
ಒಂಟಿ ಕಾಲಲ್ಲಿ 10 ನಿಮಿಷ ನಿಂತ್ರೆ ಬದುಕ್ತೀರಿ, ಇಲ್ಲಾಂದ್ರೆ...!
ಆರೋಗ್ಯವೇ ಭಾಗ್ಯ ಎನ್ನುವುದು ಸುಮ್ಮನೆ ಅಲ್ಲ. ನಾವು ಹಣ, ಬಂಗಾರ, ವೈಢೂರ್ಯಗಳನ್ನು ಎಷ್ಟೇ ಸಂಪಾದಿಸಿದರೂ ಆರೋಗ್ಯವೆಂಬ ಭಾಗ್ಯ ಇಲ್ಲದಿದ್ದರೆ ಅವೆಲ್ಲಾ ನಿರರ್ಥಕ. ನಮ್ಮ ಆರೋಗ್ಯ ಸ್ಥಿತಿ ಹೇಗಿದೆ ಎಂಬುದಕ್ಕೆ ಹಲವು ವೈದ್ಯಕೀಯ ಪರೀಕ್ಷೆಗಳು ಇವೆ. ಹಾಗೆಯೇ ಕೆಲವು ದೈಹಿಕ ಪರೀಕ್ಷೆಗಳ ಮೂಲಕವೂ ನಮ್ಮ ಆರೋಗ್ಯ ಮತ್ತು ಆಯಸ್ಸಿನ ಸ್ಥಿತಿಯನ್ನು ತಿಳಿಯಬಹುದು.
ಒಂಟಿ ಕಾಲಿನಲ್ಲಿ ನಾವು 10 ಸೆಕೆಂಡ್‌ಗಳವರೆಗಾದರೂ ನಿಂತುಕೊಳ್ಳಬಲ್ಲಿವೆಂದರೆ ನಮ್ಮ ಆಯಸ್ಸು ಇನ್ನೂ ಗಟ್ಟಿ ಇದೆ ಎಂದು ಭಾವಿಸಬಹುದಂತೆ. ಇದು ಬ್ರಿಟಿಷ್ ಜರ್ನಲ್‌ವೊಂದರಲ್ಲಿ ಇತ್ತೀಚೆಗೆ ಪ್ರಕಟಗೊಂಡ ವರದಿಯಲ್ಲಿ ತಿಳಿಸಲಾಗಿದೆ.
ಪುರುಷರಿಗಿಂತ ಮಹಿಳೆಯರ ಮೇಲೆ ಕೋವಿಡ್ ಪರಿಣಾಮ ಹೆಚ್ಚು: ಅಧ್ಯಯನ
ನಮ್ಮ ಜೀವನ ಸಮತೋಲನದಿಂದ ಕೂಡಿರಬೇಕೆಂದು ಭಾವಿಸುತ್ತೀವೋ ಹಾಗೆಯೇ ನಮ್ಮ ದೇಹವೂ ಸಮತೋಲನ ಹೊಂದಿರಬೇಕು. ನಾವು ನಡೆದಾಡುವಾಗ ಆಯತಪ್ಪಿದರೆ ಕೆಳಗೆ ಬೀಳುವುದು ನಿಶ್ಚಿತ. ಆಯತಪ್ಪಲು ಕೆಲವೊಮ್ಮೆ ನಮ್ಮ ದೇಹದ ಅಸಮತೋಲನವೂ ಕಾರಣವಾಗಿರಬಹುದು.
ಕಣ್ಮುಚ್ಚಿಕೊಂಡು ಒಂದು ಕಾಲಿನಲ್ಲಿ ಎಷ್ಟು ಹೊತ್ತು ನಿಂತುಕೊಳ್ಳಬಲ್ಲಿರಿ? ಮೇಲ್ನೋಟಕ್ಕೆ ಇದು ಸುಲಭ ಎನಿಸುತ್ತದೆ. ಆದರೆ, ಒಮ್ಮೆ ಪ್ರಯತ್ನಿಸಿ ನೋಡಿ. ಎರಡು ಮೂರು ಸೆಕೆಂಡುಗಳಿಗೆ ಆಯತಪ್ಪಿ ಬೀಳುವವರೇ ಅಧಿಕ. ಕಣ್ಮುಚ್ಚುವುದು ಬೇಡ, ಹಾಗೆಯೇ ಒಂಟಿ ಕಾಲಿನಲ್ಲಿ ನಿಂತು ನೋಡಿ. ನೀವು ಎಷ್ಟು ಹೊತ್ತು ನಿಲ್ಲಬಲ್ಲಿರಿ ಎಂಬುದರ ಮೇಲೆ ನಿಮ್ಮ ಆಯಸ್ಸು ಎಷ್ಟು ಗಟ್ಟಿಯಾಗಿದೆ ಎಂಬುದನ್ನು ತಿಳಿಯಬಹುದು ಎನ್ನುತ್ತಾರೆ ಸಂಶೋಧಕರು.
ಕೊರೊನಾ ವೈರಸ್ ಬಂದು ಹೋದವರಲ್ಲಿ 'ಕೊರೊನಾಸೋಮ್ನಿಯಾ' ಅಡ್ಡ ಪರಿಣಾಮ!

