
ವಿಕ್ರಾಂತ್ ಆಯ್ತು, ಬರಲಿದೆ ವಿಶಾಲ್; ಇದಾಗಲಿದೆ ವಿಶ್ವದ 4ನೇ ಅತಿದೊಡ್ಡ ಯುದ್ಧನೌಕೆ
ಭಾರತದಿಂದ ದೇಶೀಯವಾಗಿ ನಿರ್ಮಾಣವಾಗಿರುವ ಮೊದಲ ಯುದ್ಧನೌಕೆ ಐಎನ್‌ಎಸ್ ವಿಕ್ರಂತ್ ಇಂದು ಶುಕ್ರವಾರ ಭಾರತೀಯ ನೌಕಾಪಡೆಗೆ ನಿಯೋಜನೆಯಾಗಿದೆ. ಬಹಳ ದೂರದವರೆಗೆ ಸಾಗರದಲ್ಲಿ ಭಾರತಕ್ಕೆ ಇದು ಭದ್ರತೆ ಒದಗಿಸಬಲ್ಲುದು.
ಐಎನ್‌ಎಸ್ ವಿಕ್ರಾಂತ್ ಅನ್ನು ಯಾವ ವಿದೇಶದ ಸಹಾಯವಿಲ್ಲದೇ ದೇಶೀಯವಾಗಿ ನಿರ್ಮಾಣ ಮಾಡಲಾಗಿದೆ. ವಿನ್ಯಾಸದಿಂದ ಹಿಡಿದು ನಿರ್ಮಾಣದವರೆಗೆ ಹಡಗನ್ನು ತಯಾರಿಸುವ ಶಕ್ತಿ ಕೆಲವೇ ದೇಶಗಳಿಗೆ ಇದೆ. ಅಮೆರಿಕ, ರಷ್ಯಾ, ಫ್ರಾನ್ಸ್, ಬ್ರಿಟನ್ ಮತ್ತು ಚೀನಾ ದೇಶಗಳು ಮಾತ್ರ ಈ ರೀತಿ ಸ್ವಂತವಾಗಿ ಯುದ್ಧನೌಕೆಗಳನ್ನು ತಯಾರಿಸಬಲ್ಲವು. ಭಾರತ ಈಗ ರಾಷ್ಟ್ರಗಳ ಗುಂಫಿಗೆ ಸೇರಿಕೊಂಡಿದೆ.
ಇಂದು ನಿಯೋಜನೆಗೊಂಡಿರುವ ಐಎನ್‌ಎಸ್ ವಿಕ್ರಾಂತ್ ವಿಶ್ವದ 10ನೇ ಅತಿದೊಡ್ಡ ಯುದ್ಧ ಹಡಗಾಗಿದೆ. ಭಾರತದ ಎರಡನೇ ಹಡಗೂ ಹೌದು. ಐಎನ್‌ಎಸ್ ವಿಕ್ರಾಂತ್ ಹೆಸರಿನ ಯುದ್ಧನೌಕೆ ಇತ್ತೀಚಿನವರೆಗೂ ಅಸ್ತಿತ್ವದಲ್ಲಿತ್ತು. 1997ರಲ್ಲಿ ಅದರ ವಿಸರ್ಜನೆಯಾಯಿತು. ಅದಾದ ಬಳಿಕ ಈಗ ಹೊಸ ಐಎನ್‌ಎಸ್ ವಿಕ್ರಾಂತ್ ಅನ್ನು ದೇಶೀಯವಾಗಿ ನಿರ್ಮಿಸಲಾಗಿದೆ.
