• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಖಂಡತೆಯ ಯೋಗ, ರಾಜ್ಯ ವಿಭಜನೆಯನ್ನು ಬಗ್ಗುಬಡಿದ ಅರಸು ಪ್ರಯೋಗ

By ಆರ್ ಟಿ ವಿಠ್ಠಲಮೂರ್ತಿ
|

ಒಬ್ಬ ದೇವರಾಜ ಅರಸು ಮುಖ್ಯಮಂತ್ರಿಯಾಗದೆ ಹೋಗಿದ್ದರೆ ಕರ್ನಾಟಕ ಬಹು ಹಿಂದೆಯೇ ವಿಧ್ಯುಕ್ತವಾಗಿ ವಿಭಜನೆಯಾಗುತ್ತಿತ್ತು. ಈ ಮಾತನ್ನು ಹೇಳಿದರೆ ಹಲವರಿಗೆ ಅಚ್ಚರಿಯಾಗಬಹುದು. ಪ್ರಬಲ ಸಮುದಾಯಗಳ ವಿರುದ್ಧ ಅಹಿಂದ ಸಮುದಾಯಗಳ ಸೈನ್ಯ ಕಟ್ಟಿದ ದೇವರಾಜ ಅರಸರಿಂದ ರಾಜ್ಯ ವಿಭಜನೆಯಾಗುವುದು ತಪ್ಪಿತು ಎಂದರೆ ಹಾಗೆ ಅಚ್ಚರಿ ಆಗುವುದು ಸಹಜವೂ ಹೌದು.

ಆದರೂ ಇದು ನಿಜ. ದೇವರಾಜ ಅರಸರು ಕರ್ನಾಟಕದ ಮುಖ್ಯಮಂತ್ರಿಯಾಗದೆ ಹೋಗಿದ್ದರೆ ಕರ್ನಾಟಕ ವಿಭಜನೆಯಾಗುವ ಕಾಲ ಎಪ್ಪತ್ತರ ದಶಕದಲ್ಲೇ ಉದ್ಭವವಾಗಿಬಿಡುತ್ತಿತ್ತು. ಹಾಗಂತ ಕರ್ನಾಟಕದ ವಿಭಜನೆಯನ್ನು ತಪ್ಪಿಸುವ ಸಲುವಾಗಿ ದೇವರಾಜ ಅರಸರು ವಿಶೇಷ ಪ್ರಯತ್ನ ಹಾಕಿದರು ಅಂತೇನಲ್ಲ.
ಆದರೆ ತಮಗೆದುರಾದ ಸನ್ನಿವೇಶವನ್ನು ನಿಭಾಯಿಸಲು ಅವರು ರೂಪಿಸಿದ ತಂತ್ರ ಅವರಿಗೇ ಗೊತ್ತಿಲ್ಲದಂತೆ ಕರ್ನಾಟಕವನ್ನು ವಿಭಜನೆಯ ಅಪಾಯದಿಂದ ತಪ್ಪಿಸಿತು.

ಅರಸು ಕಾಲದಲ್ಲಿ ಕಟ್ಟಿದ್ದ ಅಹಿಂದ ಸೈನ್ಯವೆಲ್ಲಿ? ರಾಹುಲ್ ಗಾಂಧಿ ಕೇಳುತ್ತಿದ್ದಾರೆ!

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಜಯೋಗದ ಒಂದು ವಿಧಾನವಿದೆ. ಎರಡು ಪ್ರಬಲ ಶಕ್ತಿಗಳು ಪರಸ್ಪರ ಘಟ್ಟಿಸಿದಾಗ ಮೂರನೇ ಶಕ್ತಿಗೆ ಲಾಭವಾಗುವುದು ಈ ಯೋಗದ ಮುಖ್ಯ ಲಕ್ಷಣ. ದೇವರಾಜ ಅರಸರು ತಮ್ಮೆದುರಿನ ಸವಾಲನ್ನು ನಿಭಾಯಿಸಲು ಎರಡು ಶಕ್ತಿಗಳು ಪರಸ್ಪರ ಘಟ್ಟಿಸುವಂತೆ ಮಾಡಿ, ಕರ್ನಾಟಕದ ಪಾಲಿಗೆ ಅಖಂಡತೆಯ ಯೋಗ ಉಳಿದುಕೊಳ್ಳುವಂತೆ ಮಾಡಿದರು.

ವಸ್ತುಸ್ಥಿತಿ ಎಂದರೆ, ಸ್ವಾತಂತ್ರ್ಯಾನಂತರದ ಕಾಲದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗುತ್ತಾ ಬಂದವರು ಹಳೆ ಮೈಸೂರು ಭಾಗದಲ್ಲಿ ಪ್ರಬಲರಾಗಿದ್ದ ಒಕ್ಕಲಿಗ ಸಮುದಾಯದವರು. ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಇರಬಹುದು, ಕೆಂಗಲ್ ಹನುಮಂತಯ್ಯ ಇರಬಹುದು, ಕಡಿದಾಳ್ ಮಂಜಪ್ಪ ಇರಬಹುದು. ಇವರೆಲ್ಲರೂ ಒಕ್ಕಲಿಗ ಸಮುದಾಯದಿಂದ ಬಂದವರು.

ಆದರೆ 1956ರಲ್ಲಿ ಕರ್ನಾಟಕದ ಏಕೀಕರಣವಾದ ನಂತರ ದಶಕಗಳ ಕಾಲ ಮುಖ್ಯಮಂತ್ರಿಗಳಾಗಿ ಆಳಿದವರು ಲಿಂಗಾಯತ ಸಮುದಾಯದವರು. ಏಕೀಕರಣಕ್ಕಿಂತ ಮುಂಚೆ ಒಕ್ಕಲಿಗರು ಪ್ರಬಲ ವೋಟ್ ಬ್ಯಾಂಕ್ ಆಗಿದ್ದರೆ, ಏಕೀಕರಣದ ನಂತರ ಲಿಂಗಾಯತರು ಪ್ರಬಲ ವೋಟ್ ಬ್ಯಾಂಕ್ ಗಳಾದರು. ಅದರ ಪರಿಣಾಮವಾಗಿ ಏಕೀಕರಣದ ನಂತರ ಮೇಲಿಂದ ಮೇಲೆ ಲಿಂಗಾಯತ ಸಮುದಾಯದಿಂದ ಬಂದವರು ಮುಖ್ಯಮಂತ್ರಿಗಳಾಗತೊಡಗಿದರು.

ಸಾಲುಸಾಲು ಲಿಂಗಾಯತ ಮುಖ್ಯಮಂತ್ರಿಗಳು

ಸಾಲುಸಾಲು ಲಿಂಗಾಯತ ಮುಖ್ಯಮಂತ್ರಿಗಳು

ಎಸ್ ನಿಜಲಿಂಗಪ್ಪ, ಬಿ.ಡಿ.ಜತ್ತಿ, ಎಸ್.ಆರ್.ಕಂಠಿ, ವೀರೇಂದ್ರ ಪಾಟೀಲ.. ಹೀಗೆ ಮುಖ್ಯಮಂತ್ರಿಗಳಾದವರೆಲ್ಲ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಪರಿಣಾಮವಾಗಿ, ಹಳೆ ಮೈಸೂರು ಭಾಗದಲ್ಲಿ ಪ್ರಬಲವಾಗಿದ್ದ ಒಕ್ಕಲಿಗ ಸಮುದಾಯದ ನಾಯಕರಲ್ಲಿ ಒಂದು ಅಸಹನೆ ಶುರುವಾಯಿತು. ಇವತ್ತು ಮಾಜಿ ಪ್ರಧಾನಿಗಳಾಗಿರುವ ಎಚ್.ಡಿ.ದೇವೇಗೌಡ ಕೂಡಾ ಅಂತಹ ನಾಯಕರಲ್ಲಿ ಒಬ್ಬರು.

ಏಕೀಕರಣಕ್ಕಿಂತ ಮುನ್ನ ರಾಜ್ಯ ನಮ್ಮ ಕೈಲಿತ್ತು. ಆದರೆ ಏಕೀಕರಣದ ನಂತರ ಲಿಂಗಾಯತರ ಕೈ ಸೇರಿತು ಎಂಬುದು ಈ ಅಸಹನೆ. ಅದೇ ರೀತಿ ಲಿಂಗಾಯತ ನಾಯಕರಲ್ಲೂ ಒಂದು ಅಸಹನೆ ಇದ್ದೇ ಇತ್ತು. ನಾವು ಆಳುವ ವರ್ಗವಾಗಿ ಬೆಳೆಯುತ್ತಿರುವುದು ಒಕ್ಕಲಿಗ ಸಮುದಾಯಕ್ಕೆ ಹಿಡಿಸುತ್ತಿಲ್ಲ. ಹೀಗಾಗಿ ರಾಜ್ಯದಿಂದ ಉತ್ತರ ಭಾಗ ಬೇರೆಯಾದರೆ ನಮ್ಮ ಶಕ್ತಿಯನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂಬುದು ಇದರ ಮೂಲ.

ಬಿತ್ತನೆಯಾದ ರಾಜ್ಯ ವಿಭಜನೆಯ ಬೀಜ

ಬಿತ್ತನೆಯಾದ ರಾಜ್ಯ ವಿಭಜನೆಯ ಬೀಜ

ಹೀಗೆ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದ ನಾಯಕರ ತಲೆಯಲ್ಲಿ ಬಿತ್ತನೆಯಾದ ಈ ಬೀಜ ಬಹುಬೇಗ ಮೊಳಕೆಯೊಡೆಯಿತು. ಆದರೆ ಮೊಳಕೆಯೊಡೆದ ಬೀಜ ಮರವಾಗುವುದಕ್ಕಿಂತ ಮುನ್ನ ರಾಜ್ಯ ರಾಜಕಾರಣದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ದೇವರಾಜ ಅರಸು ನಾಯಕರಾಗಿ ಉದ್ಭವಿಸಿದರು.
ಅವರು ಉದ್ಭವಿಸುವ ಕಾಲಕ್ಕೆ ಸರಿಯಾಗಿ ಕಾಂಗ್ರೆಸ್ ರಾಷ್ಟ್ರ ಮಟ್ಟದಲ್ಲಿ ವಿಭಜನೆಯಾಯಿತು. ಈ ವಿಭಜನೆಯ ವಿಕೋಪದಲ್ಲಿ ಅದಾಗಲೇ ರಾಷ್ಟ್ರ ರಾಜಕಾರಣದ ಮೇಲುಸ್ತರವನ್ನು ತಲುಪಿದ್ದ ಲಿಂಗಾಯತ ನಾಯಕ ನಿಜಲಿಂಗಪ್ಪ ಬಲ ಕಳೆದುಕೊಂಡು ಮೂಲೆಗುಂಪಾದರು. ಇಲ್ಲಿ ಮುಖ್ಯಮಂತ್ರಿಯಾಗಿದ್ದ ಅವರ ಶಿಷ್ಯ ವೀರೇಂದ್ರ ಪಾಟೀಲರು ರಾಜೀನಾಮೆ ಕೊಡಬೇಕಾಯಿತು.

ಈ ಬೆಳವಣಿಗೆಯಿಂದ ಲಿಂಗಾಯತ ಸಮುದಾಯ ಕಾಂಗ್ರೆಸ್ ವಿರುದ್ಧ ಕುದಿಯತೊಡಗಿತು. ಆದರೆ ಅದುವರೆಗೂ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್ ಕೊಡುತ್ತಿದ್ದ ಮಾನ್ಯತೆಯನ್ನು ಅಸಹನೆಯಿಂದ ನೋಡುತ್ತಿದ್ದರೂ ಒಕ್ಕಲಿಗ ಸಮುದಾಯ ಮಾತ್ರ ಕೈ ಪಾಳೆಯದಿಂದ ದೂರ ಹೋಗಿರಲಿಲ್ಲ. ಹೀಗಾಗಿ ಲಿಂಗಾಯತರ ವಿರೋಧದ ನಡುವೆಯೂ 1972ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ರಾಜ್ಯದ ಅಧಿಕಾರ ಸೂತ್ರ ಹಿಡಿಯಿತು.
ಆದರೆ ಈ ರೀತಿ ಗೆದ್ದರೂ ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷದ ಮುಂಚೂಣಿಯಲ್ಲಿ ಒಂದು ಬಲಿಷ್ಠ ಸೈನ್ಯವನ್ನು ಕಟ್ಟಲೇಬೇಕಾದ ಅನಿವಾರ್ಯತೆಯನ್ನು ಮನಗಂಡ ದೇವರಾಜ ಅರಸರು ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ ಸಮುದಾಯಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕಾಳಜಿ ತೋರಿಸುತ್ತಾ ಹೋದರು.