ಹತ್ತು ಕ್ಷಣದ ಪರೀಕ್ಷೆ
ಒಂಟಿ ಕಾಲಿನಲ್ಲಿ ಹತ್ತು ಸೆಕೆಂಡು ನಿಂತುಕೊಳ್ಳುವ ಸವಾಲು ಮಧ್ಯಮ ವಯಸ್ಸು ದಾಟಿದವರಿಗೆ ಪ್ರಮುಖವಾದುದು. ನೀವು 40 ವರ್ಷ ದಾಟಿದವರಾದರೆ ಈ ಪರೀಕ್ಷೆ ಮಾಡಲೇಬೇಕು. ಒಂದು ಕಾಲಿನಲ್ಲಿ ನೀವು ಕನಿಷ್ಠ 10 ಸೆಕೆಂಡ್ ನಿಲ್ಲಲು ಆಗುತ್ತಿಲ್ಲವೆಂದರೆ ಮುಂದಿನ 10 ವರ್ಷದಲ್ಲಿ ನಿಮ್ಮ ಸಾವಿನ ಸಾಧ್ಯತೆ ಎರಡು ಪಟ್ಟು ಅಧಿಕವಾಗಿರುತ್ತದೆ ಎಂದು ಬ್ರಿಟಿಷ್ ಜರ್ನಲ್ ಅಫ್ ಸ್ಪೋರ್ಟ್ಸ್ ಮೆಡಿಸಿನ್ ಪತ್ರಿಕೆಯಲ್ಲಿ ಇತ್ತೀಚೆಗೆ ಪ್ರಕಟವಾದ ವರದಿಯಲ್ಲಿ ಹೇಳಲಾಗಿದೆ.
ನಾವು ಸಣ್ಣ ವಯಸ್ಸಿನಲ್ಲಿ ಎಷ್ಟು ಸಕ್ರಿಯವಾಗಿರುತ್ತೀವೋ, ಚಲನಶೀಲರಾಗಿರುತ್ತೇವೋ, ಆರೋಗ್ಯಯುತವಾಗಿರುತ್ತೇವೋ ಅದು ನಮ್ಮ ವೃದ್ಧಾಪ್ಯದಲ್ಲಿ ತುಸು ಅನುಕೂಲಕ್ಕೆ ಬರುತ್ತದೆ. 60 ವರ್ಷದ ಗಡಿ ದಾಟಿದ ಬಳಿಕ ಬಹುತೇಕ ಎಲ್ಲರ ದೇಹದ ಸಮತೋಲನ ಕ್ಷಿಪ್ರವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ಹೀಗಾಗಿ, ಎಂಥ ಕ್ರೀಡಾ ಸಾಧಕನಾದರೂ ವೃದ್ಧಾಪ್ಯದಲ್ಲಿ ನಡೆದಾಡುವಾಗ ತಡವರಿಸುವುದು ಇದ್ದೇ ಇರುತ್ತದೆ.

ನೀವು ಪರೀಕ್ಷೆಯಲ್ಲಿ ನಪಾಸಾದರೆ?
ಒಂಟಿ ಕಾಲಿನಲ್ಲಿ 10 ಸೆಕೆಂಡ್ ನಿಲ್ಲುವ ಪರೀಕ್ಷೆಯಲ್ಲಿ ನೀವು ವಿಫಲರಾದರೆ, ಅಂದರೆ ನಿಮಗೆ 10 ಸೆಕೆಂಡ್ ಒಂದು ಕಾಲಿನಲ್ಲಿ ನಿಂತುಕೊಳ್ಳಲು ಆಗುವುದಿಲ್ಲ ಎಂದಾದಲ್ಲಿ ಸಾವಿನ ಸಾಧ್ಯತೆ ಶೇ. 84ರಷ್ಟಿರುತ್ತದೆ. ನಿಮಗೆ ಪೂರ್ವದಲ್ಲೇ ಇರಬಹುದಾದ ಬಿಪಿ, ಶುಗರ್, ಕೊಲೆಸ್ಟ್ರಾಲ್ ಇತ್ಯಾದಿ ಯಾವುದೇ ಆರೋಗ್ಯ ಸಮಸ್ಯೆ ಉಲ್ಬಣಗೊಂಡು ನಿಮ್ಮ ಸಾವಿಗೆ ಕಾರಣವಾಗಬಹುದು ಎನ್ನುತ್ತಾರೆ ತಜ್ಞರು.
ಒಂಟಿ ಕಾಲಿನ ಬಳಕೆ ನಮ್ಮ ದೈನಂದಿನ ಚಟುವಟಿಕೆಗೆ ಬಹಳ ಅಗತ್ಯ. ಹೀಗಾಗಿ, ಈ ಪರೀಕ್ಷೆಯಲ್ಲಿ ಪಾಸ್ ಅಗುವುದು ಅತ್ಯಗತ್ಯ.