ಭಾರತದ ನೌಕಾಪಡೆಯಲ್ಲಿ ಈವರೆಗೆ ಮೂರು ಯುದ್ಧನೌಕೆಗಳು ನಿಯೋಜನೆಯಾಗಿವೆ. ಐಎನ್‌ಎಸ್ ವಿಕ್ರಾಂತ್, ಐಎನ್‌ಎಸ್ ವಿರಾಟ್ ಮತ್ತು ಐಎನ್‌ಎಸ್ ವಿಕ್ರಮಾದಿತ್ಯ. ಇವು ಯುದ್ಧವಿಮಾನಗಳನ್ನು ಸಾಗಿಸುವ ಬೃಹತ್ ಹಡಗುಗಳು. ಇದರಲ್ಲಿ ಐಎನ್‌ಎಸ್ ವಿರಾಟ್ ನಿಂತು ಹೋಗಿದೆ. ಹಳೆಯ ಐಎನ್‌ಎಸ್ ವಿಕ್ರಾಂತ್ ಕೂಡ ನಿಂತಿದೆ. ಹೊಸ ಹಡಗು ಈಗ ತಯಾರಾಗಿ ನಿಯೋಜನೆಗೊಂಡಿದೆ. ರಷ್ಯಾ ನಿರ್ಮಿತ ಐಎನ್‌ಎಸ್ ವಿಕ್ರಮಾದಿತ್ಯ ಸಕ್ರಿಯವಾಗಿದೆ. ಅಲ್ಲಿಗೆ ಎರಡು ಯುದ್ಧನೌಕೆಗಳು ಭಾರತೀಯ ನೌಕಾಪಡೆಯ ಬತ್ತಳಿಕೆಯಲ್ಲಿವೆ.
ಭಾರತದ ನೌಕಾಪಡೆಗೆ ಶಕ್ತಿ ತುಂಬುವ INS ವಿಕ್ರಾಂತ್ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ
ಈಗ ಮೂರನೇ ಯುದ್ಧನೌಕೆಯ ನಿರ್ಮಾಣಕ್ಕೆ ಭಾರತ ಸಜ್ಜಾಗಿದೆ. ಅದೇನಾದರೂ ಈಡೇರಿದರೆ ವಿಶ್ವದ ನಾಲ್ಕನೇ ಅತಿದೊಡ್ಡ ಯುದ್ಧನೌಕೆ ಭಾರತದ್ದಾಗಲಿದೆ.

ಐಎನ್‌ಎಸ್ ವಿಕ್ರಾಂತ್ ಇತಿಹಾಸ
1997ರಲ್ಲಿ ವಿಸರ್ಜನೆಯಾದ ಐಎನ್‌ಎಸ್ ವಿಕ್ರಾಂತ್ ಭಾರತದ ಮೊದಲ ಏರ್‌ಕ್ರಾಫ್ಟ್ ಕ್ಯಾರಿಯರ್ ಎನಿಸಿದೆ. ಇದರ ಮೂಲ ಹೆಸರು ಹೆಚ್‌ಎಂಎಸ್ ಹರ್ಕ್ಯೂಲ್ಸ್. ಹೆಚ್‌ಎಂಎಸ್ ಎಂದರೆ ಹರ್ ಮೆಜೆಸ್ಟೀಸ್ ಶಿಪ್ (HMS- Her Majesty's Ship). ಹರ್ ಮೆಜೆಸ್ಟಿ ಎನ್ನುವುದು ಬ್ರಿಟನ್‌ನ ರಾಣಿಗೆ. 1943ರಲ್ಲಿ ಬ್ರಿಟನ್‌ನ ರಾಯಲ್ ಆರ್ಮಿಗೆ ಹೆಚ್‌ಎಂಎಸ್ ಹರ್ಕ್ಯೂಲ್ಸ್ ಹಡಗನ್ನು ತಯಾರಿಸಲಾಗುತ್ತಿತ್ತು.