ಉಳುವವನೇ ಹೊಲದೊಡೆಯ ಎಂಬ ಕ್ರಾಂತಿ

ಉಳುವವನೇ ಹೊಲದೊಡೆಯ ಎಂಬ ಕ್ರಾಂತಿ

ಇದರ ಫಲವಾಗಿ ರೂಪುಗೊಂಡಿದ್ದೇ ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರಿ ಮಸೂದೆ. ಭೂ ಸುಧಾರಣಾ ಕಾಯ್ದೆಯ ಈ ತಿದ್ದುಪಡಿ ಮಸೂದೆಯ ಪರಿಣಾಮವಾಗಿ ಕರ್ನಾಟಕದ ಅಹಿಂದ ಸಮುದಾಯ ಕಾಂಗ್ರೆಸ್ ಜತೆ ನಿಂತುಕೊಂಡಿತು. ಆದರೆ ಅದೇ ಕಾಲಕ್ಕೆ ಉಳುವವನೇ ಹೊಲದೊಡೆಯ ಎಂಬ ಅರಸರ ಮಂತ್ರ ಪ್ರಬಲ ಲಿಂಗಾಯತ ಸಮುದಾಯದ ಜತೆ ಒಕ್ಕಲಿಗ ಸಮುದಾಯದ ಆಕ್ರೋಶಕ್ಕೂ ಗುರಿಯಾಗಿದ್ದು ನಿಜ.
ಯಾಕೆಂದರೆ ಅವತ್ತಿನ ಸಂದರ್ಭದಲ್ಲಿ ರಾಜ್ಯದ ಬಹುಪಾಲು ಭೂಮಿ ಇದ್ದುದು ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳ ಕೈಲಿ. ಹೀಗಾಗಿ ಲಿಂಗಾಯತ ಸಮುದಾಯದ ಜತೆ ಒಕ್ಕಲಿಗ ಸಮುದಾಯ ಕೂಡಾ ಕಾಂಗ್ರೆಸ್ ಪಕ್ಷದ ವಿರುದ್ಧ ತಿರುಗಿಬಿತ್ತು.

ಲಿಂಗಾಯತ ಪ್ರತ್ಯೇಕ ಧರ್ಮ : ಒಪ್ಪಿದರೂ ಬಿಟ್ಟರೂ ಲಾಭ ಕಾಂಗ್ರೆಸ್ಸಿಗೆ

ಲಿಂಗಾಯತ, ಒಕ್ಕಲಿಗರನ್ನು ಒಗ್ಗೂಡಿಸಿದ ಕ್ರಾಂತಿ

ಲಿಂಗಾಯತ, ಒಕ್ಕಲಿಗರನ್ನು ಒಗ್ಗೂಡಿಸಿದ ಕ್ರಾಂತಿ

ಪರಿಣಾಮವಾಗಿ ರಾಜಕೀಯ ಕಾರಣಗಳಿಗಾಗಿ ವಿರುದ್ಧ ಧ್ರುವಗಳಲ್ಲಿ ನಿಂತಿದ್ದ ಆ ಎರಡು ಸಮುದಾಯಗಳ ಮನಸ್ಸು ಒಂದಾಯಿತು. ಜನತಾ ಪಕ್ಷ ಮೇಲೆದ್ದು ನಿಲ್ಲಲು ಕಾರಣವಾಯಿತು. 1978ರ ಚುನಾವಣೆಯಲ್ಲಿ ಈ ಎರಡೂ ಶಕ್ತಿಗಳ ಬೆಂಬಲ ಪಡೆದ ಜನತಾ ಪಕ್ಷ ಅಧಿಕಾರ ಹಿಡಿಯಲು ವಿಫಲವಾಯಿತಾದರೂ ಪ್ರಬಲ ವಿರೋಧ ಪಕ್ಷವಾಗಿ ಹೊರಹೊಮ್ಮಿದ್ದನ್ನು ಮರೆಯಬಾರದು.
ಮುಂದೆ ಜನತಾ ಪಕ್ಷ, ಅಹಿಂದ ವರ್ಗಗಳ ಮೇಲೂ ಒಂದು ಮಟ್ಟಿಗೆ ಪ್ರಭಾವ ಬೀರಿ 1983ರಲ್ಲಿ ಕರ್ನಾಟಕದ ಅಧಿಕಾರ ಹಿಡಿಯಿತು. ಹೀಗೆ ಅದು ಅಧಿಕಾರ ಹಿಡಿಯುವ ಕಾಲಕ್ಕೆ ಒಂದು ವಿಷಯವನ್ನು ನಿಕ್ಕಿಗೊಳಿಸಿಕೊಂಡಿತ್ತು. ರಾಜಕೀಯ ಕಾರಣಗಳಿಗಾಗಿ ನಾವು ಬೇರೆಯಾದರೆ ಅಹಿಂದ ಸೈನ್ಯ ಮತ್ತೆ ಮೇಲೆದ್ದು ನಿಲ್ಲುತ್ತದೆ. ತಮ್ಮನ್ನು ಅಧಿಕಾರದಿಂದ ದೂರವಿಡುತ್ತದೆ ಎಂಬುದು ಈ ವಿಷಯ.

