ್ಷದೊಳಗೆ ಅಸಮಾಧಾನ ಮೊದಲು ಕಾಣಿಸಿದ್ದು. ರಾಜ್ಯಸಭಾ ಚುನಾವಣೆಯಲ್ಲಿ ಜಂಟಿಯಾಗಿ ಅಭ್ಯರ್ಥಿ ಹಾಕುವುದು ಕಾಂಗ್ರೆಸ್ ಇಚ್ಛೆಯಾಗಿತ್ತು. ಆದರೆ, ಜೆಎಂಎಂ ಸ್ವಂತವಾಗಿ ಅಭ್ಯರ್ಥಿ ನಿಲ್ಲಿಸಿದ್ದು ಕಾಂಗ್ರೆಸ್‌ಗೆ ಬೇಸರ ತಂದಿತ್ತು.

ಜಾರ್ಖಂಡ್: ಇಡಿ ದಾಳಿ ವೇಳೆ ಎರಡು ಎಕೆ-47 ರೈಫಲ್‌ ವಶಜಾರ್ಖಂಡ್: ಇಡಿ ದಾಳಿ ವೇಳೆ ಎರಡು ಎಕೆ-47 ರೈಫಲ್‌ ವಶ

ಅಷ್ಟೇ ಅಲ್ಲ, ಜುಲೈ ತಿಂಗಳಲ್ಲಿ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಜೆಎಂಎಂ ಪಕ್ಷ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಬೆಂಬಲ ನೀಡಿತ್ತು. ಯಶವಂತ್ ಸಿನ್ಹಾಗೆ ಕಾಂಗ್ರೆಸ್ ಬೆಂಬಲ ನೀಡಿತು. ಇಲ್ಲಿಯೂ ಎರಡೂ ಪಕ್ಷಗಳ ಮಧ್ಯೆ ಭಿನ್ನಾಭಿಪ್ರಾಯ ಬಂದಿತು.

ಕಾಂಗ್ರೆಸ್‌ನೊಳಗೆ ಬಂಡಾಯ?

ಕಾಂಗ್ರೆಸ್‌ನೊಳಗೆ ಬಂಡಾಯ?

ಇಷ್ಟೇ ಅಲ್ಲ, ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮುಗೆ ನಿರೀಕ್ಷೆಗಿಂತ ಹೆಚ್ಚು ಮತಗಳು ಜಾರ್ಖಂಡ್‌ನಿಂದ ಬಂದಿದ್ದವು. ಜಾರ್ಖಂಡ್‌ನ ೮೧ ಶಾಸಕರಲ್ಲಿ ಜೆಎಂಎಂನ 30, ಬಿಜೆಪಿಯ 25 ಮತ್ತು ನಾಲ್ವರು ಇತರರು ಹೀಗೆ 60 ಮತಗಳು ಬರುವ ಎಣಿಕೆ ಇತ್ತು. ಇನ್ನೊಂದೆಡೆ ಕಾಂಗ್ರೆಸ್‌ನ 18 ಶಾಸಕರು ಸೇರಿ 20 ಮತಗಳು ಸಿನ್ಹಾಗೆ ಬರಬಹುದು ಎಂಬ ಲೆಕ್ಕಾಚಾರ ಇತ್ತು.

ಆದರೆ, ವಾಸ್ತವದಲ್ಲಿ ಜಾರ್ಖಂಡ್‌ನಲ್ಲಿ ಮತ ಚಲಾಯಿಸಿದ 79 ಶಾಸಕರ ಪೈಕಿ 70 ಮಂದಿ ಮುರ್ಮುಗೆ ವೋಟ್ ಹಾಕಿದ್ದರು. ಸಿನ್ಹಾಗೆ ಬೆಂಬಲ ಕೊಟ್ಟವರು ಕೇವಲ 9 ಮಾತ್ರ. ಅಂದಾಜು ಪ್ರಕಾರ 9-10 ಮಂದಿ ಕಾಂಗ್ರೆಸ್ ಶಾಸಕರು ದ್ರೌಪದಿ ಮುರ್ಮು ಪರ ವೋಟಿಂಗ್ ಮಾಡಿರಬಹುದು.