ಈಗ ಅಪಾರ್ಟ್ಮೆಂಟ್‌ನ ನಿರ್ಮಾಣ ಹಂತದಲ್ಲಿರುವಾಗಲೇ ಫ್ಲಾಟ್‌ಗಳ ಮಾರಾಟ ನಡೆಯುವಂತೆ, ಅಗ ನಿರ್ಮಾಣ ಹಂತದಲ್ಲಿರುವಾಗಲೇ ಹಡಗುಗಳ ಮಾರಾಟವಾಗುತ್ತಿತ್ತು. ಎಚ್‌ಎಂಎಸ್ ಹರ್ಕ್ಯೂಲ್ಸ್ ಅನ್ನು ಬ್ರಿಟನ್ ಮಾರಾಟಕ್ಕಿಟ್ಟಿತು. ಭಾರತ 1957ರಲ್ಲಿ ಇದನ್ನು ಖರೀದಿಸಿತು. ಹಡಗಿನ ನಿರ್ಮಾಣ ಪೂರ್ಣಗೊಂಡು 1961ರಲ್ಲಿ ಇದು ಭಾರತೀಯ ಸೇನೆಗೆ ನಿಯೋಜನೆಗೊಂಡಿತು. ಹೆಚ್‌ಎಂಎಸ್ ಹರ್ಕ್ಯೂಲ್ಸ್ ಎಂದಿದ್ದ ಹಡಗಿಗೆ ಐಎನ್‌ಎಸ್ ವಿಕ್ರಾಂತ್ ಎಂದು ಹೆಸರಿಡಲಾಯಿತು.

ಹಳೆಯ ಹಡಗಿನ ವಿಶೇಷತೆ
ಐಎನ್‌ಎಸ್ ವಿಕ್ರಾಂತ್ 210 ಮೀಟರ್ ಗಾತ್ರ ಬೃಹತ್ ಹಡಗಾಗಿತ್ತು. ಇದರ ಸಾಗಣೆ ಸಾಮರ್ಥ್ಯ ಸುಮಾರು 20 ಸಾವಿರ ಟನ್. ಇದರ ಪೆನ್ನಂಟ್ ನಂಬರ್ R11. 1971ರಲ್ಲಿ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಐಎನ್‌ಎಸ್ ವಿಕ್ರಾಂತ್ ಮಹತ್ವದ ಪಾತ್ರ ವಹಿಸಿತ್ತು. 36 ವರ್ಷಗಳ ಸೇವೆ ಬಳಿಕ ಐಎನ್‌ಎಸ್ ವಿಕ್ರಾಂತ್ 1997ರಲ್ಲಿ ವಿಸರ್ಜನೆಗೊಂಡಿತು. 15 ವರ್ಷಗಳ ಬಳಿಕ ಮ್ಯೂಸಿಯಂನಲ್ಲಿ ಇದನ್ನು ಇರಿಸಲಾಗಿತ್ತು. ಹತ್ತು ವರ್ಷಗಳ ಹಿಂದೆ ಇದರ ಬಿಡಿಭಾಗಗಳನ್ನು ಮಾರಲಾಯಿತು.
ಇನ್ನು, ಐಎನ್‌ಎಸ್ ವಿಕ್ರಾಂತ್ ಜೊತೆಗೆ ಭಾರತೀಯ ನೌಕಾಪಡೆಯಲ್ಲಿ ಐಎನ್‌ಎಸ್ ವಿರಾಟ್ ಕೂಡ ಇತ್ತು. ಇದೂ ಕೂಡ ಬ್ರಿಟನ್‌ನಿಂದ ಖರೀದಿ ಮಾಡಾಗಿತ್ತು. ಎಚ್‌ಎಂಎಸ್ ಹರ್ಮಿಸ್ ಹೆಸರಲ್ಲಿ ರಾಯಲ್ ಆರ್ಮಿಯಲ್ಲಿ 25 ವರ್ಷ ಇದ್ದ ವಿರಾಟ್ 2007ರವರೆಗೂ ಭಾರತೀಯ ನೌಕಾಪಡೆಯಲ್ಲಿ ಸೇವೆಯಲ್ಲಿತ್ತು.
2013ರಲ್ಲಿ ಭಾರತ ರಷ್ಯಾದಿಂದ ಐಎನ್‌ಎಸ್ ವಿಕ್ರಮಾದಿತ್ಯ ಹಡಗನ್ನು ಖರೀದಿ ಮಾಡಿತು. ಇದು ಸದ್ಯಕ್ಕೆ ಭಾರತದ ಅತಿದೊಡ್ಡ ಯುದ್ಧನೌಕೆ ಎನಿಸಿದೆ.

ಹೊಸ ಐಎನ್‌ಎಸ್ ವಿಕ್ರಾಂತ್
ಹಳೆಯ ಐಎನ್‌ಎಸ್ ವಿಕ್ರಾಂತ್ ಅನ್ನು ಡೀಕಮಿಷನ್ ಮಾಡುವ ಸಂದರ್ಭದಲ್ಲಿ ದೇಶೀಯವಾಗಿ ಹೊಸ ಯುದ್ಧನೌಕೆಯನ್ನು ನಿರ್ಮಿಸುವ ಆಲೋಚನೆ ಶುರುವಾಗಿತ್ತು. 2003ರಲ್ಲಿ ಇದರ ನಿರ್ಮಾಣ ಯೋಜನೆಗೆ ಚಾಲನೆ ನೀಡಲಾಯಿತು.
ಹೊಸ ಐಎನ್‌ಎಸ್ ವಿಕ್ರಾಂತ್ 262 ಮೀಟರ್ ಉದ್ದ ಮತ್ತು 62 ಮೀಟರ್ ಅಗಲ ಇದೆ. ಅಂದರೆ ಇದು ಎರಡು ಫುಟ್ಬಾಲ್ ಅಂಗಳಕ್ಕಿಂತ ದೊಡ್ಡದು. ಅಥವಾ 30*40 ಅಳತೆಯ 40ಕ್ಕೂ ಹೆಚ್ಚು ನಿವೇಶನಗಳನ್ನು ಮಾಡಬಲ್ಲಷ್ಟು ವಿಶಾಲವಾದ ಹಡಗು.
43 ಸಾವಿರ ಟನ್ ತೂಕವನ್ನು ಇದು ಹೊತ್ತು ಸಾಗಿಸಬಲ್ಲುದು. 28 ನಾಟ್ (Knot) ವೇಗದಲ್ಲಿ ಹೋಗಬಲ್ಲುದು. ನಾಟ್ ಎಂಬುದು ಸಮುದ್ರದ ನೀರಿನಲ್ಲಿ ಸಾಗುವ ವೇಗ. 28 ನಾಟ್ ವೇಗ ಎಂದರೆ ಸುಮಾರು ಗಂಟೆಗೆ 51 ಕಿಮೀ ವೇಗ ಎಂದಾಗುತ್ತದೆ. ಐಎನ್‌ಎಸ್ ವಿಕ್ರಾಂತ್ ಸಮುದ್ರದಲ್ಲಿ 14 ಸಾವಿರ ಕಿಮೀ ದೂರದವರೆಗೂ ಹೋಗಬಲ್ಲುದು. ಅಂದರೆ ಇದು ವಿಶ್ವದ ಯಾವ ಸಾಗರಪ್ರದೇಶವನ್ನಾದರೂ ತಲುಪಬಲ್ಲುದು. ಅಮೆರಿಕದವರೆಗೂ ಈ ಹಡಗು ಹೋಗಿ ಯುದ್ಧದಲ್ಲಿ ಭಾಗಿಯಾಗಬಲ್ಲುದು.
ಈ ಯುದ್ಧದಲ್ಲಿ 18 ಮಹಡಿಯಷ್ಟು ಎತ್ತರ ಇದ್ದು 2400 ಕಂಪಾರ್ಮೆಂಟ್‌ಗಳಿವೆ. 1600 ಜನರು ಇಲ್ಲಿ ಇರುವ ವ್ಯವಸ್ಥೆ ಇದೆ. ಇದರಲ್ಲಿ ಬೃಹತ್ ವೈಮಾನಿಕ ಗ್ಯಾರೇಜ್ ಕೂಡ ಇದ್ದು, ಅದು 20 ಯುದ್ಧವಿಮಾನಗಳನ್ನು ಇರಿಸಿಕೊಳ್ಳುವಷ್ಟು ವಿಶಾಲವಾಗಿದೆ. ವಿಶಾಲವಾದ ಅಡುಗೆ ಮನೆ, ಆಸ್ಪತ್ರೆ, ಇತ್ಯಾದಿ ಹಲವು ಸೌಲಭ್ಯಗಳು ಇದರಲ್ಲಿವೆ.