ಸನ್ನಿವೇಶಕ್ಕೆ ತಕ್ಕಂತೆ ಅಧಿಕಾರದ ಆಟ

ಸನ್ನಿವೇಶಕ್ಕೆ ತಕ್ಕಂತೆ ಅಧಿಕಾರದ ಆಟ

ಹೀಗೆ ದಶಕಗಳ ಕಾಲ ಪರಸ್ಪರ ಮುನಿಸಿಕೊಂಡಿದ್ದ ಎರಡು ಸಮುದಾಯಗಳು ಮುಂದೆ ತಮ್ಮ ಅಸ್ತಿತ್ವಕ್ಕಾಗಿ ಪರಸ್ಪರ ಕೈ ಜೋಡಿಸುವ ಕೆಲಸ ಮಾಡತೊಡಗಿದವು. ಹೀಗೆ ಕೈ ಜೋಡಿಸಿದರೂ ಪರಸ್ಪರ ಅಪನಂಬಿಕೆ ಎಂಬುದು ಎರಡೂ ಸಮುದಾಯಗಳಲ್ಲಿ ಉಳಿದುಕೊಂಡೇ ಇದೆ. ಹೀಗೆ ಅಪನಂಬಿಕೆ ಉಳಿದುಕೊಂಡಿದ್ದರೂ ಅದು ಎಪ್ಪತ್ತರ ದಶಕದಲ್ಲಿದ್ದಷ್ಟು ತೀವ್ರತೆಯನ್ನು ಹೊಂದಿಲ್ಲ ಎಂಬುದು ನಿಜ. ಹೀಗಾಗಿ ಕಾಲ ಕಾಲಕ್ಕೆ ಅವು ಬೇರೆ ಬೇರೆಯಾದರೂ ಇನ್ನು ಕೆಲ ಜಾತಿಗಳ ಜತೆ ಒಂದಾಗಿ ಅಧಿಕಾರ ಹಿಡಿಯುವ ಯತ್ನ ಮಾಡುತ್ತವೆ.

ರಾಜ್ಯ ವಿಭಜನೆಯಾದರೆ ಸ್ವಯಂಬಲದ ಮೇಲೆ ಅಧಿಕಾರ ಹಿಡಿಯುತ್ತೇವೆ ಎಂಬ ನಂಬಿಕೆ ಈಗ ಲಿಂಗಾಯತ ಸಮುದಾಯದಲ್ಲೂ ಇಲ್ಲ, ಒಕ್ಕಲಿಗ ಸಮುದಾಯದಲ್ಲೂ ಇಲ್ಲ. ಯಾಕೆಂದರೆ ರಾಜಕೀಯ ಪ್ರಜ್ಞೆ ಎಂಬುದು ಎಲ್ಲ ಸಮುದಾಯಗಳಲ್ಲೂ ಈಗ ಕಾಣಿಸಿಕೊಂಡಿದೆ.ಯಾವಾಗ ರಾಜಕೀಯ ಪ್ರಜ್ಞೆ ಎಂಬುದು ಈ ನೆಲದ ಎಲ್ಲ ವರ್ಗಗಳಲ್ಲೂ ದಟ್ಟವಾಗುತ್ತಾ ಹೋಯಿತೋ? ಇದಾದ ನಂತರ ತಮ್ಮ ಶಕ್ತಿಯ ಮೇಲೆ ಆ ವರ್ಗಗಳನ್ನು ನಿಯಂತ್ರಿಸುವ ಶಕ್ತಿ ಲಿಂಗಾಯತರಿಗೂ ಇಲ್ಲ, ಒಕ್ಕಲಿಗರಿಗೂ ಇಲ್ಲ. ಪರಿಣಾಮವಾಗಿ ಸನ್ನಿವೇಶಕ್ಕೆ ಅನುಗುಣವಾಗಿ ಅಧಿಕಾರದ ಆಟ ಆಡುವ ಸ್ಥಿತಿಗೆ ಅವು ಬಂದಿವೆ.

