ಶಹಬಾಜ್ ಷರೀಫ್ ಪ್ರಧಾನಿ ಆದಾಗ ಭಾರತದ ಈ ಹಳ್ಳಿಯಲ್ಲಿ ಸಂಭ್ರಮವೋ ಸಂಭ್ರಮ
ಇಮ್ರಾನ್ ಖಾನ್ ಪ್ರಧಾನಿ ಸ್ಥಾನ ಕಳೆದುಕೊಂಡಿದ್ದಾರೆ. ಪ್ರಮುಖ ವಿಪಕ್ಷ ಪಿಎಂಎಲ್(ಎನ್) ನಾಯಕ ಹಾಗು ಮೂರು ಬಾರಿ ಪಂಜಾಬ್ ಪ್ರಾಂತ್ಯ ಮುಖ್ಯಮಂತ್ರಿ ಶಹಬಾಜ್ ಷರೀಫ್ ಪಾಕಿಸ್ತಾನದ ಪ್ರಧಾನಿ ಆಗಿದ್ದಾರೆ. ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಕಿರಿಯ ಸಹೋದರ ಶಹಬಾಜ್ ಷರೀಫ್ ಅವರು ಪಾಕ್ ಪ್ರಧಾನಿ ಆಗುತ್ತಿರುವಂತೆಯೇ ಭಾರತದ ಈ ಒಂದು ಹಳ್ಳಿಯಲ್ಲಿ ಸಂಭ್ರಮ ಮಡುಗಟ್ಟಿದೆ. ಪಂಜಾಬ್‌ನ ಜಟಿ ಉಮ್ರಾ ಗ್ರಾಮದಲ್ಲಿ ಜನರು ಸಿಹಿಹಂಚಿ ಖುಷಿಪಡುತ್ತಿದ್ದಾರೆ.
ಷರೀಫ್ ಕುಟುಂಬದ ಹಿನ್ನೆಲೆಯಲ್ಲಿ ಗೊತ್ತಿಲ್ಲದವರಿಗೆ ಈ ಬೆಳವಣಿಗೆ ಅಚ್ಚರಿ ಎನಿಸಬಹುದು. ನವಾಜ್ ಮತ್ತು ಶಹಬಾಜ್ ಅವರ ತಂದೆ ಮಿಯಾನ್ ಮುಹಮ್ಮದ್ ಷರೀಫ್ ಭಾರತ ಮೂಲದವರು ಎಂಬುದು ಗಮನಾರ್ಹ.
1947ರ ದೇಶ ವಿಭಜನೆ ಸಮಯದಲ್ಲಿ ಪಾಕಿಸ್ತಾನದಿಂದ ಬಹುತೇಕ ಮುಸ್ಲಿಮೇತರರು ಭಾರತಕ್ಕೆ ವಲಸೆ ಬಂದಿದ್ದರು. ಅಂತೆಯೇ ಭಾರತದಿಂದಲೂ ಅನೇಕ ಮುಸ್ಲಿಮ್ ಕುಟುಂಬಗಳು ಪಾಕಿಸ್ತಾನಕ್ಕೆ ಹೋಗಿದ್ದವು. ಎಲ್ ಕೆ ಆಡ್ವಾಣಿ ಮೊದಲಾದವರು ಈಗಿನ ಪಾಕಿಸ್ತಾನದಲ್ಲಿ ಹುಟ್ಟಿ ಭಾರತಕ್ಕೆ ವಲಸೆ ಬಂದಿದ್ದರು. ಇದೇ ರೀತಿ ನವಾಜ್ ಷರೀಫ್ ಅವರ ತಂದೆ ಮಿಯಾನ್ ಮುಹಮ್ಮದ್ ಷರೀಫ್ ಅವರೂ ಭಾರತದಿಂದ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದರು.