ಮಿಗ್-29 ಫೈಟರ್ ಜೆಟ್, ಕಮೋವ್-31 ಹೆಲಿಕಾಪ್ಟರ್, ಅಮೆರಿಕದ ಎಂಎಚ್-60ಆರ್ ಮಲ್ಟಿ-ರೋಲ್ ಹೆಲಿಕಾಪ್ಟರ್, ದೇಶೀಯ ನಿರ್ಮಣದ ಎಎಲ್‌ಎಚ್ ಮತ್ತು ಎಲ್‌ಸಿಎ, ಹೀಗೆ 30 ಯುದ್ಧವಿಮಾನಗಳನ್ನು ಇಟ್ಟುಕೊಳ್ಳಬಹುದಾದಂತಹ ವಾಯುನೆಲೆ ಈ ಹಡಗಿನಲ್ಲಿದೆ. ಈ ಹಡಗಿನ ಮೇಲೆ ವೈಮಾನಿಕ ದಾಳಿ ಆಗುವ ಅಪಾಯ ಹೆಚ್ಚಿರುವುದರಿಂದ ಅದನ್ನು ಎದುರಿಸಲು ಪ್ರಬಲ ರಾಡಾರ್, ಆಂಟಿ-ಮಿಸೈಲ್ ಹೊಂದಿದ ರಕ್ಷಣಾ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ.

ಆರ್ಥಿಕ ಹೊರೆ ಕಡಿಮೆ
ಈ ಬಲಿಷ್ಠ ಹಡಗು ನಿರ್ಮಾಣಕ್ಕೆ 20 ಸಾವಿರ ಕೋಟಿ ರೂ ವೆಚ್ಚವಾಗಿದೆ. ದೇಶೀಯವಾಗಿ ಇದರ ನಿರ್ಮಾಣವಾಗಿರುವುದರಿಂದ ಇದರ ವೆಚ್ಚದಲ್ಲಿ ಶೇ. 80ರಷ್ಟು ಹಣ ಭಾರತೀಯ ಆರ್ಥಿಕತೆಗೆ ಸೇರಿಹೋಗಿದೆ ಎಂದು ಹೇಳಲಾಗುತ್ತದೆ. ಈ ಹಡಗು ನಿರ್ಮಾಣದಲ್ಲಿ ಪ್ರತ್ಯಕ್ಷವಾಗಿ 2 ಸಾವಿರ ಸಿಎಸ್‌ಎಲ್ ಸಿಬ್ಬಂದಿಗೆ ಕೆಲಸ ಸಿಕ್ಕರೆ 13 ಸಾವಿರ ಮಂದಿಗೆ ಪರೋಕ್ಷವಾಗಿ ಕೆಲಸ ಸಿಕ್ಕಿದೆ.
ಸದ್ಯ ಈ ಹೊಸ ಐಎನ್‌ಎಸ್ ವಿಕ್ರಾಂತ್ ಭಾರತೀಯ ನೌಕಾಪಡೆಗೆ ನಿಯೋಜನೆಯಾಗಿದೆಯಾದರೂ ಸಂಪೂರ್ಣವಾಗಿ ಕಾರ್ಯಾಚರಣೆ ಹಂತಕ್ಕೆ ಬರಲು ಇನ್ನೊಂದು ವರ್ಷವಾಗಬಹುದು. ಈ ಹಡಗಿನ ಎಲ್ಲಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪರೀಕ್ಷೆಗೊಳಪಡಿಸಬೇಕು. ಎಲ್ಲಾ ಯುದ್ಧವಿಮಾನಗಳನ್ನು ಇರಿಸಿ ಅದರ ಪ್ರಯೋಗಗಳನ್ನು ಮಾಡಬೇಕು. ಇದೇ ನವೆಂಬರ್‌ನಲ್ಲಿ ಐಎನ್‌ಎಸ್ ವಿಕ್ರಾಂತ್‌ನ ವೈಮಾನಿಕ ಪ್ರಯೋಗಗಳು ನಡೆಯುತ್ತವೆ. 2023ರ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ವಿಕ್ರಾಂತ್ ಸಂಪೂರ್ಣವಾಗಿ ಸಿದ್ಧವಾಗಿರುವ ನಿರೀಕ್ಷೆ ಇದೆ.