ರಾಜ್ಯ ವಿಭಜನೆಯ ಕೂಗು ಕ್ಷೀಣವಾಗುತ್ತಿದೆ

ರಾಜ್ಯ ವಿಭಜನೆಯ ಕೂಗು ಕ್ಷೀಣವಾಗುತ್ತಿದೆ

ಇಂತಹ ಕಾಲಘಟ್ಟದಲ್ಲಿ ರಾಜ್ಯ ವಿಭಜನೆಯಾದರೆ ಅಧಿಕಾರವನ್ನು ಸಂಪೂರ್ಣವಾಗಿ ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುವ ನಂಬಿಕೆ ಎರಡೂ ವರ್ಗಗಳ ನಾಯಕರಲ್ಲಿಲ್ಲ. ಹೀಗಾಗಿ ಕರ್ನಾಟಕದಿಂದ ಉತ್ತರ ಕರ್ನಾಟಕ ಪ್ರತ್ಯೇಕವಾಗಬೇಕು ಅಂತ ಇತ್ತೀಚೆಗೆ ಮೇಲೆದ್ದ ಕೂಗು ಮತ್ತೆ ಕ್ಷೀಣವಾಗಿದೆ. ಅದಕ್ಕೀಗ ಶಕ್ತಿ ಇಲ್ಲ. ಹಾಗೆಯೇ ಇದಾಗುವುದು ಲಿಂಗಾಯತ ಸಮುದಾಯಕ್ಕೂ ಬೇಕಾಗಿಲ್ಲ, ಒಕ್ಕಲಿಗ ಸಮುದಾಯಕ್ಕೂ ಬೇಕಾಗಿಲ್ಲ. ಅಹಿಂದ ಸಮುದಾಯಗಳಿಗೆ ಅದೊಂದು ಅಜೆಂಡಾ ಅಲ್ಲವೇ ಅಲ್ಲ. ಮುಂದೆಯೂ ಅಭಿವೃದ್ಧಿಯ ಕತೆ ಹಿಡಿದು ರಾಜ್ಯ ವಿಭಜಿಸಬೇಕು ಎಂಬ ಮಾತು ಕೇಳಿ ಬರಬಹುದು. ಆದರೆ ಆ ಕೂಗಿಗೆ ಶಕ್ತಿ ದೊರೆಯುವ ಲಕ್ಷಣ ಕಡಿಮೆ. ಯಾಕೆಂದರೆ ರಾಜ್ಯ ವಿಭಜನೆಯ ಕೂಗಿನ ಹಿಂದೆ ಇದ್ದ ನಿಜವಾದ ಕಾರಣ ಅಧಿಕಾರ ರಾಜಕಾರಣಕ್ಕೆ ಸಂಬಂಧಿಸಿದ್ದು. ಅದನ್ನು ದೇವರಾಜ ಅರಸು ತಮಗರಿವಿಲ್ಲದಂತೆಯೇ ಬಡಿದು ಹಾಕಿದರು. ಹೀಗಾಗಿ ರಾಜ್ಯ ವಿಭಜನೆಯ ಕೂಗು ಕೇಳಿ ಬಂದಾಗ ಕಾಲಗರ್ಭದಲ್ಲಿ ಹೂತು ಹೋಗಿರುವ ಈ ಸತ್ಯವನ್ನು ಅಗೆದು, ಬಗೆದಾದರೂ ನಾವು ಅರ್ಥ ಮಾಡಿಕೊಳ್ಳಬೇಕು. ಅದಕ್ಕಿರುವ ಆಯಾಮಗಳನ್ನು ಗಮನಿಸಬೇಕು.ಇಲ್ಲದಿದ್ದರೆ ಆ ಕೂಗು ಪದೇ ಪದೇ ನಮ್ಮ ಮುಂದಿನ ಪೀಳಿಗೆಯ ದಾರಿ ತಪ್ಪಿಸುತ್ತಲೇ ಇರುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು lingayat ಸುದ್ದಿಗಳುView All

English summary
How former chief minister of Karnataka Devaraj Urs got rid of division of Karnataka, when there was fight for power between Lingayat and Okkaliga? Political analysis by R T Vittal Murthy.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more