Maha Kumbh Mela 2025: ಮಹಾಕುಂಭ ಮೇಳದ ವೈರಲ್ ಐಐಟಿ ಬಾಬಾಗೆ ಬಹಿಷ್ಕಾರ, ಕಾರಣವೇನು?
ಉತ್ತರಪ್ರದೇಶದ ಪ್ರಯಾಗರಾಜ್‌ನ ಮಹಾ ಕುಂಭಮೇಳದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ ಐಐಟಿ ಬಾಂಬೆಯ ಮಾಜಿ ಏರೋಸ್ಪೇಸ್ ಇಂಜಿನಿಯರ್ ಅಭಯ್ ಸಿಂಗ್ ಅವರನ್ನು ಅವರ ಅಖಾರಾದಿಂದ ಹೊರಹಾಕಲಾಗಿದೆ. ಈ ಬಾರಿ ಮಹಾಕುಂಭ ಮೇಳದಲ್ಲಿ ಅಭೇ ಸಿಂಗ್ ಐಐಟಿ ಬಾಬಾ ಎಂದೇ ಫೇಮಸ್ ಆಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅವರು ವೈರಲ್ ಕೂಡ ಆಗಿದ್ದರು.
ಸಿಂಗ್ ಅವರು ತನ್ನ ಗುರು ಮಹಂತ್ ಸೋಮೇಶ್ವರ ಪುರಿ ವಿರುದ್ಧ ನಿಂದನೀಯ ಭಾಷೆಯನ್ನು ಬಳಸಿದ್ದಕ್ಕಾಗಿ ಜುನಾ ಅಖಾರಾ ಶಿಬಿರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರವೇಶವನ್ನು ನಿಷೇಧಿಸಿರುವುದಾಗಿ ವರದಿಯಾಗಿದೆ. ಜುನಾ ಅಖಾರಾದ ಸದಸ್ಯರೊಬ್ಬರು ಅಭೇ ಸಿಂಗ್ ಅವರೊಂದಿಗೆ ಸಂಬಂಧ ಹೊಂದಿಲ್ಲ. ಅವರು ನಮಗೆ ಮಾನಹಾನಿ ಮಾಡುತ್ತಿದ್ದರು. ಅವನು ಅಲೆಮಾರಿ, ಸಾಧು ಅಲ್ಲ. ಯಾರ ಶಿಷ್ಯರೂ ಅಲ್ಲ, ಅವನನ್ನು ಅಖಾರದಿಂದ ಹೊರಹಾಕಲಾಯಿತು ಎಂದಿದ್ದಾರೆ.

ಆದರೆ ಐಐಟಿಯನ್ ಬಾಬಾ ಖ್ಯಾತಿಯ ಅಭಯ್ ಸಿಂಗ್ ಅವರು ಅಖಾರಾದಿಂದ ಹೊರಹಾಕಲ್ಪಟ್ಟ ಆರೋಪವನ್ನು ತಳ್ಳಿ ಹಾಕಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಅಖಾರಾದಲ್ಲಿರುವವರು ತಮ್ಮ ಬಗ್ಗೆ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನಾನು ಈಗ ಫೇಮಸ್ ಆಗಿದ್ದೇನೆ. ಹೀಗಾಗಿ ನಾನು ಅವರ ಬಗ್ಗೆ ಯಾವ ವಿಚಾರವನ್ನಾದರೂ ಬಹಿರಂಗಪಡಿಸುವ ಸಾಧ್ಯತೆ ಇದೆ ಎಂದು ಅವರು ಭಾವಿಸಿದ್ದಾರೆ. ಹಾಗಾಗಿ ನಾನು ರಹಸ್ಯ ಧ್ಯಾನಕ್ಕೆ ಹೋಗಿದ್ದೇನೆ ಎಂದು ಅವರು ಹೇಳಿಕೊಳ್ಳುತ್ತಿದ್ದಾರೆ. ಅವರು ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ ಎಂದಿದ್ದಾರೆ.