ಬಂಡಾಯ ಕಾಂಗ್ರೆಸ್ಸಿಗರ ಜೊತೆ ಬಿಜೆಪಿ ಮೈತ್ರಿ?

ಬಂಡಾಯ ಕಾಂಗ್ರೆಸ್ಸಿಗರ ಜೊತೆ ಬಿಜೆಪಿ ಮೈತ್ರಿ?

ಒಂದು ವೇಳೆ ಈ ಒಂಬತ್ತು ಬಂಡಾಯ ಕಾಂಗ್ರೆಸ್ ಶಾಸಕರು ಇನ್ನೂ ಮೂರ್ನಾಲ್ಕು ಕಾಂಗ್ರೆಸ್ ಶಾಸಕರನ್ನು ಸೆಳೆದುಕೊಂಡರೆ ಮೂರನೇ ಎರಡು ಭಾಗದಷ್ಟು ಸಂಖ್ಯೆ ಆಗುತ್ತದೆ. ಆಗ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗದೇ ಪ್ರತ್ಯೇಕ ಬಣ ಮಾಡಿಕೊಂಡು ಬಿಜೆಪಿಗೆ ಬೆಂಬಲ ನೀಡಬಹುದು. ಮಹಾರಾಷ್ಟ್ರದಲ್ಲಿ ಶಿವಸೇನಾಗೆ ಆದ ಕಥೆ ಜಾರ್ಖಂಡ್‌ನಲ್ಲಿ ಕಾಂಗ್ರೆಸ್‌ಗೂ ಆಗಬಹುದು.

ಜಾರ್ಖಂಡ್‌ನಲ್ಲಿ ಬಹುಮತಕ್ಕೆ 42 ಶಾಸಕರು ಬೇಕು. ಒಂದು ವೇಳೆ ಕಾಂಗ್ರೆಸ್‌ನಿಂದ 12 ಮಂದಿ ಬಂಡಾಯ ಎದ್ದರೆ ಬಿಜೆಪಿಯ 26, ಎಎಎಸ್‌ಯುನ 2, ಹಾಗು ಪಕ್ಷೇತರರು ಸೇರಿ 42 ಆಗುತ್ತದೆ.

ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಾರಾ ಸೊರೇನ್?

ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಾರಾ ಸೊರೇನ್?

ಕೆಲ ವರದಿಗಳ ಪ್ರಕಾರ ಹೇಮಂತ್ ಸೊರೇನ್ ವಿರುದ್ಧ ಬೇರೆ ಬೇರೆ ಕೇಸ್‌ಗಳು ಮುತ್ತಿಕೊಂಡಿದ್ದು ಅವರು ಅಪರಿಮಿತ ಒತ್ತಡದಲ್ಲಿದ್ದಾರೆ. ಹೀಗಾಗಿ ಅವರು ಬಿಜೆಪಿ ಜೊತೆ ಕೈ ಜೋಡಿಸಿದರೂ ಅಚ್ಚರಿ ಇಲ್ಲ. ಒಂದು ವೇಳೆ ಬಿಜೆಪಿ ಜೊತೆ ಸೊರೇನ್ ಹೋದರೆ ಯಾವುದೇ ಎಗ್ಗಿಲ್ಲದೇ ಹೊಸ ಮೈತ್ರಿ ಸರಕಾರ ಸ್ಥಾಪನೆ ಆಗುತ್ತದೆ. ರಾಜಕೀಯದಲ್ಲಿ ಯಾವ ಸಮೀಕರಣ ಬೇಕಾದರೂ ಆಗಬಹುದು.

(ಒನ್ಇಂಡಿಯಾ ಸುದ್ದಿ)

English summary
Jharkhand CM Hemant Soren was disqualified as MLA by Election Commission. Know the future possibilities in the crisis riddent state politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X