ವೈದ್ಯರು ಏನಂತಾರೆ?
ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್ ಪತ್ರಿಕೆಯಲ್ಲಿ ಪ್ರಕಟವಾದ ಈ ವರದಿ ಸಾರ್ವತ್ರಿಕವಾಗಿ ಅನ್ವಯ ಆಗುತ್ತದೆ ಎನ್ನಲಾಗುವುದಿಲ್ಲ. ಆದರೆ, ನಮ್ಮ ದೇಹ ಸಮತೋಲನದಿಂದ ಕೂಡಿದ್ದರೆ ಒಂದು ಕಾಲಿನಲ್ಲಿ ಹೆಚ್ಚು ಹೊತ್ತು ನಿಂತುಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ನಿಜ ಎನ್ನುತ್ತಾರೆ ವೈದ್ಯರು.
ಒಂದು ಕಾಲಿನಲ್ಲಿ ನಿಂತುಕೊಳ್ಳಬೇಕೆಂದರೆ ನಮ್ಮ ಮಿದುಳಿನ ಕಾರ್ಯ, ಮಾಂಸಖಂಡದ ಶಕ್ತಿ, ರಕ್ತದ ಪರಿಚಲನೆ ಇತ್ಯಾದಿ ಸಮರ್ಪಕವಾಗಿರಬೇಕು. ಈ ಹಿನ್ನೆಲೆಯಲ್ಲಿ ಹತ್ತು ಸೆಕೆಂಡ್ ಒಂದು ಕಾಲಿನಲ್ಲಿ ನಿಂತುಕೊಳ್ಳುವ ಪರೀಕ್ಷೆಯನ್ನು ಪರಿಗಣಿಸಲಡ್ಡಿ ಇಲ್ಲ. ಆದರೆ, ಅದೇ ಅಂತಿಮ ಅಲ್ಲ ಎಂದೂ ವೈದ್ಯರು ಎಚ್ಚರಿಸುತ್ತಾರೆ.

ಸಮತೋಲನ ಹೆಚ್ಚಿಸಲು ಏನು ಮಾಡಬೇಕು?
ಒಂಟಿ ಕಾಲಿನಲ್ಲಿ ಹೆಚ್ಚು ಹೊತ್ತು ನಿಲ್ಲಬೇಕೆಂದರೆ ನಮ್ಮ ದೇಹ ಸಮತೋಲನದಿಂದ ಕೂಡಿರಬೇಕು. ಈ ಸಮತೋಲನ ಸಾಧಿಸಲು ಹಲವು ದೈಹಿಕ ಚಟುವಟಿಕೆಗಳಿವೆ.
* ಕಾಲ್ನಡಿಗೆ ಹೆಚ್ಚಾಗಬೇಕು.
* ಸರಿಯಾದ ಆಹಾರಕ್ರಮ
* ಉತ್ತಮ ಜೀವನ ಶೈಲಿ
* ಹೃದಯ ಸಂಬಂಧಿತ ಕಾಯಿಲೆ ಮತ್ತಿತರ ಆರೋಗ್ಯ ಸಮಸ್ಯೆಗಳು ಇವೆಯಾ ಎಂದು ಆಗಾಗ ತಪಾಸಿಸುತ್ತಿರಬೇಕು.

ಕೊನೆಯಾಗಿ...
ಈ ಹತ್ತು ಸೆಕೆಂಡ್ ಒಂಟಿ ಕಾಲಿನಲ್ಲಿ ನಿಂತುಕೊಳ್ಳುವ ಪರೀಕ್ಷೆಯೇ ಅಂತಿಮ ಅಲ್ಲ. ನಾವು ವಿಫಲರಾದರೆ ಬೇಗನೇ ಸಾಯುತ್ತೀರಿ ಎಂದು ನಿಶ್ಚಿತವಾಗಿ ಹೇಳಲು ಸಾಕ್ಷ್ಯಾಧಾರಗಳಿಲ್ಲ. ಆದರೆ, ನಮಗೆ ದೈಹಿಕ ಸಮತೋಲನ ಇರುವುದು ಮಾತ್ರ ಅತ್ಯಗತ್ಯ. ಇಲ್ಲವಾದರೆ ನಮ್ಮ ನಿತ್ಯದ ದೈಹಿಕ ಚಟುವಟಿಕೆಗಳಿಗೆ ಕಷ್ಟವಾಗುತ್ತದೆ. ನಮ್ಮ ಆರೋಗ್ಯ ಇನ್ನೂ ಕೆಡಬಹುದು. ಹೀಗಾಗಿ, ನಾವು ಪರೀಕ್ಷೆಯಲ್ಲಿ ಪಾಸ್ ಅಗಲಿ ಫೇಲ್ ಆಗಲಿ, ನಮ್ಮದು ಆರೋಗ್ಯಯುತ ಜೀವನಶೈಲಿಯಾಗಿರಬೇಕು. ನಿತ್ಯವೂ ನಡಿಗೆ, ವ್ಯಾಯಾಮ ಇತ್ಯಾದಿ ಮಾಡಬೇಕು. ಆಗ ಆರೋಗ್ಯ ಭಾಗ್ಯ ನಮ್ಮದಾಗುತ್ತದೆ.
(ಒನ್ಇಂಡಿಯಾ ಸುದ್ದಿ)