ಮಹಾಕುಂಭ ಮೇಳದಲ್ಲಿ ಗಮನ ಸೆಳೆದಿದ್ದ 36 ವರ್ಷ ವಯಸ್ಸಿನ ಅಭಯ್ ಸಿಂಗ್ ಅವರು ತಮ್ಮ ಏರೋಸ್ಪೇಸ್ ಎಂಜಿನಿಯರಿಂಗ್ ಪದವಿಯನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆಯಿಂದ ಪೂರ್ಣಗೊಳಿಸಿರುವುದಾಗಿ ಹೇಳಿಕೊಂಡಿದ್ದರು. ಸದ್ಯ ಅವರನ್ನು ಎಂಜಿನಿಯರ್ ಬಾಬಾ ಎಂದೂ ಕರೆಯಲಾಗುತ್ತಿದೆ. ಹರಿಯಾಣದ ನಿವಾಸಿಯಾದ ಇವರು ಆಧ್ಯಾತ್ಮಿಕತೆಗಾಗಿ ವಿಜ್ಞಾನದ ಹಾದಿಯನ್ನು ತೊರೆದರು ಹೇಳಿಕೊಂಡಿದ್ದರು.
ವಿಜ್ಞಾನವು ಭೌತಿಕ ಜಗತ್ತನ್ನು ವಿವರಿಸಲು ಮಾತ್ರ ಸಹಾಯ ಮಾಡುತ್ತದೆ. ಆದರೆ ಅದರ ಆಳವಾದ ಅಧ್ಯಯನವು ಅನಿವಾರ್ಯವಾಗಿ ಆಧ್ಯಾತ್ಮಿಕತೆಯ ಕಡೆಗೆ ಕರೆದೊಯ್ಯುತ್ತದೆ. ಮನುಷ್ಯನ ಜೀವನದ ನಿಜವಾದ ತಿಳುವಳಿಕೆಯು ಅಂತಿಮವಾಗಿ ಒಬ್ಬನನ್ನ ಆಧ್ಯಾತ್ಮಿಕತೆಯ ಹತ್ತಿರಕ್ಕೆ ಕರೆತರುತ್ತದೆ ಎಂದು ಅವರು ಹೇಳಿಕೆ ನೀಡಿದ್ದರು.

ಅಲ್ಲದೆ ತಮ್ಮ ಬಾಲ್ಯದ ಕೆಲವು ಘಟನೆಗಳನ್ನು ಆಧರಿಸಿ ಅವರು ಮದುವೆಯಾಗದಿರಲು ಕೂಡ ನಿರ್ಧರಿಸಿದ್ದಾರೆ. ನಾನು ಯೋಚಿಸಿದೆ, ನನ್ನ ಬಾಲ್ಯದಲ್ಲಿ ನಾನು ನೋಡಿದ ಅದೇ ಜಗಳಗಳು ಮತ್ತು ಸಂಘರ್ಷಗಳನ್ನು ಮತ್ತೆ ಏಕೆ ಎದುರಿಸಬೇಕು? ಒಂಟಿಯಾಗಿ ಬದುಕುವುದು ಮತ್ತು ಶಾಂತಿಯುತ ಜೀವನವನ್ನು ನಡೆಸುವುದೇ ಉತ್ತಮ. ಹೀಗಿದ್ದಾಗ ಏಕೆ ಮದುವೆಯಾಗಬೇಕು? ಎಂದು ಹೇಳಿದ್ದರು.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಅಭಯ್ ಸಿಂಗ್ ಅವರನ್ನು ಅಲ್ಲಿನ ಆಶ್ರಮದಿಂದ ಹೊರಗೆ ಕಳಿಸಿದ್ದಾರೆ ಎನ್ನಲಾಗಿದೆ. ಮಡಿ ಆಶ್ರಮದವರು ರಾತ್ರಿ ನನಗೆ ಹೊರಡುವಂತೆ ಹೇಳಿದರು. ನಾನು ಈಗ ಫೇಮಸ್ ಆಗಿದ್ದೇನೆ. ಹಾಗಾಗಿ ನನ್ನ ಬಗ್ಗೆ ಅವರು ಏನೇನೋ ಹೇಳುತ್ತಿದ್ದಾರೆ. ಆದರೆ ನಾನು ಇನ್ನೂ ಧಾರ್ಮಿಕ ಸಭೆಯಲ್ಲಿದ್ದೇನೆ ಎಂದು ಬಾಬಾ ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications