ಧಗೆಧಗೆ ಬಿಸಿಲು, ಶೆಖೆಯಾ? ಎನ್‌ಡಿಎಂಎ ಮಾರ್ಗಸೂಚಿ ಏನಿದೆ?
ಬೆಂಗಳೂರು, ಏ. 29: ಬೇಸಿಗೆ ಧಗೆ ಈ ವರ್ಷ ತಾರಕಕ್ಕೇರುವ ಮುನ್ಸೂಚನೆ ಇದೆ. ಈಗಾಗಲೇ ಹಲವು ಪ್ರದೇಶಗಳಲ್ಲಿ ಶೆಖೆ ವಿಪರೀತವಾಗಿ ಹೆಚ್ಚುತ್ತಿದೆ. ಅನೇಕ ಕಡೆ ಉಷ್ಣಾಂಶ 40 ಡಿಗ್ರಿ ದಾಟಿದೆ. ಮೇ ಜೂನ್ ತಿಂಗಳಲ್ಲಿ ಕೆಲ ಪ್ರದೇಶಗಳಲ್ಲಿ 50 ಡಿಗ್ರಿ ಉಷ್ಣಾಂಶ ದಾಖಲಾದರೂ ಅಚ್ಚರಿ ಇಲ್ಲ. ರಾಜ್ಯದಲ್ಲಿ ಏಳೆಂಟು ಜಿಲ್ಲೆಗಳಲ್ಲಿ ಬಿಸಿಲು 40 ಡಿಗ್ರಿ ದಾಟಿ ಹೋಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ 37-38 ಡಿಗ್ರಿ ಉಷ್ಣಾಂಶ ಮುಟ್ಟ ಬಹುದು. ಈಗಾಗಲೇ ಅನೇಕ ಕಡೆ ಹೀಟ್ ವೇವ್ ಆರಂಭವಾಗಿದ್ದು ಜೂನ್ ತಿಂಗಳಲ್ಲಿ ಬಿಸಿಗಾಳಿ ತೀವ್ರಮಟ್ಟಕ್ಕೆ ಹೋಗಲಿದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಈ ಬೇಸಿಗೆಯ ಬಿಸಿಲಿನಲ್ಲಿ ತಂಪಾಗಿರುವುದು ಬಹುತೇಕ ಅಸಾಧ್ಯವೇ ಸರಿ. ನಗರ ಪ್ರದೇಶದಲ್ಲಿ ಎಸಿಯಲ್ಲಿರುವವರು ನಿರುಮ್ಮಳರಾಗಿ ಇರುತ್ತಾರೆ. ಆದರೆ, ಸದಾ ಬಿಸಿಲಿನಲ್ಲಿ ಇರುವ ನಿರ್ವಸತಿಗರು, ಕೂಲಿಕಾರ್ಮಿಕರಿಗೆ ಬಿಸಿಗಾಳಿಯಿಂದ ಅಪಾಯ ಹೆಚ್ಚು. ಹಾಗೆಯೇ, ಹೊರಗೆ ಕೆಲಸ ಮಾಡಬೇಕಾದ ಕನ್ಸ್‌ಟ್ರಕ್ಷನ್ ಎಂಜಿನಿಯರ್ಸ್, ಕ್ರೀಡಾಭ್ಯಾಸ ನಡೆಸುವ ಕ್ರೀಡಾಪಟುಗಳು ಮೊದಲಾದವರೂ ಹೀಟ್ ವೇವ್‌ಗೆ ತುತ್ತಾಗುವ ಸಾಧ್ಯತೆ ಇದೆ.
ಬಿಸಿಗಾಳಿಯ ಪರಿಣಾಮ ಎದುರಿಸಲು ಕಳೆದ ಐದಾರು ವರ್ಷದಲ್ಲಿ ಎನ್‌ಡಿಎಂಎ ಬಹಳಷ್ಟು ಕ್ರಮಗಳನ್ನ ಕೈಗೊಂಡಿದೆ. ಹೀಟ್ ವೇವ್ ಇದ್ದ ಸಂದರ್ಭದಲ್ಲಿ ಜನರು ಏನು ಮಾಡಬೇಕು ಎಂದು ತಿಳಿಸುವ ಮಾರ್ಗಸೂಚಿಯನ್ನು National Disaster Management Authority(ಎನ್‌ಡಿಎಂಎ) ಪ್ರಕಟಿಸಿದೆ. ಈ ಮಾರ್ಗಸೂಚಿಯ ಪ್ರಮುಖ ಅಂಶಗಳು ಈ ಕೆಳಕಂಡಂತಿವೆ:

* ನಿಮಗೆ ದಣಿವಾಗಲಿ ಇಲ್ಲದಿರಲಿ ಸಾಧ್ಯವಾದಷ್ಟು ನೀರು ಆಗಾಗ ಕುಡಿಯುತ್ತಲೇ ಇರಿ.
* ಪ್ರಯಾಣಿಸುವಾಗಲೂ ನೀರು ಜೊತೆಯಲ್ಲಿರಲಿ.
* ಹೊರಗೆ ಹೋಗುವಾಗ ಹಗುರವಾದ, ಮಂದ ಬಣ್ಣದ, ಸಡಿಲವಾದ ಕಾಟನ್ ಬಟ್ಟೆಗಳನ್ನು ಸಾಧ್ಯವಾದಷ್ಟು ತೊಡಿ.
