ಐತಿಹಾಸಿಕ ಪ್ರಸಿದ್ಧ ವದ್ದಿಕೆರೆ ಸಿದ್ದಪ್ಪನ ಬಗ್ಗೆ ನಿಮಗೆಷ್ಟು ಗೊತ್ತು?-ಇಲ್ಲಿದೆ ಸಂಪೂರ್ಣ ವಿವರ
ಹಿರಿಯೂರು, ಏಪ್ರಿಲ್, 19: ಹೊರಿಯೂರು ತಾಲೂಕಿನ ವದ್ದೀಕೆರೆ ಗ್ರಾಮದ ಐತಿಹಾಸಿಕ ಶ್ರೀ ಕಾಲಭೈರವೇಶ್ವರಸ್ವಾಮಿ ಯಾನೆ ಶ್ರೀ ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಇದೇ ಏಪ್ರಿಲ್ 19ರಿಂದ 24 ರವರೆಗೆ ನಡೆಯಲಿದ್ದು, ಏಪ್ರಿಲ್ 22ರಂದು ಬ್ರಹ್ಮ ರಥೋತ್ಸವ ಜರುಗಲಿದೆ. ಇನ್ನು ಮತ್ತೊಂದೆಡೆ ವದ್ದಿಗೆರೆ ಸಿದ್ದಪ್ಪನ ಐತಿಹಾಸಿಕ ಹಿನ್ನೆಲೆ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ ಗಮನಿಸಿ.
ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಏಪ್ರಿಲ್ 19ರಂದು ರಾತ್ರಿ 8 ಗಂಟೆಗೆ ಕಂಕಣಧಾರಣೆ, ಏಪ್ರಿಲ್ 20ರಂದು ರಾತ್ರಿ 7 ಗಂಟೆಗೆ ಅಗ್ನಿಕುಂಡ, ಏಪ್ರಿಲ್ 21ರಂದು ರಾತ್ರಿ 8 ಗಂಟೆಗೆ ಚಿಕ್ಕ ರಥೋತ್ಸವ ಕಾರ್ಯ ಜರುಗಲಿದೆ. ಇನ್ನು ಏಪ್ರಿಲ್ 22ರಂದು ಮಧ್ಯಾಹ್ನ 3:30ಕ್ಕೆ ಹೂವಿನ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಜಾನಪದ ಕಲಾವಿದರಿಂದ ವೈವಿದ್ಯಮಯ ಮೆರವಣಿಗೆ ನಡೆಯಲಿದೆ. ಅದೇ ದಿನ ಸಂಜೆ 4:30ಕ್ಕೆ ಬ್ರಹ್ಮ ರಥೋತ್ಸವ ಜರುಗಲಿದೆ.

ಏಪ್ರಿಲ್ 23ರಂದು ಉಂಡೆ, ಮಂಡೆ, ಸಿದ್ಧಭಕ್ತಿ ಕಾರ್ಯ ಹಾಗೂ ಏಪ್ರಿಲ್ 24ರಂದು ಕಿರುಬಾನ, ವಸಂತೋತ್ಸವ ಮತ್ತು ಸಂಜೆ 6ಕ್ಕೆ ಕಂಕಣ ವಿಸರ್ಜನೆ ಕಾರ್ಯ ನಡೆಯಲಿದೆ ಎಂದು ಹಿರಿಯೂರು ತಹಶೀಲ್ದಾರ್ ಸಿ.ರಾಜೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿದ್ದೇಶ್ವರನ ಹಿನ್ನೆಲೆ: ಸಿದ್ದಪ್ಪನ ಕುರಿತು ಹಲವಾರು ಜನಪದ ಕತೆಗಳು ಈ ಭಾಗದ ಹಳ್ಳಿಗರ ಬಾಯಲ್ಲಿ ನಲಿದಾಡುತ್ತವೆ. ಹೇಮಾವತಿಯ ಹೆಂಜಾರಪ್ಪನ ತಮ್ಮ ಸಿದ್ದಪ್ಪ ವದ್ದೀಕೆರೆಯ ಬಳಿ ಬಂದಾಗ ಬಾಯಾರಿಕೆಯಾದಾಗ ತ್ರಿಶೂಲದಿಂದ ನೆಲಕ್ಕೆ ತಿವಿದಾಗ ನೀರು ಚಿಮ್ಮಿತಂತೆ. ನಂತರ ಇಡೀ ವರ್ಷ ಈ ಬಾವಿಯಲ್ಲಿ ನೀರು ತುಂಬಿರುತ್ತದೆ.
ಆದರೆ ಜಾತ್ರೆಯ ದಿನ ನೀರು ಇಲ್ಲವಾಗುತ್ತದೆಯಂತೆ. ಈ ಪ್ರದೇಶದಲ್ಲಿ ಬಿದಿರು ಮೆಳೆ ಹೆಚ್ಚಾಗಿದ್ದ ಕಾರಣ ವದ್ದೀಕೆರೆ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ. ಸಿದ್ದಪ್ಪನ ದೇವಾಲಯ ಚೋಳರ ಕಾಲದಲ್ಲಿ ನಿರ್ಮಾಣ ಆಗಿರಬಹುದು ಎಂಬುದು ಇತಿಹಾಸಕಾರರ ಅನಿಸಿಕೆಯಾಗಿದೆ.
ವದ್ದೀಕೆರೆ ಕಾಲಭೈರವೇಶ್ವರ ಯಾನೆ ಸಿದ್ದೇಶ್ವರ ಸ್ವಾಮಿ ದೇವಸ್ಥಾನವನ್ನು 7ನೇ ಶತಮಾನದಲ್ಲಿ ನೊಳಂಬ ರಾಜರ ಆಳ್ವಿಕೆ ಕಾಲದಲ್ಲಿ ಶ್ರೀಹೆಂಜೇರು ಸಂಸ್ಥಾನವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ರಾಜ್ಯಬಾರ ಮಾಡುತ್ತಿದ್ದ ಕಾಲದಲ್ಲಿ ವದ್ದೀಕೆರೆ ಸಿದ್ದೇಶ್ವರಸ್ವಾಮಿ ದೇವಸ್ಥಾನವನ್ನು ಜೋಳರ ಶೈಲಿಯಲ್ಲಿ ನಿರ್ಮಿಸಲಾಗಿದೆ ಎಂದು ಇತಿಹಾಸ ಹೊಂದಿದೆ.
ವದ್ದೀಕೆರೆ, ಸೊಂಡೇಕೊಳ ಮತ್ತು ಪಗಲಬಂಡೆ ಗ್ರಾಮ ಸೇರಿದಂತೆ ಒಟ್ಟು ಮೂರು ಗ್ರಾಮಗಳಲ್ಲಿ ಮುತ್ತಿನ ವ್ಯಾಪಾರಿ ವೈಶ್ಯ ಜಾತಿಗೆ ಸೇರಿದ ದಾನಿ ಈ ದೇವಸ್ಥಾನ ನಿರ್ಮಾಣ ಮಾಡಿದ್ದಾರೆಂದು ಜನರ ಬಾಯಿಂದ ಬಾಯಿಯಲ್ಲಿ ನಲಿದಾಡಿಕೊಂಡು ಬಂದಿದೆ.
ವಿಶೇಷ ಪೂಜೆ ಸಲ್ಲಿಕೆ: ಉಗ್ರ ಸ್ವರೂಪಿಯಾದ ಶ್ರೀಕಾಲಭೈರವೇಶ್ವರ ಸ್ವಾಮಿ ಅತ್ಯಂತ ಶಕ್ತಿ ದೇವರು ಎನ್ನಬಹುದು. ದೇಗುಲದಲ್ಲಿ ಪ್ರತಿ ಭಾನುವಾರ ವಿಶೇಷ ಪೂಜೆ ನಡೆಯಲಿದೆ. ಆರಂಭದಲ್ಲಿ ಈ ದೇವರಿಗೆ ಕಾಡುಗೊಲ್ಲ ಜನಾಂಗದವರು ಪೂಜೆ ನೆರವೇರಿಸಿದ್ದರು. ತವರು ಮನೆಯ ಉಡುಗೊರೆಯಾಗಿ ನಂತರದ ದಿನಗಳಲ್ಲಿ ಸಹೋದರ ಜಾತಿಯಾದ ಸಲಬೊಮ್ಮನಹಳ್ಳಿಯ ಕುಂಚಿಟಿಗ ಜಾತಿಗೆ ಪೂಜಾ ಕಾರ್ಯ ಸಲ್ಲಿಸಲು ಉಂಬಳಿ ನೀಡಲಾಯಿತು.
ಬದಲಾದ ಸಮಯದಲ್ಲಿ ಅಂದರೆ ದೇವಾಲಯ 1974ರಲ್ಲಿ ಮುಜರಾಯಿ ಇಲಾಖೆಗೆ ಒಳಪಟ್ಟಿತ್ತು. ಅಂದಿನಿಂದ ಬ್ರಾಹ್ಮಣ ಸಮುದಾಯದವರು ಪೂಜೆ ನೆರವೇರಿಸಿಕೊಂಡು ಬರುತ್ತಿದ್ದಾರೆ. ಇನ್ನು ಐಸಿಹಾಸಿಕ ಪ್ರಸಿದ್ಧ ಶ್ರೀಸಿದ್ದೇಶ್ವರಸ್ವಾಮಿ ಜಾತ್ರೆಯು ಪ್ರತಿವರ್ಷ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ನಡೆಯುತ್ತದೆ. ಜಾತ್ರೆ ಸಂದರ್ಭದಲ್ಲಿ ಸೇರಿದಂತೆ ವಾರದ ಪೂಜೆಗೆ ಜಿಲ್ಲೆ, ರಾಜ್ಯದ ನಾನಾ ಜಿಲ್ಲೆಗಳು ಸೇರಿದಂತೆ ಪಕ್ಕದ ಆಂಧ್ರ ಮತ್ತಿತರ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ .
ಮಜ್ಜನ ಬಾವಿ ವಿಶೇಷತೆ: ಸಿದ್ದೇಶ್ವರಸ್ವಾಮಿ ದೇವಸ್ಥಾನದ ಸಮೀಪ ಮಜ್ಜನ ಬಾವಿ ಇದ್ದು, ಬ್ರಹ್ಮ ರಥೋತ್ಸವದ ದಿನ ಸಂಪೂರ್ಣ ಭರ್ತಿಯಾಗಿರುತ್ತದೆ. ರಥೋತ್ಸವದ ಮರು ದಿನ ಮಜ್ಜನ ಬಾವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಿದ್ಭುಕ್ತಿ ಮಾಡಿದ ನಂತರ ಮಜ್ಜನ ಬಾವಿ ಸಂಪೂರ್ಣ ಖಾಲಿಯಾಗುತ್ತದೆ. ಇದೊಂದು ಬಹುದೊಡ್ಡ ಪವಾಡವೇ ಆಗಿದೆ.
ಕಂಕಣ ವಿಸರ್ಜನೆ ದಿನದ ನಂತರ ಮತ್ತೆ ಮಜ್ಜನ ಬಾವಿಗೆ ನೀರು ಹರಿದು ಬರಲಿದೆ. ಈ ಬಾವಿಯ ನೀರನ್ನು ಮೈಮೇಲೆ ಹಾಕಿಕೊಂಡರೆ ಆರೋಗ್ಯ ಭಾಗ್ಯ ದೊರೆಯಲಿದೆ ಎಂಬ ಪ್ರತೀತಿ ಇದ್ದು, ದೇವಸ್ಥಾನ ಮತ್ತು ರಥೋತ್ಸವಕ್ಕೆ ಬರುವ ಭಕ್ತರು ಮೊದಲು ಮಜ್ಜನ ಬಾವಿ ನೀರನ್ನು ಮೈಮೇಲೆ ಹಾಕಿಸಿಕೊಳ್ಳುತ್ತಾರೆ.