ಐಎನ್‌ಎಸ್ ವಿಶಾಲ್‌ಗೆ ಸಜ್ಜು
ಐಎನ್‌ಎಸ್ ವಿಕ್ರಾಂತ್ ನಿಯೋಜನೆ ಬಳಿಕ ಭಾರತದ ನೌಕಾಪಡೆಯಲ್ಲಿ ಸದ್ಯಕ್ಕೆ ಎರಡು ಯುದ್ಧನೌಕೆಗಳು ಇದ್ದಂತಾಗಿದೆ. ಮೂರನೇ ಯುದ್ಧ ನೌಕೆಯ ಅಗತ್ಯ ಕಾಣುತ್ತಿದೆ. ಯಾವುದೇ ಯುದ್ಧ ಸಂದರ್ಭದಲ್ಲಿ ಭಾರತಕ್ಕೆ ಸಕ್ರಿಯವಾಗಿರುವ ಎರಡು ಹಡುಗಗಳು ಬೇಕಾಗುತ್ತದೆ. ಎರಡು ಹಡಗು ಮಾತ್ರ ಇದ್ದರೆ, ಯುದ್ಧದ ಸಂದರ್ಭದಲ್ಲಿ ಒಂದು ಹಡಗು ದುರಸ್ತಿಗೆ ಹೋಗಿದ್ದರೆ ಕಷ್ಟವಾಗಬಹುದು. ಹೀಗಾಗಿ ಮೂರನೇ ಏರ್‌ಕ್ರಾಫ್ಟ್ ಕ್ಯಾರಿಯರ್ ಬೇಕು ಎಂಬುದು ನೌಕಾಪಡೆಯ ಅನಿಸಿಕೆ.
ಹೀಗಾಗಿ, ದೇಶೀಯವಾಗಿ ಮತ್ತೊಂದು ಯುದ್ಧನೌಕೆಯನ್ನು ನಿರ್ಮಿಸಬೇಕೆಂದು ಕಳೆದ ಕೆಲ ವರ್ಷಗಳಿಂದ ಸೇನಾಧಿಕಾರಿಗಳು ಒತ್ತಾಯಿಸುತ್ತಾ ಬಂದಿದ್ದಾರೆ. ಅದರ ಫಲವಾಗಿ ಐಎನ್‌ಎಸ್ ವಿಶಾಲ್ ಎಂಬ ಹಡಗನ್ನು ತಯಾರಿಸುವ ಆಲೋಚನೆ ಇದೆ.
ಈ ಐಎನ್‌ಎಸ್ ವಿಶಾಲ್‌ನ ಅಂದಾಜು ತೂಕ 65 ಸಾವಿರ ಟನ್ ಇರಬಹುದು. ಇದು ಇನ್ನೂ ಪ್ರಸ್ತಾವ ಹಂತದಲ್ಲಿದೆ. ಸಾಗರ ಪ್ರದೇಶದಲ್ಲಿ ನಮ್ಮ ಉಪಸ್ಥಿತಿ ಹೆಚ್ಚಿಸುವುದು ಈಗಿನ ಅಗತ್ಯವಾಗಿದೆ. ಚೀನಾ ಸಾಕಷ್ಟು ಯುದ್ಧದ ಹಡಗುಗಳನ್ನು ನಿರ್ಮಿಸುವ ಗುರಿ ಹೊಂದಿರುವುದರಿಂದ ಭಾರತ ಕೂಡ ಪೈಪೋಟಿಗೆ ಇಳಿಯುವುದು ಅನಿವಾರ್ಯವಾಗಬಹುದು. ಐಎನ್‌ಎಸ್ ವಿಶಾಲ್ ಅನ್ನು ದೇಶೀಯವಾಗಿಯೇ ನಿರ್ಮಿಸುವುದರಿಂದ ಭಾರತದ ಆರ್ಥಿಕತೆಗೂ ಪುಷ್ಟಿ ಸಿಗುತ್ತದೆ.
(ಒನ್ಇಂಡಿಯಾ ಸುದ್ದಿ)