ಷರೀಫ್ ಊರು ಯಾವುದು?
ಭಾರತದ ವಿಭಜನೆಗೆ ಮೊದಲು ಮಿಯಾನ್ ಮುಹಮ್ಮದ್ ಷರೀಫ್ ಅವರು ಅಮೃತಸರ ಬಳಿಯ ತರನ್ ತಾರನ್ ಜಿಲ್ಲೆಯ ಜಟಿ ಉಮ್ರಾ ಎಂಬ ಊರಿನಲ್ಲಿ ನೆಲಸಿದ್ದರು. ಈ ಜಟಿ ಉಮರಾ ಭಾರತ ಮತ್ತು ಪಾಕಿಸ್ತಾನದ ಗಡಿ ಬಳಿ ಇದೆ. ವಿಭಜನೆಗೆ ಮೊದಲು ಈ ಗ್ರಾಮದಲ್ಲಿ ಇದ್ದ ಏಕೈಕ ಮುಸ್ಲಿಮ್ ಕುಟುಂಬ ಷರೀಫ್ ಅವರದ್ದಾಗಿತ್ತು. ವಿಭಜನೆ ಬಳಿಕ ಮಿಯಾನ್ ಷರೀಫ್ ಅವರು ಇಲ್ಲಿಂದ ಲಾಹೋರ್‌ಗೆ ಹೋಗಿ ನೆಲಸಿ ಅಲ್ಲಿ ಉದ್ಯಮ ವ್ಯವಹಾರದಲ್ಲಿ ಯಶಸ್ವಿಯಾಗಿದ್ದರು.
ಅಂದಹಾಗೆ, ಮಿಯಾನ್ ಮುಹಮ್ಮದ್ ಷರೀಫ್ ಅವರ ಕುಟುಂಬ ಸಿಖ್ ಭಾಷಿಕರಾಗಿದ್ದು, ಮೊದಲು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿದ್ದರು. ಷರೀಫ್ ಅವರ ಪತ್ನಿ ಕಾಶ್ಮೀರದ ಪುಲ್ವಾಮದವರು. ವಿಭಜನೆಗೆ ಕೆಲ ವರ್ಷಗಳ ಮೊದಲು ಮಿಯಾನ್ ಅವರು ಪಂಜಾಬ್‌ನ ಜಟಿ ಉಮ್ರಾ ಗ್ರಾಮಕ್ಕೆ ಬಂದು ನೆಲಸಿದ್ದರೆನ್ನಲಾಗಿದೆ. ಈ ಗ್ರಾಮ ಅಮೃತಸರದಿಂದ 35 ಕಿಮೀ ದೂರದಲ್ಲಿದೆ.

ಪೂರ್ವಜರ ಊರು ಮರೆಯದ ಷರೀಫ್ ಕುಟುಂಬ:
ಷರೀಫ್ ಕುಟುಂಬ ಜಟಿ ಉಮ್ರಾ ಬಿಟ್ಟು ಪಾಕಿಸ್ತಾನಕ್ಕೆ ಹೋದರೂ ಆ ಊರನ್ನ ಮರೆಯಲಿಲ್ಲ. ಲಾಹೋರ್‌ನಲ್ಲಿ ವಿವಿಧ ಉದ್ದಿಮೆಗಳನ್ನ ಸ್ಥಾಪಿಸಿ ಬಹಳ ಯಶಸ್ವಿಯಾಗಿದ್ದಾರೆ. ಈಗ ಪಾಕಿಸ್ತಾನದ ಪ್ರಮುಖ ಉದ್ಯಮಪತಿಗಳಲ್ಲಿ ಷರೀಫ್ ಕುಟುಂಬವೂ ಒಂದು. ಇವರು ಲಾಹೋರ್‌ನಲ್ಲಿ ಇವರ ಕುಟುಂಬಕ್ಕೆ ಸೇರಿದ ಒಂದು ಭವ್ಯ ಎಸ್ಟೇಟ್ ಇದೆ. ಅದರ ಹೆಸರನ್ನ ಜಟಿ ಉಮ್ರಾ ಎಂದೇ ಕಟ್ಟಿದ್ದಾರೆ.
ಅಷ್ಟೇ ಅಲ್ಲ, ಮಿಯಾನ್ ಮುಹಮ್ಮದ್ ಷರೀಫ್ ಅವರು ಆಗಾಗ್ಗೆ ತಮ್ಮ ಕುಟುಂಬದ ಜೊತೆ ಜಟಿ ಉಮ್ರಾ ಊರಿಗೆ ಬಂದು ಸ್ಥಳೀಯರನ್ನ ಭೇಟಿಯಾಗಿ ಹೋಗುತ್ತಿರುತ್ತಾರಂತೆ. ಈಗಿನ ನೂತನ ಪ್ರಧಾನಿ ಶಹಬಾಜ್ ಷರೀಫ್ ಎರಡ್ಮೂರು ಬಾರಿ ಈ ಊರಿಗೆ ಬಂದಿದ್ದಾರೆ.

ನವಾಜ್ ಷರೀಫ್ ಆಹ್ವಾನ:
ಶಹಬಾಜ್ ಅವರ ಅಣ್ಣ ನವಾಜ್ ಷರೀಫ್ ಅವರು ಪ್ರಧಾನಿಯಾಗಿದ್ದಾಗ ಜಟಿ ಉಮ್ರಾದ ಗ್ರಾಮಸ್ಥರನ್ನ ಲಾಹೋರ್‌ಗೆ ಕರೆಸಿಕೊಂಡು ಆತಿಥ್ಯ ನೀಡಿದ್ದರು. ತಮ್ಮನ್ನು ಬಹಳ ಚೆನ್ನಾಗಿ ನೋಡಿಕೊಂಡರು ಎಂದು ಈ ಗ್ರಾಮಸ್ಥರು ಈಗಲೂ ನೆನಪಿಸಿಕೊಳ್ಳುತ್ತಾರೆ.

ಷರೀಫ್ ಜಮೀನಿನಲ್ಲಿ ಗುರುದ್ವಾರ:
ಜಟಿ ಉಮ್ರಾ ಗ್ರಾಮದಲ್ಲಿ ಷರೀಫ್ ಕುಟುಂಬಕ್ಕೆ ಸೇರಿದ ಆಸ್ತಿ ಇದೆ. 1979ರಲ್ಲಿ ಮಿಯಾನ್ ಷರೀಫ್ ಅವರು ತಮ್ಮ ಜಮೀನನ್ನು ಗುರುದ್ವಾರ ನಿರ್ಮಾಣಕ್ಕೆ ದೇಣಿಗೆಯಾಗಿ ನೀಡಿದ್ದರು.

ತಮ್ಮ ಊರಿನವರು ದೊಡ್ಡ ಹುದ್ದೆಗೇರಿದರೆ ಖುಷಿಪಡುವ ಗ್ರಾಮಸ್ಥರು:
ಜಟಿ ಉಮ್ರಾ ಸಣ್ಣ ಊರಾದರೂ ಸಾಕಷ್ಟು ಸಿರಿತನ ಹೊಂದಿರುವ ಗ್ರಾಮ. ತಮ್ಮ ಗ್ರಾಮದ ಯಾರಾದರೂ ವ್ಯಕ್ತಿ ಒಳ್ಳೆಯ ಸ್ಥಾನಮಾನ ಪಡೆದರೆ ಊರಿನವರೆಲ್ಲರೂ ಸಂಭ್ರಮ ಪಡುತ್ತಾರೆ. ನವಾಜ್ ಷರೀಫ್ ಮೂರು ಬಾರಿ ಪ್ರಧಾನಿಯಾದಾಗಲೂ ಇವರೆಲ್ಲರೂ ಖುಷಿಪಟ್ಟಿದ್ದರು. ಈಗ ಶಹಬಾಜ್ ಷರೀಫ್ ಪ್ರಧಾನಿ ಆಗುವ ಸಾಧ್ಯತೆ ಇದೆ ಎಂಬುದು ಗೊತ್ತಾಗುತ್ತಲೇ ಜಟಿ ಉಮರಾದ ಗುರುದ್ವಾರದಲ್ಲಿ ಜನರು ಪ್ರಾರ್ಥನೆ ಸಲ್ಲಿಸಿ ಶುಭಹಾರೈಸಿದ್ದರು. ಅದಕ್ಕೆ ಫಲ ಎಂಬಂತೆ ಷರೀಫ್ ಪ್ರಧಾನಿಯಾಗಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications