Maha Kumbh Mela: ಭಾರತದ ಅರ್ಧದಷ್ಟು ಜನರಿಂದ ಮಹಾಕುಂಭ ಮೇಳದಲ್ಲಿ ಪವಿತ್ರ ಸ್ನಾನ
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳವು ಭಕ್ತಸಾಗರಕ್ಕೆ ಸಾಕ್ಷಿಯಾಗಿದೆ. ಮಹಾಶಿವರಾತ್ರಿಯಂದು ಈ ಮಹಾಕುಂಭ ಮೇಳ ಸಂಪನ್ನಗೊಳ್ಳಲಿರುವ ಹಿನ್ನೆಲೆ ಕೋಟ್ಯಂತರ ಮಂದಿ ಭಕ್ತರು ಇಲ್ಲಿಗೆ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಮೇಳ ಶುರುವಾದ ದಿನದಿಂದ ಇಲ್ಲಿವರೆಗೆ ಸುಮಾರು 60 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಪ್ರಕಟಿಸಿದೆ.
ಕುಂಭಮೇಳವು ಶೀಘ್ರದಲ್ಲೇ ಕೊನೆಗೊಳ್ಳುತ್ತಿರುವ ಹಿನ್ನೆಲೆ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಪ್ರಯಾಗ್‌ರಾಜ್‌ಗೆ ಪ್ರತಿದಿನ ಅಪಾರ ಸಂಖ್ಯೆಯ ಭಕ್ತರು ಬರುತ್ತಿದ್ದಾರೆ. ಉತ್ತರಪ್ರದೇಶ ಸರ್ಕಾರವು ಮೊದಲಿಗೆ 45 ಕೋಟಿ ಭಕ್ತರನ್ನು ನಿರೀಕ್ಷಿಸಿತ್ತು. ಆದರೆ, ಭಕ್ತರ ಸಂಖ್ಯೆ ಈಗಾಗಲೇ 60 ಕೋಟಿ ಗಡಿಯನ್ನು ದಾಟಿದೆ. ಫೆಬ್ರವರಿ 26ರ ಶಿವರಾತ್ರಿಯಂದು ಅಂತಿಮ ಅಮೃತ ಸ್ನಾನದ ವೇಳೆಗೆ ಭಕ್ತರ ಸಂಖ್ಯೆ 65 ಕೋಟಿ ದಾಟುವ ನಿರೀಕ್ಷೆಯಿದೆ.

ಭಾರತದ ಸುಮಾರು 110 ಕೋಟಿ ಸನಾತನ ಅನುಯಾಯಿಗಳಲ್ಲಿ ಅರ್ಧದಷ್ಟು ಜನರು ಪ್ರಯಾಗ್‌ರಾಜ್‌ನ ಪವಿತ್ರ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ. ಕಳೆದ ಜನವರಿ 13ರಂದು ಆರಂಭವಾದ ಕುಂಭಮೇಳವು ಮಹಾಶಿವರಾತ್ರಿಯ ದಿನವಾದ ಫೆಬ್ರವರಿ 26ರಂದು ಪೂರ್ಣಗೊಳ್ಳಲಿದೆ.
ವರ್ಲ್ಡ್ ಪಾಪ್ಯುಲೇಶನ್ ರಿವ್ಯೂ ಪ್ರಕಾರ ಭಾರತದ ಜನಸಂಖ್ಯೆಯು ಸರಿಸುಮಾರು 143 ಕೋಟಿ ಎನ್ನಲಾಗಿದೆ. ಈ ಪೈಕಿ 110 ಕೋಟಿ ಸನಾತನ ಧರ್ಮದ ಅನುಯಾಯಿಗಳನ್ನು ಹೊಂದಿದೆ ಎಂದು ಹೇಳಿದೆ. ಹಾಗಾಗಿ ಪ್ರಯಾಗ್ ರಾಜ್‌ನಲ್ಲಿ ಭಾರತೀಯ ಜನಸಂಖ್ಯೆಯ ಶೇಕಡಾ 55ಕ್ಕಿಂತ ಹೆಚ್ಚು ಮಂದಿ ಮಹಾಕುಂಭ ಮೇಳದಲ್ಲಿ ಭಾಗವಹಿಸಿದ್ದಾರೆ ಎಂದು ಪ್ರತಿಪಾದಿಸಿದೆ. ಅಲ್ಲದೆ ವಿಶ್ವದ ಶೇ 50ರಷ್ಟು ಸನಾತನಿಗಳು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ ಎಂದೂ ಹೇಳಿದೆ.
ಬುಧವಾರದ ಮಹಾಶಿವರಾತ್ರಿಯ ಕೊನೆ ಸ್ನಾನಕ್ಕೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ. ಈ ವೇಳೆಗೆ 65 ಕೋಟಿಗಿಂತಲೂ ಹೆಚ್ಚು ಭಕ್ತರು ಪ್ರಯಾಗ್‌ರಾಜ್‌ಗೆ ಬರುವ ಸಾಧ್ಯತೆ ಇದೆ. ಪಕ್ಕದ ನೇಪಾಳದಿಂದಲೂ 50 ಲಕ್ಷಕ್ಕೂ ಹೆಚ್ಚು ಜನರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ ಎಂದು ಅಂಕಿಅಂಶಗಳು ತಿಳಿಸಿವೆ. ಮೌನಿ ಅಮವಾಸ್ಯೆಯಂದು ಒಂದೇ ದಿನ ಸುಮಾರು 8 ಕೋಟಿ ಭಕ್ತರು ಪವಿತ್ರ ಸ್ನಾನ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ. ಬಳಿಕ ಮಕರ ಸಂಕ್ರಾಂತಿಯಂದು ಸುಮಾರು 3.5 ಕೋಟಿ ಭಕ್ತರು ಅಮೃತ ಸ್ನಾನ ಮಾಡಿದ್ದರು. ಈಗ ಕೊನೆಯ ಸ್ನಾನಕ್ಕೆ ಭಕ್ತಸಾಗರ ಹರಿದುಬರಲಿದೆ.
ಇಂದು ವಾರಾಂತ್ಯವಾದ ಹಿನ್ನೆಲೆ ಪುಣ್ಯಸ್ನಾನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪ್ರಯಾಗ್‌ರಾಜ್ ನಗರವನ್ನು ಆವರಿಸಿದ್ದಾರೆ. ಭಾನುವಾರ ಮುಂಜಾನೆಯಿಂದಲೇ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 25 ಕಿಲೋಮೀಟರ್ ಉದ್ದದವರೆಗೆ ಭಾರಿ ಟ್ರಾಫಿಕ್ ಜಾಮ್ ಕಂಡುಬಂದಿದೆ. ಮಹಾಕುಂಭ ಮುಗಿಯುವ ಮುನ್ನ ಭಾನುವಾರ ಅಂತಿಮ ವಾರಾಂತ್ಯವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪವಿತ್ರ ಸ್ನಾನ ಮಾಡಲು ಜಮಾಯಿಸಿದ್ದಾರೆ.












Click it and Unblock the Notifications