* ಬಿಸಿಲಿಗೆ ಕಾಲಿಡುವಾಗ ಕಾಲಿಗೆ ಪಾದರಕ್ಷೆ ಇರಲಿ, ಕಣ್ಣಿಗೆ ಕೂಲಿಂಗ್ ಗ್ಲಾಸ್, ಛತ್ರಿ ಅಥವಾ ಟೊಪ್ಪಿ ಹಾಕಿಕೊಳ್ಳಿ.
* ಒದ್ದೆಯಾಗಿರುವ ಬಟ್ಟೆಯನ್ನ ನಿಮ್ಮ ತಲೆ, ಕುತ್ತಿಗೆ, ಮುಖ ಮತ್ತು ಕೈಗಳನ್ನು ಸವರಿಕೊಳ್ಳುತ್ತಿರಿ.
* ದೇಹದಲ್ಲಿ ಜಲಾಂಶನಷ್ಟ ತಪ್ಪಿಸಲು ಆಗಾಗ ಮಜ್ಜಿಗೆ, ನಿಂಬೆ ಶರಬತ್ತು, ಅಕ್ಕಿ ಗಂಜಿ, ರಾಗಿ ಅಂಬಲಿ, ಒಆರ್‌ಎಸ್ ಇತ್ಯಾದಿ ಪಾನೀಯವನ್ನು ಕುಡಿಯಿರಿ.
* ಸುಸ್ತಾಗುವುದು, ತಲೆಸುತ್ತುವುದು, ತಲೆನೋವು, ವಾಂತಿ, ಬೆವರು ಮೊದಲಾದವು ಉಷ್ಣಾಘಾತ ಅಥವಾ ಹೀಟ್ ಸ್ಟ್ರೋಕ್‌ನ ಲಕ್ಷಣಗಳೆಂದು ಗುರುತಿಸಲಾಗಿದೆ. ಹೀಗಾಗಿ, ಈ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದಲ್ಲಿ, ಅದರಲ್ಲೂ ಸುಸ್ತಾಗುವುದು, ತಲೆಸುತ್ತುವುದು ಆದಲ್ಲಿ ಕೂಡಲೇ ವೈದ್ಯರನ್ನು ಭೇಟಿ ಮಾಡಿ.
* ಸಾಕುಪ್ರಾಣಿಗಳನ್ನು ಆದಷ್ಟೂ ನೆರಳಿನಲ್ಲಿರುವಂತೆ ನೋಡಿಕೊಳ್ಳಿ. ಕುಡಿಯುವ ನೀರಿನ ವ್ಯವಸ್ಥೆ ಮಾಡಿ.
* ಮನೆಯೊಳಗೆ ಶೆಖೆ ಕಡಿಮೆ ಮಾಡಲು ಏನಾದರೂ ಕ್ರಮ ತೆಗೆದುಕೊಳ್ಳಿ. ಕಿಟಕಿ, ಬಾಗಿಲುಗಳಿಗೆ ಕರ್ಟನ್‌ಗಳನ್ನು ಹಾಕಿ. ರಾತ್ರಿ ಹೊತ್ತು ಕಿಟಕಿಗಳನ್ನು ತೆರೆದಿಡಿ.
* ಫ್ಯಾನ್‌ಗಳಿದ್ದರೆ ಬಳಕೆ ಮಾಡಿ. ಆಗಾಗ ಒದ್ದೆಬಟ್ಟೆಯಿಂದ ಮೈ ಒರೆಸಿಕೊಳ್ಳಿ. ಸಾಧ್ಯವಾದರೆ ಆಗಾಗ ತಣ್ಣೀರಿನಿಂದ ಸ್ನಾನ ಮಾಡಿ.
* ನೀವು ಕೆಲಸ ಮಾಡುವ ಸ್ಥಳದ ಬಳಿಕ ತಂಪಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳಿ.
* ಬಯಲಿನಲ್ಲಿ ಕೆಲಸ ಮಾಡುವವರು ಸಾಧ್ಯವಾದಷ್ಟು ಸೂರ್ಯ ಬಿಸಿಲು ನೇರವಾಗಿ ತಾಕದಂತೆ ನೋಡಿಕೊಳ್ಳಿ.
* ಬಹಳ ಶ್ರಮ ವಹಿಸಿ ಮಾಡುವ ಕೆಲಸಗಳನ್ನು ಸಾಧ್ಯವಾದರೆ ತಂಪಾದ ಹೊತ್ತನಲ್ಲಿ ಮಾಡಲು ಯತ್ನಿಸಿ.
* ಬಯಲಿನಲ್ಲಿ ಕೆಲಸ ಮಾಡುವುದಿದ್ದರೆ ಸಾಧ್ಯವಾದಷ್ಟು ಹೆಚ್ಚುಬಾರಿ ಒಂದಷ್ಟು ಹೊತ್ತು ವಿಶ್ರಾಂತಿಪಡೆಯುತ್ತಿರಿ.
* ಕಾರ್ಮಿಕರು ಗರ್ಭಿಣಿಯಾಗಿದ್ದರೆ ಅವರ ಬಗ್ಗೆ ಇತರರು ನಿಗಾ ವಹಿಸಬೇಕು.












Click it and Unblock the Notifications