ನೆರೆಯ ಆಂಧ್ರ ಪ್ರದೇಶದ ಹೇಮಾವತಿಯಲ್ಲಿ ನೆಲೆಸಿರುವ ಶ್ರೀಹೆಂಜಾರು ಸಿದ್ದೇಶ್ವರಸ್ವಾಮಿ ಮತ್ತು ವದ್ದೀಕೆರೆ ಸಿದ್ದೇಶ್ವರಸ್ವಾಮಿ ಇಬ್ಬರು ಸಹೋದರರಾಗಿದ್ದರಂತೆ. 7ನೇ ಶತಮಾನದ ನೊಳಂಬ ರಾಜರ ಕಾಲದಲ್ಲಿ ವದ್ದೀಕೆರೆ ಸಮೀಪ ನೊಣಬಿ ಪಟ್ಟಣವನ್ನು ಮಲ್ಲೇಗೌಡನೆಂಬ ಅರಸ ಆಳ್ವಿಕೆ ಮಾಡಿದ್ದನಂತೆ. ಈತನಿಗೆ ಮಕ್ಕಳಿಲ್ಲದ ಕಾರಣ ಹೇಮಾವತಿಯಲ್ಲಿ ನೆಲೆಸಿದ್ದ ಸಿದ್ದೇಶ್ವರರಿಬ್ಬರನ್ನು ಕೇಳಿಕೊಂಡಾಗ 7 ಜನ ಪುತ್ರಿಯರು ಮಲ್ಲೇಗೌಡನಿಗೆ ಜನಿಸುತ್ತಾರೆ. ಆ
ಗ ಮಲ್ಲೇಗೌಡನಿಗೆ ಜನಿಸಿದ 7 ಜನ ಹೆಣ್ಣು ಮಕ್ಕಳಲ್ಲಿ ಪರದೇಶಿ ನಿಂಗಣ್ಣನಿಗೆ ಒಬ್ಬಳನ್ನು ಕೊಟ್ಟು ವಿವಾಹ ಮಾಡುವುದಾಗಿ ಸಿದ್ದೇಶ್ವರರಿಬ್ಬರಿಗೂ ಮಲ್ಲೇಗೌಡ ಮಾತು ಕೊಟ್ಟಿದ್ರಂತೆ. ಮದುವೆಗೆ ಬಂದಾಗ ಪರದೇಶಿ ನಿಂಗಣ್ಣನಿಗೆ ಹೆಣ್ಣು ಮಕ್ಕಳನ್ನು ನೀಡಲು ಮನಸ್ಸಿಲ್ಲದೆ 6 ಜನ ಹೆಣ್ಣು ಮಕ್ಕಳನ್ನು ಬೇರೆಯವರಿಗೆ ಧಾರೆ ಎರೆದು ಕೊಡುತ್ತಾನೆ.
ಕೊನೆಯವಳಾದ ಸ್ವರ್ಣಗೌರಿಗೂ ಬೇರೆಯವರೊಂದಿಗೆ ಮದುವೆ ನಿಶ್ಚಯವಾದಾಗ ಪರದೇಶಿ ನಿಂಗಣ್ಣನ ಹತ್ತಿರ ಬಂದ ಸ್ವರ್ಣಗೌರಿ, ನಮ್ಮಪ್ಪ ನಿನಗೆ ಮದುವೆ ಮಾಡಿಕೊಡಲು ಒಪ್ಪುತ್ತಿಲ್ಲ. ಓಡಿ ಹೋಗಿ ಮದುವೆ ಮಾಡಿಕೊಳ್ಳೊಣ ಬಾ ಎಂದಾಗ ಅದಕ್ಕೆ ಒಪ್ಪದ ಪರದೇಶಿ ನಿಂಗಣ್ಣ ಹೇಮಾವತಿಯ ಸಿದ್ದೇಶ್ವರರಿಬ್ಬರಲ್ಲಿ ದೂರು ಹೇಳುತ್ತಾನೆ.
ಆಗ ಅತಿ ಕೋಪಿಷ್ಠನಾದ ವದ್ದೀಕೆರೆ ಸಿದ್ದೇಶ್ವರನನ್ನು ಹೇಮಾವತಿಯ ದೊಡ್ಡಣ್ಣನ ಗುಹೆಯಲ್ಲಿ ಕೂಡಿ ಹಾಕಿದಾಗ ರಾತ್ರೋ ರಾತ್ರಿ ಅಂಕಣವನ್ನು ಹಾರಿ ಹೊಡೆದುಕೊಂಡು ಪರದೇಶಿ ನಿಂಗಣ್ಣನಿಗೆ ನ್ಯಾಯ ದೊರಕಿಸಿಕೊಡಲು ಬರುತ್ತಿರುವಾಗ ಹಿಂದೆಕ್ಕೆ ನೋಡದಂತೆ ಮುಂದೆ ಸಾಗು ಎಂದು ಮೊದಲೆ ಪರದೇಶಿ ನಿಂಗಣ್ಣನಿಗೆ ಸೂಚನೆ ನೀಡಿರುತ್ತಾನಂತೆ.
ಆದರೆ ವದ್ದೀಕೆರೆ ಸಮೀಪ ಬಂದಾಗ ನಿಂಗಣ್ಣ ಹಿಂದಕ್ಕೆ ತಿರುಗಿ ನೋಡಿದಾಗ ಸಿದ್ದೇಶ್ವರ ರೌದ್ರ ರೂಪ ಕಂಡು ಜ್ಞಾನ ತಪ್ಪಿ ಬಿದ್ದಾಗ ತನ್ನ ತ್ರಿಶೂಲದಿಂದ ಮಜ್ಜನ ಬಾವಿಯನ್ನು ತೋಡಿ ಅದರಲ್ಲಿನ ನೀರನ್ನು ಹಾಕಿ ನಿಂಗಣ್ಣನನ್ನು ಎಚ್ಚರಗೊಳಿಸುತ್ತಾನೆ. ನಂತರ ಪರದೇಶಿ ನಿಂಗಣ್ಣನಿಗೆ ಸ್ವರ್ಣಗೌರಿಯನ್ನು ಸಾಕ್ಷಿ ಮರದ ಮುಂದೆ ಮದುವೆ ಮಾಡಿಕೊಟ್ಟು ಅಲ್ಲಿ ನೆಲೆಸಿದನು ಎಂಬ ಪ್ರತೀತಿ ಇದೆ. ಅಲ್ಲದೆ ವದ್ದೀಕೆರೆ ಸಿದ್ದಪ್ಪನ ರೌದ್ರಾವತಾರಕ್ಕೆ ನೊಣಬಿ ಪಟ್ಟಣ ಸಂಪೂರ್ಣ ಹಾಳಾಗಿ ಹೋಗಿದೆಯಂತೆ.
ಹೇಮಾವತಿಯ ಹೆಂಜಾರು ಸಿದ್ದೇಶ್ವರಸ್ವಾಮಿ ಹೇಮಾವತಿಯಿಂದ ಪಶ್ಚಿಮ ಭಾಗಕ್ಕೆ ಇರುವ ವದ್ದೀಕೆರೆ ನೋಡುತ್ತಿದ್ದರೆ, ಇತ್ತ ವದ್ದೀಕೆರೆಯ ಸಿದ್ದೇಶ್ವರಸ್ವಾಮಿ ಪರದೇಶಿ ನಿಂಗಣ್ಣ ಮತ್ತು ಆತನ ಪತ್ನಿ ಸ್ಪರ್ಣಗೌರಿ ನಡೆದು ಹೋದ ದಾರಿ ದಕ್ಷಿಣಾಭಿಮುಖವಾಗಿ ನೋಡುತ್ತಿದ್ದರೆ, ಅತ್ತ ಪರದೇಶಿ ನಿಂಗಣ್ಣ, ಪತ್ನಿ ಸ್ವರ್ಣಗೌರಿ ವದ್ದೀಕೆರೆಯತ್ತ ಮುಖ ಮಾಡಿ ನೋಡುತ್ತಿರುವ ದೃಶ್ಯ ಇಂದಿಗೂ ಕಾಣಬಹುದಾಗಿದೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು












Click it and Unblock the Notifications